ಸದ್ದಿಲ್ಲದೆ ಅಂತ್ಯ ಸಂಸ್ಕಾರ ಯೋಜನೆ ರದ್ದುಗೊಳಿಸಿದ ರಾಜ್ಯ ಸರಕಾರ

Update: 2022-07-14 08:53 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜು.14: ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆಂದು ಸರಕಾರವು ನೀಡುವ 5 ಸಾವಿರ ರೂ. ಮೊತ್ತ ಕೈಸೇರುವಾಗ ವಿಳಂಬವಾಗುತ್ತಿದೆ ಎಂಬ ಆರೋಪದ ಮಧ್ಯೆಯೇ ರಾಜ್ಯ ಸರಕಾರ ಸದ್ದಿಲ್ಲದೆ ಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

2021-22 ನೇ ಸಾಲಿನ ಆಯ್ಯವ್ಯಯದಲ್ಲಿ ಅಂತ್ಯ ಸಂಸ್ಕಾರ ಯೋಜನೆಯ ಅನುಷ್ಠಾನಕ್ಕೆ ಯಾವುದೇ ಅನುದಾನ ಲಭ್ಯವಿಲ್ಲದ ಕಾರಣ ಅಂತ್ಯ ಸಂಸ್ಕಾರ ಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಅಂತ್ಯಸಂಸ್ಕಾರ ಯೋಜನೆಯಡಿ 2021ರ ಆಗಸ್ಟ್ ಅಂತ್ಯಕ್ಕೆ ರಾಜ್ಯದ ಜಿಲ್ಲೆಗಳಲ್ಲಿ ಸ್ವೀಕೃತಗೊಂಡ ಅರ್ಜಿಗಳಿಗೆ ಮಾತ್ರ ಸೌಲಭ್ಯ ವಿತರಿಸಲು ಆರ್ಥಿಕ ಇಲಾಖೆ ಸೂಚನೆ ನೀಡಿದೆ.

ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ 2021ರ ಆಗಸ್ಟ್ ತಿಂಗಳ ಅಂತ್ಯಕ್ಕೆ ಬಾಕಿ ಇದ್ದ ಅರ್ಜಿಗಳಿಗೆ 17.92 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಫಲಾನುಭವಿಗಳಿಗೆ ಮೂರು ತಿಂಗಳೊಳಗಾಗಿ ಷರತ್ತಿಗೊಳಪಟ್ಟು ವಿತರಿಸಲು ರಾಜ್ಯದ ಆಯಾ ಜಿಲ್ಲಾಧಿ ಕಾರಿಗಳ ಪಿಡಿಪಿ ಖಾತೆಯಲ್ಲಿರಿಸಿ ಸರಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ಜಯಲಕ್ಷ್ಮೀ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಮಾಹಿತಿ: ಶಿವಮೊಗ್ಗ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ಯೋಜನೆಯಡಿ ಒಟ್ಟು 36,622 ಅರ್ಜಿಗಳು ಸಲ್ಲಿಕೆಯಾಗಿವೆ.ಇದರಲ್ಲಿ ಪರಿಶಿಷ್ಟ ಪಂಗಡದ 5,003, ಪರಿಶಿಷ್ಟ ಜಾತಿಯ 7,589 ಹಾಗೂ ಇತರ ಸಮುದಾ ಯದ 24,030 ಅರ್ಜಿಗಳಿವೆ. ಜಿಲ್ಲೆಗೆ ಒಟ್ಟು 1.35 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ವಿತರಣೆಯಾಗಿದೆ. ಸಲ್ಲಿಕೆಯಾದ 36,622 ಅರ್ಜಿಗಳಲ್ಲಿ 909 ಅರ್ಜಿಗಳಿಗೆ ಪರಿಹಾರ ವಿತರಣೆ ಬಾಕಿಯಿದ್ದು, 45.45 ಲಕ್ಷ ರೂ. ಅನುದಾನಕ್ಕೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.

ಬಡವರಿಗೆ ನೆರವಾಗಬೇಕಾದ ಯೋಜನೆಗೆ ಹಣಕಾಸಿನ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸರಕಾರ ಅಂತ್ಯಸಂಸ್ಕಾರ ಯೋಜನೆಗೆ ಹಾಲು ತುಪ್ಪ ಬಿಟ್ಟಿದೆ. ಸರಕಾರದ ಈ ನಡೆಗೆ ಬಡವರ್ಗದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಯೋಜನೆ?

ಬಡತನ ರೇಖೆಯಲ್ಲಿರುವ ಕುಟುಂಬಸ್ಥರಲ್ಲಿ ಯಾರಾದರೂ ಮೃತಪಟ್ಟರೆ ಅವರ ಅಂತ್ಯಸಂಸ್ಕಾರಕ್ಕೆ ಹಣ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಮೃತರ ಅಂತ್ಯಸಂಸ್ಕಾರ ಮಾಡಿದವರು ಅಥವಾ ಅವರ ಕುಟುಂಬದವರು ಫಲಾನುಭವಿಗಳಾಗಿರುತ್ತಾರೆ. ಕಂದಾಯ ಇಲಾಖೆ ತಹಶೀಲ್ದಾರರ ಮೂಲಕ ಯೋಜನೆಯ ಪರಿಹಾರವನ್ನು ನೀಡುತ್ತದೆ. ಯೋಜನೆ ಪ್ರಾರಂಭದಲ್ಲಿ ಪರಿಹಾರ ರೂಪದಲ್ಲಿ 1 ಸಾವಿರ ರೂ. ನೀಡಲಾಗುತ್ತಿತ್ತು. ಈಗ 5 ಸಾವಿರ ಹಣವನ್ನು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.

---------------------------------------------

ಬಡತನರೇಖೆಗಿಂತ ಕೆಳಮಟ್ಟದಲ್ಲಿರುವ ಕುಟುಂಬದ ಯಾವುದೇ ಸದಸ್ಯರು ಮರಣ ಹೊಂದಿದರೆ ಮೃತಪಟ್ಟ ವ್ಯಕ್ತಿಯ ವಾರಸುದಾರರು ಅಂತಿಮ ಕ್ರಿಯೆ ನಡೆಸಲು ಅನುಕೂಲವಾಗುವಂತೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಅಂತ್ಯಸಂಸ್ಕಾರ ಯೋಜನೆಯಡಿ 2 ಸಾವಿರ ರೂ. ನೀಡುವ ಯೋಜನೆ ಜಾರಿಗೆ ತಂದಿದ್ದರು. 2013ರಲ್ಲಿ ಜಗದಿೀಶ್ ಶೆಟ್ಟರ್ ಸರಕಾರ ಈ ಹಣವನ್ನು 5 ಸಾವಿರ ರೂ.ಗೆ ಹೆಚ್ಚಳ ಮಾಡಿತ್ತು. ಈಗ ಬಸವರಾಜ ಬೊಮ್ಮಾಯಿ ಅವರ ಸರಕಾರ ಇದನ್ನು ರದ್ದುಗೊಳಿಸಿದೆ. ಇದು ನೋವಿನ ಸಂಗತಿ. ಅದನ್ನು ಪುನಃ ಜಾರಿಗೊಳಿಸಬೇಕು.

ಕಲ್ಲೂರು ಮೇಘರಾಜ್, ವ್ಯವಸ್ಥಾಪಕ ಟ್ರಸ್ಟಿ, ಶಾಂತವೇರಿ ಗೋಪಾಲಗೌಡ ಅಧ್ಯಯನ ಟ್ರಸ್ಟ್

Writer - ಶರತ್ ಪುರದಾಳ್

contributor

Editor - ಶರತ್ ಪುರದಾಳ್

contributor

Similar News