ಈ ಕ್ಷಣದಲ್ಲಿ ಎಲ್ಲಿಯೂ ಸುರಕ್ಷಿತ ಎಂದು ಅನ್ನಿಸುತ್ತಿಲ್ಲ: ‘ಕಾಳಿ’ ವಿವಾದ ಕುರಿತು ಲೀನಾ ಮಣಿಮೇಘಲೈ

Update: 2022-07-07 13:21 GMT

ಹೊಸದಿಲ್ಲಿ,ಜು.7: ತನ್ನ ‘ಕಾಳಿ’ ಸಾಕ್ಷಚಿತ್ರಕ್ಕಾಗಿ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಕೆನಡಾ ನಿವಾಸಿ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಘಲೈ ಅವರು,ಈ ಕ್ಷಣದಲ್ಲಿ ಎಲ್ಲಿಯೂ ಸುರಕ್ಷಿತ ಎಂದು ತನಗೆ ಅನ್ನಿಸುತ್ತಿಲ್ಲ ಎಂದು ಗುರುವಾರ ಹೇಳಿದ್ದಾರೆ. ಕಾಳಿ ಧೂಮ್ರಪಾನವನ್ನು ಮಾಡುತ್ತಿರುವ ಮತ್ತು ಎಲ್ಜಿಬಿಟಿಕ್ಯು ಧ್ವಜವನ್ನು ಹಿಡಿದುಕೊಂಡಿರುವ ಪೋಸ್ಟರ್ನ ಕುರಿತು ವ್ಯಾಪಕ ಆಕ್ರೋಶ ಭುಗಿಲೆದ್ದ ಬಳಿಕ ಭಾರತದಲ್ಲಿ ಮಣಿಮೇಖಲೈ ವಿರುದ್ಧ ಹಲವಾರು ಎಫ್ಐಆರ್ಗಳು ದಾಖಲಾಗಿವೆ.

 
‘ಈಗ ಅತಿದೊಡ್ಡ ಪ್ರಜಾಪ್ರಭುತ್ವದಿಂದ ಅತಿದೊಡ್ಡ ದ್ವೇಷಯಂತ್ರವಾಗಿ ಹದಗೆಟ್ಟಿರುವ ಇಡೀ ದೇಶವು ನನ್ನನ್ನು ಸೆನ್ಸಾರ್ ಮಾಡಲು ಬಯಸಿದೆ ಎಂದು ನನಗೆ ಭಾಸವಾಗುತ್ತಿದೆ. ಈ ಕ್ಷಣದಲ್ಲಿ ಎಲ್ಲಿಯೂ ಸುರಕ್ಷಿತ ಎಂದು ನನಗೆ ಅನ್ನಿಸುತ್ತಿಲ್ಲ’ ಎಂದು ಟ್ವೀಟ್ನಲ್ಲಿ ಹೇಳಿರುವ ಮಣಿಮೇಘಲೈ ಅದನ್ನು ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್’ಗೆ ಟ್ಯಾಗ್ ಮಾಡಿದ್ದಾರೆ ಮತ್ತು ಅದಕ್ಕೆ ತಾನು ನೀಡಿರುವ ಸಂದರ್ಶನವನ್ನು ಹಂಚಿಕೊಂಡಿದ್ದಾರೆ.

ಕಳೆದ ವಾರ ವಿವಾದ ಆರಂಭಗೊಂಡಾಗಿನಿಂದ ತನಗೆ,ತನ್ನ ಕುಟುಂಬಕ್ಕೆ ಮತ್ತು ಸಹವರ್ತಿಗಳಿಗೆ 200,000ಕ್ಕೂ ಅಧಿಕ ಆನ್ಲೈನ್ ಖಾತೆಗಳಿಂದ ಬೆದರಿಕೆಗಳು ಬಂದಿವೆ ಎಂದು ತಿಳಿಸಿರುವ ಮಣಿಮೇಖಲೈ,ಆನ್ಲೈನ್ ದಾಳಿಯನ್ನು ಬಲಪಂಥೀಯ ಹಿಂದು ಗುಂಪುಗಳಿಂದ ‘ಬೃಹತ್ ಪ್ರಮಾಣದ ಸಾಮೂಹಿಕ ಹತ್ಯೆ ’ಎಂದು ಬಣ್ಣಿಸಿದ್ದಾರೆ. ‘ದಿ ಗಾರ್ಡಿಯನ್’ಗೆ ನೀಡಿರುವ ಸಂದರ್ಶನದಲ್ಲಿ ಮಣಿಮೇಖಲೈ,ತನ್ನ ಚಿತ್ರವು ದೇವಿಯನ್ನು ಅಥವಾ ಹಿಂದು ಧರ್ಮವನ್ನು ಅಗೌರವಿಸಿದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.

ತಾನು ತಮಿಳುನಾಡಿನಲ್ಲಿ ಹಿಂದು ಆಗಿ ಬೆಳೆದಿದ್ದೆ, ಆದರೆ ಈಗ ನಾಸ್ತಿಕಳಾಗಿದ್ದೇನೆ ಎಂದಿರುವ ಅವರು,‘ನನ್ನ ತವರು ರಾಜ್ಯ ತಮಿಳುನಾಡಿನಲ್ಲಿ ಕಾಳಿಯನ್ನು ಕ್ಷುದ್ರದೇವತೆ ಎಂದು ನಂಬಲಾಗಿದೆ. ಅವಳು ಆಡಿನ ರಕ್ತದಲ್ಲಿ ಬೇಯಿಸಿದ ಮಾಂಸವನ್ನು ತಿನ್ನುತ್ತಾಳೆ,ಸಾರಾಯಿ ಸೇವಿಸುತ್ತಾಳೆ,ಬೀಡಿ (ಸಿಗರೇಟ್) ಸೇದುತ್ತಾಳೆ ಮತ್ತು ಕಾಡು ಕುಣಿತವನ್ನು ಮಾಡುತ್ತಾಳೆ. ಇದು ನನ್ನ ಚಿತ್ರದಲ್ಲಿ ನಾನು ಸಾಕಾರಗೊಳಿಸಿರುವ ಕಾಳಿ ’ ಎಂದಿದ್ದಾರೆ.

‘ಮೂಲಭೂತವಾದಿ ಶಕ್ತಿಗಳಿಂದ ನನ್ನ ಸಂಸ್ಕೃತಿ,ಸಂಪ್ರದಾಯಗಳು ಮತ್ತು ಶಬ್ದಗಳನ್ನು ಹಿಂದಕ್ಕೆ ಪಡೆಯುವ ಎಲ್ಲ ಹಕ್ಕುಗಳನ್ನು ನಾನು ಹೊಂದಿದ್ದೇನೆ.ಈ ಟ್ರೋಲ್ಗಳಿಗೂ ಧರ್ಮ ಅಥವಾ ನಂಬಿಕೆಗೂ ಯಾವುದೇ ಸಂಬಂಧವಿಲ್ಲ’ ಎಂದು ಮಣಿಮೇಖಲೈ ಹೇಳಿದ್ದಾರೆ.
ಬುಧವಾರ ಭೋಪಾಲ ಮತ್ತು ರತ್ಲಾಮ್ನಲ್ಲಿ ಮಣಿಮೇಘಲೈ ವಿರುದ್ದ ಎರಡು ಎಫ್ಐಆರ್ ಗಳು ದಾಖಲಾಗಿವೆ. ಇದಕ್ಕೂ ಮುನ್ನ ದಿಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News