ಐಐಟಿ ಮದರಾಸ್ ಶ್ರೇಷ್ಠ ಶೈಕ್ಷಣಿಕ ಸಂಸ್ಥೆ, 2ನೇ ಸ್ಥಾನದಲ್ಲಿ ಐಐಎಸ್‌ಸಿ ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವ

Update: 2022-07-15 15:40 GMT
(File Photo | PTI)

ಹೊಸದಿಲ್ಲಿ, ಜು. 15: ಭಾರತದ ಶೈಕ್ಷಣಿಕ ಸಂಸ್ಥೆಗಳ ಪೈಕಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಮದರಾಸ್ ಸತತ ನಾಲ್ಕನೇ ವರ್ಷ ಅಗ್ರ ಸ್ಥಾನ ಪಡೆದಿದೆ ಎಂದು ಶಿಕ್ಷಣ ಸಚಿವಾಲಯದ ನ್ಯಾಶನಲ್ ಇನ್‌ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಮ್‌ವರ್ಕ್ ತಿಳಿಸಿದೆ. ಅದೇ ವೇಳೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ (ಐಐಎಸ್‌ಸಿ), ಬೆಂಗಳೂರು ಶ್ರೇಷ್ಠ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ 2022ರ ಶೈಕ್ಷಣಿಕ ಸಂಸ್ಥೆಗಳ ರ್ಯಾಂಕಿಂಗನ್ನು ಬಿಡುಗಡೆಗೊಳಿಸಿದರು.

ಸಾಮಾನ್ಯ ವಿಭಾಗದಲ್ಲಿ, ಐಐಟಿ ಮದರಾಸ್ ಮೊದಲ ಸ್ಥಾನದಲ್ಲಿದ್ದರೆ, ಐಐಎಸ್‌ಸಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಮತ್ತು ಐಐಟಿ ಬಾಂಬೆ ಮೂರನೇ ಸ್ಥಾನವನ್ನು ಪಡೆದಿದೆ.

ದೇಶದ ವಿಶ್ವವಿದ್ಯಾನಿಲಯಗಳ ಪೈಕಿ ಐಐಎಸ್‌ಸಿ ಬೆಂಗಳೂರು ಶ್ರೇಷ್ಠ ವಿಶ್ವವಿದ್ಯಾನಿಲಯವಾಗಿದ್ದು, ಎರಡನೇ ಸ್ಥಾನದಲ್ಲಿ ದಿಲ್ಲಿಯ ಜೆಎನ್‌ಯು ಮತ್ತು ಮೂರನೇ ಸ್ಥಾನದಲ್ಲಿ ದಿಲ್ಲಿಯದೇ ಆಗಿರುವ ಜಾಮಿಯಾ ಮಿಲಿಯ ಇಸ್ಲಾಮಿಯ ಇದೆ.

ಐಐಟಿ ಮದರಾಸ್ ಶ್ರೇಷ್ಠ ಇಂಜಿನಿಯರಿಂಗ್ ಕಾಲೇಜ್ ಆಗಿದ್ದು, ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಕ್ರಮವಾಗಿ ಐಐಟಿ ಡೆಲ್ಲಿ ಮತ್ತು ಐಐಟಿ ಬಾಂಬೆಗಳಿವೆ. ಫಾರ್ಮಸಿ ಸಂಸ್ಥೆಗಳ ಪೈಕಿ, ಜಾಮಿಯಾ ಹಮ್‌ದರ್ದ್ ಅಗ್ರ ಸ್ಥಾನವನ್ನು ಪಡೆದಿದೆ. ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್, ಹೈದರಾಬಾದ್ ಎರಡನೇ ಸ್ಥಾನವನ್ನು ಪಡೆದರೆ, ಪಂಜಾಬ್ ವಿಶ್ವವಿದ್ಯಾನಿಲಯ, ಚಂಡೀಗಢವು ಮೂರನೇ ಸ್ಥಾನದಲ್ಲಿದೆ.

ಫಾರ್ಮಸಿ ವಿಭಾಗದಲ್ಲಿ, ದಿಲ್ಲಿಯ ಮಿರಾಂಡಾ ಹೌಸ್ ಕಾಲೇಜ್ ಅಗ್ರ ಸ್ಥಾನದಲ್ಲಿದೆ. ದಿಲ್ಲಿಯ ಹಿಂದೂ ಕಾಲೇಜ್ ಎರಡನೇ ಸ್ಥಾನದಲ್ಲಿದ್ದರೆ, ಚೆನ್ನೈಯ ಪ್ರೆಸಿಡೆನ್ಸಿ ಕಾಲೇಜು ಮೂರನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News