ಕಲ್ಲಕುರುಚಿ ವಿದ್ಯಾರ್ಥಿನಿ ಸಾವು: ಮರು ಮರಣೋತ್ತರ ಪರೀಕ್ಷೆಯನ್ನು ತಡೆಯಲು ಸುಪ್ರೀಂ ಕೋರ್ಟ್ ನಕಾರ

Update: 2022-07-19 14:45 GMT

ಕಲ್ಲಕುರುಚಿ (ತ.ನಾ.),ಜು.19: ಮದ್ರಾಸ್ ಉಚ್ಚ ನ್ಯಾಯಾಲಯವು ಆದೇಶಿಸಿರುವ ತನ್ನ ಪುತ್ರಿಯ ಮರು ಮರಣೋತ್ತರ ಪರೀಕ್ಷೆಗೆ ತಡೆಯನ್ನು ನೀಡುವಂತೆ ಕೋರಿ ಕಲ್ಲಕುರಿಚಿಯಲ್ಲಿ ಸಾವಿಗೀಡಾಗಿರುವ ಶಾಲಾ ವಿದ್ಯಾರ್ಥಿನಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಕಲ್ಲಕುರುಚಿ ಸಮೀಪದ ಚಿನ್ನೇಲಮ್ನ ಕಾಣಿಯಮೂರ ಶಕ್ತಿ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ಕುಡ್ಡಲೂರು ಜಿಲ್ಲೆಯ ಪೆರಿಯನಸಲೂರ ಗ್ರಾಮದ 17ರ ಹರೆಯದ ವಿದ್ಯಾರ್ಥಿನಿ ಜು.13ರಂದು ಹಾಸ್ಟೆಲ್ ನ ಆವರಣದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. 

ಹಾಸ್ಟೆಲ್ ನ ಮೂರನೇ ಅಂತಸ್ತಿನಲ್ಲಿಯ ಕೋಣೆಯಲ್ಲಿ ವಾಸವಿದ್ದ ವಿದ್ಯಾರ್ಥಿನಿ ತುತ್ತತುದಿಯ ಅಂತಸ್ತಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಪೋಷಕರು ಸಾವಿಗೆ ಮುಂಚೆ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಜು.14ರಂದು ನಡೆಸಲಾದ ಮೊದಲ ಮರಣೋತ್ತರ ಪರೀಕ್ಷೆಯ ವರದಿಯು ತೀವ್ರ ಗಾಯಗಳಿಂದಾಗಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿತ್ತು. ಹೊಸದಾಗಿ ಮರಣೋತ್ತರ ಪರೀಕ್ಷೆಯನ್ನು ಕೋರಿ ವಿದ್ಯಾರ್ಥಿನಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಅಂಗೀಕರಿಸಿದ ಮದ್ರಾಸ್ ಉಚ್ಚ ನ್ಯಾಯಾಲಯವು ಮರು ಮರಣೋತ್ತರ ಪರೀಕ್ಷೆಗೆ ಆದೇಶಿಸಿತ್ತು. ನ್ಯಾ.ಎನ್.ಸತೀಶ್ ಕುಮಾರ್ ಅವರು ಯಾವುದೇ ತೊಂದರೆಯನ್ನುಂಟು ಮಾಡದೆ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಉಪಸ್ಥಿತರಿರಲು ವಿದ್ಯಾರ್ಥಿನಿಯ ತಂದೆ ಮತ್ತು ಅವರ ಪರ ವಕೀಲರಿಗೆ ಅನುಮತಿಯನ್ನೂ ನೀಡಿದ್ದರು.

ಮಂಗಳವಾರ ಮರು ಮರಣೋತ್ತರ ಪರೀಕ್ಷೆ ನಿಗದಿಯಾಗಿತ್ತು,ಆದರೆ ಅದನ್ನು ತಡೆಯುವಂತೆ ಕೋರಿ ವಿದ್ಯಾರ್ಥಿನಿಯ ತಂದೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ವಿದ್ಯಾರ್ಥಿನಿಯ ತಂದೆ ಮರಣೋತ್ತರ ಪರೀಕ್ಷೆಯ ತಂಡದಲ್ಲಿ ತನ್ನ ಆಯ್ಕೆಯ ವೈದ್ಯರ ಸೇರ್ಪಡೆಯನ್ನು ಕೋರಿದ್ದರು. ಆದರೆ ಅದನ್ನು ನಿರಾಕರಿಸಿದ್ದ ಉಚ್ಚ ನ್ಯಾಯಾಲಯವು ಖ್ಯಾತ ವೈದ್ಯ ಶಾಂತಕುಮಾರ್ ಅವರನ್ನು ಪರೀಕ್ಷಾ ತಂಡದಲ್ಲಿ ಸೇರಿಸಲಾಗಿದೆ ಎಂದು ತಿಳಿಸಿತ್ತು.
 ‌
ಮಂಗಳವಾರ ಬೆಳಿಗ್ಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಮುಂದೆ ವಿಷಯವನ್ನು ಪ್ರಸ್ತಾಪಿಸಿದ ವಕೀಲರು, ತುರ್ತು ವಿಚಾರಣೆಗೆ ಕೋರಿದ್ದರು. ಬುಧವಾರ ವಿಚಾರಣೆ ನಡೆಸಲು ನ್ಯಾ.ರಮಣ ಒಪ್ಪಿಕೊಂಡರಾದರೂ ಇಂದೇ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ವಕೀಲರು ತಿಳಿಸಿದರು. ಕ್ಷಮಿಸಿ,ಈ ವಿಷಯ ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿದೆ ಎಂದು ನ್ಯಾ.ರಮಣ ಹೇಳಿದರು.

ಮರಣೋತ್ತರ ಪರೀಕ್ಷೆಯನ್ನು ನಡೆಸುವ ವೈದ್ಯರ ತಂಡವನ್ನು ಉಚ್ಚ ನ್ಯಾಯಾಲಯವು ರಚಿಸಿದೆ ಎಂದು ತಮಿಳುನಾಡು ಸರಕಾರದ ಪರ ವಕೀಲರು ತಿಳಿಸಿದರು. ನಿಮಗೆ ಉಚ್ಚ ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲವೇ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದ ನ್ಯಾ.ರಮಣ,ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News