ಪತ್ರಕರ್ತರ ಬಾಯಿ ಮುಚ್ಚಿಸಲು ಪೊಲೀಸರ ಮೇಲೆ ಒತ್ತಡ: ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೇರ್
ದ್ವೇಷ ಭಾಷಣಕಾರರ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ದಿಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕನ್ನಡಿಗ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಬೆಂಗಳೂರಿನ ಮುಹಮ್ಮದ್ ಝುಬೇರ್ ಅವರು ನ್ಯಾಯಯುತ ಪ್ರತಿಕೋದ್ಯಮದ ಮೇಲಿನ ಪ್ರಭುತ್ವದ ದಾಳಿ ಕುರಿತು 'ವಾರ್ತಾಭಾರತಿ’ಯೊಂದಿಗಿನ ಮುಖಾಮುಖಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಾರ್ತಾಭಾರತಿ: ನಿಮ್ಮನ್ನು ಬಂಧಿಸಿದ ಪ್ರಕರಣದ ಬಗ್ಗೆ ನೀವು ಹೇಳಲು ಬಯಸುತ್ತೀರಿ ?
ಝುಬೇರ್: ನನ್ನ ಮೇಲೆ ದಾಖಲಾದ ಪ್ರಕರಣ ಯಾವುದೇ ಗಂಭೀರತೆ ಹೊಂದಿಲ್ಲ, ಇದರಲ್ಲಿ ದೂರುದಾರರ ಹಿನ್ನೆಲೆ ಸ್ಪಷ್ಟವಾಗಿಲ್ಲ. ಕೇವಲ ನನ್ನನ್ನು ಬಂಧಿಸುವ ಸಲುವಾಗಿಯೇ ಮೊಕದ್ದಮೆ ದಾಖಲಿಸಲಾಗಿದೆ ಎಂದೇ ಭಾವಿಸುತ್ತೇನೆ.
ವಾ.ಭಾ: ಟ್ವೀಟ್ ಸಂಬಂಧ ಬಂಧನಕ್ಕೆ ಒಳಗಾಗುವ ಮೊದಲೂ ನೀವು ವಿಚಾರಣೆ ಎದುರಿಸಿದ್ದು ಉಂಟೇ?
ಝುಬೇರ್: ನಾಲ್ಕು ವರ್ಷಗಳ ಹಿಂದೆ, ಅಂದರೆ 2018ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದ್ದ ಒಂದು ಸಣ್ಣ ಬರಹವನ್ನೆ ಇಟ್ಟುಕೊಂಡು ನನ್ನ ಮೇಲೆ ಮೊಕದ್ದಮೆ ದಾಖಲಿಸಿದರು. ಇದಾದ ಬಳಿಕ ಮೊನ್ನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಇಲ್ಲದೆ, ನನ್ನನ್ನು ಬಂಧಿಸಿ, ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಇದು ಒಂದು ರೀತಿಯ ದಬ್ಬಾಳಿಕೆ ಆಗಿದೆ.
ವಾ.ಭಾ: ನಿಮ್ಮ ಮೇಲೆ ಇಲ್ಲಿಯವರೆಗೆ ಒಟ್ಟು ಎಷ್ಟು ಮೊಕದ್ದಮೆ ದಾಖಲಾಗಿವೆ?
ಝುಬೇರ್: ಹಿಂದಿನಿಂದಲೂ ಕೆಲ ಸಂಘ-ಸಂಸ್ಥೆಗಳು ನನ್ನನ್ನು ಗುರಿಯಾಗಿಸಿಕೊಂಡು ದೂರುಗಳನ್ನು ನೀಡುವ ಕೆಲಸ ಮಾಡುತ್ತಿವೆ. ಸದ್ಯಕ್ಕೆ ನನ್ನ ಮೇಲೆ ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚು ಮೊಕದ್ದಮೆ ದಾಖಲಿಸಿರುವುದು ಅಚ್ಚರಿ ತಂದಿದೆ. ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ 4, ಹೊಸದಿಲ್ಲಿಯಲ್ಲಿ 2, ಮಧ್ಯಪ್ರದೇಶದಲ್ಲೀ 1 ಪ್ರಕರಣ ದಾಖಲಾಗಿದೆ.
ವಾ.ಭಾ: ಸುಳ್ಳು ಸುದ್ದಿ ಹಬ್ಬಿಸುವವರಿಗೆ ಕಡಿವಾಣ ಇಲ್ಲವೇ?
ಝುಬೇರ್: ಸುಳ್ಳು ಸುದ್ದಿಗಳಿಂದ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆದುಕೊಳ್ಳುತ್ತಿವೆ. ಹೀಗಾಗಿಯೇ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರ ವಿರುದ್ಧ ಯಾರೇ ಧ್ವನಿ ಎತ್ತಿದರೂ, ಅವರಿಗೆ ಬೆದರಿಕೆ, ಜೈಲು ತಪ್ಪಿದ್ದಲ್ಲ.
ವಾ.ಭಾ: ನಿಮ್ಮ ಬ್ಯಾಂಕ್ ಖಾತೆಗೆ ಠೇವಣಿ ಜಮೆ ಕುರಿತ ಗಂಭೀರ ಆರೋಪವಿದೆ. ಇದರ ಬಗ್ಗೆ ನೀವು ಏನು ಹೇಳುತ್ತೀರಿ ?
ಝುಬೇರ್: ನನ್ನ ವೈಯಕ್ತಿಕ ಖಾತೆ ಅಲ್ಲ, ಅದು ಸಂಸ್ಥೆಯ ಖಾತೆ. ಚಂದಾದಾರರು ನೀಡಿರುವ ಹಣ ಒಂದೇ ಬಾರಿ ಬಂದಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಆದರೆ, ಕೆಲವರು ನನಗೆ ವಿದೇಶಗಳಿಂದ ಹಣ ಬಂದಿದೆ ಎಂದು ಅಪಪ್ರಚಾರ ನಡೆಸಿದ್ದಾರೆ.
ವಾ.ಭಾ: ಸುಳ್ಳು ಪ್ರಕರಣಗಳ ವಿರುದ್ಧ ನಿಮ್ಮ ಅಭಿಪ್ರಾಯವೇನು?
ಝುಬೇರ್: ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಕುರಿತು ಕಾನೂನು ಹೋರಾಟ ನಡೆಸುವ ಮೂಲಕ ಉತ್ತರ ನೀಡುವೆ. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳ ಮೇಲೆ ಪ್ರಕರಣ ದಾಖಲಿಸುವಲ್ಲಿ ಕೆಲವೊಂದು ಕಡೆ ಪೊಲೀಸರು ಒತ್ತಡಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ವಾ.ಭಾ: ನಿಮ್ಮನ್ನು ಗುರಿಯಾಗಿಸಿ ಬಂಧಿಸಿರುವ ಆರೋಪ ಕುರಿತು ಸರಕಾರಕ್ಕೆ ಏನು ಹೇಳಲು ಇಚ್ಛಿಸುತ್ತೀರಿ?
ಝುಬೇರ್: ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಕೋಮುಗಲಭೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾದ ಸರಕಾರ, ಪೊಲೀಸರೇ ಮೌನ ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಇದಕ್ಕೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದು ನನ್ನ ತಪ್ಪೇ ಎಂದು ಸರಕಾರವನ್ನು ಕೇಳುತ್ತೇನೆ.
ವಾ.ಭಾ: ಬಂಧನದಿಂದ ನೀವು ಭಯಭೀತರಾಗಿದ್ದೀರಾ?
ಝುಬೇರ್: ನನಗೆ ಈ ವ್ಯವಸ್ಥೆಯಿಂದ ಯಾವ ರೀತಿಯ ಭಯ ಇಲ್ಲ. ಏಕೆಂದರೆ ಸತ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ. ಈ ದೇಶದ ಸಂವಿಧಾನದ ಬಗ್ಗೆ ಗೌರವವಿದೆ, ಕಾನೂನಿನ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ.
ವಾ.ಭಾ: ಬಂಧನದ ಹಿಂದೆ ನ್ಯಾಯಯುತ ಪತ್ರಕರ್ತರ ಬಾಯಿ ಮುಚ್ಚಿಸುವ ಷಡ್ಯಂತ್ರ ಇದೆಯೇ?
ಝುಬೇರ್: ಕೇಂದ್ರ ಸರಕಾರ ಹಾಗೂ ಕೆಲ ಸಂಘ ಸಂಸ್ಥೆಗಳು, ಯಾರು ತಮ್ಮ ಸಿದ್ಧಾಂತ, ಸುಳ್ಳುಗಳ ವಿರುದ್ಧ ಧ್ವನಿ ಎತ್ತುತ್ತಾರೋ ಅವರನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುವ ಕೆಲಸ ಮಾಡುತ್ತಾರೆ. ಆದರೆ, ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಸತ್ಯದ ಹಾದಿಯಲ್ಲಿ ಆತ್ಮವಿಶ್ವಾಸದಿಂದ ನಡೆದರೆ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ.