'ಅಪಹೃತ' ಶಾಸಕರ ಮೇಲೆ ಹಲ್ಲೆ : ಶಿವಸೇನೆ ಆರೋಪ

Update: 2022-06-22 03:42 GMT
ಸಂಜಯ್ ರಾವತ್

ಮುಂಬೈ: ಏಕನಾಥ್ ಶಿಂಧೆ ಅವರನ್ನು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ಬಂಡಾಯ ಏಳುವಂತೆ ಒತ್ತಡ ತರಲಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆಪಾದಿಸಿದ್ದಾರೆ.

ಶಿಂಧೆ ಜತೆಗೆ ಇದ್ದ ಕನಿಷ್ಠ ಇಬ್ಬರು ಶಾಸಕರ ಮೇಲೆ 'ಅಪರೇಶನ್ ಕಮಲ' ಹೆಸರಿನಲ್ಲಿ ಪೊಲೀಸರು ಹಾಗೂ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪವನ್ನೂ ಸಂಜಯ್ ರಾವತ್ ಮಾಡಿದ್ದಾರೆ. ಶಾಸಕರನ್ನು ದಿಕ್ಕುತಪ್ಪಿಸಿ ಗುಜರಾತ್‍ಗೆ ಅಪಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶಿಂಧೆ ಜತೆಗಿರುವ ನಿತೀನ್ ದೇಶಮುಖ್ ಸೇರಿದಂತೆ ಇಬ್ಬರು ಶಾಸಕರನ್ನು ನಿನ್ನೆ ರಾತ್ರಿ ಥಳಿಸಲಾಗಿದೆ. ದೇಶಮುಖ್ ಓಡಿಹೋಗುವ ಪ್ರಯತ್ನ ಮಾಡಿದಾಗ ಪೊಲೀಸರು ಮತ್ತು ಗೂಂಡಾಗಳು ಥಳಿಸಿದ್ದಾರೆ. ಇದರಿಂದಾಗಿ ಅವರಿಗೆ ಹೃದಯಾಘಾತವಾಗಿದೆ. ತಮ್ಮನ್ನು ದಿಕ್ಕುತಪ್ಪಿಸಿ ಗುಜರಾತ್‍ಗೆ ಕರೆದೊಯ್ಯಲಾಗಿದೆ ಎಂದು ಕೆಲ ಶಾಸಕರು ಹೇಳಿದ್ದಾರೆ ಎಂದು ಸಂಜಯ್ ರಾವತ್ ಆಪಾದಿಸಿದ್ದಾರೆ.

ಕೇಂದ್ರೀಯ ಏಜೆನ್ಸಿಗಳಿಂದ ಒತ್ತಡದ ಕಾರಣದಿಂದಾಗಿ ಶಿಂಧೆ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ ಎಂಬ ಸುಳಿವು ನೀಡಿದ ಅವರು, ಶಿಂಧೆಯವರ ಮೇಲಿರುವ ಒತ್ತಡದ ಬಗ್ಗೆ ನನಗೆ ಅರಿವು ಇದೆ ಎಂದು ಹೇಳಿದರು. ಕನಿಷ್ಠ ಐದು ಮಂದಿ ಶಾಸಕರು ಕರೆ ಮಾಡಿ, ತಮ್ಮ ದಿಕ್ಕು ತಪ್ಪಿಸಿ ಗುಜರಾತ್‍ಗೆ ಕರೆದೊಯ್ಯಲಾಗಿದ್ದು, ರಕ್ಷಿಸುವಂತೆ ಮೊರೆ ಇಟ್ಟಿದ್ದಾಗಿ ಅವರು ವಿವರಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಕಾನೂನು ಜಾರಿ ನಿರ್ದೇಶನಾಲಯ ತಮಗೂ ನೋಟಿಸ್ ನೀಡಿದ್ದು, ಇಂಥ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಶಿಂಧೆ ಜತೆಗೆ 14-15 ಮಂದಿ ಶಾಸಕರಿದ್ದು, ಮುಖ್ಯಮಂತ್ರಿ ಠಾಕ್ರೆ ಕರೆದಿದ್ದ ಸಭೆಗೆ ಕನಿಷ್ಠ 30 ಶಾಸಕರು ಹಾಜರಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ಶಿವಸೇನೆ ಸದನದಲ್ಲಿ 55 ಸದಸ್ಯರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News