ಮಧ್ಯಪ್ರದೇಶ: ನರ್ಮದಾ ನದಿಗೆ ಬಿದ್ದ ಮಹಾರಾಷ್ಟ್ರದ ಸರಕಾರಿ ಬಸ್, ಕನಿಷ್ಠ 13 ಮಂದಿ ಮೃತ್ಯು

Update: 2022-07-18 16:15 GMT
Photo:PTI

ಭೋಪಾಲ,ಜು.18: ಸೋಮವಾರ ಬೆಳಿಗ್ಗೆ ಮಧ್ಯಪ್ರದೇಶದ ಇಂದೋರಿನಿಂದ ಮಹಾರಾಷ್ಟ್ರದ ಜಳಗಾಂವ ಜಿಲ್ಲೆಯ ಅಮಳನೇರ್ಕ್ಕೆ ಪ್ರಯಾಣಿಸುತ್ತಿದ್ದ ಬಸ್ ಧಾರ್ ಜಿಲ್ಲೆಯಲ್ಲಿ ನರ್ಮದಾ ನದಿಗೆ ಉರುಳಿದ ಪರಿಣಾಮ ಕನಿಷ್ಠ 12 ಪ್ರಯಾಣಿಕರು ಮೃತಪಟ್ಟಿದ್ದಾರೆ.
15 ಜನರನ್ನು ರಕ್ಷಿಸಲಾಗಿದೆ. ಇಂದೋರನಲ್ಲಿ 12 ಜನರು ಈ ಬಸ್ನ್ನು ಹತ್ತಿದ್ದರು ಎಂದು ಮಧ್ಯಪ್ರದೇಶದ ಗೃಹಸಚಿವ ನರೋತ್ತಮ ಮಿಶ್ರಾ ಅವರು ಸುದ್ದಿಗಾರರಿಗೆ ತಿಳಿಸಿದರು.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಅಮಳನೇರ್ ಡಿಪೋಕ್ಕೆ ಸೇರಿದ ಬಸ್ನಲ್ಲಿ 30ರಿಂದ 32 ಪ್ರಯಾಣಿಕರಿದ್ದರು ಎಂದು ನಂಬಲಾಗಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
ಧಾರ್ ಮತ್ತು ಖರ್ಗೋನೆ ಜಿಲ್ಲೆಗಳ ಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 3 (ಆಗ್ರಾ-ಮುಂಬೈ ರಸ್ತೆ)ರಲ್ಲಿಯ ಸೇತುವೆಗೆ ಢಿಕ್ಕಿ ಹೊಡೆದ ಬಸ್ ನರ್ಮದಾ ನದಿಗೆ ಉರುಳಿದೆ. ಈ ನತದೃಷ್ಟ ಬಸ್ ಇಂದೋರಿನಿಂದ ಬೆಳಿಗ್ಗೆ 7:30ಕ್ಕೆ ಪ್ರಯಾಣವನ್ನು ಆರಂಭಿಸಿತ್ತು.
ಬಸ್ನಲ್ಲಿ ಸಿಕ್ಕಿಕೊಂಡಿದ್ದ 12 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಎನ್ಡಿಆರ್ಎಫ್ ತಂಡವು ಘಟನಾ ಸ್ಥಳದಲ್ಲಿದೆ ಎಂದು ಮಧ್ಯಪ್ರದೇಶ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಾಜೇಶ ರಾಜೋರಾ ಸುದ್ದಿಸಂಸ್ಥೆಗೆ ತಿಳಿಸಿದರು.
ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು,ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮಿಶ್ರಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News