ವಿವಾದಾತ್ಮಕ ಟ್ವೀಟ್: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅರುಣ್ ಯಾದವ್ ವಜಾ

Update: 2022-07-08 02:37 GMT

ಚಂಡೀಗಢ: ಭಾರತೀಯ ಜನತಾ ಪಕ್ಷದ ಹರ್ಯಾಣ ಘಟಕದ ಮಾಹಿತಿ ತಂತ್ರಜ್ಞಾನ ಮುಖ್ಯಸ್ಥ ಅರುಣ್ ಯಾದವ್ ಅವರನ್ನು ಪಕ್ಷ ಈ ಹುದ್ದೆಯಿಂದ ಗುರುವಾರ ವಜಾಗೊಳಿಸಿದೆ ಎಂದು ndtv.com ವರದಿ ಮಾಡಿದೆ.

ಮುಸ್ಲಿಮರು ಮತ್ತು ಇಸ್ಲಾಂ ವಿರುದ್ಧ ಅವರ ವಿವಾದಾತ್ಮಕ ಟ್ವೀಟ್‍ಗಳ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಬೇಕು ಎಂದು ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದ್ದು, ತಕ್ಷಣದಿಂದ ಜಾರಿಯಾಗುವಂತೆ ಅವರನ್ನು ವಜಾಗೊಳಿಸಲಾಗಿದೆ.

2018ರಲ್ಲಿ ಮಾಡಿದ ಟ್ವೀಟ್‍ಗೆ ಸಂಬಂಧಿಸಿದಂತೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್‌ ಝುಬೈರ್ ಅವರಿಗೆ ಸಂಬಂಧಿಸಿದಂತೆ ಯಾದವ್ ಮಾಡಿದ ಟ್ವೀಟ್‍ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ವರ್ಷದ ಮೇ ಹಾಗೂ 2017ರ ನಡುವೆ ಪೋಸ್ಟ್ ಮಾಡಲಾದ ಟ್ವೀಟ್‍ಗಳಿಗೆ ಸಂಬಂಧಿಸಿದಂತೆ #ಅರೆಸ್ಟ್ ಅರುಣ್‍‌ ಯಾದವ್ ಎಂದು ಗುರುವಾರ ಟ್ವಿಟ್ಟರ್‍ನಲ್ಲಿ ಟ್ರೆಂಡ್ ಆದ ವಿಷಯಗಳ ಪೈಕಿ ಒಂದಾಗಿತ್ತು.

ಯಾದವ್ ಬಗ್ಗೆ ತೋರಿದ ಉದಾರತೆಗೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿ, ಯಾದವ್ ಅವರನ್ನು, ಟಿವಿ ಚರ್ಚೆಯಲ್ಲಿ ಪ್ರವಾದಿ ಮಹಮ್ಮದ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರಿಗೆ ಹೋಲಿಸಿದ್ದರು.

ಯಾದವ್ ವಿರುದ್ಧ ಇನ್ನೂ ಯಾವುದೇ ದೂರು ದಾಖಲಾಗಿಲ್ಲ. ಜತೆಗೆ ಬಿಜೆಪಿ ಪಕ್ಷದಿಂದ ಅವರನ್ನು ವಜಾಗೊಳಿಸಿಲ್ಲ ಎಂದು ವರದಿಯಾಗಿದೆ.

"ಮತ್ತೊಂದು ಕ್ಷುದ್ರ ವ್ಯಕ್ತಿಯನ್ನು ಬಿಜೆಪಿ ವಜಾಗೊಳಿಸಿದೆ. ಆದರೆ ಈ ಕಣ್ಣೊರೆಸುವ ತಂತ್ರದ ಬದಲು ದ್ವೇಷ ಹರಡುವ ವ್ಯಕ್ತಿಯನ್ನು ಏಕೆ ಬಂಧಿಸಿಲ್ಲ ಎಂದು ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀನಿವಾಸ ಬಿ.ವಿ.ಟ್ವೀಟ್ ಮಾಡಿದ್ದಾರೆ. 2018ರ ಟ್ವೀಟ್‍ಗಾಗಿ ದೆಹಲಿ ಪೊಲೀಸರು ಝುಬೈರ್ ಅವರನ್ನು ಬಂಧಿಸಬಹುದಾದರೆ, ಅರುಣ್ ಯಾದವ್ ಅವರನ್ನು ಏಕೆ ಬಂಧಿಸಿಲ್ಲ ಎಂದು ಟಿಪ್ಪುಸುಲ್ತಾನ್ ಪಾರ್ಟಿಯ ಅಧ್ಯಕ್ಷ ಶೇಖ್ ಸಿದ್ದಿಕಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News