ಪ್ರಧಾನಿ ಮೋದಿ ‘ಅಗ್ನಿಪಥ್’ ಯೋಜನೆಯನ್ನು ಹಿಂಪಡೆಯಬೇಕಾಗುತ್ತದೆ: ರಾಹುಲ್ ಗಾಂಧಿ

Update: 2022-06-22 18:08 GMT

ಹೊಸದಿಲ್ಲಿ, ಜೂ. ೨೨: ಕೇಂದ್ರ ಸರಕಾರ ‘ಅಗ್ನಿಪಥ್’ಯೋಜನೆ ಮೂಲಕ ಸೇನೆಯನ್ನು ‘ದುರ್ಬಲ’ಗೊಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದಂತೆ ಈ ಸೇನಾ ನಿಯೋಜನೆ ಉಪಕ್ರಮವಾದ ‘ಅಗ್ನಿಪಥ್’ಯೋಜನೆಯನ್ನು ಕೂಡ ಹಿಂಪಡೆಯುವಂತೆ ಅವರು ಆಗ್ರಹಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಗಾದ ಸಂದರ್ಭ ತನಗೆ ಬೆಂಬಲ ನೀಡಿದ ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಅವರು ಕೃತಜ್ಞತೆ ಸಲ್ಲಿಸಿದರು. ವಿಚಾರಣೆ ವೇಳೆ ತಾನು ಏಕಾಂಗಿಯಾಗಿರಲಿಲ್ಲ, ಬದಲಾಗಿ  ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ಎಲ್ಲರೂ ನನ್ನೊಂದಿಗೆ ಇದ್ದರು ಎಂದು ಅವರು ಹೇಳಿದರು.

ಈ ದೇಶದ ಅತಿ ದೊಡ್ಡ ಸಮಸ್ಯೆ ಉದ್ಯೋಗ. ಆದರೆ, ಕೇಂದ್ರ ಸರಕಾರ ಸಣ್ಣ ಹಾಗೂ ಮಧ್ಯ ಉದ್ಯಮಕ್ಕೆ ಹಾನಿ ಎಸಗುವ ಮೂಲಕ ದೇಶದ ಬೆನ್ನು ಮೂಳೆ ಮುರಿದಿದೆ ಎಂದು ಅವರು ತಿಳಿಸಿದರು. ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಗಾದ ಬಳಿಕ ತನ್ನೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಪಕ್ಷದ ದಿಲ್ಲಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಸೇರಿದ ದೇಶದ ಸಂಸದರು ಹಾಗೂ ಶಾಸಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರು ದೇಶವನ್ನು ಎರಡರಿಂದ ಮೂರು ಮಂದಿ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಿದ್ದಾರೆ. ಸೇನೆಯಲ್ಲಿ ಉಳಿದಿದ್ದ ಉದ್ಯೋಗದ ಕಟ್ಟ ಕಡೆಯ ಅವಕಾಶ ಕೂಡ ಈಗ ಮುಚ್ಚಿ ಹೋಗಿದೆ ಎಂದು ಅವರು ಹೇಳಿದರು.  ಅವರು ‘‘ಒಂದು ಶ್ರೇಣಿ, ಒಂದು ಪಿಂಚಣಿ’’ ಬಗ್ಗೆ ಆಗಾಗ ಮಾತನಾಡುತ್ತಿದ್ದರು. ಈಗ ‘‘ಶ್ರೇಣಿ ಇಲ್ಲ, ಪಿಂಚಣಿ ಇಲ್ಲ’’ ಎಂದು ಮಾತನಾಡುತ್ತಿದ್ದಾರೆ ಎಂದು ಅವರು ತಿಳಿಸಿದರು. 

ಚೀನಾ ಸೇನೆ ನಮ್ಮ ಭೂಮಿಯಲ್ಲಿ ಕುಳಿತುಕೊಂಡಿದೆ. ಆದುದರಿಂದ ಸೇನೆಯನ್ನು ಬಲಪಡಿಸಬೇಕು. ಆದರೆ, ಕೇಂದ್ರ ಸರಕಾರ ಸೇನೆಯನ್ನು ದುರ್ಬಲಗೊಳಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News