ನ್ಯಾಯಾಲಯದಲ್ಲಿ ಮಂಡೇಲಾ ಓದಿದ ಒಂದು ಚಾರಿತ್ರಿಕ ರಕ್ಷಣಾ ಪ್ರಕರಣ
ಭಾಗ - 1
ನೆಲ್ಸನ್ ಮಂಡೇಲಾ ಹುಟ್ಟಿ ಇಂದಿಗೆ 104 ವರ್ಷಗಳಾಗುತ್ತದೆ. ನೆಲ್ಸನ್ ಮಂಡೇಲಾ ಅವರ ಆತ್ಮಕಥೆೆ ("LONG WALK TO FREEDOM") ಜಗತ್ತಿನ ನೊಂದ ಜನರ ಇತಿಹಾಸದ ಒಂದು ಕರಾಳ ಅಧ್ಯಾಯವಾಗಿದೆ. ಆಫ್ರಿಕಾದ ಬಿಳಿಯರ ಸರಕಾರ ಮಂಡೇಲಾರನ್ನು 27 ವರ್ಷಗಳ ಕಾಲ ಜೈಲಿನಲ್ಲಿ ಕೂಡಿ ಹಾಕಿತ್ತು. ಇದರ ನಡುವೆ ಮಂಡೇಲಾ ಅವರು ನ್ಯಾಯಾಲಯದಲ್ಲಿ ಓದಿದ ಒಂದು ಚಾರಿತ್ರಿಕ ರಕ್ಷಣಾ ಪ್ರಕರಣವನ್ನು ಅವರ ಆತ್ಮಕಥೆಯಿಂದ ತೆಗೆದುಕೊಳ್ಳಲಾಗಿದೆ.
ನ್ಯಾಯಾಲಯದಲ್ಲಿ ಮಂಡೇಲಾ ಎದ್ದುನಿಂತು ನಿಧಾನವಾಗಿ ಓದತೊಡಗಿದರು. ‘‘ನಾನು ಆರ್ಟ್ಸ್‌ನಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದಿದ್ದೇನೆ. ಜೊಹಾನ್ಸ್‌ಬರ್ಗ್‌ನಲ್ಲಿ ವಕೀಲನಾಗಿ ಆಲಿವರ್ ಟ್ಯಾಂಬೊ ಜೊತೆ ಸಹಭಾಗಿತ್ವದಲ್ಲಿ ಹಲವು ವರ್ಷ ಗಳಿಂದ ಅಭ್ಯಾಸ ಮಾಡುತ್ತಿರುವೆ. ಸರಕಾರದ ಅಪ್ಪಣೆ ಯಿಲ್ಲದೆ ದೇಶವನ್ನು ಬಿಟ್ಟುಹೋಗಿದ್ದಕ್ಕೆ ಮತ್ತು 1961ರ ಕೊನೆಯಲ್ಲಿ ಜನರನ್ನು ಮುಷ್ಕರಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿದ್ದಕ್ಕೆ ಈಗ ಐದು ವರ್ಷಗಳ ಕಾಲ ತಪ್ಪಿತಸ್ಥ ಕೈದಿಯಾಗಿದ್ದೇನೆ. ‘ಉಮ್ಖೋಂಟೊ ವಿ ಸಿಜ್ವೆ’ ರೂಪಿಸಲು ನಾನು ಕಾರಣನಾಗಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆಗಸ್ಟ್‌ನಲ್ಲಿ ನನ್ನ ಬಂಧನವಾಗುವವರೆಗೂ ನಾನು ಅದರ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಆದರೆ ಸರಕಾರ ಹೇಳುವಂತೆ ದಕ್ಷಿಣ ಆಫ್ರಿಕಾ ಸಂಘಟನೆಗಳು ಕಮ್ಯುನಿಸ್ಟರ ಪ್ರಭಾವದಿಂದ ನಡೆಯುತ್ತಿವೆ ಎನ್ನುವುದು ಸರಿಯಲ್ಲ. ನಾನು ಒಬ್ಬ ವ್ಯಕ್ತಿಯಾಗಿ, ನಾಯಕನಾಗಿ ನನ್ನ ದೇಶಕ್ಕೆ ಮಾಡಬೇಕಾದುದನ್ನು ಮಾಡಿದ್ದೇನೆ. ದಕ್ಷಿಣ ಆಫ್ರಿಕಾದಲ್ಲಿನ ನನ್ನ ಅನುಭವ, ಮತ್ತು ಆಫ್ರಿಕಾದ ಹಿನ್ನೆಲೆಯಾಧಾರದಿಂದ ನನ್ನ ಕೆಲಸ ನಾನು ಹೆಮ್ಮೆಯಿಂದ ಮಾಡಿರುವೆ. ನನ್ನ ಬಾಲ್ಯದಲ್ಲಿ ಟ್ರಾನ್ಸ್ಕೆಯಿ ಯಲ್ಲಿ ನನ್ನ ಬುಡಕಟ್ಟಿನ ಹಿರಿಯರು ಹೇಳಿದ ಕಥೆಗಳ ಆಧಾರದ ಮೇಲೆ, ಅವುಗಳಲ್ಲಿ ನಮ್ಮ ಪೂರ್ವಜರು ತಾಯ್ನಿಡಿನ ರಕ್ಷಣೆಗೆ ಮಾಡಿದ ಯುದ್ಧಗಳು ನನಗೆ ಪ್ರೇರಣೆಯಾಗಿವೆ. ಡಿಂಗೇನ್, ಬಾಂಬಾಥಾ, ಹಿಂಸ್ಟಾ, ಮಕಾನ್ನಾ, ಸುಕಂಥಿ, ದಳಸೇಲ್, ಮೊಶಹೋಶೋ, ಸೆಖು ಖುನಿ ಹೆಸರುಗಳು ಇಡೀ ಆಫ್ರಿಕನ್ ರಾಷ್ಟ್ರದ ಹೆಮ್ಮೆ ಮತ್ತು ಘನತೆ ಎಂದು ಪ್ರಶಂಸಿಸಲ್ಪಡುತ್ತವೆ. ನನ್ನ ಬದುಕನ್ನು ನನ್ನ ಜನರಿಗಾಗಿ ಕೊಡುಗೆ ನೀಡಲು ಅವಕಾಶ ದೊರಕುತ್ತದೆಂದು ನಾನು ಆಶಿಸುತ್ತೇನೆ...
ಇವೆಲ್ಲದರ ಕಾರಣಗಳಿಂದಲೇ ನಾನು ಮೇಲಿನ ಆರೋಪಗಳನ್ನು ಮಾಡಲು ಕಾರಣವಾಗಿದೆ. ಇದುವರೆಗೂ ನ್ಯಾಯಾಲಯ ಹೇಳಿರುವ ವಿಷಯಗಳಲ್ಲಿ ಕೆಲವು ನಿಜವಾದರೆ ಕೆಲವು ಸುಳ್ಳು ಅಪವಾದಗಳಾಗಿವೆ. ಆದರೆ ನಾನು ವಿಧ್ವಂಸಕ ಯೋಜನೆಗಳನ್ನು ಮಾಡಿದ್ದು ಮಾತ್ರ ನಿಜ. ಆದರೆ ಜನರನ್ನು ಕೊಲ್ಲುವ ಅಥವಾ ಹಿಂಸಾಚಾರ ಮಾಡುವ ಯೋಚನೆ ನನಗೆ ಇರಲಿಲ್ಲ. ಇದೆಲ್ಲವನ್ನು ಶಾಂತಚಿತ್ತ ಮತ್ತು ಗಂಭೀರವಾಗಿ ಆಲೋಚಿಸಿಯೇ ಕಾರ್ಯಯೋಜನೆಯನ್ನು ಮಾಡಲಾಗಿತ್ತು. ನನ್ನ ಜನರು ಬಿಳಿಯರಿಂದ ಬಹುವಿಧದ ದಬ್ಬಾಳಿಕೆಗೆ ಒಳಗಾಗಿದ್ದಾರೆ. ನಾವು ಬೇಜವಾಬ್ದಾರಿಯಿಂದ ವರ್ತಿಸಿಲ್ಲ ಅಥವಾ ಹಿಂಸಾಚಾರವನ್ನು ಮಾಡುವ ಭಾವನೆಯನ್ನು ಹೊಂದಿರಲಿಲ್ಲ. ನಾವು, ಎಎನ್‌ಸಿ ಯಾವಾಗಲೂ ಅವರ್ಣಭೇದ ಪ್ರಜಾಪ್ರಭುತ್ವದ ಪರವಾಗಿ ನಿಂತುಕೊಂಡಿದ್ದೆವು. ಕಳೆದ 50 ವರ್ಷಗಳಿಂದ ಅಹಿಂಸೆಯ ಪರವಾಗಿ ಹೋರಾಡಿದರೂ ಆಫ್ರಿಕನ್ನರಿಗೆ ದೊರಕಿದ್ದು ದಬ್ಬಾಳಿಕೆಯ ಶಾಸನಗಳೇ ಹೊರತು ಹಕ್ಕುಗಳು ತೀರಾ ಕಡಿಮೆ. ಈ ನ್ಯಾಯಾಲಯಕ್ಕೆ ಅದು ಸುಲಭವಾಗಿ ಅರ್ಥವಾಗ ಲಾರದು. ಜನರು ಬಹಳ ಹಿಂದಿನಿಂದಲೇ ಹಿಂಸಾಚಾರದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಆದರೆ, ನಾವು ಎಎನ್‌ಸಿ ಜನರು ಅದಕ್ಕೆ ಅವಕಾಶ ಕೊಡದೆ ಇದುವರೆಗೂ ನಮ್ಮ ಜನರನ್ನು ತಡೆ ಹಿಡಿದಿದ್ದೆವು. ಹಿಂಸೆ ಇಲ್ಲದೆ ಅಹಿಂಸಾತ್ಮಕವಾಗಿ ಸ್ವಾತಂತ್ರ ಗಳಿಸಲು ಕೊನೆಗೆ ಸಾಧ್ಯ ವಾಗದೇ ಹೋಗಿ 1961ರಲ್ಲಿ ಉಮ್ಖೋಂಟೊ ರಚನೆಯಾಯಿತು.
ನಾವು ಈ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ ಈ ದೇಶದಲ್ಲಿ ಬಿಳಿಯರು ಮತ್ತು ಕಪ್ಪು ಜನರ ಮಧ್ಯೆ ಯುದ್ಧವಾಗುವ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಅಂತರ್ಯುದ್ಧ ನಡೆದರೆ ಎಎನ್‌ಸಿಯ ಜನಾಂಗೀಯ ಶಾಂತಿಯ ಉದ್ದೇಶ ಮಣ್ಣುಪಾಲಾಗುತ್ತಿತ್ತು. ಅದರಿಂದ ಮುಂದೆ ಶಾಂತಿ ಸ್ಥಾಪನೆಯಾಗಲು ಸಾಧ್ಯವಿಲ್ಲದೇ ಹೋಗು ತ್ತಿತ್ತು. ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಇಂತಹ ಯುದ್ಧಗಳಿಂದ ಶಾಂತಿ ಕದಡಿಹೋಗಿದೆ. ದಕ್ಷಿಣ ಆಫ್ರಿಕಾದ (ಆ್ಯಂಗ್ಲೋ-ಬೋಯರ್) ಯುದ್ಧದ ಕಪ್ಪು ಚುಕ್ಕೆಗಳು ಮಾಯವಾಗಲು 50 ವರ್ಷಗಳು ತೆಗೆದುಕೊಂಡಿತ್ತು. ಅಂತರ್‌ಜನಾಂಗೀಯ ಯುದ್ಧದ ಕಲೆಗಳು ಮಾಯ ವಾಗಲು ಎಷ್ಟು ವರ್ಷಗಳು ತೆಗೆದುಕೊಳ್ಳು ತ್ತವೊ ಏನೋ? ಎರಡೂ ಕಡೆ ಯಾವುದೇ ಸಾವು ನೋವುಗಳಿಲ್ಲದೆ ನಮ್ಮ ಹಕ್ಕುಗಳನ್ನು ನಾವು ಪಡೆಯ ಲಾರವೆ? ನಮ್ಮ ಮೊದಲ ಪ್ರಯತ್ನಗಳಿಗೆ ಬಿಳಿಯರು ಯಾವ ಬೆಲೆಯೂ ನೀಡಲಿಲ್ಲ. ನಾವು ಮಾಡಿದ ವಿಧ್ವಂಸಕ ಯೋಜನೆ ಗಳಿಗೆ ಮರಣದಂಡನೆಯಂತಹ ಶಿಕ್ಷೆಗಳನ್ನು ಘೋಷಿಸಿದರು.
ನಮಗೆ ನಾಗರಿಕ ಯುದ್ಧಗಳು ಬೇಕಿಲ್ಲ. ನಮಗೆ ಅನುಭವ ಹೇಳಿಕೊಟ್ಟಿ ರುವ ಪಾಠವೆಂದರೆ ನಮ್ಮ ಹೋರಾಟದಿಂದ ಬಿಳಿಯರ ಸರಕಾರ ನಮ್ಮ ಜನರನ್ನು ವಿವೇಚನೆ ಇಲ್ಲದೆ ಹತ್ಯೆ ಮಾಡುತ್ತಾ ಬಂದಿರುವುದು. ಈಗಾಗಲೇ ನಮ್ಮ ಮಣ್ಣು ಮುಗ್ಧ ಜನರ ರಕ್ತದಿಂದ ತೊಯ್ದಿದೆ. ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಾದರೆ ನಮ್ಮ ರಕ್ಷಣೆಗೆ ನಾವು ಸಿದ್ಧ ಮಾಡಿಕೊಳ್ಳಬೇಕಿದೆ. ಯುದ್ಧ ಅನಿವಾರ್ಯವಾದರೆ ನಮ್ಮ ಜನರಿಗೆ ಅನುಕೂಲಕರವಾದ ರೀತಿಯಲ್ಲಿ ಹೋರಾಟ ನಡೆಸುವ ಹಾದಿಗಳನ್ನು ಕಂಡುಕೊಳ್ಳಬೇಕಾಗಿದೆ. ಅದಕ್ಕಾಗಿ ನಾವು ಗೆರಿಲ್ಲಾ ಯುದ್ಧವನ್ನು ಮಾಡಲು ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಎಲ್ಲ ಬಿಳಿಯರು ಕಡ್ಡಾಯವಾಗಿ ಮಿಲಿಟರಿ ತರಬೇತಿಗಳನ್ನು ಪಡೆಯುತ್ತಾರೆ. ಆದರೆ ನಮಗೆ ಆ ಅವಕಾಶ ನೀಡುತ್ತಿಲ್ಲ. ಇದೇ ಹಂತದಲ್ಲಿ ನಾವು (PAFMECSA) ಸಮ್ಮೇಳನದಲ್ಲಿ ಭಾಗವಹಿಸಿ ಮಿಲಿಟರಿ ತರಬೇತಿ ಪಡೆಯಲು ದೇಶ ಬಿಟ್ಟು ಹೋಗಬೇಕಾಯಿತು.
(ಮುಂದುವರಿಯುತ್ತದೆ)