ದಿಲ್ಲಿ ಸ್ಟೇಡಿಯಂನಲ್ಲಿ ನಾಯಿಯೊಂದಿಗೆ ವಾಕಿಂಗ್ ಮಾಡಿ ವರ್ಗಾವಣೆಯಾಗಿದ್ದ ಐಎಎಸ್ ದಂಪತಿ ಈಗ ದೀರ್ಘ ರಜೆಯಲ್ಲಿ

Update: 2022-07-16 12:11 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ತಮ್ಮ ಸಾಕುನಾಯಿಗಳೊಂದಿಗೆ ವಾಕಿಂಗ್‍ಗಾಗಿ ಐಎಎಸ್ ಅಧಿಕಾರಿಗಳಾದ ಸಂಜೀವ್ ಧುಗ್ಗ ಖಿರ್ವಾರ್ ಮತ್ತು ರಿಂಕು ಧುಗ್ಗ ಅವರು ದಿಲ್ಲಿಯ ತ್ಯಾಗರಾಜ ಸ್ಟೇಡಿಯಂಗೆ ಬರುತ್ತಾರೆಂಬ ಕಾರಣಕ್ಕೆ ಅಥ್ಲೀಟುಗಳಿಗೆ ಸ್ಟೇಡಿಯಂನಿಂದ ಬೇಗನೇ ತೆರಳುವಂತೆ ಸೂಚಿಸಲಾಗುತ್ತಿದೆ ಎಂಬ ಕುರಿತು ಮಾಧ್ಯಮವೊಂದು ಕೆಲ ಸಮಯದ ಹಿಂದೆ  ವರದಿ ಮಾಡಿದ ಬೆನ್ನಿಗೇ ಈ 1994 ಬ್ಯಾಚಿನ ಅಧಿಕಾರಿಗಳಿಬ್ಬರನ್ನೂ ವರ್ಗಾಯಿಸಲಾಗಿತ್ತು, ಸಂಜೀವ್ ಅವರನ್ನು ಲಡಾಖ್‍ಗೆ ಹಾಗೂ ರಿಂಕು ಅವರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಿ ಮೇ 26ರಂದು ಗೃಹ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿತ್ತು.

ಆದರೆ ಇದು ವರ್ಗಾವಣೆಗಿಂತ ಹೆಚ್ಚಾಗಿ ಶಿಕ್ಷೆ ಎಂದೇ ತಿಳಿಯಲಾಗಿತ್ತು. ಆದರೆ ತಮ್ಮ ಹೊಸ ಪೋಸ್ಟಿಂಗ್‍ಗೆ ತೆರಳಿದ್ದ ದಂಪತಿ ಅಲ್ಲಿ ಕೆಲ ದಿನಗಳ ಕಾಲ ಸೇವೆ ಸಲ್ಲಿಸಿ ನಂತರ ದೀರ್ಘ ರಜೆಯ ಮೇಲೆ ತೆರಳಿದ್ದಾರೆಂಬ ಮಾಹಿತಿಯಿದೆ.

ಸಂಜೀವ್ ಅವರನ್ನು ಲಡಾಖ್‍ಗೆ ಮುಖ್ಯ ಕಾರ್ಯದರ್ಶಿಯನ್ನಾಗಿ  ನೇಮಿಸಿ ವರ್ಗಾಯಿಸಲಾಗಿತ್ತು ಹಾಗೂ ಅವರಿಗೆ ಅಲ್ಲಿ ಶಾಲಾ ಶಿಕ್ಷಣ, ವಸತಿ, ನಗರಾಭಿವೃದ್ಧಿ ಮತ್ತು ಐಟಿ ವಿಭಾಗಗಳ ಜವಾಬ್ದಾರಿ ನೀಡಲಾಗಿತ್ತು. ಆದರೆ ಜುಲೈ 6ರಂದು ಕರ್ತವ್ಯಕ್ಕೆ ಹಾಜರಾಗಿ ಕೆಲ ದಿನಗಳ ಕಾಲ ಸೇವೆ ಸಲ್ಲಿಸಿ ಆತ ರಜೆಯ ಮೇಲೆ ಹೋಗಿದ್ದಾರೆ.

ಅವರು ಧೀರ್ಘರಜೆ ಮೇಲೆ ಹೋಗಿದ್ದಾರೆ ಅವರಿಗೆ ಲೆಫ್ಟಿನೆಂಟ್ ಗವರ್ನರ್ ಮಂಜೂರು ಮಾಡಿದ್ದಾರೆ ಹಾಗೂ ರಜೆಗಾಗಿ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆಂದು ತಿಳಿದು ಬಂದಿದೆ.

ರಿಂಕು ಧುಗ್ಗ ಅವರನ್ನು ಜೂನ್ 27ರಂದು ಅರುಣಾಚಲ ಪ್ರದೇಶದಲ್ಲಿ ದೇಶೀಯ ವ್ಯವಹಾರಗಳ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಆದರೆ ನಂತರ ಆಕೆ 70 ದಿನಗಳ ರಜೆಯನ್ನು ಪಡೆದಿದ್ದಾರೆ. ಸ್ವತಃ ಮುಖ್ಯಮಂತ್ರಿಯಿಂದಲೇ ಅನುಮತಿ ಪಡೆದಿದ್ದರೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News