ಜಪಾನ್‌ನ ಮಾಜಿ ಪ್ರಧಾನಿ ಶಿಂಝೊ ಅಬೆ ಗೌರವಾರ್ಥ ದೇಶದಲ್ಲಿ ಶನಿವಾರ ಶೋಕಾಚರಣೆ

Update: 2022-07-08 17:11 GMT

ಹೊಸದಿಲ್ಲಿ, ಜು. 8: ಜಪಾನ್‌ನ ಮಾಜಿ ಪ್ರಧಾನಿ ಶಿಂಝೊ ಅಬೆ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಕವಾಗಿ ದೇಶಾದ್ಯಂತ ಶನಿವಾರ ರಾಷ್ಟ್ರೀಯ ಶೋಕಾಚರಣೆ ನಡೆಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಘೋಷಿಸಿದ್ದಾರೆ. ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಅವರು ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಅವರು ಭಾರತದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದು ಅವರು ಹೇಳಿದ್ದಾರೆ.

‘‘ನನ್ನ ಹಾಗೂ ಅಬೆ ಅವರ ಗೆಳೆತನ ಹಲವು ವರ್ಷಗಳದ್ದು. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಅವರ ಪರಿಚಯ ಇತ್ತು. ನಾನು ಪ್ರಧಾನಿಯಾದ ಬಳಿಕವೂ ಗೆಳೆತನ ಮುಂದುವರಿಯಿತು. ಆರ್ಥಿಕತೆ ಹಾಗೂ ಜಾಗತಿಕ ವ್ಯವಹಾರಗಳ ಕುರಿತ ಅವರು ತೀಕ್ಷ್ಮ ತಿಳುವಳಿಕೆ ನನ್ನ ಮೇಲೆ ಆಳವಾಗಿ ಪ್ರಭಾವ ಬೀರಿತ್ತು’’ ಎಂದು ಅವರು ಹೇಳಿದ್ದಾರೆ. 

ಇತ್ತೀಚೆಗೆ ಜಪಾನ್‌ಗೆ ಭೇಟಿ ನೀಡಿದ ಸಂದರ್ಭ, ತನಗೆ ಅಬೆ ಅವರನ್ನು ಮತ್ತೊಮ್ಮೆ ಭೇಟಿಯಾಗುವ ಅವಕಾಶ ದೊರಕಿತು. ಈ ಸಂದರ್ಭ ನಾವು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದೆವು ಎಂದು ಅವರು ಹೇಳಿದರು.

‘‘ಅವರಲ್ಲಿ ಜಾಣ್ಮೆ ಹಾಗೂ ತಿಳುವಳಿಕೆ ಯಾವಾಗಲೂ ಇತ್ತು. ಅವರ ಕುಟುಂಬ ಹಾಗೂ ಜಪಾನ್ ಜನರ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತೇನೆ’’ ಎಂದು ಪ್ರಧಾನಿ ಹೇಳಿದ್ದಾರೆ. 

‘‘ಭಾರತ ಹಾಗೂ ಜಪಾನ್ ಸಂಬಂಧಗಳನ್ನು ವಿಶೇಷ ವ್ಯೂಹಾತ್ಮಕ ಹಾಗೂ ಜಾಗತಿಕ ಪಾಲುದಾರಿಕೆಯ ಮಟ್ಟಕ್ಕೆ ಮೇಲೆತ್ತುವಲ್ಲಿ ಅಬೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇಂದು ಅವರಿಗಾಗಿ ಜಪಾನ್‌ನೊಂದಿಗೆ ಭಾರತ ದುಃಖಿಸುತ್ತಿದೆ. ಈ ಸಂದರ್ಭದಲ್ಲಿ ಜಪಾನ್‌ನ ನಮ್ಮ ಸಹೋದರ, ಸಹೋದರಿಯರೊಂದಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ’’ ಎಂದು ಪ್ರಧಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News