ಫೆಮಾ ಉಲ್ಲಂಘನೆ: ಟೈಮ್ಸ್ ಗ್ರೂಪ್ ನ ಹಿರಿಯ ಅಧಿಕಾರಿಗಳನ್ನು ಹಲವು ಸುತ್ತು ವಿಚಾರಣೆಗೊಳಪಡಿಸಿದ ಇಡಿ

Update: 2022-07-08 13:25 GMT

ಹೊಸದಿಲ್ಲಿ,ಜು.8: ಟೈಮ್ಸ್ ಆಫ್ ಇಂಡಿಯಾ ಗ್ರೂಪ್  ಒಡೆತನವನ್ನು ಹೊಂದಿರುವ ಬೆನೆಟ್ ಕೋಲ್ಮನ್ ಆ್ಯಂಡ್ ಕಂಪನಿ ಲಿ.(ಬಿಸಿಸಿಎಲ್) ಜಾರಿ ನಿರ್ದೇಶನಾಲಯ (ಈ.ಡಿ.)ದ ನಿಗಾದಲ್ಲಿದೆ ಎಂದು Indianexpress.com ವರದಿ ಮಾಡಿವೆ. ಕಂಪನಿಯ ಉನ್ನತ ಅಧಿಕಾರಿಗಳನ್ನು ಹಲವಾರು ಸುತ್ತುಗಳ ವಿಚಾರಣೆಗೆ ಒಳಪಡಿಸಿರುವ ಈ.ಡಿ.ಮಾಹಿತಿಗಳನ್ನು ನೀಡಿ ಸಹಕರಿಸುವಂತೆ ವಿದೇಶಿ ತಾಣಗಳಿಗೆ ಔಪಚಾರಿಕ ವಿನಂತಿಗಳನ್ನು ಕಳುಹಿಸುತ್ತಿದೆ ಎಂದು ಮೂಲಗಳು ದೃಢಪಡಿಸಿರುವುದನ್ನು ವರದಿಯುಉಲ್ಲೇಖಿಸಿದೆ. 

ಬಿಸಿಸಿಎಲ್ ಡಿಜಿಟಲ್,ಟಿವಿ ಮತ್ತು ರೇಡಿಯೊ ಸೇರಿದಂತೆ ವಿವಿಧ ಭಾಷೆಗಳು ಮತ್ತು ಪ್ಲಾಟ್ ಫಾರ್ಮ್ ಗಳಲ್ಲಿ ಹಲವಾರು ಮಾಧ್ಯಮ ಮತ್ತು ಮನೋರಂಜನೆ ಬ್ರಾಂಡ್‌ಗಳನ್ನು ಹೊಂದಿದೆ.
ಬಿಸಿಸಿಎಲ್ ಮತ್ತು ಜಾಗತಿಕ ತೆರಿಗೆ ಸ್ವರ್ಗವಾಗಿರುವ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ (ಬಿವಿಐ)ನಲ್ಲಿಯ ಸಂಸ್ಥೆಗಳ ನಡುವಿನ 900 ಕೋ.ರೂ.ಅಧಿಕ ಮೊತ್ತದ ವಹಿವಾಟುಗಳನ್ನು ಈ.ಡಿ.ಪರಿಶೀಲಿಸುತ್ತಿದೆ.

ಪ್ರಸ್ತುತ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ)ಯ ಉಲ್ಲಂಘನೆ ಆರೋಪಗಳ ಕುರಿತು ಈ.ಡಿ.ವಿಚಾರಣೆಯನ್ನು ನಡೆಸುತ್ತಿದೆಯೇ ಹೊರತು ಹೆಚ್ಚು ಕಟ್ಟುನಿಟ್ಟಿನ ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ (ಪಿಎಂಎಲ್ಎ)ಯಡಿ ಅಲ್ಲ ಎನ್ನುವುದನ್ನು ವರದಿಯು ದೃಢಪಡಿಸಿದೆ. ತನಿಖೆಯ ಕುರಿತು ಪ್ರತಿಕ್ರಿಯಿಸಲು ಈ.ಡಿ.ಅಧಿಕಾರಿಗಳು ನಿರಾಕರಿಸಿದ್ದಾರೆ.

 ಕಂಪನಿಯ ಆಯವ್ಯಯ ಪತ್ರದಲ್ಲಿ ತೋರಿಸಿರುವಂತೆ ಬಿವಿಐನಲ್ಲಿ ಸ್ಥಾಪನೆಗೊಂಡ ಎಂಎಕ್ಸ್ ಮೀಡಿಯಾ ಕಂ.ಲಿ.ಟೈಮ್ಸ್ ಗ್ರೂಪ್‌ನ ವಿವಿಧ ಕಂಪನಿಗಳಲ್ಲಿ ಒಂದಾಗಿದೆ. 2017-18 ಮತ್ತು 2018-19ರಲ್ಲಿ ಇದನ್ನು ಮಾತೃಸಂಸ್ಥೆಯ ಶೇ.52.35ರಷ್ಟು ಪಾಲು ಬಂಡವಾಳವನ್ನು ಹೊಂದಿರುವ ‘ಅಧೀನ’ ಕಂಪನಿಯಾಗಿ ತೋರಿಸಲಾಗಿತ್ತು. 2019-20 ಮತ್ತು 2020-21ರಲ್ಲಿ ಮಾತೃಸಂಸ್ಥೆಯ ಪಾಲು ಬಂಡವಾಳವನ್ನು ಶೇ.40.36ಕ್ಕೆ ತಗ್ಗಿಸುವ ಮೂಲಕ ‘ಸಹವರ್ತಿ’ ಕಂಪನಿಯಾಗಿ ಬದಲಿಸಲಾಗಿದೆ.
2019ನೇ ಸಾಲಿಗಾಗಿ ವಿದೇಶಿ ನೇರ ಹೂಡಿಕೆಯ ಹೊರಹರಿವಿನ ಕುರಿತು ಆರ್ಬಿಐಗೆ ಸಲ್ಲಿಸಲಾಗಿರುವ ವರದಿಯಲ್ಲಿ ಎಂಎಕ್ಸ್ ಮೀಡಿಯಾ ಕಂ.ಲಿ.ಅನ್ನು ‘ಹಣಕಾಸು ವಿಮೆ ಮತ್ತು ಉದ್ಯಮ ಸೇವೆಗಳಲ್ಲಿ ’ ವ್ಯವಹರಿಸುವ ಜಂಟಿ ಉದ್ಯಮವನ್ನಾಗಿ ಪಟ್ಟಿ ಮಾಡಲಾಗಿದ್ದು,ಅದು 35.8 ಮಿಲಿಯನ್ ಡಾಲರ್ಗಳ ಶೇರು ಬಂಡವಾಳವನ್ನು ಹೊಂದಿದೆ.
ದಕ್ಷಿಣ ಕೊರಿಯಾ,ಚೀನಾ ಮತ್ತು ಸಿಂಗಾಪುರಗಳಲ್ಲಿ ಸ್ಥಾಪನೆಗೊಂಡಿರುವ ಇತರ ‘ಸಹವರ್ತಿ’ ಕಂಪನಿಗಳನ್ನೂ ಬಿಸಿಸಿಎಲ್ನ ಆಯವ್ಯಯ ಪತ್ರದಲ್ಲಿ ಪಟ್ಟಿ ಮಾಡಲಾಗಿದೆ.
ಕಂಪನಿಗಳ ರಿಜಿಸ್ಟ್ರಾರ್ (ಆರ್ಒಸಿ)ರ ದಾಖಲೆಗಳಂತೆ 2019-20ರಲ್ಲಿ ತನ್ನ ಕಾರ್ಯಾಚರಣೆಗಳಿಂದ ಬಿಸಿಸಿಎಲ್ 9,611 ಕೋ.ರೂ.ಗಳ ಆದಾಯವನ್ನು ಗಳಿಸಿದ್ದರೆ ಕೋವಿಡ್ ವರ್ಷವಾದ 2020-21ರಲ್ಲಿ ಅದು ಶೇ.44ರಷ್ಟು ತೀವ್ರ ಕುಸಿದಿದ್ದು,5,337 ಕೋ.ರೂ.ಗಳಷ್ಟಾಗಿತ್ತು. ಕಂಪನಿಯ ನಷ್ಟವೂ ವಿತ್ತವರ್ಷ 2019-20ರಲ್ಲಿಯ 451 ಕೋ.ರೂ.ಗೆ ಹೋಲಿಸಿದರೆ ವಿತ್ತವರ್ಷ 2020-21ರಲ್ಲಿ ದುಪ್ಪಟ್ಟುಗೊಂಡು 997 ಕೋ.ರೂ.ಗಳಷ್ಟಾಗಿದೆ. ಬಿಸಿಸಿಎಲ್ 2018-19ನೇ ವಿತ್ತವರ್ಷದಲ್ಲಿ 484 ಕೋ.ರೂ.ಗಳ ನಿವ್ವಳ ಲಾಭವನ್ನು ದಾಖಲಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News