ಚೀನಿ ವಿಮಾನಗಳು ಗಡಿಗೆ ತೀರ ಸಮೀಪಕ್ಕೆ ಬಂದಾಗಲೆಲ್ಲ ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತಿದ್ದೇವೆ: ವಾಯಪಡೆ ಮುಖ್ಯಸ್ಥ

Update: 2022-07-17 16:22 GMT
Photo: Twitter/@PIB_India

ಹೊಸದಿಲ್ಲಿ,ಜು.17: ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯ ಬಳಿ ಚೀನಿ ವಾಯಪಡೆಯ ಹಲವಾರು ಪ್ರಚೋದನಾತ್ಮಕ ಚಟುವಟಿಕೆಗಳ ನಡುವೆಯೇ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧುರಿಯವರು,ಚೀನಿ ಯುದ್ಧವಿಮಾನಗಳು ಗಡಿಗೆ ತೀರ ಸಮೀಪ ಬಂದಾಗೆಲ್ಲ ಭಾರತೀಯ ವಾಯುಪಡೆಯು ತನ್ನ ಯುದ್ಧವಿಮಾನಗಳನ್ನು ಸಜ್ಜಾಗಿಸುವ ಮೂಲಕ ತಕ್ಷಣ ಪ್ರತಿಕ್ರಿಯಿಸುತ್ತದೆ ಎಂದು ರವಿವಾರ ಇಲ್ಲಿ ತಿಳಿಸಿದರು. 

ಭಾರತ ಮತ್ತು ಚೀನಾ ನಡುವೆ 16ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ನಡೆಯುತ್ತಿರುವ ದಿನವೇ ವಾಯುಪಡೆ ಮುಖ್ಯಸ್ಥರು ಸುದ್ದಿವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಮಾತುಕತೆಗಳ ಆರಂಭಕ್ಕೆ ಮುನ್ನ ಚೀನಿ ವಾಯುಪಡೆಯ ಯುದ್ಧವಿಮಾನಗಳು ಹಲವಾರು ಸಂದರ್ಭಗಳಲ್ಲಿ ಭಾರತವನ್ನು ಪ್ರಚೋದಿಸಿದ್ದವು.

‘ಚೀನಿ ವಿಮಾನಗಳ ಚಟುವಟಿಕೆಗಳ ಮೇಲೆ ನಾವು ನಿಕಟ ನಿಗಾಯಿರಿಸಿದ್ದೇವೆ. ಚೀನಿ ವಿಮಾನ ಅಥವಾ ದೂರ ನಿಯಂತ್ರಿತ ವಿಮಾನ ಎಲ್ಎಸಿಗೆ ತೀರ ಸಮೀಪದಲ್ಲಿ ಹಾರುವುದನ್ನು ನಾವು ಗಮನಿಸಿದಾಗೆಲ್ಲ ನಾವು ನಮ್ಮ ಯುದ್ಧವಿಮಾನಗಳನ್ನು ಹೆಚ್ಚಿನ ಕಟ್ಟೆಚ್ಚರದಲ್ಲಿ ಇರಿಸುವ ಮೂಲಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇದು ಅವರನ್ನು ಸಾಕಷ್ಟು ಹಿಮ್ಮೆಟ್ಟಿಸಿದೆ ’ ಎಂದು ಚೌಧುರಿ ತಿಳಿಸಿದರು.

ಮಾತುಕತೆ ಸನ್ನಿಹಿತವಾಗಿದ್ದಾಗ ಚೀನಿ ವಾಯುಪಡೆಯು ಭಾರತವನ್ನು ಪ್ರಚೋದಿಸಲು ಏಕೆ ಯತ್ನಿಸುತ್ತದೆ ಎಂಬ ಪ್ರಶ್ನೆಗೆ ಚೌಧುರಿ,‘ಅವರು ಹಾಗೆ ಏಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನು ಬೆಟ್ಟು ಮಾಡಲು ನನಗೆ ಸಾಧ್ಯವಿಲ್ಲ. ಆದರೆ ನಾವು ಆ ಬಗ್ಗೆ ನಿಗಾಯಿರಿಸಿದ್ದೇವೆ ಮತ್ತು ನಮ್ಮ ಯುದ್ಧವಿಮಾನಗಳನ್ನು ಅಲ್ಲಿ ಅಣಿಗೊಳಿಸುವ ಮೂಲಕ ತಕ್ಷಣ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ’ ಎಂದು ಉತ್ತರಿಸಿದರು.

‘ಜೂನ್ 2020ರ ಗಲ್ವಾನ್ ಘಟನೆಯ ಬಳಿಕ ನಾವು ಪೂರ್ವ ಲಡಾಖ್ ಕ್ಷೇತ್ರದಲ್ಲಿ ಎಲ್ಎಸಿಯುದ್ದಕ್ಕೂ ನಮ್ಮ ರಾಡಾರ್ಗಳನ್ನು ನಿಯೋಜಿಸಲು ಆರಂಭಿಸಿದ್ದೆವು. ಕ್ರಮೇಣ ಈ ಎಲ್ಲ ರಾಡಾರ್ಗಳನ್ನು ನಮ್ಮ ಏಕೀಕೃತ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ನೊಂದಿಗೆ ಸಂಯೋಜಿಸಿದ್ದೇವೆ,ಇದರಿಂದಾಗಿ ಎಲ್ಎಸಿಯಾದ್ಯಂತ ವಾಯು ಚಟುವಟಿಕೆಗಳ ಮೇಲೆ ನಿಗಾಯಿರಿಸಲು ನಮಗೆ ಸಾಧ್ಯವಾಗಿದೆ. 

ವಾಯುಪಡೆಯು ಉತ್ತರದ ಗಡಿಗಳಲ್ಲಿ ನೆಲದಿಂದ ವಿಮಾನಗಳ ಮೇಲೆ ದಾಳಿ ಮಾಡುವ ಶಸ್ತ್ರಾಸ್ತ್ರ ಸಾಮರ್ಥ್ಯಗಳನ್ನು ಹೆಚ್ಚಿಸಿದೆ ಮತ್ತು ಆ ಪ್ರದೇಶದಲ್ಲಿ ತನ್ನ ಸಂಚಾರಿ ವೀಕ್ಷಣಾ ಪೋಸ್ಟ್ಗಳ ಸಂಖ್ಯೆಯನ್ನೂ ಹೆಚ್ಚಿಸಿದೆ. ಅಲ್ಲಿ ನಿಯೋಜಿತ ಸೇನೆ ಮತ್ತು ಇತರ ಏಜೆನ್ಸಿಗಳಿಂದ ಬಹಳಷ್ಟು ಮಾಹಿತಿಗಳು ನಮಗೆ ಲಭಿಸುತ್ತವೆ. ಇವೆಲ್ಲ ನಮಗೆ ಚೀನಿ ವಿಮಾನಗಳ ಮೇಲೆ ನಿಕಟ ನಿಗಾಯಿರಿಸಲು ನೆರವಾಗಿವೆ ’ಎಂದು ಚೌಧುರಿ ತಿಳಿಸಿದರು.

ಮೊದಲ ಪ್ರಮುಖ ವಾಯು ಉಲ್ಲಂಘನೆ ಘಟನೆ ಜೂನ್ ಕೊನೆಯ ವಾರದಲ್ಲಿ ನಡೆದಿತ್ತು. ಆಗ ಚೀನಿ ವಾಯುಪಡೆಯ ಜೆ-11 ಯುದ್ಧವಿಮಾನವೊಂದು ಉಭಯ ಸೇನೆಗಳ ನಡುವಿನ ಘರ್ಷಣಾ ತಾಣದ ತೀರ ಸಮೀಪದಲ್ಲಿ ಹಾರಾಡಿತ್ತು.

ಕಳೆದ ವಾರವೂ ಚೀನದ ಯುದ್ಧವಿಮಾನಗಳು ಹಲವಾರು ಸಲ ವಿಶ್ವಾಸ ನಿರ್ಮಾಣ ಕ್ರಮಗಳನ್ನು ಉಲ್ಲಂಘಿಸಿ ಪೂರ್ವ ಲಡಾಖ ವಿಭಾಗದ ಎಲ್ಎಸಿಗೆ ಅತ್ಯಂತ ಸಮೀಪದಲ್ಲಿ ಹಾರಾಡುವ ಮೂಲಕ ಪ್ರಚೋದನಾತ್ಮಕ ಚಟುವಟಿಕೆಗಳನ್ನು ನಡೆಸಿದ್ದವು. ವಿಶ್ವಾಸ ನಿರ್ಮಾಣ ಕ್ರಮಗಳಂತೆ ಉಭಯ ದೇಶಗಳ ವಿಮಾನಗಳು ಎಲ್ಎಸಿಯ 10 ಕಿ.ಮೀ.ನೊಳಗೆ ಹಾರಾಟ ನಡೆಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News