ಉ.ಪ್ರ.: ಕಾರಿನಲ್ಲಿ ದೇವಾಲಯ ಆವರಣ ಪ್ರವೇಶಿಸಲು ತೇಜ್ ಪ್ರತಾಪ್ ಯಾದವ್‌ಗೆ ನಿರ್ಬಂಧ

Update: 2022-07-13 16:59 GMT

ಮಥುರಾ, ಜು. 13: ಇಲ್ಲಿನ ಗಿರಿರಾಜ್ ಮಹಾರಾಜ್ ದೇವಾಲಯಕ್ಕೆ ಕಾರಿನಲ್ಲಿ ಆಗಮಿಸಲು ಹಾಗೂ ಪ್ರದಕ್ಷಿಣೆ ಬರಲು ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್‌ಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ.  

ತನ್ನ ತಂದೆ ಲಾಲು ಪ್ರಸಾದ್ ಯಾದವ್ ಅವರ ಉತ್ತಮ ಆರೋಗ್ಯಕ್ಕೆ ಪ್ರಾರ್ಥಿಸಲು ಬಿಹಾರ್ ಸಂಪುಟದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಮಂಗಳವಾರ ಮಥುರಾಕ್ಕೆ ಆಗಮಿಸಿದ್ದರು. ಆದರೆ, ಅವರ ವಿಲಕ್ಷಣ ಮನವಿಗೆ ಅನುಮತಿ ನಿರಾಕರಿಸಿದ ಬಳಿಕ ಹಿಂದಿರುಗಿದ್ದಾರೆ. 
ದೇವಾಲಯದಲ್ಲಿ ‘ಮುಡಿಯ ಪೂರ್ಣಿಮಾ’ದ ಹಿನ್ನೆಲೆಯಲ್ಲಿ ಭಾರಿ ಜನಸಂದಣಿ ಇದ್ದುದು ಕಾರಿನಲ್ಲಿ ಆವರಣ ಪ್ರವೇಶಿಸಲು ಹಾಗೂ ಪ್ರದಕ್ಷಿಣೆ ಮಾಡಲು ತೇಜ್ ಪ್ರತಾಪ್ ಯಾದವ್ ಅವರು ಮಾಡಿದ ಮನವಿ ತಿರಸ್ಕರಿಸಲು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಥುರಾ ಹಾಗೂ ವೃಂದಾವನಕ್ಕೆ ಆಗಾಗ ಭೇಟಿ ನೀಡುತ್ತಿರುವ ತೇಜ್ ಪ್ರತಾಪ್ ಯಾದವ್ ಅವರು ನಿನ್ನೆ ಇಲ್ಲಿಗೆ ಆಗಮಿಸಿದ್ದರು ಪೊಲೀಸರು ತಿಳಿಸಿದ್ದಾರೆ. 
ವಾಹನ ತಡೆಯಲ್ಲಿ ಅವರ ಕಾರನ್ನು ನಿಲ್ಲಿಸಲಾಯಿತು. ಅಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಸಿಬ್ಬಂದಿ ವಾಹನ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಯಾದವ್ ಅವರಿಗೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.  

ಇದರಿಂದ ತೇಜ್ ಪ್ರತಾಪ್ ಯಾದವ್ ಅವರು ಅಸಮಾಧಾನಗೊಂಡರು ಹಾಗೂ ಉತ್ತರಪ್ರದೇಶ ಪೊಲೀಸರು ತನ್ನ ಸಂಚಾರಕ್ಕೆ ತಡೆ ಒಡ್ಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ. 
ಅನಂತರ ಅವರು ಕಾರಿನಲ್ಲಿ ಪ್ರವೇಶಿಸಲು  ಔಪಚಾರಿಕ ಅನುಮತಿ ಕೋರಲು ಸಮೀಪದ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ, ಪೊಲೀಸ್ ಠಾಣೆಯ ಅಧಿಕಾರಿ ಅನುಮತಿ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News