ಮಗುವನ್ನು ಕೊಲ್ಲಲು ಅನುಮತಿ ನೀಡಲು ಸಾಧ್ಯವಿಲ್ಲ: ಅವಿವಾಹಿತ ಯುವತಿಗೆ ತಿಳಿಸಿದ ನ್ಯಾಯಾಲಯ

Update: 2022-07-15 17:53 GMT

ಹೊಸದಿಲ್ಲಿ, ಜು. 15: ಅವಿವಾಹಿತ ಯುವತಿಯ ಗರ್ಭಪಾತ (23 ವಾರ)ಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿರುವ ದಿಲ್ಲಿ ಉಚ್ಚ ನ್ಯಾಯಾಲಯ, ಇದು ವಸ್ತುಶಃ ಭ್ರೂಣ ಹತ್ಯೆಗೆ ಸಮಾನವಾಗುತ್ತದೆ ಎಂದಿದೆ. 

ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಯುವತಿಯೋರ್ವರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠ, ಹೆರಿಗೆಯಾಗುವ ವರೆಗೆ ಅರ್ಜಿದಾರರನ್ನು ಎಲ್ಲಿಯಾದರೂ ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು.ಅನಂತರ ಅವರು ಶಿಶುವನ್ನು ದತ್ತು ನೀಡಬಹುದು ಎಂದು ಪೀಠ ಸಲಹೆ ನೀಡಿದೆ. 
ಯುವತಿಯನ್ನು ಎಲ್ಲಾದರೂ ಸುರಕ್ಷಿತವಾಗಿ ಇರಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಆಕೆ ಹೆರಿಗೆಯಾದ ಬಳಿಕ ಹೋಗಬಹುದು. ಮಕ್ಕಳನ್ನು ದತ್ತು ತೆಗೆದುಕೊಳ್ಳಲು ದೊಡ್ಡ ಸಾಲು ಇದೆ ಎಂದು ನ್ಯಾಯಮೂರ್ತಿ ಸುಬ್ರಹ್ಮಣೀಯನ್ ಪ್ರಸಾದ್ ಅವರನ್ನು ಕೂಡ ಒಳಗೊಂಡ ಪೀಠ ಅಭಿಪ್ರಾಯಿಸಿತು. 

‘‘ಮಗುವನ್ನು ಹತ್ಯೆಗೈಯಲು ನಾವು ಅನುಮತಿ ನೀಡುವುದಿಲ್ಲ. ಕ್ಷಮಿಸಿ. ವಸ್ತುಶಃ ಇದು ಭ್ರೂಣ ಹತ್ಯೆಗೆ ಸಮಾನ’’ ಎಂದು ಪೀಠ ಹೇಳಿತು. 
ಅವಿವಾಹಿತೆಯಾಗಿರುವ ಯುವತಿಗೆ ಈ ಗರ್ಭ ಮಾನಸಿಕ ನೋವು ಉಂಟು ಮಾಡುತ್ತಿದೆ. ಮಗುವನ್ನು ಬೆಳೆಸುವ ಸ್ಥಿತಿಯಲ್ಲಿ ಆಕೆ ಇಲ್ಲ ಎಂದು ದೂರುದಾರರ ಪರ ವಕೀಲರು ಹೇಳಿದರು. ಅವಿವಾಹಿತ ಯುವತಿಯರಿಗೆ   ಸಂಬಂಧಿಸಿ ವೈದ್ಯಕೀಯ ಗರ್ಭಪಾತಕ್ಕೆ ಕಾನೂನು ನಿಷೇಧ ಹೇರಿರುವುದು ಅಸಮಾನತೆಯಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ. 
‘‘ನಾವು ಮಗುವನ್ನು ಬೆಳೆಸಲು ಬಲವಂತ ಮಾಡುವುದಿಲ್ಲ. ನೀವು ಉತ್ತಮ ಆಸ್ಪತ್ರೆಗೆ ಹೋಗುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಿಮ್ಮ ವಿವರಗಳು ಯಾರಿಗೂ ಗೊತ್ತಾಗುವುದಿಲ್ಲ. ಮಗುವಿಗೆ ಜನ್ಮ ನೀಡಿ, ಮತ್ತೆ ಹಿಂದಿರುಗಿ’’ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News