ದೇವಾಲಯಗಳ ಕಾಮಗಾರಿಗಳಿಗೆ 116 ಕೋಟಿ ರೂ. ಅನುದಾನ ಮಂಜೂರು

Update: 2022-07-24 02:40 GMT

ರಾಜ್ಯದಲ್ಲಿ 175 ಎ ಗ್ರೇಡ್, 330 ಬಿ ಗ್ರೇಡ್ ಹಾಗೂ 34,700 ಸಿ ಗ್ರೇಡ್ ದೇಗುಲಗಳಿವೆ. 25 ಲಕ್ಷ ರೂ.ಗೂ ಅಧಿಕ ಆದಾಯವಿದ್ದರೆ ಎ ಗ್ರೇಡ್, 5 ರಿಂದ 25 ಲಕ್ಷ ರೂ. ಆದಾಯವಿದ್ದರೆ ಬಿ ಗ್ರೇಡ್ ಮತ್ತು 1 ರಿಂದ 5 ಲಕ್ಷ ರೂ. ಆದಾಯವಿದ್ದರೆ ಸಿ ಗ್ರೇಡ್ ಎಂದು ವರ್ಗೀಕರಿಸಲಾಗಿದೆ. ಎ ಗ್ರೇಡ್ ದೇವಸ್ಥಾನಗಳಿಂದ ಸಂಗ್ರಹವಾಗುವ ನಿಧಿಯಲ್ಲಿ ಶೇ.20ರಷ್ಟು ಅನುದಾನ ಪ್ರತ್ಯೇಕಗೊಳಿಸಿ ಸಿ ಗ್ರೇಡ್ ದೇಗುಲ ಜೀರ್ಣೋದ್ಧಾರಕ್ಕೆ ಕೊಡಲು ಈ ಹಿಂದೆ ನಿರ್ಧರಿಸಲಾಗಿತ್ತು ಎಂದು ತಿಳಿದು ಬಂದಿದೆ.

ಬೆಂಗಳೂರು, ಜು.24: ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ, ಸಾಕ್ಸ್ ಖರೀದಿಗೆ ಹೆಚ್ಚುವರಿ ಅನುದಾನ ಮತ್ತು  ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ 100 ದಿನಗಳಿಗೆ ಮೊಟ್ಟೆ ನೀಡಲು ಅನುಮತಿ ನೀಡದ ಆರ್ಥಿಕ ಇಲಾಖೆಯು ವಿಶೇಷ ಅನುದಾನದಡಿಯಲ್ಲಿ ವಿವಿಧ ದೇವಾಲಯಗಳ ಕಾಮಗಾರಿಗಳಿಗೆ 116 ಕೋಟಿ ರೂ. ಅನುದಾನ ಮಂಜೂರು ಮಾಡಲು ಯಾವುದೇ ತಕರಾರು ಇಲ್ಲದೆ ಸಹಮತಿ ವ್ಯಕ್ತಪಡಿಸಿದೆ. 

ಶಾಲಾ ಕಟ್ಟಡ, ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಅನುದಾನ ಒದಗಿಸಿಕೊಳ್ಳಲು ಸರಕಾರ ಮತ್ತು ಆರ್ಥಿಕ ಇಲಾಖೆ ಮೇಲೆ ಒತ್ತಡ ಹೇರದ ಸಚಿವರು, ಶಾಸಕರು ತಮ್ಮ ತಮ್ಮ ವಿಧಾನಸಭೆ ಕ್ಷೇತ್ರಗಳಲ್ಲಿನ ದೇವಾಲಯಗಳ ಜೀರ್ಣೋದ್ಧಾರ ಮತ್ತು ವಿವಿಧ ಕಾಮಗಾರಿಗಳಿಗೆ ತಲಾ ರೂ. ಒಂದು ಕೋಟಿಯಂತೆ ಅನುದಾನ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಧಾನಸಭೆ ಚುನಾವಣೆಗೆ 10 ತಿಂಗಳು ಬಾಕಿ ಇರುವಾಗಲೇ ನಗರ, ಗ್ರಾಮ, ಹೋಬಳಿ ವ್ಯಾಪ್ತಿಯಲ್ಲಿರುವ ದೇಗುಲಗಳಿಗೆ ಅನುದಾನ ಮಂಜೂರಾಗಿದೆ. 

ಅಲ್ಲದೆ, ಕೆಲವು ಶಾಸಕರು ತಮ್ಮ ವಿಧಾನಸಭೆ ಕ್ಷೇತ್ರಗಳಲ್ಲದೇ ಬೇರೆ ಕ್ಷೇತ್ರಗಳಲ್ಲಿರುವ ದೇವಾಲಯಗಳ ಕಾಮಗಾರಿಗಳಿಗೆ ಅನುದಾನವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಒಟ್ಟು ಬಿಡುಗಡೆಯಾಗಿರುವ 116 ಕೋಟಿ  ರೂ. ಅನುದಾನದಲ್ಲಿ ಬಿಜೆಪಿ ಶಾಸಕರು ಸಿಂಹಪಾಲು ಪಡೆದಿದ್ದಾರೆ. ಅಲ್ಲದೆ ಕೆಲ ಸಚಿವರು ಮತ್ತು ಶಾಸಕರಿಗೆ 3 ಕೋಟಿ ರೂ. ಮತ್ತು 1.50 ಕೋಟಿ ರೂ. ನೀಡಿರುವ ಸರಕಾರವು ಬಹುತೇಕ ಶಾಸಕರಿಗೆ ತಲಾ 1 ಕೋಟಿ ರೂ.ಯಂತೆ ಅನುದಾನ ಮಂಜೂರು ಮಾಡಿದೆ.  ರಾಜ್ಯ ಸರಕಾರವು ಈ ಸಂಬಂಧ   2022ರ ಜುಲೈ 21ರಂದು ಆದೇಶ ಹೊರಡಿಸಿದೆ. ಆದೇಶದ ಪ್ರತಿಯು ''ಣhe-ಜಿiಟe.iಟಿ''ಗೆ ಲಭ್ಯವಾಗಿದೆ. 

‘ಹಾಲಿ ಮತ್ತು ಮಾಜಿ ಸಚಿವರು, ಶಾಸಕರು ಮತ್ತು ಮಾಜಿ ಶಾಸಕರ ಕೋರಿಕೆ ಮೇರೆಗೆ ಒಟ್ಟು 105 ಆದೇಶಗಳನ್ನು ವಿಧಾನಸಭಾವಾರು ಆದೇಶ ಹೊರಡಿಸಲಾಗಿದೆ. ಮೂಲ ಅನುದಾನ 1500.00 ಲಕ್ಷ ರೂ. ಮತ್ತು 2022ರ ಜುಲೈ 1ರಂದು ಹೆಚ್ಚುವರಿಯಾಗಿ ಒದಗಿಸಿದ್ದ 3,000.00 ಲಕ್ಷ ರೂ.ಗಳ ಸೇರಿ ಒಟ್ಟು 4,500.00 ಲಕ್ಷ ರೂ. ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರು, ಶಾಸಕರ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ದೇವಸ್ಥಾನಗಳ ಜೀರ್ಣೋ ದ್ಧಾರಕ್ಕಾಗಿ ಮಂಜೂರು ಮಾಡಿರುವ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಮಾತ್ರ ಬಳಸಬೇಕು,’ ಎಂದು  ಆಡಳಿತ ಇಲಾಖೆಗೆ ತಿಳಿಸಿದೆ. 

2022ರ ಜುಲೈ 8ರಂದು ಆರ್ಥಿಕ ಇಲಾಖೆ ಹೊರಡಿಸಿದ್ದ ಆದೇಶದ ಪ್ರಕಾರ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಮಂಜೂರು ಮಾಡಿರುವ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಕೊರತೆಯಾಗಿರುವ 106.85 ಕೋಟಿ ರೂ. ಗಳನ್ನು ಸಾದಿಲ್ವಾರು ನಿಧಿಯಿಂದ ಬಿಡುಗಡೆ ಮಾಡಲು ಅನುಮೋದನೆ ನೀಡಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ. 

2022-23ನೇ ಸಾಲಿನಲ್ಲಿ ಆರ್ಥಿಕ ಇಲಾಖೆ ಸಹಮತಿಯಂತೆ ವಿಶೇಷ ಅನುದಾನದಡಿಯಲ್ಲಿ 105 ಸರಕಾರದ ಆದೇಶಗಳಲ್ಲಿ ವಿವಿಧ ವಿಧಾನಸಭೆ ಕ್ಷೇತ್ರಗಳ ದೇವಾಲಯಗಳ ಕಾಮಗಾರಿಗಳನ್ನು ಕೈಗೊಳ್ಳಲು ಮಂಜೂರಾತಿ ನೀಡಿ ಆದೇಶಿಸಲಾಗಿದ್ದು, ಈ ಆದೇಶಗಳಲ್ಲಿ ಮಂಜೂರು ಮಾಡಿದ 23.237.00 ಲಕ್ಷ ರೂ. ಅನುದಾನದಲ್ಲಿ ಮೊದಲನೇ ಕಂತಿನ ಶೇ. 50ರಷ್ಟು ಅನುದಾನವನ್ನು ಅಂದರೆ 11,618.00 ಲಕ್ಷ ರೂ.ಗಳನ್ನು ಅನುದಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ಬಿಡುಗಡೆಗೊಳಿಸಿದೆ.

ಶಾಸಕರ ಪಟ್ಟಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, (ಶಿಕಾರಿಪುರ) ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ( ಹುಬ್ಬಳ್ಳಿ ಧಾರವಾಡ ಸೆಂಟ್ರಲ್), ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ ಗ್ರಾಮಾಂತರ) ಶಶಿಕಲಾ ಜೊಲ್ಲೆ (ನಿಪ್ಪಾಣಿ) ಬಿ.ಸಿ.ನಾಗೇಶ್ (ತಿಪಟೂರು) ಅರಬೈಲು ಶಿವರಾಮ ಹೆಬ್ಬಾರ (ಯಲ್ಲಾಪುರ) ಆಚಾರ ಹಾಲಪ್ಪ ಬಸಪ್ಪ ( ಯಲಬುರ್ಗಾ), ಗೋವಿಂದ ಕಾರಜೋಳ (ಮುಧೋಳ), ಪ್ರಭು ಚವ್ಹಾನ್ (ಔರಾದ್) ಸಿ.ಪಿ.ಯೋಗೇಶ್ವರ್ (ಚನ್ನಪಟ್ಟಣ) ಮುಖ್ಯ ಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ (ಹೊನ್ನಾಳಿ), ಡಿ.ಎನ್. ಜೀವರಾಜ್ (ಕೊಪ್ಪ, ಶೃಂಗೇರಿ, ಎನ್.ಆರ್.ಪುರ)  ಎ.ಎಸ್.ಜಯರಾಮ್ (ತುರುವೇಕೇರೆ), ಪಿ.ರಾಜೀವ್ (ಕುಡಚಿ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ರಾಜೇಶ್‌ನಾಯ್ಕ್ (ಬಂಟ್ವಾಳ), ನರಸಿಂಹನಾಯಕ್ (ಸುರಪುರ), ಎಸ್.ವಿ. ರಾಮಚಂದ್ರ (ಜಗಳೂರು), ಎನ್.ಲಿಂಗಣ್ಣ (ಮಾಯಕೊಂಡ), ಡಾ.ಅವಿನಾಶ್‌ಜಾಧವ್ (ಚಿಂಚೋಳಿ), ಅಪ್ಪಚ್ಚು ರಂಜನ್ (ಮಡಿಕೇರಿ), ಬಿ.ಎಂ.ಸುಕುಮಾರಶೆಟ್ಟಿ (ಬೈಂದೂರು), ರೂಪಾಲಿನಾಯಕ್ (ಕಾರವಾರ), ಎಚ್.ಹಾಲಪ್ಪ ಹರತಾಳ್ (ಸಾಗರ), ಎಂ.ಚಂದ್ರಪ್ಪ (ಹೊಳಲ್ಕೆರೆ), ಎನ್.ಮಹೇಶ್ (ಕೊಳ್ಳೆಗಾಲ), ಸಂಜೀವ ಮಠಂದೂರು (ಪುತ್ತೂರು), ಜ್ಯೋತಿಗಣೇಶ್ (ತುಮಕೂರು ನಗರ), ಅಭಯಪಾಟೀಲ್ (ಬೆಳಗಾವಿ ದಕ್ಷಿಣ), ಜಿ.ಸೋಮಶೇಖರ ರೆಡ್ಡಿ (ಬಳ್ಳಾರಿ ನಗರ), ಬಸನಗೌಡ ಆರ್. ಪಾಟೀಲ್ (ವಿಜಾಪುರ ನಗರ), ರೂಪಾಲಿ ಸಂತೋಷ್ ನಾಯಕ್ (ಶಿರಸಿ ಸಿದ್ದಾಪುರ), ಡಾ.ಭರತ್ ಶೆಟ್ಟಿ (ಮಂಗಳೂರು ನಗರ ಉತ್ತರ) ಸಿ.ಟಿ.ರವಿ (ಚಿಕ್ಕಮಗಳೂರು) ಡಿ.ವೇದವ್ಯಾಸ ಕಾಮತ್ (ಮಂಗಳೂರು ದಕ್ಷಿಣ), ನೆಹರು ಓಲೆಕಾರ (ಹಾವೇರಿ) ಲಕ್ಷ್ಮೀಹೆಬ್ಬಾಳ್ಕರ್ ( ಬೆಳಗಾವಿ ಗ್ರಾಮೀಣ), ಎಸ್. ವಿ.ರಾಮಚಂದ್ರ (ದಾವಣಗೆರೆ ಉತ್ತರ), ಪ್ರೀತಮ್ ಜೆ.ಗೌಡ (ಹಾಸನ), ಅರವಿಂದ ಬೆಲ್ಲದ (ಹುಬ್ಬಳ್ಳಿ ಧಾರವಾಡ ಪಶ್ಚಿಮ), ಬೆಳ್ಳಿ ಪ್ರಕಾಶ್ (ಕಡೂರು), ಕೆ.ಮಾಡಾಳ್ ವಿರೂಪಾಕ್ಷಪ್ಪ (ಚನ್ನಗಿರಿ), ಎನ್.ವೈ.ಗೋಪಾಲಕೃಷ್ಣ (ಕೂಡ್ಲಿಗಿ), ಕೆ.ಜೆ.ಬೋಪಯ್ಯ (ವಿರಾಜಪೇಟೆ), ಬಿ.ಹರ್ಷವರ್ಧನ್ (ನಂಜನಗೂಡು), ನೆಹರು ಓಲೇಕಾರ್ (ಹಾವೇರಿ), ಜಿ ಕರುಣಾಕರರೆಡ್ಡಿ (ಹರಪನಹಳ್ಳಿ) ಎಸ್ ಕುಮಾರ ಬಂಗಾರಪ್ಪ (ಸೊರಬ) ಗೂಳಿಹಟ್ಟಿ ಶೇಖರ್ (ಹೊಸದುರ್ಗ), ಎ.ಎಸ್. ಪಾಟೀಲ್ ನಡಹಳ್ಳಿ (ಮುದ್ದೇಬಿಹಾಳ), ರೂಪಾಲಿ ಸಂತೋಷ್ ನಾಯಕ್ (ಕುಮಟಾ ಹೊನ್ನಾವರ, ಭಟ್ಕಳ), ಎಸ್.ಎ.ರಾಮದಾಸ್ (ಕೃಷ್ಣರಾಜ), ಎಂ.ಪಿ.ಕುಮಾರಸ್ವಾಮಿ (ಮೂಡಿಗೆರೆ), ಎಸ್.ಆರ್.ವಿಶ್ವನಾಥ್(ಯಲಹಂಕ) ಡಾ.ಸಿ.ಎಂ.ರಾಜೇಶ್‌ಗೌಡ (ಶಿರಾ), ಲಾಲಾಜಿ ಆರ್.ಮಂಡನ್ ( ಕಾಪು-ಉಡುಪಿ), ಎಚ್ ನಾಗೇಶ್ (ಮುಳಬಾಗಿಲು), ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ), ಶ್ರೀಮಂತ ಬಾಳಾ ಸಾಹೇಬ್ ಪಾಟೀಲ್ (ಕಾಗವಾಡ), ಅನಿಲ್ ಎಸ್.ಬೆನಕೆ (ಬೆಳಗಾವಿ ಉತ್ತರ) ತಲಾ 1 ಕೋಟಿ ರೂ. ಅನುದಾನ ಮಂಜೂರಾಗಿದೆ. 

ರಾಜ್ಯದಲ್ಲಿ 34 ಸಾವಿರ ರೂ.ಗಿಂತ ಕಡಿಮೆ ಆದಾಯವಿರುವ ಸಿ. ಗ್ರೇಡ್ ದೇವಸ್ಥಾನಗಳಿವೆ. ಕೆಲವು  ಹಳ್ಳಿಗಳಲ್ಲಿರುವ ದೇಗುಲಗಳು ನಿರ್ವಹಣೆಗೆ ಅನುದಾನದ ಕೊರತೆ ಎದುರಿಸುತ್ತಿವೆ.  ದೇಗುಲಗಳ ಜೀರ್ಣೋದ್ಧಾರ, ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅರ್ಚಕರು ಮತ್ತು ಗ್ರಾಮಗಳ ಮುಖಂಡರು ಅನುದಾನ ಮಂಜೂರು ಮಾಡಿಸಲು  ಶಾಸಕರ ಮೇಲೆ ಒತ್ತಡ ಹೇರಿದ್ದರು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News