ಶರದ್‌ ಪವಾರ್ ಕುರಿತ ಒಂದು ಪೋಸ್ಟ್‌ ಹಾಕಿದ್ದಕ್ಕೆ 22 ಕೇಸ್‌ ಎದುರಿಸುತ್ತಿದ್ದೇನೆ: ನಟಿ ಕೇತಕಿ ಚಿತಳೆ ಆಕ್ರೋಶ

Update: 2022-07-04 15:08 GMT

ಹೊಸದಿಲ್ಲಿ,ಜು.4: ಎನ್‌ಸಿಪಿ ವರಿಷ್ಠ ಶರದ ಪವಾರ್ ಕುರಿತು ಆಕ್ಷೇಪಾರ್ಹ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ನಟಿ ಕೇತಕಿ ಚಿತಳೆ ಅವರು ಸೋಮವಾರ ಸುದ್ದಿವಾಹಿನಿಯೊಂದಿಗೆ ತನ್ನ ಸಂಕಷ್ಟಗಳನ್ನು ಹಂಚಿಕೊಂಡು, ಕೇವಲ ಫೇಸ್‌ಬುಕ್‌ನಿಂದ ಪೋಸ್ಟ್‌ವೊಂದನ್ನು ಕಾಪಿ-ಪೇಸ್ಟ್ ಮಾಡಿದ್ದಕ್ಕಾಗಿ ಮತ್ತು ಅದನ್ನು ತನ್ನ ಪ್ರೊಫೈಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ತನ್ನನ್ನು ಬಂಧಿಸಲಾಗಿತ್ತು ಎಂದು ಹೇಳಿದರು.

‘ಪೊಲೀಸರು ನನ್ನನ್ನು ಬಂಧಿಸಿ ಕರೆದೊಯ್ಯುವಾಗ 20-25 ಜನರ ಗುಂಪು ನನಗೆ ಕಿರುಕುಳ ನೀಡಿದ್ದರು,ನನ್ನ ಮೇಲೆ ದಾಳಿ ನಡೆಸಿದ್ದರು,ನನಗೆ ಹೊಡೆದಿದ್ದರು. ನನ್ನ ಮೇಲೆ ಶಾಯಿ,ಮೊಟ್ಟೆಗಳನ್ನು ಎಸೆದಿದ್ದರು. ನನಗೆ ಮಾತ್ರವಲ್ಲ,ಅವರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದರು ’ ಎಂದು ಚಿತಳೆ ತಿಳಿಸಿದರು.

ಚಿತಳೆ ವಿರುದ್ಧ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 22 ಎಫ್‌ಐಆರ್‌ಗಳು ದಾಖಲಾಗಿವೆ. ಮೇ 14ರಂದು ಅವರನ್ನು ಬಂಧಿಸಲಾಗಿದ್ದು,ಜೂ.24ರಂದು ಅವರಿಗೆ ಜಾಮೀನು ಮಂಜೂರಾಗಿತ್ತು. ಕೇವಲ ಒಂದು ಪೋಸ್ಟ್‌ಗಾಗಿ 22 ಎಫ್‌ಐಆರ್‌ಗಳನ್ನು ಎದುರಿಸುತ್ತಿದ್ದೇನೆ. ಒಂದರಲ್ಲಿ ಮಾತ್ರ ಜಾಮೀನು ಸಿಕ್ಕಿದೆ. ಇನ್ನೂ 21 ಎಫ್‌ಐಆರ್‌ಗಳು ಇವೆ ಎಂದು 29ರ ಹರೆಯದ ಚಿತಳೆ ಹೇಳಿದರು.

ಸಾರ್ವಜನಿಕ ಕಿಡಿಗೇಡಿತನ,ಮಾನಹಾನಿ ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನಕ್ಕೆ ಸಂಬಂಧಿಸಿದ ಕಲಮ್‌ಗಳಡಿ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.

ತನ್ನ ವಿರುದ್ಧ ಈ ಆರೋಪಗಳನ್ನು ಹೊರಿಸುವಂತಹ ಯಾವುದನ್ನೂ ತಾನು ಮಾಡಿಲ್ಲ ಎಂದ ಚಿತಳೆ,‘ನಾನು ಪೋಸ್ಟ್ ಮಾಡಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅನುಗುಣವಾಗಿತ್ತು. ಜನರು ಒಂದು ನಿರ್ದಿಷ್ಟ ರೀತಿಯಲ್ಲಿ ತಪ್ಪಾಗಿ ಅರ್ಥೈಸಿಕೊಂಡರೆ ನಾನೇನೂ ಮಾಡಲಾಗುವುದಿಲ್ಲ. ವಿನಾಕಾರಣ ನನ್ನನ್ನು ಜೈಲಿಗೆ ತಳ್ಳಲಾಗಿತ್ತು. ಪವಾರ್ ಒಂದು ಧರ್ಮವಲ್ಲ’ಎಂದರು.

ಮೇ ತಿಂಗಳಿನಲ್ಲಿ ಪವಾರ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ಗಾಗಿ ಫಾರ್ಮಸಿ ವಿದ್ಯಾರ್ಥಿ ನಿಖಿಲ್ ಭಾಮ್ರೆಯನ್ನೂ ನಾಸಿಕ್ ಪೊಲೀಸರು ಬಂಧಿಸಿದ್ದರು. ಈ ಬಂಧನಗಳಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News