ಮೋದಿ ವಿರುದ್ಧ ಸಂಚು ಹೂಡಿದ್ದ ತೀಸ್ತಾ ಸೆಟಲ್ವಾಡ್‌, ಅಹ್ಮದ್ ಪಟೇಲ್: ಗುಜರಾತ್ ಸಿಟ್ ಪೊಲೀಸರ ಆರೋಪ

Update: 2022-07-16 14:36 GMT

ಹೊಸದಿಲ್ಲಿ,ಜು.16:, ಎರಡು ವರ್ಷಗಳ ಹಿಂದೆ ನಿಧನರಾದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ಬಂಧಿತ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಜೊತೆಗೂಡಿ ಪ್ರಧಾನಿ ನರೇಂದ್ರ ಮೋದಿಯವರನ್ನು 2002ರ ಗುಜರಾತ್ ಗಲಭೆಯ ಗಲಭೆ ಪ್ರಕರಣದಲ್ಲಿ ಸಿಲುಕಿಸಲು ಸಂಚುರೂಪಿಸಿದ್ದರು ಎಂದು ರಾಜ್ಯ ಪೊಲೀಸರು ಶನಿವಾರ ಅಹ್ಮದಾಬಾದ್ ಸೆಶನ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ಗುಜರಾತ್ ಪೊಲೀಸರ ಆರೋಪವನ್ನು ಕಾಂಗ್ರೆಸ್ ಹಾಗೂ ಅಹ್ಮದ್‌ಪಟೇಲ್ ಅವರ ಕುಟುಂಬಿಕರು ಬಲವಾಗಿ ನಿರಾಕರಿಸಿದ್ದಾರೆ.

    ‌
ಜಾಮೀನು ಬಿಡುಗಡೆ ಕೋರಿ ತೀಸ್ತಾ ಸೆಟಲ್ವಾಡ್ ಸಲ್ಲಿಸಿದ ಮನವಿಯನ್ನು ವಿರೋಧಿಸಿದ ಗುಜರಾತ್ ಪೊಲೀಸರ ವಿಶೇಷ ತನಿಖಾ ತಂಡವು, ಆಕೆ ಅಹ್ಮದ್ ಪಟೇಲ್ ಅವರ ಕುಮ್ಮಕ್ಕಿನ ಮೇರೆಗೆ, ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ವಜಾಗೊಳಿಸಲು ನಡೆಸಿದ ಸಂಚಿನ ಭಾಗವಾಗಿದ್ದರು ಎಂದು ಆಪಾದಿಸಿದೆ.
 
ಗುಜರಾತ್ ಗಲಭೆ ಪ್ರಕರಣಗಳಲ್ಲಿ ಕೆಲವು ಮಂದಿಯ ವಿರುದ್ಧ ದೋಷಾರೋಪ ಹೊರಿಸಲು ಸುಳ್ಳು ಸಾಕ್ಷಗಳನ್ನು ರೂಪಿಸಿದ ಆರೋಪದಲ್ಲಿ ಸೆಟಲ್ವಾಡ್ ಹಾಗೂ ಮಾಜಿ ಐಪಿಎಸ್ ಅಧಿಕಾರಿಗಳಾದ ಆರ್.ಬಿ. ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು.
    
‘‘ಚುನಾಯಿತ ಸರಕಾರವನ್ನು ವಜಾಗೊಳಿಸುವುದು ಅಥವಾ ಅಸ್ಥಿರಗೊಳಿಸುವುದೇ ತೀಸ್ತಾಸೆಟಲ್ವಾಡ್ ಅವರ ರಾಜಕೀಯ ಉದ್ದೇಶವಾಗಿತ್ತು. ಗುಜರಾತ್ನಲ್ಲಿ ಅಮಾಯಕ ವ್ಯಕ್ತಿಗಳನ್ನು ತಪ್ಪು ದೋಷಾರೋ ಹೊರಿಸುವ ಆಕೆಯ ಪ್ರಯತ್ನಕ್ಕಾಗಿ ಆಕೆ ಎದುರಾಳಿ ರಾಜಕೀಯ ಪಕ್ಷದಿಂದ ಅಕ್ರಮವಾಗಿ ಆರ್ಥಿಕ ಹಾಗೂ ಇತರ ಸವಲತ್ತುಗಳನ್ನು ಮತ್ತು ಉಡುಗೊರೆಗಳನ್ನು ಪಡೆದುಕೊಂಡಿದ್ದರು’ ಎಂದು ಗುಜರಾತ್ ಪೊಲೀಸರ ಸಿಟ್ ತಂಡ ತಿಳಿಸಿದೆ. 

ಅಹ್ಮದ್ ಪಟೇಲ್ ಅವರ ಕುಮ್ಮಕ್ಕಿನ ಮೇರೆಗೆ ತೀಸ್ತಾ ಅವರು ಈ ಸಂಚನ್ನು ನಡೆಸಿದ್ದರೆಂಬುದಕ್ಕೆ ಪುರಾವೆಯಾಗಿ ಸಿಟ್ ಪರ ವಕೀಲರು ಸಾಕ್ಷಿದಾರರೊಬ್ಬರು ಹೇಳಿಕೆಯನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಿದರು. ಗುಜರಾತ್ ಗಲಭೆಯ ಬಳಿಕ ಸೆಟಲ್ವಾಡ್ ಅವರಿಗೆ 30 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರೆಂದು ಸಿಟ್ ಆಪಾದಿಸಿದೆ.
  ‌
ಗುಜರಾತ್ ಗಲಭೆ ಪ್ರಕರಣಗಳಲ್ಲಿ ಬಿಜೆಪಿ ಸರಕಾದ ಹಿರಿಯ ನಾಯಕರನ್ನು ಸಿಕ್ಕಿಸಿಹಾಕಲು ತೀಸ್ತಾ ಸೆಟಲ್ವಾಡ್ ಅವರು ದಿಲ್ಲಿಯಲ್ಲಿ ಪ್ರಮುಖ ರಾಜಕೀಯ ಪಕ್ಷವೊಂದು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅದರ ನಾಯಕರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದರು ಹಾಗೂ ರಾಜ್ಯಸಭಾ ಸ್ಥಾನವನ್ನು ಗಿಟ್ಟಿಸಿಒಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಸಿಟ್ ಪರ ವಕೀಲರು ಆಪಾದಿಸಿದ್ದಾರೆ.
     
ಈ ಮಧ್ಯೆ ಗುಜರಾತ್ ಪೊಲೀಸರು ಆರೋಪವನ್ನು ಅಹ್ಮದ್ ಪಟೇಲ ರ ಪುತ್ರಿ ಮುಮ್ತಾಝ್ ಪಟೇಲ್ ತಳ್ಳಿಹಾಕಿದ್ದಾರೆ. ಪ್ರತಿಪಕ್ಷಗಳ ಮೇಲೆ ಕಳಂಕ ಹೊರಿಸಲು ನಡೆಸಲಾದ ರಾಜಕೀಯ ಸಂಚು ಇದಾಗಿದೆಯೆಂದು ಆಕೆ ಹೇಳಿದ್ದಾರೆ.ಒಂದು ವೇಳೆ ಆರೋಪ ನಿಜವಾಗಿದ್ದರೆ, ಆಕೆ ಯುಪಿಎ ಅಧಿಕಾರದಲ್ಲಿದ್ದಾಗ ತೀಸ್ತಾಗೆ ಆಕೆ ಪುರಸ್ಕಾರ ನೀಡಲಾಗಿಲ್ಲ ಹಾಗೂ ಆಕೆಯನ್ನು ರಾಜ್ಯಸಭಾ ಸದಸ್ಯೆಯನ್ನಾಗಿಯೂ ಮಾಡಲಿಲ್ಲ ಮತ್ತು 2020ರವರೆಗೆ ದೊಡ್ಡ ಸಂಚನ್ನು ರೂಪಿಸಿದ್ದಕ್ಕಾಗಿ ನನ್ನ ತಂದೆಯ ವಿರುದ್ಧ ಯಾವುದೇ ಕಾನೂನುಕ್ರಮವನ್ನು ಕೈಗೊಳ್ಳಲಿಲ್ಲವೆಂದವರು ಪ್ರಶ್ನಿಸಿದ್ದಾರೆ.

ಪ್ರಧಾನಿಯ ರಾಜಕೀಯ ಪ್ರತೀಕಾರ ಅಗಲಿದವರನ್ನೂ ಬಿಟ್ಟಲ್ಲ: ಕಾಂಗ್ರೆಸ್
   
ಆಹ್ಮದ್ ಪಟೇಲ್ ಅವರು ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅವರ ಸರಕಾರವನ್ನು ಪತನಗೊಳಿಸಲು ತೀಸ್ತಾ ಸೆಟಲ್ವಾಡ್ ಜೊತೆ ಸಂಚು ಹೂಡಿದ್ದರೆಂಬ ಗುಜರಾತ್ ಪೊಲೀಸರ ಆರೋಪವನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿದೆ. ಅಹ್ಮದ್ ಪಟೇಲ್ ವಿರುದ್ಧದ ಆರೋಪಗಳು 2002ರ ಗುಜರಾತ್  ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಯಾವುದೇ ಹೊಣೆಗಾರಿಕೆಯಿಂದ ದೋಷಮುಕ್ತಗೊಳ್ಳುವ ಪ್ರಧಾನಿಯವರ ವ್ಯವಸ್ಥಿತ ಕಾರ್ಯತಂತ್ರದ ಭಾಗವಾಗಿದೆಯೆಂದು ಕಾಂಗ್ರೆಸ್ ಆಪಾದಿಸಿದೆ.
 
‘‘ಪ್ರಧಾನಿಯವರ ರಾಜಕೀಯ ಪ್ರತೀಕಾರದ ಯಂತ್ರವು, ಈಗ ಆಗಲಿರುವಂತಹ ಅವರ ರಾಜಕೀಯ ವಿರೋಧಿಗಳನ್ನು ಕೂಡಾ ಬಿಟ್ಟಿಲ್ಲವೆಂದು ಹೇಳಿಕೆ ತಿಳಿಸಿದೆ.‘‘ಈಗ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಮಾಧ್ಯಮಗಳ ಮೂಲಕ ತೀರ್ಪು ನೀಡುವುದು,, ಕೈಗೊಂಬೆಗಳಾಗಿರುವ ತನಿಖಾ ಏಜೆನ್ಸಿಗಳ ಮೂಲಕ ಸುಳ್ಳು ಆರೋಪಗಳನ್ನು ಹೊರಿಸುವುದು, ಮೋದಿ-ಶಾ ಜೋಡಿಯ ಹಲವಾರು ವರ್ಷಗಳ ತಂತ್ರಗಾರಿಕೆಗಳಾಗಿವೆ. ಇಂತಹ ಹಸಿ ಸುಳ್ಳುಗಳನ್ನು ನಿರಾಕರಿಸಲು ಮೃತ ವ್ಯಕ್ತಿಗೆ ಸಾಧ್ಯವಿಲ್ಲದಿರುವುದರಿಂದ ಆತನನ್ನು ಖಳನಂತೆ ಬಿಂಬಿಸುವ ಇನ್ನೊಂದು ಉದಾಹರಣೆ ಇದಾಗಿದೆಯೆಂದು ಕಾಂಗ್ರೆಸ್ ಪಕ್ಸವು ಹೇಳಿಕೆಯೊಂದರಲ್ಲಿ ಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News