ಹೆಪಟೈಟಿಸ್ ನಿರ್ಲಕ್ಷ ಬೇಡ

Update: 2022-07-28 06:15 GMT

ಚಿಕಿತ್ಸೆ ಹೇಗೆ?

ಹೆಪಟೈಟಿಸ್ ಬಿ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆಯನ್ನು ತಗ್ಗಿಸುವ ಹಲವಾರು ಔಷಧಿಗಳು ಲಭ್ಯವಿದೆ. ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಅದು ಮತ್ತಷ್ಟು ಹಾಳಾಗದಂತೆ ತಡೆಯುವ ಔಷಧಿಗಳು ಲಭ್ಯವಿದೆ. ಯಕೃತ್ತಿಗೆ ಮಾರಕವಾಗುವ ಔಷಧಿಗಳು, ಮದ್ಯಪಾನ, ಜಂಕ್ ಆಹಾರಗಳು, ಕರಿದ ತಿಂಡಿಗಳು ಮುಂತಾದವುಗಳನ್ನು ವರ್ಜಿಸಿ ದೇಹದ ರಕ್ಷಣಾ ವ್ಯವಸ್ಥೆಗೆ ಪೂರಕವಾದ ಆಹಾರ ಮತ್ತು ಔಷಧಿ ಸೇವಿಸಬೇಕು. ಕೃತ್ತು ಸಂಪೂರ್ಣವಾಗಿ ಹಾಳಾಗಿ ಸಿರ್ಹೋಸಿಸ್ ರೋಗ ಅಂತಿಮ ಹಂತ ತಲುಪಿದ್ದಲ್ಲಿ ಯಕೃತ್ತಿನ ಕಸಿ ಮಾಡಬೇಕಾದೀತು.

ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ, ವರ್ಷವೊಂದರಲ್ಲಿ ಹೆಪಟೈಟಿಸ್ ರೋಗದಿಂದಾಗಿ ಜೀವ ಕಳೆದುಕೊಳ್ಳುತ್ತಿರುವುದು ಬಹಳ ಕಳವಳಕಾರಿ ಬೆಳವಣಿಗೆಯಾಗಿದೆ. ಭಾರತ ದೇಶವೊಂದರಲ್ಲೇ 40 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದಾರೆಂದು ವಿಶ್ವ ಸಂಸ್ಥೆಯ ವರದಿಗಳಿಂದ ತಿಳಿದು ಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು, ಆವಿಷ್ಕಾರಗಳು ಮತ್ತು ಕ್ರಾಂತಿಗಳು ನಡೆಯುತ್ತಿದ್ದರೂ ತಡೆಗಟ್ಟಬಹುದಾದ ರೋಗಗಳಲ್ಲಿ ಒಂದಾದ ಈ ಹೆಪಟೈಟಿಸ್ ದಿನೇ ದಿನೇ ಮನುಷ್ಯಕುಲದ ಮೇಲೆ ಸವಾರಿ ಮಾಡುತ್ತಿರುವುದೇ ಸೋಜಿ ಗದ ವಿಚಾರವಾಗಿದೆ. ಏಡ್ಸ್‌ನಷ್ಟೇ ಮಾರಕ ರೋಗವಾದ ಹೆಪಟೈಟಿಸ್ ಅನ್ನು ಸೂಕ್ತವಾದ ವೈದ್ಯಕೀಯ ಮಾರ್ಗದರ್ಶನ ಮತ್ತು ಸಾಕಷ್ಟು ಮುಂಜಾಗ್ರತೆಗಳಿಂದ ಖಂಡಿತವಾಗಿಯೂ ಪರಿಣಾಮ ಕಾರಿಯಾಗಿ ನಿಯಂತ್ರಿಸಬಹುದಾಗಿದೆ.

ವಿಶ್ವದಾದ್ಯಂತ 2 ಮಿಲಿಯನ್ ಮಂದಿ ವರ್ಷವೊಂದರಲ್ಲಿ ಅಜಾಗರೂಕತೆ, ಅಸಡ್ಡೆ ಮತ್ತು ರೋಗಪೂರಿತ ಇಂಜೆಕ್ಷನ್‌ಗಳಿಂದಲೇ ಹೆಪಟೈಟಿಸ್ ಬಿ ಮತ್ತು ಸಿ ರೋಗಕ್ಕೆ ತುತ್ತಾಗುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಹಾಗೆಯೇ ಶೇ. 81 ಮಂದಿ ಮಕ್ಕಳಿಗೆ ಲಸಿಕೆ ಮುಖಾಂತರ ಹೆಪಟೈಟಿಸ್ ರೋಗವನ್ನು ತಡೆಗಟ್ಟಲಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಹೆಪಟೈಟಿಸ್ ರೋಗವನ್ನು ಖಂಡಿತವಾಗಿಯೂ ತಡೆಗಟ್ಟಬಹುದಾಗಿದ್ದು ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಜನಸಾಮಾನ್ಯರು ವಿಶೇಷ ಕಾಳಜಿ ವಹಿಸುವ ತುರ್ತು ಅನಿವಾರ್ಯತೆ ಇದೆ. ಈ ಹೆಪಟೈಟಿಸ್ ರೋಗ ಹೇಗೆ ಬರುತ್ತದೆ, ಹೇಗೆ ಹರಡುತ್ತದೆ, ಹೇಗೆ ತಡೆಗಟ್ಟಬಹುದು, ಯಾವ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಯಾವ ರೀತಿ ಈ ರೋಗ ಬಂದರೂ ಬದುಕಬಹುದು ಎಂಬುದರ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ನಿರಂತರವಾಗಿ ವಿಶ್ವದಾದ್ಯಂತ ವಿಶ್ವ ಆರೋಗ್ಯ ಸಂಸ್ಥೆ ಇತರ ಸಂಘ ಸಂಸ್ಥೆಗಳು ಮತ್ತು ಸರಕಾರಗಳ ಜೊತೆ ಸೇರಿ ಮಾಡುತ್ತಿದೆ. ಜುಲೈ 28ರಂದು ಹೆಪಟೈಟಿಸ್ ವೈರಸ್‌ನ್ನು ಕಂಡು ಹಿಡಿದ ಮತ್ತು ಹೆಪಟೈಟಿಸ್ ರೋಗಕ್ಕೆ ಲಸಿಕೆ ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಬರೂಚ ಸಾಮ್ಯುಯೆಲ್ ಬ್ಲೂಮ್‌ಬರ್ಗ್‌ ಇವರ ಜನ್ಮದಿನವಾಗಿದ್ದು ಅವರ ಸ್ಮರಣಾರ್ಥ ಜುಲೈ 28ನ್ನು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಲಾಗುತ್ತದೆ. ಏನಿದು ಹೆಪಟೈಟಿಸ್?

 ಹೆಪಟೈಟಿಸ್ ರೋಗ ಹೆಚ್ಚಾಗಿ ಲಿವರ್ (ಯಕೃತ್ತು)ನ್ನು ಕಾಡುವ ಕಾಯಿಲೆಯಾಗಿದ್ದು ಹೆಪಟೈಟಿಸ್ ರೋಗದಲ್ಲಿ ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಎಂದು ಐದು ವಿಧಗಳಿವೆ. ಜಾಗತಿಕವಾಗಿ ಕೋಟಿಗಟ್ಟಲೆ ಮಂದಿ ಈ ರೋಗದಿಂದ ಬಳಲುತ್ತಿದ್ದು ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳು ಸಾರಿ ಹೇಳುತ್ತವೆ. ಸಾಮಾನ್ಯವಾಗಿ ಹೆಪಟೈಟಿಸ್ ಎ, ಡಿ, ಇ ಹೆಚ್ಚು ತೊಂದರೆ ನೀಡದಿದ್ದರೂ ಹೆಪಟೈಟಿಸ್ ಬಿ ಮತ್ತು ಸಿ ಮಾರಣಾಂತಿಕ ವಾಗುವ ಸಾಧ್ಯತೆ ಇರುತ್ತದೆ. ವರ್ಷವೊಂದರಲ್ಲಿ 1.5 ಮಿಲಿಯನ್ ಸಾವಿಗೆ ಕಾರಣ ವಾಗುವ ಈ ರೋಗಕ್ಕೆ, ಹೆಪಟೈಟಿಸ್ ಬಿ ಮತ್ತು ಸಿ ಹೆಚ್ಚಿನ ಕಾಣಿಕೆ ನೀಡುತ್ತದೆ ಎಂದರೂ ತಪ್ಪಲ್ಲ. ಹೆಪಟೈಟಿಸ್ ರೋಗದಲ್ಲಿ ಅಲ್ಪಕಾಲದ ತೀವ್ರವಾದ (Acute) ಮತ್ತು ದೀರ್ಘಕಾಲದ (Chronic ) ಎಂಬುದಾಗಿ ಎರಡು ವಿಧಗಳಿದ್ದು, ಅಲ್ಪಕಾಲದ ತೀವ್ರವಾದ ಹೆಪಟೈಟಿಸ್‌ನಿಂದಲೇ ಹೆಚ್ಚಿನ ಸಾವು ನೋವು ಸಂಭವಿಸುತ್ತದೆ. ಹೆಪಟೈಟಿಸ್ ಬಿ ಒಂದರಿಂದಲೇ ವರ್ಷವೊಂದಲ್ಲಿ 7,80,000 ಮಂದಿ ಜೀವ ಕಳೆದುಕೊಳ್ಳುತ್ತಾರೆ ಎಂಬುದು ಆತಂಕಕಾರಿ ವಿಚಾರವಾಗಿದೆ.

ಹೆಪಟೈಟಿಸ್ ಬಿ ಮತ್ತು ಸಿ ರೋಗಕ್ಕೆ ಪರಿಣಾಮಕಾರಿ ಲಸಿಕೆಗಳು ಲಭ್ಯವಿದ್ದು, ಖಂಡಿತವಾಗಿಯೂ ರೋಗವನ್ನು ತಡೆಗಟ್ಟಬಹುದಾಗಿದೆ. ಅದೇ ರೀತಿ ಹೆಪಟೈಟಿಸ್ ಸಿ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯು ಲಭ್ಯವಿರುತ್ತದೆ. ಹೆಪಟೈಟಿಸ್ ಬಿ ರೋಗ ಸಾಮಾನ್ಯವಾಗಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಇವರು ಹೆಚ್ಚಿನ ಜಾಗ್ರತೆ ವಹಿಸುವ ಅವಶ್ಯಕತೆ ಇರುತ್ತದೆ. ಹೆಪಟೈಟಿಸ್ ಎ ಮತ್ತು ಇ ಕಲುಷಿತ ನೀರು ಮತ್ತು ಆಹಾರಗಳಿಂದ ಹೆಚ್ಚಾಗಿ ಹರಡುತ್ತದೆ ಮತ್ತು ಮಾರಣಾಂತಿಕವಾಗುವ ಸಾಧ್ಯತೆ ಬಹಳ ಕಡಿಮೆಯಾಗಿರುತ್ತದೆ. ಆದರೆ ಹೆಪಟೈಟಿಸ್ ಬಿ, ಸಿ, ಡಿ ಹೆಚ್ಚಾಗಿ ಪದೇ ಪದೇ ಉಪಯೋಗಿಸುವ ಇಂಜೆಕ್ಷನ್‌ಗಳ ಮುಖಾಂತರ, ರಕ್ತಪೂರಣದ ಮುಖಾಂತರ, ಅಸುರಕ್ಷಿತ ದೈಹಿಕ ಸಂಪರ್ಕ, ತಾಯಿಯಿಂದ ಮಗುವಿಗೆ ಮತ್ತು ಅಸುರಕ್ಷಿತ ವೈದ್ಯಕೀಯ ಚಿಕಿತ್ಸೆ, ರೋಗಪೂರಿತ ವೈದ್ಯಕೀಯ ಉಪಕರಣಗಳ ಮುಖಾಂತರ ಹರಡುವ ಸಾಧ್ಯತೆ ಇರುತ್ತದೆ.

ಈ ಎಲ್ಲಾ ವೈರಸ್‌ಗಳು ನಮ್ಮ ದೇಹದ ಯಕೃತ್ತ್ತಿನ ಮೇಲೆ ದಾಳಿ ಮಾಡಿ ಅದರ ಕಾರ್ಯಕ್ಷಮತೆಯನ್ನು ಮತ್ತು ಕಾರ್ಯದಕ್ಷತೆಯನ್ನು ಕ್ಷೀಣಿಸುವಂತೆ ಮಾಡುತ್ತದೆ. ಯಕೃತ್ತು ನಮ್ಮ ದೇಹದ ಅತೀ ಮುಖ್ಯ ಅಂಗವಾಗಿದ್ದು ದೇಹದ ಎಲ್ಲಾ ಜೀರ್ಣಾಂಗ ಪ್ರಕ್ರಿಯೆ ಮತ್ತು ರಕ್ಷಣಾ ಪ್ರಕ್ರಿಯೆಯ ನೇತೃತ್ವ ವಹಿಸುತ್ತದೆ. ವೈರಸ್‌ಗಳ ದಾಳಿಗೆ ತುತ್ತಾದ ಯಕೃತ್ತು ತನ್ನ ರಕ್ಷಣಾ ಪ್ರಕ್ರಿಯೆ ಮತ್ತು ಜೀರ್ಣಾಂಗ ಪ್ರಕ್ರಿಯೆಯನ್ನು ಸರಿಯಾಗಿ ನಿಭಾಯಿಸಲಾಗದೆ ದೇಹದ ಆರೋಗ್ಯ ಹದಗೆಟ್ಟು ವ್ಯಕ್ತಿ ಜಾಂಡೀಸ್ (ದೇಹದ ಚರ್ಮ, ಕಣ್ಣಿನ ಮೇಲ್ಪದರ ಹಳದಿ ಬಣ್ಣಕ್ಕೆ ತಿರುಗುವುದು), ವಾಂತಿ, ಭೇದಿ, ಹಸಿವಿಲ್ಲದಿರುವುದು, ವಿಪರೀತ ಹೊಟ್ಟೆನೋವು, ಜ್ವರ, ಮೈಕೈ ನೋವು, ವಿಪರೀತ ಸುಸ್ತು, ದೇಹದ ತೂಕ ಕಡಿಮೆಯಾಗುವುದು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇನ್ನು ಕೆಲವರಲ್ಲಿ ಗಾಡ ವರ್ಣದ ಮೂತ್ರ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲಿಕ ತೊಂದರೆ ಇರುವವರಲ್ಲಿ ಹೆಚ್ಚಿನ ತೊಂದರೆ ಕಾಣಸಿಗದು. ಆದರೆ ಯಕೃತ್ತಿನಲ್ಲಿ ನಾರಿನ ಅಂಶ (Fibrosis or Cirrhosis) ಜಾಸ್ತಿಯಾದಾಗ ಯಕೃತ್ತಿನ ಕಾರ್ಯಕ್ಷಮತೆ ಕ್ಷೀಣಿಸಿಕೊಂಡು ಯಕೃತ್ತಿನ ಕೆಲಸಗಳು ಸ್ಥಗಿತಗೊಳ್ಳುತ್ತದೆ. ಯಕೃತ್ತು ಊದಿಕೊಂಡು ದೊಡ್ಡದಾಗಬಹುದು ಇಲ್ಲವೇ ಉದರದಲ್ಲಿ ನೀರು ಶೇಖರಣೆ ಆಗುವ ಸಾಧ್ಯತೆಯೂ ಇದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕದಿದ್ದಲ್ಲಿ ಯಕೃತ್ತು ವೈಫಲ್ಯ ಮತ್ತು ಯಕೃತ್ತ್ತಿನ ಕ್ಯಾನ್ಸರ್‌ನಿಂದಾಗಿ ಜೀವ ಹಾನಿ ಕೂಡಾ ಸಂಭವಿಸಬಹುದು.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News