ವಿದ್ಯುನ್ಮಾನ ಸುದ್ದಿಮನೆಗಳು ಹೀಗೇಕೆ?

Update: 2022-07-12 07:47 GMT

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಆಂದೋಲನ-50ರ ಸಂದರ್ಭದಲ್ಲಿ ಸಮಾಜದ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರವನ್ನು ಕುರಿತು ಉಪನ್ಯಾಸ ನೀಡಿದ ಖ್ಯಾತ ಲೇಖಕ ಮತ್ತು ಪತ್ರಕರ್ತ ಪಿ. ಸಾಯಿನಾಥ್ ಒಂದೆರಡು ಮಹತ್ವದ ಅಂಶಗಳನ್ನು ತೆರೆದಿಟ್ಟಿದ್ದರು. ಪತ್ರಿಕೋದ್ಯೋಗಿಗಳ ಕಣ್ಣುತೆರೆಸುವಂತಹ ಈ ಮಾತುಗಳು ಸಹಜವಾಗಿಯೇ ಪ್ರಸ್ತುತ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ಸನ್ನಿವೇಶದ ಸುಡು ವಾಸ್ತವಗಳನ್ನು ಬಿಂಬಿಸುವಂತಿದ್ದವು. ಮಾಧ್ಯಮ ಮತ್ತು ಪತ್ರಿಕೋದ್ಯೋಗ ಈ ಎರಡನ್ನೂ ಪ್ರತ್ಯೇಕಿಸಿ ನೋಡಬೇಕು ಎಂದು ಹೇಳುವ ಮೂಲಕ ಸಾಯಿನಾಥ್ ಮಾಧ್ಯಮ ಲೋಕವು ಹೇಗೆ ಔದ್ಯಮಿಕ ಶಕ್ತಿಯಾಗಿ, ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿದೆ ಎನ್ನುವುದನ್ನು ಸುಸ್ಪಷ್ಟವಾಗಿ ವ್ಯಾಖ್ಯಾನಿಸಿದರು. ಎರಡನೆಯದಾಗಿ ಭಾರತದ ಮಾಧ್ಯಮ ಜಗತ್ತಿನಲ್ಲಿ ಕಾರ್ಯನಿರ್ವಹಿಸುವ ಪತ್ರಿಕೋದ್ಯೋಗಿಗಳ ಪೈಕಿ ಶೇ. 80ರಷ್ಟು ಶೀಘ್ರಲಿಪಿಕಾರರಿದ್ದಾರೆ ಇನ್ನುಳಿದ ಶೇ. 20ರಷ್ಟು ಮಾತ್ರವೇ ಪತ್ರಕರ್ತರಾಗಿ ಪತ್ರಿಕೋದ್ಯಮವನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದರು. ಇದರರ್ಥ ಶೇ. 80ರಷ್ಟು ಪತ್ರಕರ್ತರು ತಮ್ಮ ಮಾಲಕರು ಹೇಳಿದ್ದನ್ನೇ ಪುನರುಚ್ಚರಿಸುತ್ತಾರೆ ಎಂದಷ್ಟೇ.

ಕರ್ನಾಟಕದ ಸಂದರ್ಭದಲ್ಲಿ ನೋಡುವುದಾದರೆ ಈ ಎರಡೂ ಸಂಗತಿಗಳು ನಿಸ್ಸಂದೇಹವಾಗಿ ಸತ್ಯ ಎನ್ನಬಹುದು. ರಾಜಕಾರಣಿಗಳ ಮತ್ತು ಔದ್ಯಮಿಕ ಜಗತ್ತಿನ ಒಡೆತನದಲ್ಲಿರುವ ಕನ್ನಡದ ಬಹುಪಾಲು ವಿದ್ಯುನ್ಮಾನ ವಾಹಿನಿಗಳು ಮತ್ತು ಸುದ್ದಿಮನೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನೂ ಬಲಿಕೊಟ್ಟು ತಮ್ಮ ಸ್ವಾಮಿನಿಷ್ಠೆಯನ್ನು ಪ್ರಧಾನವಾಗಿ ಬಿಂಬಿಸುತ್ತಿವೆ. ಸುದ್ದಿಮನೆಗಳಲ್ಲಿ ಆಯ್ಕೆ ಮಾಡಲಾಗುವ ಮುಖ್ಯ ಸುದ್ದಿಗಳು ಮತ್ತು ರಾಜಕೀಯ ಪ್ರೇರಿತ ಮತ್ತು ಪ್ರಚೋದಿತ ವಿಚಾರಗಳು ಮೂಲತಃ ಜನಮಾನಸದಿಂದ ನೈಜ ಹಾಗೂ ವಾಸ್ತವಿಕ ಸುದ್ದಿಗಳನ್ನು ಮರೆಮಾಚಿ, ರಂಜನೀಯ ಹಾಗೂ ರೋಚಕ ಸುದ್ದಿಗಳನ್ನೇ ಪ್ರಧಾನವಾಗಿಸುವ ಪ್ರಯತ್ನದಂತೆ ಕಾಣುತ್ತದೆ. ಒಂದೆಡೆ ಆಡಳಿತಾರೂಢ ಸರಕಾರಗಳ ಎಲ್ಲ ಕ್ರಮಗಳನ್ನೂ ಸಮರ್ಥಿಸುವ ಧೋರಣೆ ಕಂಡುಬಂದರೆ ಮತ್ತೊಂದೆಡೆ ಭಿನ್ನಾಭಿಪ್ರಾಯಗಳನ್ನು, ಭಿನ್ನಮತಗಳನ್ನು ನಿರಾಕರಿಸುವ ಧೋರಣೆಯನ್ನೂ ಈ ಸುದ್ದಿಮನೆಗಳಲ್ಲಿ ಕಾಣಬಹುದು. ಜನಸಾಮಾನ್ಯರಿಗೆ ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ವಸ್ತುನಿಷ್ಠತೆಯಿಂದ ಬಿತ್ತರಿಸುವ ಜವಾಬ್ದಾರಿಯನ್ನು ಮರೆತಿರುವುದರಿಂದಲೇ ಸುದ್ದಿಮನೆಗಳು, ಜನತೆಯ ನಿತ್ಯ ಜೀವನಕ್ಕೆ ಸಂಬಂಧವಿಲ್ಲದ ಸುದ್ದಿಗಳನ್ನೇ ಪ್ರಧಾನವಾಗಿ ಬಿಂಬಿಸುತ್ತಿರುವುದನ್ನು ಗಮನಿಸಬಹುದು.

ಈ ಧೋರಣೆಗೆ ಕಾರಣ ಎಂದರೆ ಸುದ್ದಿಮನೆಗಳು ರಾಜಕಾರಣಿಗಳ ಅಥವಾ ರಾಜಕೀಯ ಅಧಿಕಾರ ಕೇಂದ್ರಗಳಿಗೆ ಹತ್ತಿರವಾದ ಉದ್ಯಮಿಗಳ ಒಡೆತನದಲ್ಲಿರುವುದು ಮತ್ತು ಈ ಅಧಿಕಾರ ಕೇಂದ್ರಗಳ ಮೂಲಕವೇ, ಸರಕಾರಿ ಸಂಸ್ಥೆಗಳ ಮೂಲಕವೇ ಸುದ್ದಿಮನೆಗಳು ಹಲವು ಸವಲತ್ತುಗಳನ್ನು ಅಪೇಕ್ಷಿಸುವುದು. ಮೂಲತಃ ವಿದ್ಯುನ್ಮಾನ ಮಾಧ್ಯಮ ಮತ್ತು ಸುದ್ದಿಮನೆಗಳ ಆದ್ಯತೆ ನೈಜ ಹಾಗೂ ವಾಸ್ತವಿಕ ಸುದ್ದಿ ಬಿತ್ತರಿಸುವುದೇ ಆಗಬೇಕು. ಆದರೆ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಎಲ್ಲ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳೂ ವಾಣಿಜ್ಯೀಕರಣಗೊಂಡು, ಮಾರುಕಟ್ಟೆಯ ಆದ್ಯತೆಗಳಿಗನುಸಾರವಾಗಿಯೇ ತಮ್ಮ ಅಸ್ಮಿತೆಗಳನ್ನು ಗುರುತಿಸಿಕೊಳ್ಳುವುದರಿಂದ, ವಿದ್ಯುನ್ಮಾನ ಸುದ್ದಿಮನೆಗಳೂ ಇದೇ ಹಾದಿಯಲ್ಲಿ ಸಾಗುತ್ತವೆ. ಮಾರುಕಟ್ಟೆಯಲ್ಲಿ ತಮ್ಮ ಸಾಂಸ್ಥಿಕ ಹಾಗೂ ಆರ್ಥಿಕ ಅಸ್ತಿತ್ವ-ಸ್ಥಾನವನ್ನು ಉಳಿಸಿಕೊಳ್ಳಲು ಟಿಆರ್‌ಪಿ ರೇಟಿಂಗ್‌ಗಳನ್ನೇ ಆಧರಿಸುವ ಮಾಧ್ಯಮಗಳು ಈ ರೇಟಿಂಗ್ ಹೆಚ್ಚಿಸಿಕೊಳ್ಳಲು ಮಾಡುವ ಸಾಹಸಗಳು ಅನೇಕ. ಜನಸಾಮಾನ್ಯರನ್ನು ತಲುಪಲು ಬೇಕಾದ ರೋಚಕ ಸುದ್ದಿಮನೆಗಳನ್ನೇ ಮತ್ತಷ್ಟು ರೋಚಕತೆಯಿಂದ ಬಿತ್ತರಿಸುವ ಕಲೆಯನ್ನು ಕನ್ನಡದ ಎಲ್ಲ ಸುದ್ದಿಮನೆಗಳೂ ರೂಢಿಸಿಕೊಂಡಿವೆ. ಹಾಗಾಗಿಯೇ ಸಿನೆಮಾ ನಟರ ಖಾಸಗಿ ಬದುಕಿನ ಕ್ಷಣಗಳೂ ಸಾರ್ವಜನಿಕ ಸುದ್ದಿಗಳಂತೆ ಬಿತ್ತರವಾಗುತ್ತವೆ. ಒಬ್ಬ ಹೀರೋ ತನ್ನ ಮಗುವಿಗೆ ಹಾಲುಣಿಸುವುದೂ ಒಂದು ಗಂಟೆಯ ಅವಧಿ ಸುದ್ದಿಯಾಗುತ್ತದೆ.

ಇತ್ತೀಚೆಗೆ ನಡೆದ ಒಂದು ಸಮೀಕ್ಷೆಯಲ್ಲಿ ಕನ್ನಡದ ಪ್ರಮುಖ ಸುದ್ದಿಮನೆಗಳ ಟಿಆರ್‌ಪಿ ರೇಟಿಂಗ್ ಕುಸಿದಿರುವುದನ್ನೂ ಗಮನಿಸಬೇಕಿದೆ. ಈ ಕುಸಿತಕ್ಕೆ ಮೂಲ ಕಾರಣ ಈ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳ ವಾಸ್ತವಿಕ ಮೌಲ್ಯ ಮತ್ತು ಸುದ್ದಿಪ್ರಸರಣದ ವೈಖರಿ. ಕಳೆದ ನಾಲ್ಕು ತಿಂಗಳಲ್ಲಿ ಕನ್ನಡದ ಪ್ರಮುಖ ಸುದ್ದಿಮನೆಗಳು ಬಿತ್ತರಿಸುವ ವಿಷಯಗಳ ಸಮೀಕ್ಷೆಯೊಂದನ್ನು ಸಂಸ್ಥೆಯೊಂದು ಬಿಡುಗಡೆ ಮಾಡಿದೆ. ಇದರ ಅನುಸಾರ ಭಾವನಾತ್ಮಕ ಮತ್ತು ಪ್ರಚೋದಕ ವಿಚಾರಗಳಾದ ಹಲಾಲ್, ಹಿಜಾಬ್, ಮಂದಿರ-ಮಸೀದಿ, ಮುಸ್ಲಿಮ್ ವ್ಯಾಪಾರಿಗಳ ಬಹಿಷ್ಕಾರ ಮತ್ತು ಅಝಾನ್-ಭಜನೆ ಇವುಗಳೇ ಪ್ರಮುಖ ಮೂರು ವಾಹಿನಿಗಳಲ್ಲಿ ಕ್ರಮವಾಗಿ ಶೇ. 84, ಶೇ. 59 ಮತ್ತು ಶೇ. 42ರಷ್ಟು ಪ್ರಸಾರ ಸಮಯವನ್ನು ಕಬಳಿಸಿವೆ. ಜನಸಾಮಾನ್ಯರ ಬದುಕಿಗೆ ಅತ್ಯವಶ್ಯವಾದ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಶಿಕ್ಷಣ-ಆರೋಗ್ಯ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು ಈ ವಿಚಾರಗಳಿಗೆ ಕ್ರಮವಾಗಿ ಶೇ. 1, ಶೇ. 11 ಮತ್ತು ಶೇ. 4ರಷ್ಟು ಸಮಯ ಒದಗಿಸಲಾಗಿದೆ. ಉಳಿದಂತೆ ಎಕ್ಸಿಟ್ ಸಮೀಕ್ಷೆ, ಬಜೆಟ್, ರಶ್ಯ-ಉಕ್ರೇನ್ ಯುದ್ಧ ಮುಂತಾದ ವಿಚಾರಗಳಿಗೆ ಕ್ರಮವಾಗಿ ಶೇ. 16, ಶೇ. 18, ಶೇ. 13ರಷ್ಟು ಸಮಯ ನೀಡಲಾಗಿದೆ. ಈ ವಾಹಿನಿಗಳ ಸುದ್ದಿಪ್ರಸರಣದಲ್ಲಿ ಪ್ರಧಾನವಾಗಿ ಸಮಯ ಕಬಳಿಸಿರುವ ವಿಚಾರಗಳು ಅಪ್ರಸ್ತುತವೇನಲ್ಲ ಅಥವಾ ಅದು ಜನಸಾಮಾನ್ಯರಿಗೆ ಸಂಬಂಧಪಡದ ವಿಚಾರಗಳೂ ಅಲ್ಲ. ತಮ್ಮ ನಿತ್ಯ ಜೀವನದ ನಡುವೆ ಸಾಮಾನ್ಯ ಜನರು ಎದುರಿಸುವ ಬಾಹ್ಯ ಸಮಸ್ಯೆಗಳನ್ನು ಬಿತ್ತರಿಸುವುದು ಮಾಧ್ಯಮಗಳ ಆದ್ಯತೆಯಾಗಬೇಕಿರುವುದೂ ಹೌದು. ಆದರೆ ಈ ಮೂರೂ ವಾಹಿನಿಗಳಲ್ಲಿ ಕಂಡುಬರುವ ಸಮಾನ ಅಂಶ ಎಂದರೆ ಪಕ್ಷಪಾತ, ಏಕಪಕ್ಷೀಯ ಧೋರಣೆ, ವಸ್ತುನಿಷ್ಠತೆಯ ಕೊರತೆ ಮತ್ತು ಅತಿಯಾದ ರೋಚಕತೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಬಿತ್ತರಿಸುವಾಗ ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾದ ಸುದ್ದಿಮನೆಗಳು ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ತಾವೇ ನಿರ್ಣಾಯಕ ಸ್ಥಾನದಲ್ಲಿ ನಿಲ್ಲುವ ಒಂದು ಅತಿರೇಕಕ್ಕೆ ಹೋಗಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಮನುಜ ಸೂಕ್ಷ್ಮತೆ, ಸಂವೇದನೆ ಮತ್ತು ಸೌಜನ್ಯಗಳ ಗಡಿರೇಖೆಗಳನ್ನು ದಾಟಿ ನಡೆದಿರುವ ಕನ್ನಡದ ಪ್ರಮುಖ ಸುದ್ದಿಮನೆಗಳು ತಾವು ಬಿತ್ತರಿಸುವ ಸುದ್ದಿಗಳು ಎಳೆಯಮಕ್ಕಳಿಂದ ವಯೋವೃದ್ಧರವರೆಗೂ ಲಕ್ಷಾಂತರ ಮಂದಿಯನ್ನು ತಲುಪುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಹೊಂದಿರಬೇಕು. ಅತ್ಯಾಚಾರ ಪ್ರಕರಣಗಳನ್ನು ಬಿತ್ತರಿಸುವಾಗ ಸ್ತ್ರೀ ಸಂವೇದನೆಯ ಒಂದಂಶವೂ ಇಲ್ಲದಂತೆ ದೃಶ್ಯಗಳನ್ನು ಬಿತ್ತರಿಸುವ ಮಾಧ್ಯಮಗಳು ನೋಡುಗರಲ್ಲಿ ಹೇಸಿಗೆ ಹುಟ್ಟಿಸುವಷ್ಟು ಮಟ್ಟಿಗೆ ತಮ್ಮ ಅತಿರೇಕ ಸುದ್ದಿಗಳನ್ನು ಪ್ರದರ್ಶಿಸುತ್ತವೆ.

ಇತ್ತೀಚೆಗೆ ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಸಂದರ್ಭದಲ್ಲಿ ಕೆಲವು ವಾಹಿನಿಗಳು ತಮ್ಮ ಸೂಕ್ಷ್ಮತೆಯ ಎಲ್ಲೆ ಮೀರಿರುವುದನ್ನು ಇಡೀ ರಾಜ್ಯವೇ ಗಮನಿಸಿದೆ. ಯಾವುದೇ ಹತ್ಯೆಯನ್ನು ಅಥವಾ ಹತ್ಯೆಯ ನಂತರದ ದೃಶ್ಯಗಳನ್ನು ನೇರವಾಗಿ ಬಿತ್ತರಿಸುವಂತಿಲ್ಲ ಎಂಬ ನಿಯಮವನ್ನೂ ಉಲ್ಲಂಘಿಸಿ, ದುಷ್ಕರ್ಮಿಗಳ ಕೃತ್ಯವನ್ನು ಅತ್ಯಂತ ರೋಚಕ ವಿವರಣೆಯೊಂದಿಗೆ ಬಿತ್ತರಿಸಿದ ವಾಹಿನಿಗಳು, ಹತ್ಯೆಗೊಳಗಾದ ಗುರೂಜಿಗೆ ಎಷ್ಟು ಬಾರಿ ಚುಚ್ಚಲಾಯಿತು ಎಂದು ಎಣಿಸಿಕೊಂಡು ಅಂಕಿಅಂಶಗಳನ್ನು ಬಿತ್ತರಿಸಿದ್ದು, ಮಾಧ್ಯಮಗಳ ಅಸೂಕ್ಷ್ಮತೆಗೆ ಸಾಕ್ಷಿಯಾಗಿದೆ. ಒಂದು ವಾಹಿನಿಯಲ್ಲಿ 60 ಸೆಕೆಂಡ್‌ನಲ್ಲಿ 103 ಬಾರಿ ಎಂದರೆ, ಇನ್ನೊಂದು ವಾಹಿನಿಯಲ್ಲಿ 39 ಬಾರಿ ಎಂದೂ, ಮತ್ತೊಂದು ವಾಹಿನಿಯಲ್ಲಿ 10 ಸೆಕಂಡ್‌ಗಳಲ್ಲಿ 60 ಬಾರಿ ಎಂದೂ ಬಿತ್ತರಿಸಲಾಯಿತು. ಒಂದು ವಾಹಿನಿಯಲ್ಲಿ ಚುಚ್ಚುತ್ತಿರುವ ದೃಶ್ಯದ ಮೇಲೆ ಅಂಕಿಗಳನ್ನು ನಮೂದಿಸುವ ಮೂಲಕ ಎಣಿಕೆ ಮಾಡುವ ವಿಕೃತ ವಿಧಾನವನ್ನೂ ಅನುಸರಿಸಲಾಯಿತು.

ಸುದ್ದಿಪ್ರಸರಣದ ಈ ರೋಚಕತೆ ಮತ್ತು ಅಸೂಕ್ಷ್ಮತೆಗಳು ಮಾಧ್ಯಮ ಸಮೂಹಗಳ ಮತ್ತು ವಾಹಿನಿಗಳ ಮಾಲಕರ ಮಾರುಕಟ್ಟೆ ಸ್ಥಿತ್ಯಂತರಗಳನ್ನು ನಿರ್ಧರಿಸಲು ನಿರ್ಣಾಯಕವಾಗುತ್ತವೆ. ಆದರೆ ಈ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುವ ಪತ್ರಿಕೋದ್ಯೋಗಿಗಳಿಗೆ (ಜರ್ನಲಿಸ್ಟ್‌ಗಳು) ಅಥವಾ ಪತ್ರಕರ್ತರಿಗೆ ಮತ್ತು ಸುದ್ದಿ ನಿರೂಪಕರಿಗೆ ಕೊಂಚ ಮಟ್ಟಿಗೆ ಸೌಜನ್ಯ, ಸಂವೇದನೆ ಮತ್ತು ಸೂಕ್ಷ್ಮತೆಗಳಿದ್ದರೆ ಇಂತಹ ದೃಶ್ಯಗಳು ನೋಡುಗರ ಮನಸ್ಸಿಗೆ ಆಘಾತ ಉಂಟುಮಾಡದಂತೆಯೂ ಬಿತ್ತರಿಸ ಬಹುದು. ಈ ಕನಿಷ್ಠ ಮಟ್ಟದ ಸ್ವಾತಂತ್ರ್ಯವನ್ನೂ ವಾಹಿನಿಗಳ ಮಾಲಕರು ನೀಡುವುದಿಲ್ಲ ಎಂದಾದರೆ ವಸ್ತುನಿಷ್ಠ ವರದಿಗಾರಿಕೆಗೆ ಬದ್ಧವಾಗಿರುವ ಮತ್ತು ಪತ್ರಿಕೋದ್ಯೋಗದ ಮೌಲಿಕ ವೃತ್ತಿಪರತೆಗೆ ಬದ್ಧವಾಗಿರುವ ನಿರೂಪಕರು ಮತ್ತು ಪತ್ರಿಕೋದ್ಯೋಗಿಗಳು ಅಂತಹ ವಾಹಿನಿಗಳಿಂದ ನಿರ್ಗಮಿಸುವ ಮೂಲಕ ತಮ್ಮ ನೈತಿಕ ಪ್ರತಿರೋಧವನ್ನು ವ್ಯಕ್ತಪಡಿಸಬಹುದು. ಇದು ಜೀವನ ಮತ್ತು ಜೀವನೋಪಾಯದ ಪ್ರಶ್ನೆ ಎನ್ನುವುದಾದರೆ, ಬಾಹ್ಯ ಸಮಾಜದಲ್ಲಿ ಜೀವನೋಪಾಯಕ್ಕಾಗಿ ಯಾವುದೇ ಅಸೂಕ್ಷ್ಮತೆಯ, ಸಂವೇದನಾಶೂನ್ಯ, ಸೌಜನ್ಯರಹಿತ ಚಟುವಟಿಕೆಯಲ್ಲಾದರೂ ತೊಡಗಬಹುದು ಎನ್ನುವ ವಾದವನ್ನು ಪುಷ್ಟೀಕರಿಸಿದಂತೆಯೇ ಆಗುತ್ತದೆ.

ಆದರೆ ಭಾರತದ ಪ್ರಸ್ತುತ ಸನ್ನಿವೇಶದಲ್ಲಿ ಪತ್ರಿಕೋದ್ಯಮ ವಸ್ತುಶಃ ಒಂದು ಮಾರುಕಟ್ಟೆ ಉದ್ಯಮವಾಗಿದ್ದು, ಲಾಭಗಳಿಕೆ ಮತ್ತು ಸಾಮ್ರಾಜ್ಯ ವಿಸ್ತರಣೆಯೇ ಪ್ರಧಾನ ಅಂಶಗಳಾಗಿರುವುದು ಸತ್ಯ. ಆಡಳಿತಾರೂಢ ಪಕ್ಷಗಳಿಗೆ ಪೂರಕವಾಗಿರುವಂತೆ ಸುದ್ದಿ ಪ್ರಸರಣ ಮಾಡುವುದೇ ಅಲ್ಲದೆ, ಸುಳ್ಳುಸುದ್ದಿಗಳನ್ನೂ ಅತ್ಯಂತ ರೋಚಕತೆಯೊಂದಿಗೆ ಬಿತ್ತರಿಸುವ ಮೂಲಕ ಜನಸಾಮಾನ್ಯರನ್ನು ಮೋಡಿ ಮಾಡುವ ಕಲೆಯೂ ಸುದ್ದಿಮನೆಗಳಿಗೆ ಸಿದ್ಧಿಸಿದೆ. ತಾವು ಬಿತ್ತರಿಸಿದ ಸುದ್ದಿ ಸುಳ್ಳು ಎಂದು ತಿಳಿದನಂತರವೂ ಜನರ ಮುಂದೆ ಕ್ಷಮೆ ಕೇಳಬೇಕಾದ ಕನಿಷ್ಠ ನಾಗರಿಕ ಪ್ರಜ್ಞೆಯನ್ನೂ ಮಾಧ್ಯಮಗಳು ಕಳೆದುಕೊಂಡಿವೆ. ಹಾಗೆಯೇ ಸಿನೆಮಾ, ಟಿವಿ ತಾರೆಯರು ಮತ್ತಿತರ ಸೆಲೆಬ್ರಿಟಿಗಳ ಖಾಸಗಿ ಜೀವನದ ಆಂತರಿಕ ಸಮಸ್ಯೆಗಳನ್ನೂ ಎಳೆಎಳೆಯಾಗಿ ಹೊರಗೆಳೆಯುತ್ತಾ ಅವರ ಬದುಕಿನ ಪ್ರತೀ ಹೆಜ್ಜೆಯನ್ನೂ ಹಿಂಬಾಲಿಸುವ ಸುದ್ದಿಮನೆಗಳ ಮಸೂರಗಳು ಒಂದು ವಿಕೃತ ಪರಂಪರೆಯನ್ನೇ ಹುಟ್ಟುಹಾಕಿವೆ. ನೈತಿಕತೆಯ ಕನಿಷ್ಠ ಪಾಪಪ್ರಜ್ಞೆಯೂ ಇಲ್ಲದೆ ಸುದ್ದಿಮನೆಗಳು ಖಾಸಗಿ ಜೀವನದಲ್ಲಿ ಪ್ರವೇಶಿಸುವುದು ಯಾವುದೇ ನಾಗರಿಕತೆಯಿರುವ ಸಮಾಜದಲ್ಲಿ ಒಪ್ಪಿಗೆಯಾಗುವುದಿಲ್ಲ. ಈ ವಿವೇಕ ಮತ್ತು ವಿವೇಚನೆಯಾದರೂ ಸುದ್ದಿಮನೆಯ ಸಂಪಾದಕರಿಗೆ ಮತ್ತು ನಿರೂಪಕರಿಗೆ ಇರಬೇಕಲ್ಲವೇ?

ಪತ್ರಿಕೋದ್ಯೋಗ, ಟಿವಿ ನಿರೂಪಣೆ, ವರದಿಗಾರಿಕೆ ಮತ್ತು ಒಟ್ಟಾರೆ ಪತ್ರಿಕೋದ್ಯಮವೇ ಇಂದು ಮಾರುಕಟ್ಟೆ ಆರ್ಥಿಕತೆಯ ಒಂದು ಭಾಗವಾಗಿರುವುದರಿಂದ, ಒಮ್ಮೆ ಇದರಲ್ಲಿ ತೊಡಗಿಕೊಂಡವರು ತಮ್ಮ ವ್ಯಕ್ತಿಗತ ನೆಲೆಯಲ್ಲಿ ಎಷ್ಟೇ ಪ್ರಾಮಾಣಿಕತೆಯಿಂದ ವೃತ್ತಿಪರ ಬದ್ಧತೆ ಹೊಂದಿದ್ದರೂ, ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ, ನೈತಿಕತೆ ಮತ್ತು ಸಾರ್ವಜನಿಕ ಸೌಜನ್ಯದ ಚೌಕಟ್ಟುಗಳನ್ನು ದಾಟಿ, ಸುದ್ದಿ ಪ್ರಸರಣ ಮಾಡಬೇಕಾಗುತ್ತದೆ. ಇದು ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಸಹಜವಾಗಿ ಎದುರಾಗುವ ಜಟಿಲ ಸವಾಲು. ಇಲ್ಲಿ ವ್ಯಕ್ತಿಗತ ನೆಲೆಯಲ್ಲಿ ಪರ್ತಕರ್ತರನ್ನು ಮತ್ತು ಪತ್ರಿಕೋದ್ಯೋಗಿಗಳನ್ನು ದೂಷಿಸುವುದರ ಬದಲು ಭಾರತದ ಪ್ರಜ್ಞಾವಂತ ಸಮಾಜ, ಮಾಧ್ಯಮಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ನೈತಿಕತೆ-ಸಂವೇದನೆ-ಸೌಜನ್ಯ-ಸೂಕ್ಷ್ಮತೆಗಳ ಎಲ್ಲೆ ದಾಟಿ ಹೋಗುತ್ತಿರುವುದನ್ನು ಸಮಷ್ಟಿ ನೆಲೆಯಲ್ಲಿ ವಿಶ್ಲೇಷಿಸುವ ಅವಶ್ಯಕತೆ ಇದೆ. ಒಬ್ಬ ನಿರೂಪಕನ ಅಥವಾ ಪತ್ರಿಕಾ ವರದಿಗಾರನ ಅನಿವಾರ್ಯತೆಗಳು ಮತ್ತು ಜೀವನೋಪಾಯದ ಪ್ರಶ್ನೆಗಳೂ ಇಲ್ಲಿ ಮುಖ್ಯವಾಗುತ್ತದೆ. ವ್ಯಕ್ತಿಗತ ದೂಷಣೆ ಮತ್ತು ಆರೋಪಗಳು ಕೇವಲ ರೋಗದ ಮೇಲ್ಮೈ ಲಕ್ಷಣಗಳನ್ನು ಮಾತ್ರವೇ ಬಿಂಬಿಸುತ್ತವೆ.

ಮಾಧ್ಯಮ ಕ್ಷೇತ್ರಕ್ಕೆ ಇಡಿಯಾಗಿ ವ್ಯಾಪಿಸಿರುವ ಕ್ಯಾನ್ಸರ್ ರೋಗದಂತೆ ಹಬ್ಬಿರುವ ಲಾಭಕೋರತನದ ವ್ಯಸನ ಮತ್ತು ರಾಜಕೀಯ ಹಿತಾಸಕ್ತಿಯ ವ್ಯಾಧಿಯನ್ನು ಗುಣಪಡಿಸಬೇಕೆಂದರೆ, ಸಾಮಾಜಿಕ ಜಾಗೃತಿಯೊಂದೇ ವಿವೇಕಯುತ ಮಾರ್ಗವಾಗುತ್ತದೆ. ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ವಲಯದ ಎಲ್ಲ ಅಂಗಗಳೂ ಮಾರುಕಟ್ಟೆ ಪ್ರೇರಿತ ವಾಣಿಜ್ಯೀಕರಣಕ್ಕೊಳಗಾಗಿರುವ ಸನ್ನಿವೇಶದಲ್ಲಿ ನವ ಉದಾರವಾದ ಮತ್ತು ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆ ಈ ಪರಿಸ್ಥಿತಿಯನ್ನೇ ಯಥಾಸ್ಥಿತಿಯಲ್ಲಿ ಕಾಪಾಡಲು ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಬಳಸುತ್ತಲೇ ಇರುತ್ತದೆ. ಈ ಅಸ್ತ್ರಗಳನ್ನು ಎದುರಿಸಿ, ಒಂದು ಸೌಹಾರ್ದ ಮತ್ತು ಮಾನವೀಯ ವಾತಾವರಣವನ್ನು ಸೃಷ್ಟಿಸುವ ಸಾಮರ್ಥ್ಯ ಇರುವುದು ಜನಜಾಗೃತಿಯ ಮಾರ್ಗದಲ್ಲಿ ಮಾತ್ರ. ಮಾಧ್ಯಮಗಳಿಗೆ ಒಂದು ಮಾನವೀಯ ನೀತಿ ಸಂಹಿತೆಯನ್ನು ರೂಪಿಸುವ ನಿಟ್ಟಿನಲ್ಲಿ ಪ್ರಜ್ಞಾವಂತ ಸಮುದಾಯ ಯೋಚಿಸಬೇಕಿದೆ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News