ಇಂದು ಈಡಿ ಅಧಿಕಾರಿಗಳಿಂದ ಸೋನಿಯಾ ಗಾಂಧಿ ವಿಚಾರಣೆ, ದಿಲ್ಲಿಯಲ್ಲಿ ಕಾಂಗ್ರೆಸ್ ಭಾರೀ ಪ್ರತಿಭಟನೆ

Update: 2022-07-21 06:28 GMT
Photo:PTI

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ(ಈಡಿ)  ಮುಂದೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಮಹಿಳಾ ಅಧಿಕಾರಿಯ ನೇತೃತ್ವದಲ್ಲಿ ಐವರು ಅಧಿಕಾರಿಗಳು ಸೋನಿಯಾ ಅವರ ವಿಚಾರಣೆ ನಡೆಸಲಿದ್ದಾರೆ.

ಗುರುವಾರ ಜಾರಿ ನಿರ್ದೇಶನಾಲಯದ ಮುಂದೆ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಿಲ್ಲಿಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಸೋನಿಯಾ ಹಾಜರಾಗುವ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ  ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ  ಸೋನಿಯಾ ಅವರ ನಿವಾಸಕ್ಕೆ ತಲುಪಿದ್ದಾರೆ.ಈಡಿ ಕಚೇರಿಗೆ ತೆರಳಿದ ಸೋನಿಯಾ ಗಾಂಧಿಗೆ ರಾಹುಲ್ ಹಾಗೂ ಪ್ರಿಯಾಂಕಾ ಸಾಥ್ ನೀಡಿದರು.

ಈಡಿ ದುರುಪಯೋಗ ನಿಲ್ಲಿಸಿ ಎಂಬ ದೊಡ್ಡ ಬ್ಯಾನರ್‌ಗಳನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಇಂದು ಸಂಸತ್ತಿನ ಆವರಣದಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧ ಶಕ್ತಿ ಪ್ರದರ್ಶನ ನಡೆಸಿದರು.

ವಿರೋಧ ಪಕ್ಷದ ನಾಯಕರನ್ನು ಮೌನಗೊಳಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

"ಬಂಗಾಳ ಅಥವಾ ರಾಜಸ್ಥಾನದಲ್ಲಿ ಇರಲಿ, ಏಜೆನ್ಸಿಗಳು ಹಾಗೂ  ಸಮಯದ ಪಾತ್ರವು ತುಂಬಾ ಸ್ಪಷ್ಟವಾಗಿದೆ. ನಮ್ಮನ್ನು ಮೌನಗೊಳಿಸಲು, ನಮ್ಮನ್ನು ತಡೆಯಲು ಪಿತೂರಿ ನಡೆಯುತ್ತಿದೆ. ವಿರೋಧ ಪಕ್ಷದವರ ಬಾಯಿ ಮುಚ್ಚಿಸುವ ಉದ್ದೇಶ ಇದರಲ್ಲಿದೆ" ಎಂದು ಪಕ್ಷವು ಇಂದು ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News