ಹೊಸ ಸಂಸತ್ ಭವನದ ಮೇಲಿದ್ದ ರಾಷ್ಟ್ರೀಯ ಲಾಂಛನ ಪ್ರಧಾನ ಮೋದಿಯಿಂದ ಅನಾವರಣ

Update: 2022-07-11 18:14 GMT

ಹೊಸದಿಲ್ಲಿ, ಜು. 11:  ಹೊಸದಿಲ್ಲಿಯ ಸಂಸತ್ ಭವನದ ಮೇಲೆ ಇರಿಸಲಾಗಿದ್ದ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅನಾವರಣಗೊಳಿಸಿದರು.

ಈ ರಾಷ್ಟ್ರೀಯ ಲಾಂಛನದ ಪ್ರತಿಮೆಯನ್ನು ಕಂಚಿನಿಂದ ಮಾಡಲಾಗಿದ್ದು, 9,500 ಕಿ.ಗ್ರಾಂ. ತೂಕವಿದೆ ಹಾಗೂ 6.5 ಮೀಟರ್ ಎತ್ತರವಿದೆ. ಈ ಲಾಂಛನವನ್ನು ನೂತನ ಸಂಸತ್ ಭವನದ ಕೇಂದ್ರ ದ್ವಾರದ ಮೇಲೆ ನಿಲ್ಲಿಸಲಾಗಿದೆ. ಈ ಲಾಂಛನಕ್ಕೆ ಆಧಾರವಾಗಿ ಸುಮಾರು 6,500 ಕಿ.ಗ್ರಾಂ. ತೂಕದ ಸ್ಟೀಲ್‌ನ ರಚನೆಯನ್ನು ನಿರ್ಮಿಸಲಾಗಿದೆ ಎಂದು ಸರಕಾರ ಹೇಳಿದೆ. 
ಸಂಸತ್ತಿನ ನೂತನ ಕಟ್ಟಡದ ಮೇಲೆ ಇರಿಸಲಾದ ಈ ಲಾಂಛನದ ಪರಿಕಲ್ಪನಾತ್ಮಕ ರೇಖಾ ಚಿತ್ರ ಹಾಗೂ ಎರಕ ಹೊಯ್ಯುವ ಪ್ರಕ್ರಿಯೆ 8 ಹಂತಗಳ ಪರಿಶೀಲನೆಗೆ ಒಳಪಟ್ಟಿದೆ. ಆರಂಭದಲ್ಲಿ ಆವೆ ಮಣ್ಣಿನಲ್ಲಿ, ಕಂಪ್ಯೂಟರ್ ಗ್ರಾಫಿಕ್‌ನಲ್ಲಿ ಈ ಲಾಂಛನವನ್ನು ರೂಪಿಸಲಾಯಿತು. ಅನಂತರ ಕಂಚಿನಲ್ಲಿ ಎರಕ ಹೊಯ್ಯಲಾಯಿತು ಹಾಗೂ ಪಾಲಿಶ್ ಮಾಡಲಾಯಿತು ಎಂದು ಸರಕಾರ ಹೇಳಿದೆ.  

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನದ ನಿರ್ಮಾಣ ಕಾಮಗಾರಿಯಲ್ಲಿ ಪಾಲ್ಗೊಂಡ ಕಾರ್ಯಪಡೆಯೊಂದಿಗೆ ಸಂವಹನ ನಡೆಸಿದರು. ಪ್ರಧಾನಿ ಅವರು ಪೂಜೆಯಲ್ಲಿ ಭಾಗವಹಿಸಿದ ಬಳಿಕ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಲಾಯಿತು. 
ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯ ಸಭಾ ಉಪಾಧ್ಯಕ್ಷ ಹರಿವಂಶ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹಾಗೂ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು. 

ನೂತನ ಸಂಸತ್ ಭವನದ ನಿರ್ಮಾಣ ಯೋಜನೆಗೆ 1,200 ಕೋಟಿ ರೂಪಾಯಿ ವೆಚ್ಚವಾಗಲಿದೆ. ಒಟ್ಟು 977 ಅಂದಾಜು ವೆಚ್ಚಕ್ಕಿಂತ ಶೇ. 29 ಏರಿಕೆಯಾಗಲಿದೆ. ಸರಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆ ಎಂದು ಕರೆಯಲಾದ ಈ ಕಟ್ಟಡವನ್ನು ಟಾಟಾ ಯೋಜನೆ  ನಿರ್ಮಾಣ ಮಾಡುತ್ತಿದೆ. 
13 ಎಕರೆ ವಿಸ್ತರಿಸಲಿರುವ ನಾಲ್ಕು ಮಹಡಿಯ ಈ ಪ್ರಸ್ತಾವಿತ ಕಟ್ಟಡ ರಾಷ್ಟ್ರಪತಿ ಭವನದಿಂದ ಕೂಗಳತೆಯ ದೂರದಲ್ಲಿದೆ. ಆರಂಭದಲ್ಲಿ ಈ ಕಟ್ಟಡ ಈ ವರ್ಷ 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅನಂತರ ಇದರ ಗಡುವನ್ನು ಅಕ್ಟೋಬರ್‌ಗೆ ಬದಲಾಯಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News