ಲುಲು ಮಾಲ್ ನಲ್ಲಿ ಪ್ರಾರ್ಥನೆ ವಿವಾದ: ಅನಗತ್ಯ ಹೇಳಿಕೆಗಳು, ಪ್ರತಿಭಟನೆಗಳ ವಿರುದ್ಧ ಕಠಿಣ ಕ್ರಮ;ಆದಿತ್ಯನಾಥ್ ಎಚ್ಚರಿಕೆ

Update: 2022-07-19 17:06 GMT

ಲಕ್ನೋ.ಜು.19: ಇಲ್ಲಿಯ ಲುಲು ಮಾಲ್‌ನಲ್ಲಿ  ಕೆಲವರು ಪ್ರಾರ್ಥನೆಗಳನ್ನು ಸಲ್ಲಿಸಿದ ವಿವಾದ ಕುರಿತಂತೆ ಮಂಗಳವಾರ ಮಾತನಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ  ಆದಿತ್ಯನಾಥ ಅವರು, ಅನಗತ್ಯ ಹೇಳಿಕೆಗಳು ಮತ್ತು ಜನರ ಚಲನವಲನಗಳಿಗೆ ಅಡ್ಡಿಯನ್ನುಂಟು ಮಾಡುವ ಪ್ರತಿಭಟನೆಗಳನ್ನು ನಡೆಸುವುದರ ವಿರುದ್ಧ ಎಚ್ಚರಿಕೆಯನ್ನು ನೀಡಿದ್ದಾರೆ.

ಲಕ್ನೋ ಆಡಳಿತವು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಂತಹ ಉಪದ್ರವಗಳನ್ನು ಸೃಷ್ಟಿಸಲು ಪ್ರಯತ್ನಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಆದಿತ್ಯನಾಥ ಹೇಳಿದರು. ಭಾರತೀಯ ಮೂಲದ ಬಿಲಿಯಾಧೀಶ ಯೂಸುಫ್ ಅಲಿ ಎಂಎ ಅವರ ಅಬುಧಾಬಿಯ ಲುಲು ಗ್ರುಪ್ ನಡೆಸುತ್ತಿರುವ ಮಾಲ್ ಅನ್ನು ಮುಖ್ಯಮಂತ್ರಿಗಳು ಜು.10ರಂದು ಉದ್ಘಾಟಿಸಿದ್ದರು.

ಜು.12ರಂದು ಲುಲು ಮಾಲ್‌ನಲ್ಲಿ ನಮಾಝ್ ಮಾಡಿದ್ದ ಎಂಟು ಮುಸ್ಲಿಮರ ಪೈಕಿ ನಾಲ್ವರನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಮಾಲ್‌ನಲ್ಲಿ  ನಮಾಝ್ ಮಾಡಿದ ವೀಡಿಯೊ ವೈರಲ್ ಆದ ಬಳಿಕ ಮತ್ತು ಸಾರ್ವಜನಿಕ ಸ್ಥಳವನ್ನು ಧಾರ್ಮಿಕ ಚಟುವಟಿಕೆಗಳಿಗೆ ಬಳಸುವ ಮೂಲಕ ಕೋಮು ಸೌಹಾರ್ದವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕೆಲವು ಹಿಂದು ಸಂಘಟನೆಗಳು ಆರೋಪಿಸಿದ ನಂತರ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಅಲ್ಲಿ ಹನುಮಾನ ಚಾಲೀಸಾ ಪಠಿಸಲು ಈ ಬಲಪಂಥೀಯ ಸಂಘಟನೆಗಳು ಅನುಮತಿ ಕೋರಿದ್ದವಾದರೂ ಅದನ್ನು ನಿರಾಕರಿಸಲಾಗಿತ್ತು.

ಜು.15ರಂದು ಪ್ರಾರ್ಥನೆ ನಡೆಸಲು ಯತ್ನಿಸಿದ್ದ ಮೂವರು ಹಿಂದುಗಳನ್ನು ಮತ್ತು ನಮಾಝ್ ಸಲ್ಲಿಸಲು ಪ್ರಯತ್ನಿಸಿದ್ದಕ್ಕಾಗಿ ಓರ್ವ ಮುಸ್ಲಿಮ್ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಮರುದಿನ 10ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು ಪ್ರಾರ್ಥನೆ ನಡೆಸಲು ಮತ್ತು ಘೋಷಣೆಗಳನ್ನು ಕೂಗಲು ಪ್ರಯತ್ನಿಸಿದ್ದಕ್ಕಾಗಿ ಇಬ್ಬರನ್ನು ಬಂಧಿಸಿದ್ದರು.

‘ಲುಲು ಮಾಲ್‌ನಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿ ಇಲ್ಲ ’ ಎಂಬ ಫಲಕವನ್ನು ಆಡಳಿತವು ಪ್ರದರ್ಶಿಸಿದೆ. ಮಾಲ್ ನ ಮಾಲಿಕರು ಮುಸ್ಲಿಮರ ಬಗ್ಗೆ ಪಕ್ಷಪಾತವನ್ನು ಹೊಂದಿದ್ದಾರೆ ಎಂಬ ಕೆಲವು ಸಂಘಟನೆಗಳ ಆರೋಪವನ್ನು ನಿರಾಕರಿಸಿರುವ ಆಡಳಿತ ವರ್ಗವು ತನ್ನಲ್ಲಿ ಉದ್ಯೋಗದಲ್ಲಿರುವವರ ಅಂಕಿಅಂಶಗಳನ್ನು ಒದಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News