ಕಲ್ಲಕುರಿಚ್ಚಿ ಹಿಂಸಾಚಾರ: ವಿದ್ಯಾರ್ಥಿನಿಯ ಮೃತದೇಹದ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಆದೇಶ

Update: 2022-07-18 18:11 GMT

ಚೆನ್ನೈ, ಜು. ೧೮: ಕಲ್ಲಕುರಿಚ್ಚಿಯ ಖಾಸಗಿ ಶಾಲೆಯಲ್ಲಿ ಜುಲೈ ೧೩ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ೧೨ನೇ ತರಗತಿಯ ವಿದ್ಯಾರ್ಥಿನಿಯ ಮೃತದೇಹವನ್ನು ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರೂಪಿಸುವಂತೆ ಹಾಗೂ ಜುಲೈ ೧೭ರಂದು ನಡೆದ ಹಿಂಸಾಚಾರಕ್ಕೆ ಹೊಣೆಗಾರರಾಗಿರುವವರನ್ನು ಗುರುತಿಸಿ ಬಂಧಿಸುವಂತೆ ಕೂಡ ನ್ಯಾಯಮೂರ್ತಿ ಎನ್. ಸತೀಶ್ ಕುಮಾರ್ ಅವರು ತಮಿಳುನಾಡು ಸರಕಾರಕ್ಕೆ ನಿರ್ದೇಶಿಸಿದ್ದಾರೆ. 
ತನ್ನ ಪುತ್ರಿಯ ಸಾವಿನಲ್ಲಿ ಕೃತ್ರಿಮತೆ ಇರುವುದರಿಂದ ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಕೋರಿ ಬಾಲಕಿಯ ತಂದೆ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. 

ಮನವಿಯ ವಿಚಾರಣೆ ಸಂದರ್ಭ ನ್ಯಾಯಮೂರ್ತಿ ಸತೀಶ್ ಕುಮಾರ್, ಜುಲೈ ೧೭ರಂದು ನಡೆದ ಹಿಂಸಾಚಾರದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದರು. ಶಾಲೆಯಲ್ಲಿರುವ ೪,೫೦೦ ವಿದ್ಯಾರ್ಥಿಗಳ ವರ್ಗಾವಣೆ ಪತ್ರವನ್ನು ದಹಿಸಲು ಗುಂಪಿಗೆ ಅನುಮತಿ ಕೊಟ್ಟವರು ಯಾರು ಎಂಬದು ಅಚ್ಚರಿಯಾಗುತ್ತಿದೆ ಎಂದರು. 
‘‘ಪೊಲೀಸರು ಯಾರೊಬ್ಬರ ನಿಯಂತ್ರಣದಲ್ಲಿ ಕೂಡ ಇಲ್ಲ. ಅವರು ಕಾನೂನು ಜಾರಿಗೊಳಿಸಬೇಕು. ಈ ನ್ಯಾಯಾಲಯ ತನಿಖೆಯ ಮೇಲ್ವಿಚಾರಣೆ ನಡೆಸಲಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News