ಅಂತರ್ಜಾತಿ ವಿವಾಹಿತರಿಗೆ ಮರೀಚಿಕೆಯಾದ ಮೀಸಲಾತಿ

Update: 2022-07-15 05:58 GMT

ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಿದ್ದರೆ ಇನ್ನೂ ಕೆಲವು ರಾಜ್ಯಗಳಲ್ಲಿ ಮಾತೃಪ್ರಧಾನ ಕುಟುಂಬಗಳಿವೆ. ಉದಾಹರಣೆಗೆ ಕರ್ನಾಟಕದಲ್ಲಿ ದಲಿತ ಹುಡುಗಿಯನ್ನು ವಿವಾಹವಾದ ಗೌಡರ ಜಾತಿಯ ಹುಡುಗ ತನ್ನ ಮಕ್ಕಳಿಗೆ ಯಾವ ಜಾತಿ ಎಂದು ಹೇಳಬೇಕು? ಯಾವ ಜಾತಿಯ ಮೀಸಲಾತಿ ತೆಗೆದುಕೊಳ್ಳಬೇಕು? ಇಂತಹ ಹಲವು ವಿಷಯಗಳು ಹಲವು ಗೊಂದಲಗಳನ್ನು ಸೃಷ್ಟಿಸಿರುವುದಲ್ಲದೆ, ಹಲವು ಕಾನೂನು ತೊಡಕುಗಳು ಸೃಷ್ಟಿಯಾಗಿವೆ. ಈ ಎಲ್ಲಾ ಕಾರಣಗಳಿಂದ ಎರಡು ಜಾತಿಗಳಿಗೆ ಅಥವಾ ಎರಡು ಧರ್ಮಗಳಿಗೆ ಸೇರಿದ ಗಂಡು ಮತ್ತು ಹೆಣ್ಣು ಪರಸ್ಪರ ಮೆಚ್ಚಿ ಮದುವೆಯಾದರೆ ಅಂತಹವರಿಗೆ ಅವರ ಒಟ್ಟು ಸಂಖ್ಯೆಗೆ ಅನುಗುಣವಾಗಿ ಶೇಕಡಾವಾರು ಮೀಸಲಾತಿಯನ್ನು ಜಾರಿಗೆ ತರಬೇಕು.

ಭಾರತದಲ್ಲಿ ಜಾತಿ ವ್ಯವಸ್ಥೆಗೂ ಕುಟುಂಬ ಪದ್ಧತಿಗೂ ನಿಕಟ ಸಂಬಂಧವಿದೆ. ಏಕೆಂದರೆ ಕುಟುಂಬ ವ್ಯವಸ್ಥೆಗೆ ನಾಂದಿ ವಿವಾಹ. ಭಾರತಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯು ಜಾತಿಯ ಹೊರಗೆ ವಿವಾಹವಾಗುವುದನ್ನು ಒಪ್ಪುವುದಿಲ್ಲ. ಅದು ಒಂದು ರೀತಿಯಲ್ಲಿ ನಿಷೇಧವೇ ಸರಿ. ಆದರೆ ಭಾರತದಲ್ಲಿ ಹೆಚ್ಚುತ್ತಿರುವ ಶಿಕ್ಷಣದ ಪ್ರಮಾಣ, ಲಿಂಗ ಸಮಾನತೆ, ಉತ್ತಮವಾಗುತ್ತಿರುವ ಮಧ್ಯಮ ವರ್ಗಗಳ ಆರ್ಥಿಕ ಹಿನ್ನೆಲೆ, ನಗರೀಕರಣ ಹಾಗೂ ಹೆಚ್ಚುತ್ತಿರುವ ಅರಿವು ಮತ್ತು ವೈಚಾರಿಕತೆಯಿಂದಾಗಿ ಅಂತರ್ಜಾತಿಯ ವಿವಾಹಗಳು ಕ್ರಮೇಣವಾಗಿ ಹೆಚ್ಚುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಯುವಕ ಅಥವಾ ಯುವತಿಗೆ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಹಲವು ಬಾರಿ ಪ್ರತಿಪಾದಿಸಿದೆ. ಪ್ರೀತಿ ಒಂದು ಭಾವನಾತ್ಮಕ ವಿಷಯ ಇದನ್ನು ಜಾತಿ ಅಥವಾ ಧರ್ಮದಂತಹ ದೃಷ್ಟಿಯಿಂದ ನೋಡಬಾರದು. ಭಾರತದಲ್ಲಿ ಅಂತರ್ಜಾತಿ ವಿವಾಹದ ಮೂಲಕ ವಿಭಿನ್ನ ಜಾತಿಗೆ ಸೇರಿದ ವ್ಯಕ್ತಿಗಳು ವಿವಾಹವಾಗುವುದಕ್ಕೆ ಒತ್ತು ನೀಡಲು 1954ರಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ವಿವಾಹ ಕಾಯ್ದೆಯಡಿಯಲ್ಲಿ ಅಂತರ್ಜಾತಿ ವಿವಾಹವಾದ ಹುಡುಗ ಅಥವಾ ಹುಡುಗಿ ಅವನ ಅಥವಾ ಅವಳ ಧರ್ಮ ಅಥವಾ ಜಾತಿಯನ್ನು ತ್ಯಜಿಸುವಂತಹ ಅಗತ್ಯವಿಲ್ಲ. ನಾವು ಗಮನಿಸಬೇಕಾದ ವಿಷಯವೆಂದರೆ ವಿವಾಹದ ಪರಿಕಲ್ಪನೆಗಳು ಕಾನೂನಿನ ದೃಷ್ಟಿಕೋನದಿಂದ ಹಲವು ಬದಲಾವಣೆಗಳಿಗೆ ಒಳಗಾಗಿವೆ.

ಒಂದು ಸಮೀಕ್ಷೆಯ ಪ್ರಕಾರ 2004ರಲ್ಲಿ ಭಾರತದಲ್ಲಿ ಶೇ.5ರಷ್ಟು ವಿವಾಹಗಳು ಅಂತರ್ಜಾತಿ ವಿವಾಹಗಳಾಗಿವೆ. 2011ರ ಜನಗಣತಿಯ ಪ್ರಕಾರ ಅಂತರ್ಜಾತಿ ವಿವಾಹಿತರ ಪ್ರಮಾಣ ಶೇ.5.82 ಮಾತ್ರ. ಭಾರತೀಯ ಅಂಕಿ-ಸಂಖ್ಯೆಗಳ ಸಂಸ್ಥೆಯು 2017ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಗಿಂತ ಅತಿ ಹೆಚ್ಚು ಅಂತರ್ಜಾತಿ ವಿವಾಹಗಳು ನಡೆಯುತ್ತಿವೆ. ನಗರ ಪ್ರದೇಶಗಳಲ್ಲಿ ಅಂತರ್ಜಾತಿ ವಿವಾಹದ ಪ್ರಮಾಣ ಶೇ.4.9 ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಶೇ.5.2 ಆಗಿದೆ. ಅದೇ ರೀತಿ ಶ್ರೀಮಂತರಿಗಿಂತ ಬಡವರು ಮತ್ತು ಮಧ್ಯಮ ವರ್ಗದಲ್ಲಿ ಹೆಚ್ಚು ಅಂತರ್ಜಾತಿಯ ವಿವಾಹಗಳು ನಡೆಯುತ್ತಿವೆ.  ಬಡವರಲ್ಲಿ ಶೇ.5.9ರಷ್ಟು ಅಂತರ್ಜಾತಿ ವಿವಾಹಗಳು ನಡೆಯುತ್ತಿದ್ದರೆ ಶ್ರೀಮಂತರಲ್ಲಿ ಈ ಪ್ರಮಾಣ ಶೇ.4.0 ಮಾತ್ರ ಎಂದು ಅಧ್ಯಯನ ದೃಢಪಡಿಸಿದೆ.

ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ ಬೆಳೆದು ಮತ್ತು ಜಾತಿ ವ್ಯವಸ್ಥೆ ನಾಶವಾಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು. ಶತಮಾನಗಳಿಂದ ಜಾತಿ ಪದ್ಧತಿಯ ಕರಾಳ ಮುಷ್ಟಿಗೆ ಸಿಕ್ಕಿ ಭಾರತೀಯ ಸಮಾಜದಲ್ಲಿ ಪ್ರೀತಿ ಮತ್ತು ಮಾನವೀಯತೆಗಳು ಕಣ್ಮರೆಯಾಗುತ್ತಿವೆ. ಇಂತಹ ಪ್ರೀತಿ ಮತ್ತು ಮಾನವೀಯತೆಗೆ ಕೊಡಲಿಪೆಟ್ಟಾಗಿರುವ ಜಾತಿಪದ್ಧತಿಗೆ ವಿರುದ್ಧವಾಗಿ ದೊಡ್ಡ ಸಮರವನ್ನೇ ಮಾಡಬೇಕಾಗಿದೆ. ಇಂತಹ ಹೋರಾಟ ಯಶಸ್ವಿಯಾಗಬೇಕಾದರೆ ಅಂತರ್ಜಾತಿ ವಿವಾಹಗಳು ಯಶಸ್ವಿ ಸಾಧನಗಳಾಗಿವೆ. ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದ 14, 15 ಮತ್ತು 16ನೇ ಕಲಂಗಳಲ್ಲಿ ವರ್ಗ ರಹಿತ, ವರ್ಣ ರಹಿತ ಮತ್ತು ಜಾತಿ ರಹಿತ ನವ ಸಮಾಜ ನಿರ್ಮಾಣ ಆಗಬೇಕು ಎಂಬ ವಾಕ್ಯಗಳನ್ನು ಸೇರಿಸಿದ್ದಾರೆ. ಜಾತಿವಿನಾಶ ಡಾ.ಬಿ.ಆರ್.ಅಂಬೇಡ್ಕರ್‌ರವರ ಬಹುದೊಡ್ಡ ಆಶಯ ಮತ್ತು ಗುರಿಯಾಗಿತ್ತು. ಜಾತಿ ಪದ್ಧತಿಯು ದೊಡ್ಡ ಅವಾಂತರಗಳನ್ನು ಭಾರತೀಯ ಸಮಾಜದಲ್ಲಿ ಸೃಷ್ಟಿಸುತ್ತಿದೆ. ಜಾತಿ ಪದ್ಧತಿಯು ದೇಶದ ಭಾವೈಕ್ಯ ಮತ್ತು ಏಕತೆಗೆ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಇದರಿಂದಾಗಿ ಸಮಾಜದ ಪ್ರಗತಿ ಕುಂಟಿತಗೊಂಡಿದೆ. ಜಾತಿ ಪದ್ಧತಿಯ ದೊಡ್ಡ ಕೊಡುಗೆಯೆಂದರೆ ಕೆಳ ಜಾತಿಗಳ ಜನರ ಜೀವನವನ್ನು ಮತ್ತಷ್ಟು ಆಳಕ್ಕೆ ನೂಕುವ ಮೂಲಕ ಇಡೀ ಸಮಾಜವನ್ನೇ ಶ್ರೇಣೀಕರಣಗೊಳಿಸಿದೆ. ಮನುಷ್ಯನ ಯೋಗ್ಯತೆಯ ಆಧಾರದ ಮೇಲೆ ಅವನನ್ನು ನಿರ್ಧರಿಸದೇ ಕೇವಲ ಹುಟ್ಟಿನ ಕಾರಣದಿಂದಲೇ ಮೆಚ್ಚುಗೆ, ತಿರಸ್ಕಾರ, ಪ್ರೋತ್ಸಾಹ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾತಿಪದ್ಧತಿಯನ್ನು ತೊಡೆದು ಹಾಕಬೇಕಾಗಿರುವುದು ಇಂದಿನ ಅಗತ್ಯವಾಗಿದೆ.

ಕ್ರಮೇಣ ನಿಧಾನವಾಗಿ ಜಾತಿ ಪದ್ಧತಿಯ ಭಾವನೆಗಳು ಕಡಿಮೆಯಾಗುತ್ತವೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಇಂತಹ ಕೆಟ್ಟ ಪದ್ಧತಿಯ ವಿರುದ್ಧ ಭಾರತದಲ್ಲಿ ಸಾಕಷ್ಟು ಚಳವಳಿಗಳು ಇದುವರೆಗೂ ಸಾಕಷ್ಟು ಪ್ರಮಾಣದಲ್ಲಿ ನಡೆದಿವೆ. ಹಲವು ಸಮಾಜ ಸುಧಾರಕರು ಜಾತಿಪದ್ಧತಿಯ ವಿರುದ್ಧ ಜಾಗೃತಿ ಮೂಡಿಸಿ, ಈ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಲು ಶ್ರಮಿಸಿದ್ದಾರೆ. ಆದರೆ ಈ ಎಲ್ಲ ನಿರೀಕ್ಷೆಗಳು ಇಂದು ಸಂಪೂರ್ಣವಾಗಿ ತಳಕಚ್ಚಿವೆ. ಜಾತಿವ್ಯವಸ್ಥೆ ಸಮಾಜದಲ್ಲಿ ಭದ್ರವಾಗಿ ತಳವೂರಿದೆ. ಜಾತಿಪದ್ಧತಿಯನ್ನು ತೊಡೆದು ಹಾಕದಿದ್ದರೆ ದೇಶಕ್ಕೆ ಅದಕ್ಕಿಂತ ಹೆಚ್ಚಾಗಿ ಮಾನವೀಯತೆಗೆ ಪೆಟ್ಟು ಬೀಳಲಿದೆ.

ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಬಸವಣ್ಣನವರು ಹಲವಾರು ಕ್ರಾಂತಿಕಾರಕ ಕ್ರಮಗಳನ್ನು ಮಾಡಿದರು. ಬ್ರಾಹ್ಮಣ ಮಂತ್ರಿ ಮಧುವರಸನ ಮಗಳಾದ ಲಾವಣ್ಯವತಿಗೂ ಸಮಗಾರ ಹರಳಯ್ಯನ ಮಗನಾದ ಶೀಲವಂತನಿಗೂ ಮದುವೆ ಮಾಡಿಸಿ ಸಮಾಜದ ಕೆಟ್ಟ ನಂಬಿಕೆಗೆ ದೊಡ್ಡ ಪೆಟ್ಟು ನೀಡಿ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಿದರು. ಆನಂತರ ಕನಕದಾಸರು ‘‘ಕುಲ ಕುಲವೆಂದು ಬಡಿದಾಡುವಿರಿ, ನಿಮ್ಮ ಕುಲದ ನೆಲೆಯ ಬಲ್ಲಿರೇನು?’’ ಎಂದು ಪ್ರಶ್ನಿಸುವ ಮೂಲಕ ಜಾತಿಪದ್ಧತಿಯ ವಿರುದ್ಧ ಸಮರ ಸಾರಿದರು.

ಭಾರತದಲ್ಲಿ ಆರಂಭದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ, ಪೆರಿಯಾರ್ ರಾಮಸ್ವಾಮಿಯಂತಹವರು ಅಂತರ್ಜಾತಿ ವಿವಾಹಗಳಿಗೆ ನಾಂದಿ ಹಾಡಿದರು. ಆನಂತರ ಹಲವರು ಇದೇ ಮಾರ್ಗವನ್ನು ಅನುಸರಿಸಿದರು. ರಾಷ್ಟ್ರಕವಿ ಕುವೆಂಪುರವರು ‘ಮನುಜ ಮತ ವಿಶ್ವ ಪಥ’ ಎಂದು ಹೇಳಿದರು. ನವ್ಯ ಕವಿ ಗೋಪಾಲಕೃಷ್ಣ ಅಡಿಗರು ‘‘ನಾವೆಲ್ಲ ಒಂದೇ ಜಾತಿ, ಒಂದೇ ಮತ, ಒಂದೇ ಕುಲ ನಾವು ಮನುಜರು’’ ಎಂದು ಸಾರಿದರು. ಪೂರ್ಣಚಂದ್ರ ತೇಜಸ್ವಿ, ಕೆ.ರಾಮದಾಸ್‌ರಂತಹವರು ತಾವು ಅಂತರ್ಜಾತಿ ವಿವಾಹವಾಗಿದ್ದಲ್ಲದೆ ಅಂತರ್ಜಾತಿ ವಿವಾಹಗಳನ್ನು ಆಗುವವರಿಗೆ ಪ್ರೋತ್ಸಾಹ ನೀಡಿ ನೂರಾರು ಮದುವೆಗಳನ್ನು ಮಾಡಿಸಿದರು. ಇದೇ ಉದ್ದೇಶಗಳನ್ನು ಈಡೇರಿಸಲು ಕರ್ನಾಟಕದಲ್ಲಿ ಮಾನವ ಮಂಟಪ ಅಸ್ತಿತ್ವಕ್ಕೆ ಬಂತು. ಮಾನವ ಮಂಟಪದ ಆಶ್ರಯದಲ್ಲಿ ಸಾಕಷ್ಟು ಸರಳ ಮತ್ತು ಅಂತರ್ಜಾತಿಯ ವಿವಾಹಗಳು ನಡೆಯುತ್ತಿವೆ.

ರಾಮಮನೋಹರ ಲೋಹಿಯಾರವರು ಅಂದೇ ಅಂತರ್ಜಾತಿ ವಿವಾಹಿತರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದರು. ಅಂತರ್ಜಾತಿ ವಿವಾಹವಾದವರನ್ನು ಹೆಚ್ಚಿನ ಪ್ರಮಾಣದಲ್ಲಿ ಎರಡೂ ಕುಟುಂಬಗಳು ದೂರ ಇಡುತ್ತವೆ. ಸಮಾಜ ಕೂಡ ಕೆಟ್ಟ ದೃಷ್ಟಿಯಿಂದ ನೋಡುತ್ತದೆ. ಯಾರ ಬೆಂಬಲವೂ ಇವರಿಗೆ ಸಿಗುವುದಿಲ್ಲ. ಆದ್ದರಿಂದ ಅಂತರ್ಜಾತಿ ವಿವಾಹವಾದವರಿಗೆ ಸರಕಾರವೇ ಆಸರೆಯಾಗಬೇಕು. ಅಂತರ್ಜಾತಿ ವಿವಾಹವಾದವರಿಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಆರಂಭದಲ್ಲಿ ಒಂದು ಬಾರಿಗೆ ಆರ್ಥಿಕ ಸಹಾಯವನ್ನು ನೀಡುತ್ತಿವೆ. ಸುಪ್ರಿಂಕೋರ್ಟ್ ಮತ್ತು ಹಲವು ರಾಜ್ಯಗಳ ಉಚ್ಚ ನ್ಯಾಯಾಲಯಗಳು ಅಂತರ್ಜಾತಿ ವಿವಾಹವಾದವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಹಲವು ವಿಚಾರಣೆಗಳಲ್ಲಿ ಸರಕಾರಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿವೆ. ಆದರೆ ಇಷ್ಟರಿಂದ ಮಾತ್ರ ಅಂತರ್ಜಾತಿ ವಿವಾಹವಾದವರಿಗೆ ರಕ್ಷಣೆ ನೀಡಿದಂತಾಗುವುದಿಲ್ಲ. ಏನೇ ಕಾನೂನಿನ ರಕ್ಷಣೆಯಿದ್ದರೂ ಮರ್ಯಾದೆ ಹೀನ ಹತ್ಯೆಗಳು ನಡೆಯುತ್ತಲೇ ಇವೆ. ರಾಷ್ಟ್ರೀಯ ಮಹಿಳಾ ಆಯೋಗದ 2010ರ ವರದಿಯ ಪ್ರಕಾರ 326 ಮರ್ಯಾದಾ ಹತ್ಯೆ ಪ್ರಕರಣಗಳು ನಡೆದಿವೆ ಮತ್ತು ಈ ಹತ್ಯೆಗಳಲ್ಲಿ ಹೆಚ್ಚಿನವರು ಅಂತರ್ಜಾತಿ ವಿವಾಹವಾದವರಾಗಿದ್ದರು. ಅಂತರ್ಜಾತಿ ಮತ್ತು ಅಂತರ್‌ಧರ್ಮೀಯ ವಿವಾಹಿತರು ಹಲವು ರೀತಿಯ ಶೋಷಣೆ ಮತ್ತು ಅವಮಾನಗಳಿಗೆ ಒಳಗಾಗುತ್ತಿದ್ದಾರೆ.

ಅಂತರ್ಜಾತಿ ವಿವಾಹವಾದವರು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಮೊದಲನೆಯದು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಯಾವ ಜಾತಿ ಎಂದು ಬರೆಸಬೇಕು? ಜಾತಿ ಹೆಸರು ಬರೆಸಲು ಹಲವು ಪೋಷಕರು ನಿರಾಕರಿಸುತ್ತಿದ್ದಾರೆ. ಆದರೆ ಶಾಲೆಗಳು ಪಟ್ಟು ಬಿಡುತ್ತಿಲ್ಲ. ಖಂಡಿತವಾಗಿಯೂ ಕೊಡಲೇಬೇಕು ಎಂದು ಹೇಳುತ್ತಿವೆ. ಆದ್ದರಿಂದ ಅಂತರ್ಜಾತಿ ವಿವಾಹವಾದವರನ್ನು ಪ್ರತ್ಯೇಕವಾಗಿ ಮಾನವಜಾತಿ, ಜಾತಿರಹಿತರು ಅಥವಾ ಭಾರತೀಯ ಕುಲ ಸೇರಿದಂತೆ ಯಾವುದಾದರೂ ಒಂದು ಸೂಕ್ತ ಹೆಸರಿನಿಂದ ಕರೆಯಲು ಅಥವಾ ಗುರುತಿಸಲು ಅವಕಾಶವಾಗುವಂತೆ ಸರಕಾರ ಅಗತ್ಯ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು. ಇಂತಹ ಮಕ್ಕಳು ಯಾವ ಜಾತಿಯಲ್ಲಿ ಮೀಸಲಾತಿ ಪಡೆಯಬೇಕು? ಎಂಬುದು ಇಂದಿಗೂ ಗೊಂದಲದ ಗೂಡಾಗಿದೆ. ಏಕೆಂದರೆ ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಿದ್ದರೆ ಇನ್ನೂ ಕೆಲವು ರಾಜ್ಯಗಳಲ್ಲಿ ಮಾತೃಪ್ರಧಾನ ಕುಟುಂಬಗಳಿವೆ. ಉದಾಹರಣೆಗೆ ಕರ್ನಾಟಕದಲ್ಲಿ ದಲಿತ ಹುಡುಗಿಯನ್ನು ವಿವಾಹವಾದ ಗೌಡರ ಜಾತಿಯ ಹುಡುಗ ತನ್ನ ಮಕ್ಕಳಿಗೆ ಯಾವ ಜಾತಿ ಎಂದು ಹೇಳಬೇಕು? ಯಾವ ಜಾತಿಯ ಮೀಸಲಾತಿ ತೆಗೆದುಕೊಳ್ಳಬೇಕು? ಇಂತಹ ಹಲವು ವಿಷಯಗಳು ಹಲವು ಗೊಂದಲಗಳನ್ನು ಸೃಷ್ಟಿಸಿರುವುದಲ್ಲದೆ, ಹಲವು ಕಾನೂನು ತೊಡಕುಗಳು ಸೃಷ್ಟಿಯಾಗಿವೆ. ಈ ಎಲ್ಲಾ ಕಾರಣಗಳಿಂದ ಎರಡು ಜಾತಿಗಳಿಗೆ ಅಥವಾ ಎರಡು ಧರ್ಮಗಳಿಗೆ ಸೇರಿದ ಗಂಡು ಮತ್ತು ಹೆಣ್ಣು ಪರಸ್ಪರ ಮೆಚ್ಚಿ ಮದುವೆಯಾದರೆ ಅಂತಹವರಿಗೆ ಅವರ ಒಟ್ಟು ಸಂಖ್ಯೆಗೆ ಅನುಗುಣವಾಗಿ ಶೇಕಡಾವಾರು ಮೀಸಲಾತಿಯನ್ನು ಜಾರಿಗೆ ತರಬೇಕು. ಇಂತಹ ಮೀಸಲಾತಿ ಶಿಕ್ಷಣ, ಉದ್ಯೋಗ, ಭಡ್ತಿ, ರಾಜಕೀಯ ಕ್ಷೇತ್ರಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗಿರಬೇಕು. ಏಕೆಂದರೆ ಅಂತರ್ಜಾತಿಯ ವಿವಾಹವಾದ ಹೆಚ್ಚಿನವರು ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ. ಈ ರೀತಿಯ ಮೀಸಲಾತಿಯನ್ನು ಜಾರಿಗೆ ತರುವುದರಿಂದ ವರದಕ್ಷಿಣೆ, ಜಾತಿವ್ಯವಸ್ಥೆ, ಕೌಟುಂಬಿಕ ದೌರ್ಜನ್ಯಗಳು ಸೇರಿದಂತೆ ಹಲವು ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಬಹುದು. ನಿಜವಾದ ಜಾತ್ಯತೀತರೆಂದರೆ ಜಾತಿ ಮೀರಿ ಅಂತರ್ಜಾತಿ ವಿವಾಹವಾದವರು. ಆದ್ದರಿಂದ ಅಂತರ್ಜಾತಿ ವಿವಾಹವಾದವರಿಗೆ ನೀಡುವ ಮೀಸಲಾತಿ ಹೆಚ್ಚಾಗಬೇಕು ಹಾಗೂ ಈ ಮೀಸಲಾತಿಯು ಜನಸಂಖ್ಯೆಗೆ ಅನುಗುಣವಾಗಿ ಕಾಲ ಕಾಲಕ್ಕೆ ಪರಿಷ್ಕರಣೆಯಾಗಿ ಮೀಸಲಾತಿಯ ಪ್ರಮಾಣ ಹೆಚ್ಚುತ್ತಾ ಹೋಗಬೇಕು. ಮುಖ್ಯವಾಗಿ ಇಂತಹ ಮೀಸಲಾತಿಗೆ ಯಾವುದೇ ರೀತಿಯ ಆದಾಯದ ಮಿತಿ ಇರಬಾರದು.

ಮಾನವ ಮಂಟಪದ ಪದಾದಿಕಾರಿಗಳು, ಪೂರ್ಣಚಂದ್ರ ತೇಜಸ್ವಿಯವರು ಹಾಗೂ ನ್ಯಾಯವಾದಿಗಳಾದ ಪ್ರೊ. ರವಿವರ್ಮಕುಮಾರ್‌ರವರು ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದಾಗ ಈ ಸಂಬಂದ ಹಲವು ದಾಖಲೆಗಳನ್ನು ನೀಡಿ ಅಂತರ್ಜಾತಿ ವಿವಾಹವಾದವರಿಗೆ ಮೀಸಲಾತಿ ಜಾರಿ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ಬಗ್ಗೆ ಅಂದು ಆಯೋಗ ಕೂಡ ಧನಾತ್ಮಕ ವರದಿಯನ್ನು ಸರಕಾರಕ್ಕೆ ನೀಡಿದೆ. ಆದರೆ ಇದುವರೆಗೂ ಇದು ಫಲಪ್ರದವಾಗಿಲ್ಲ. ಜಾತಿ ಪ್ರಜ್ಞೆ ದೂರವಾಗಿ ಮಾನವೀಯ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಬೇಕಾದರೆ ಅಂತರ್ಜಾತಿ ವಿವಾಹಿತರಿಗೆ ಮತ್ತು ಅವರ ಮಕ್ಕಳಿಗೆ ಮೀಸಲಾತಿ ಜಾರಿಗೆ ತರಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಭಾರತೀಯ ಸಮಾಜದಲ್ಲಿ ಅಂತರ್ಜಾತಿ ವಿವಾಹವಾದವರನ್ನು ವಿಶೇಷವಾಗಿ ನೋಡಲಾಗುತ್ತದೆ. ಪ್ರಗತಿಪರರು, ಬಂಡಾಯಗಾರರು ಕೆಲವರು ಇನ್ನೂ ಮುಂದೆ ಹೋಗಿ ಎಡಪಂಥೀಯರು ಎಂದೆಲ್ಲಾ ಕರೆಯುತ್ತಿದ್ದಾರೆ. ಇದರಲ್ಲಿ ಯಾವುದೇ ರೀತಿಯ ವಿಶೇಷಗಳೇನೂ ಇಲ್ಲ. ಜಾತಿಯ ಅನಿಷ್ಟತೆಯನ್ನು ಧಿಕ್ಕರಿಸಿ, ಜಾತಿ ಬಿಟ್ಟವರು, ಕುಲಗೆಟ್ಟವರು ಎಂಬ ನಿಂದನೆಗಳನ್ನೆಲ್ಲಾ ಗಾಳಿಗೆ ತೂರಿ ಯಾವುದೇ ಲಾಭ-ನಷ್ಟಗಳ ಲೆಕ್ಕಾಚಾರಗಳನ್ನು ನಿರೀಕ್ಷಿಸದೆ, ಸಮಾಜದ ನಿಂದನೆಯ ಗೋಜಿಗೆ ತಲೆ ಕೆಡಿಸಿಕೊಳ್ಳದೆ ಅಂತರ್ಜಾತಿ ವಿವಾಹಗಳನ್ನು ಮಾಡಿಕೊಂಡವರು ಈ ಎಲ್ಲಾ ಬಿರುದುಗಳಿಗೂ ಅರ್ಹರೇ ಆಗಿದ್ದಾರೆ. ಅಂತರ್ಜಾತಿ ವಿವಾಹಿತರಿಗೆ ಮತ್ತು ಅವರ ಮಕ್ಕಳಿಗೆ ಮೀಸಲಾತಿಯನ್ನು ಜಾರಿಗೆ ತರಬೇಕಾಗಿರುವುದು ಇಂದಿನ ಸರಕಾರಗಳ ಜವಾಬ್ದಾರಿಯಾಗಿದೆ.

Writer - ಡಾ. ಅಮ್ಮಸಂದ್ರ ಸುರೇಶ್

contributor

Editor - ಡಾ. ಅಮ್ಮಸಂದ್ರ ಸುರೇಶ್

contributor

Similar News