ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ: ನೆಲೆ-ಬೆಲೆ

Update: 2022-08-05 06:43 GMT

ಗೊಂದಲದ, ತಳಮಳದ ವಾತಾವರಣವನ್ನು ತನ್ನ ದ್ವೇಷ ರಾಜಕಾರಣಕ್ಕೆ ಅನುವಾಗುವಂತೆ ಬಳಸಿಕೊಂಡು ತನ್ನ ಹಿಂದುತ್ವ-ಬ್ರಾಹ್ಮಣಶಾಹಿಯ ಎಲ್ಲ ಅಜೆಂಡಾಗಳನ್ನು ಪ್ರಯೋಗಿಸಿದ ಆರೆಸ್ಸೆಸ್ ಆ ಮೂಲಕ ಫಸಲು ತೆಗೆಯುವಲ್ಲಿ ಯಶಸ್ವಿಯಾಗಿದೆ. ಇದರ ವಿರುದ್ಧ ಸೈದ್ಧಾಂತಿಕವಾಗಿ ಮುಖಾಮುಖಿಯಾಗಬೇಕಿದ್ದ ಮಾಯಾವತಿ ಬಿಜೆಪಿಯು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ಮಾಡಿದ ಭೂಮಿ ಪೂಜೆ ಬೆಂಬಲಿಸಿದರು. ಬ್ರಾಹ್ಮಣರ ತುಷ್ಟೀಕರಣಕ್ಕಾಗಿ ಪರಶುರಾಮ ಅಸ್ಮಿತೆಯನ್ನು ಪ್ರತಿಪಾದಿಸಿದರು. ಆದರೆ ಈ ಮಾದರಿಯ ಮೃದು ಹಿಂದುತ್ವ-ಬ್ರಾಹ್ಮಣವಾದಿ ನೀತಿಯು ಕಾಂಗ್ರೆಸ್‌ಗೆ ಕೊಟ್ಟ ಮಾರಕ ಹೊಡೆತವನ್ನು ಮಾಯಾವತಿ ಮರೆತರೇ? ಅಥವಾ ತನ್ನದು ಭಿನ್ನ ಎನ್ನುವ ಹುಸಿ ಆತ್ಮವಿಶ್ವಾಸದಲ್ಲಿದ್ದರೇ? ತೊಂಬತ್ತರ ದಶಕದಲ್ಲಿ ರಾಮ ಜನ್ಮಭೂಮಿ ಚಳವಳಿಯ ಎಲ್ಲಾ ಉನ್ಮಾದಗಳಿಗೆ ಪ್ರತಿಯಾಗಿ ಸಬಲ್ಟ್ರಾನ್ ಪುರಾಣದ ಮಿಥ್‌ಗಳನ್ನು ಪ್ರಯೋಗಿಸಿ ಹಿಮ್ಮೆಟ್ಟಿಸಿದ ಕಾನ್ಶೀರಾಂ ಅವರ ಬಹುಜನ ರಾಜಕಾರಣದ ಎಲ್ಲಾ ಪಟ್ಟುಗಳನ್ನು ಹತ್ತಿರದಿಂದ ಕಂಡ ಮಾಯಾವತಿಯವರು ಪ್ರಸ್ತುತ ಆರೆಸ್ಸೆಸ್‌ನ ಪ್ರಾಬಲ್ಯದ ಸಂದರ್ಭದಲ್ಲಿ ಎಡವುತ್ತಿರುವುದನ್ನು ವಿಶ್ಲೇಷಿಸಲು ಹೊಸ ದೃಷ್ಟಿಕೋನದ ಅಧ್ಯಯನದ ಅಗತ್ಯವಿದೆ.


ಆರಂಭದ ಹೆಜ್ಜೆಗಳು

ಬಂಡವಾಳಶಾಹಿ ಮತ್ತು ಬ್ರಾಹ್ಮಣೀಕರಣ ವ್ಯವಸ್ಥೆ, ರಾಜಕಾರಣದ ಶೋಷಣೆ ಮತ್ತು ಪ್ರಾಬಲ್ಯದ ವಿರುದ್ಧ ವಂಚಿತ ಸಮುದಾಯಗಳನ್ನು ಸಂಘಟಿಸಲು ಬಾಬಾ ಸಾಹೇಬ್ ಅಂಬೇಡ್ಕರ್ 15, ಆಗಸ್ಟ್ 1936ರಂದು ‘ಸ್ವತಂತ್ರ ಕಾರ್ಮಿಕ ಪಕ್ಷ’ವನ್ನು (ಐಎಲ್‌ಪಿ) ಸ್ಥಾಪಿಸಿದರು. 1937ರ ಪ್ರಾಂತೀಯ ಚುನಾವಣೆಗಳಲ್ಲಿ ಐಎಲ್‌ಪಿ ಪಕ್ಷವು 17 ಸ್ಥಾನಗಳಲ್ಲಿ ಸ್ಪರ್ಧಿಸಿ 14ರಲ್ಲಿ ಗೆಲುವು ಸಾಧಿಸಿತು. ಆ ಪಕ್ಷ ಸ್ಪರ್ಧಿಸಿದ್ದ 13 ಮೀಸಲು ಕ್ಷೇತ್ರಗಳಲ್ಲಿ 11 ಸ್ಥಾನಗಳನ್ನು ಗೆದ್ದುಕೊಂಡಿತ್ತು. 1942ರಲ್ಲಿ ಬಾಬಾ ಸಾಹೇಬರು ದಲಿತರ ಹಕ್ಕಿಗಾಗಿ ‘ಪರಿಶಿಷ್ಟ ಜಾತಿ ಒಕ್ಕೂಟ’ (ಎಸ್‌ಸಿಎಫ್) ಸಂಘಟಿಸಿದರು. ಅಕ್ಟೋಬರ್ 1951 ಮತ್ತು ಫೆಬ್ರವರಿ 1952ರ ನಡುವೆ ಪ್ರಾಂತೀಯ ವಿಧಾನ ಸಭೆಗಳು ಮತ್ತು ಲೋಕಸಭೆಗೆ ನಡೆದ ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್ ಅವರು ಎಸ್‌ಸಿಎಫ್ ಪಕ್ಷದಿಂದ ಬಾಂಬೆ ಈಶಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದರು. ಅಲ್ಲಿ ಚತುಷ್ಕೋನ ಸ್ಪರ್ಧೆಯಿತ್ತು. ಕಾಂಗ್ರೆಸ್, ಹಿಂದೂ ಮಹಾಸಭಾ ಮತ್ತು ಕಮ್ಯುನಿಸ್ಟ್ ಪಕ್ಷಗಳೂ ಸ್ಪರ್ಧಿಸಿದ್ದವು. ಅಂತಿಮವಾಗಿ ಬಾಬಾ ಸಾಹೇಬರ ಸಹಾಯಕರಾಗಿದ್ದ, ಹಿಂದುಳಿದ ವರ್ಗದ ಕಾಂಗ್ರೆಸ್‌ನ ಸಡೋಬ ಕಜ್ರೋಲ್ಕರ್ ಗೆಲುವು ಸಾಧಿಸಿದರು. ಅಂಬೇಡ್ಕರ್ ನಾಲ್ಕನೇ ಸ್ಥಾನದಲ್ಲಿದ್ದರು. ಭಾರತದ ಹೆಮ್ಮೆಯ ಪುತ್ರ, ವಿಮೋಚಕ ಅಂಬೇಡ್ಕರ್ ಅವರ ಸೋಲು ದೊಡ್ಡ ಆಘಾತವಾಗಿತ್ತು. ನಂತರ 1954ರ ಉಪ ಚುನಾವಣೆಯಲ್ಲಿ ಭಂಡಾರದಿಂದ ಸ್ಪರ್ಧಿಸಿದ ಅಂಬೇಡ್ಕರ್ ಮತ್ತೊಮ್ಮೆ ಸೋತರು.

ಭಾರತಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಚುನಾವಣಾ ರಾಜಕೀಯದಲ್ಲಿ ಸೋಲುವಂತಾಗಿದ್ದು ಇತಿಹಾಸದ ಬಲು ದೊಡ್ಡ ವ್ಯಂಗ್ಯಗಳಲ್ಲೊಂದಾಗಿತ್ತು. ನಂತರ 1956ರಲ್ಲಿ ರಿಪಬ್ಲಿಕನ್ ಪಕ್ಷ ಸ್ಥಾಪಿಸಿದರು. ವಂಚಿತ ಸಮುದಾಯಗಳ ಆತ್ಮ ಘನತೆಗಾಗಿ ಮತ್ತು ಬದುಕಿನ ಹಕ್ಕಿಗಾಗಿ ಕಾಂಗ್ರೆಸ್ ಪಕ್ಷದ ಹಂಗಿಲ್ಲದ ಸ್ವತಂತ್ರವಾದ ಚುನಾವಣಾ ರಾಜಕೀಯವನ್ನು ಆರಂಭಿಸಿದ ಅಂಬೇಡ್ಕರ್ ಅವರ ಪ್ರಯೋಗ ಯಶಸ್ವಿಯಾಗಲಿಲ್ಲ. ಜಾತಿವಾದಿ ಭಾರತ ಅವರನ್ನು ಸೋಲಿಸಿತು. ಅದೇ ಸಂದರ್ಭದ 1930, 1940ರ ದಶಕಗಳಲ್ಲಿ ಆಗಿನ ಕಾಂಗ್ರೆಸ್‌ನೊಂದಿಗೆ ದಲಿತ ಸಮುದಾಯದ ಬಾಂಧವ್ಯ ಸೌಹಾರ್ದಯುತವಾಗೇನೂ ಇರಲಿಲ್ಲ. ಆದರೆ ಸ್ವಾತಂತ್ರಾನಂತರದ ಭಾರತದಲ್ಲಿ ಅಂದರೆ 1952ರಿಂದ 1989ರವರೆಗೆ ದಲಿತರು ಮತ್ತು ಕಾಂಗ್ರೆಸ್ ನಡುವಿನ ಬಾಂಧವ್ಯ ಗಟ್ಟಿಗೊಳ್ಳತೊಡಗಿತು ಮತ್ತು 1977ರ ಸಾರ್ವತ್ರಿಕ ಚುನಾವಣೆಯನ್ನು ಹೊರತುಪಡಿಸಿದರೆ ದಲಿತರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಆಗಿದ್ದರು. ಆಗ ಅವರ ಕಾಂಗ್ರೆಸ್ ಪರವಾಗಿ ನೀಡಿದ ಮತ ಪಾರ್ಟಿ ಮತ್ತು ಸರಕಾರದ ಪರವಾಗಿ ನೀಡಿದ ಮತವಾಗಿತ್ತು.

ಚಿಂತಕ ಒಲಿವರ್ ಮೆಂಡಲ್ಸನ್ ‘‘ತಳಸಮುದಾಯಗಳ ಪ್ರಾಮುಖ್ಯತೆ ಮತ್ತು ವೋಟ್ ಬ್ಯಾಂಕ್ ಸಾಮರ್ಥ್ಯ ಕಾಂಗ್ರೆಸ್‌ನ ಪಕ್ಷದೊಳಗೆ ಮತ್ತು ಮಂತ್ರಿಮಂಡಲದಲ್ಲಿ ದಲಿತ ರಾಜಕಾರಣಿಗಳಿಗೆ ವೈಯಕ್ತಿಕವಾಗಿ ಪ್ರಭಾವವನ್ನು ಹೆಚ್ಚಿಸಲಿಲ್ಲ ಮತ್ತು ಬಲು ದೊಡ್ಡ ಪರಿವರ್ತನೆಯನ್ನು ತಂದು ಕೊಡಲಿಲ್ಲ. ದಲಿತ ಸಮುದಾಯದ ಸಂಸದರು ಅಥವಾ ಮಂತ್ರಿಗಳ ವೈಯಕ್ತಿಕ ಸಾಧನೆಗಳು ಮತ್ತು ವರ್ಚಸ್ಸಿಗಿಂತಲೂ ಆ ಪಕ್ಷದಲ್ಲಿ ವೋಟ್ ಬ್ಯಾಂಕ್‌ನ ಚುನಾವಣಾ ರಾಜಕೀಯದ ಲೆಕ್ಕಾಚಾರಗಳೇ ಮೇಲುಗೈ ಸಾಧಿಸಿ ದಲಿತ ರಾಜಕಾರಣಿಗಳ ಪ್ರಾಮುಖ್ಯತೆಯೇ ಗೌಣಗೊಂಡಿತು. ಉದಾಹರಣೆಗೆ ಐವತ್ತರ ದಶಕದಲ್ಲಿ ಮೂರು ಬಾರಿ ಸೀಮಿತ ಅವಧಿಗೆ ಬಿಹಾರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಲಿತ ನಾಯಕ ಭೋಲೆ ಪಾಸ್ವಾನ್ ಶಾಸ್ತ್ರಿ ಅವರು ತಮ್ಮ ಪರಿಶುದ್ಧ ರಾಜಕಾರಣ, ಸರಳತೆ, ಘನವೆತ್ತ ವ್ಯಕ್ತಿತ್ವದಿಂದ ಪಕ್ಷದಲ್ಲಿ ಮತ್ತು ರಾಜ್ಯದಲ್ಲಿ ಮನ್ನಣೆ ಗಳಿಸಿದ್ದರು. ಆದರೆ ರಾಜ್ಯದ ದಲಿತ ರಾಜಕಾರಣದ ಸಂಬಂಧದಲ್ಲಿ ಅವರು ತಳಮಟ್ಟದಲ್ಲಿ, ಪಕ್ಷದ ಕಾರ್ಯಕರ್ತರ ನೆಲೆಯಲ್ಲಿ ಪ್ರಭಾವ ಬೀರಲಿಲ್ಲ. ಅಥವಾ ಪ್ರಭಾವಶಾಲಿಯಾಗಲು ಅವಕಾಶವೇ ಇರಲಿಲ್ಲ. ಇದೇ ರೀತಿ ಇತರ ಕೆಲವು ದಲಿತ ಮಂತ್ರಿಗಳು ರಾಜಕೀಯವಾಗಿ ಮುಂಚೂಣಿಗೆ ಬರಲಿಲ್ಲ’’ ಎಂದು ಹೇಳುತ್ತಾರೆ.

ಇದು ಸತ್ಯ. ಕಾಂಗ್ರೆಸ್ ಪಕ್ಷದ ಅನಧಿಕೃತವಾದಂತಹ ಮೇಲ್ಜಾತಿ ಪರವಾದ ಪ್ರಣಾಳಿಕೆಗಳು ಮತ್ತು ಜಮೀನ್ದಾರಿ ಧೋರಣೆಗಳು ವಂಚಿತ ಸಮುದಾಯದವರಿಗೆ ಪಕ್ಷದೊಳಗೆ ಆಂತರಿಕವಾಗಿ ಮೇಲ್ಮುಖ ಚಲನೆಗೆ ಇರುವ ವಿವಿಧ ಅವಕಾಶಗಳನ್ನು ನಿರಾಕರಿಸಿದ್ದವು. ಇದರಿಂದಾಗಿಯೇ ದಲಿತ ರಾಜಕಾರಣಿಗಳು ಪಕ್ಷದೊಳಗಿನ ಮೇಲ್ಜಾತಿ ರಾಜಕಾರಣಿಗಳ ಆಂತರಿಕ ಭಿನ್ನಮತದ ಹಿನ್ನೆಲೆಯಲ್ಲಿ ಅವರ ಪರ ಮತ್ತು ವಿರೋಧದ ಗುಂಪಿನಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಟ್ಟಿಕೊಂಡರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯ ದಲಿತ ರಾಜಕಾರಣಿಯನ್ನಾಗಲಿ, ಗುಂಪನ್ನಾಗಲಿ ಕಾಣಲು ಸಾಧ್ಯವಾಗಲೇ ಇಲ್ಲ.

ಪರಿವರ್ತನೆಯ ಕಾಲಘಟ್ಟ
ಅಂಬೇಡ್ಕರ್ ಅವರ ನಿಧನದ ನಂತರವೂ ಆರ್‌ಪಿಐ ಪಕ್ಷ ಗಮನಾರ್ಹ ಬೆಳವಣಿಗೆಯನ್ನು ಸಾಧಿಸತೊಡಗಿದರೂ ಮುಂದಿನ ದಿನಗಳಲ್ಲಿ ಸಿದ್ಧಾಂತ, ಭಿನ್ನಮತೀಯತೆಗಳಂತಹ ಬಿಕ್ಕಟ್ಟಿಗೆ ತುತ್ತಾಯಿತು. ಅಲ್ಲಿನ ಯುವಕರು ಆರ್ಥಿಕ ಮತ್ತು ವರ್ಗ ಸಂಘರ್ಷವನ್ನು ಆಧರಿಸಿ ಸಂಘಟನೆ ಕಟ್ಟಲು ಮುಂದಾಗಿದ್ದರು. ಹಳ್ಳಿಗಳಲ್ಲಿ ವಾಸಿಸುವ ಹಳೆ ತಲೆಮಾರಿನ ಕಾರ್ಯಕರ್ತರ ಬೌದ್ಧ ಧರ್ಮ ಕೇಂದ್ರಿತ ಸಾಮಾಜಿಕತೆಯ ಚಿಂತನೆಗಳಿಗೂ ಮತ್ತು ಹಳ್ಳಿಗಳನ್ನು ತೊರೆದು ನಗರ ಕೇಂದ್ರಿತ ದಲಿತ ಚಳವಳಿಯನ್ನು ಕಟ್ಟಲು ಉತ್ಸುಕರಾದಂತಹ ಶಿಕ್ಷಿತ ಹೊಸ ತಲೆಮಾರಿನ ಕಾರ್ಯಕರ್ತರ ವರ್ಗ ಆಧಾರಿತ ಸಂಘಟನೆಯ ನಡುವೆ ಮೊದಲ ಒಡಕು ಉಂಟಾಯಿತು. 1959ರ ವೇಳೆಗೆ ಆರ್‌ಪಿಐ ಪಕ್ಷವು ಇಬ್ಭಾಗವಾಯಿತು. ಎರಡು ವಿಭಿನ್ನ ಬಣಗಳು ದಲಿತ ಸಮಾವೇಶಗಳನ್ನು ಹಮ್ಮಿಕೊಂಡವು. ಆರ್‌ಪಿಐ ಪಕ್ಷದ ಈ ಒಡಕಿನಿಂದಾಗಿ 1962ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಏಕೀಕರಣಗೊಂಡ ಮಹಾರಾಷ್ಟ್ರದಲ್ಲಿ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾಯಿತು. ನಂತರದ ವರ್ಷಗಳಲ್ಲಿ ಬೆರಳೆಣಿಕೆಯಷ್ಟು ವಿಧಾನಸಭೆ ಸ್ಥಾನಗಳನ್ನು ಗೆಲ್ಲುವಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಉತ್ತರ ಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ಹರ್ಯಾಣ ರಾಜ್ಯಗಳಲ್ಲೂ ತನ್ನ ಪಕ್ಷವನ್ನು ಸಂಘಟಿಸಿತು. ಉತ್ತರ ಪ್ರದೇಶದಲ್ಲಿ ಚಮ್ಮಾರ್ ಸಮುದಾಯಕ್ಕೆ ಸೇರಿದ ಬೌದ್ಧ ಮತದ ಅನುಯಾಯಿ ಬಿ.ಪಿ.ಮೌರ್ಯ ಅವರು ಆರ್‌ಪಿಐ ಪಕ್ಷವನ್ನು ಸಂಘಟಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದಲಿತರ ಮತ್ತು ಮುಸ್ಲಿಮ್ ಮತಗಳನ್ನು ಆರ್‌ಪಿಐ ಪಕ್ಷದ ಪರವಾಗಿ ಸೆಳೆಯುವಲ್ಲಿ ಯಶಸ್ವಿಯಾದರು. ಆದರೆ 1969ರ ಕಾಂಗ್ರೆಸ್ ಪಕ್ಷದ ವಿಭಜನೆ ರಾಜಕೀಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿತು. 1971ರ ವೇಳೆಗೆ ಆರ್‌ಪಿಐ ಪಕ್ಷದಲ್ಲಿ ತನ್ನ ಎದುರಾಳಿಯಾಗಿದ್ದ ರಾಮಜಿ ರಾಮ್ ಅವರೊಂದಿಗೆ ಬಿ.ಪಿ.ಮೌರ್ಯ ಅವರು ಆರ್‌ಪಿಐ ಪಕ್ಷವನ್ನು ತ್ಯಜಿಸಿ ಇಂದಿರಾ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಮರಳಿ ಕಾಂಗ್ರೆಸ್ ಪಕ್ಷದಡಿಯಲ್ಲಿ ಲೋಕಸಭೆಗೆ ಆಯ್ಕೆಗೊಂಡರು. ಅಲ್ಲಿಗೆ ಉತ್ತರ ಪ್ರದೇಶದಲ್ಲಿ ಆರ್‌ಪಿಐ ಪಕ್ಷದ ರಾಜಕೀಯ ಅಸ್ತಿತ್ವ ಹೆಚ್ಚೂ ಕಡಿಮೆ ಅಂತ್ಯಗೊಂಡಿತು.

ಈ ಎಲ್ಲಾ ಬೆಳವಣಿಗೆಗಳ ಕಾರಣದಿಂದ ಸ್ವತಂತ್ರ ದಲಿತ ರಾಜಕಾರಣದಲ್ಲಿ ಅಗಾಧವಾದ ನಿರ್ವಾತವಿರುವುದನ್ನು ಸುಮಾರು 50 ವರ್ಷಗಳ ಹಿಂದೆಯೇ ಗ್ರಹಿಸಿದ್ದ ಕಾನ್ಶೀರಾಂ ಆ ಮೂಲಕವೇ ಸಾಮಾಜಿಕ ಪರಿವರ್ತನೆಗಾಗಿ ಹೋರಾಟಕ್ಕೆ ಅಡಿಯಿಟ್ಟರು. ದಲಿತರ ಸಬಲೀಕರಣ ಮತ್ತು ವಿಮೋಚನೆಗಾಗಿ ಆರಂಭದ ವರ್ಷಗಳಲ್ಲಿ ಸ್ನೇಹಿತ ಖಾರ್ಪಡೆ ಮತ್ತು ಇತರ ಸಮಾನಮನಸ್ಕರೊಂದಿಗೆ ದಲಿತ ಆದಿವಾಸಿ ಹಾಗೂ ಹಿಂದುಳಿದ ಜಾತಿಗಳ ನೌಕರರ ಒಕ್ಕೂಟವನ್ನು ಸ್ಥಾಪಿಸಿದರು. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ(BAMCEF)ವನ್ನು ಕಟ್ಟಿದರು. ಏಕಾಂಗಿಯಾಗಿ ಸೈಕಲ್ ಮೇಲೆ ಇಡೀ ಉ.ಪ್ರ. ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ಅಲ್ಲಿನ ಒಟ್ಟು ಜನಸಂಖ್ಯೆಯ ವಿವರಗಳು, ಈ ಜನಸಂಖ್ಯೆಯಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಗಳೆಷ್ಟು, ಹಿಂದುಳಿದ, ತಳ ಸಮುದಾಯಗಳ ಶೇಕಡವಾರು ಪ್ರಮಾಣ ಅವರ ಸಾಮಾಜಿಕ ಸ್ಥಿತಿಗತಿ ಎಲ್ಲವನ್ನೂ ಕಲೆ ಹಾಕಿದರು. ಅಧ್ಯಯನ ಮಾಡಿದರು. 1984ರಲ್ಲಿ ಬಹುಜನ ಸಮಾಜ ಪಕ್ಷ ಸ್ಥಾಪಿಸುವ ವೇಳೆಗೆ ಇಡೀ ಉತ್ತರ ಭಾರತದ ಸಾಮಾಜಿಕ ಸ್ವರೂಪಗಳು, ಅಲ್ಲಿನ ಜಾತಿ ಸಂರಚನೆ, ಅದರ ಆಳ, ಶಕ್ತಿ, ದೌರ್ಬಲ್ಯ ಎಲ್ಲವನ್ನೂ ಕಾನ್ಶೀರಾಂ ಆಳವಾಗಿ ಅಧ್ಯಯನ ಮಾಡಿಕೊಂಡಿದ್ದರು. ಎಂಭತ್ತರ ದಶಕದಲ್ಲಿ ‘ಅಞಚಿಛಿಚ್ಟ ಛ್ಝಿ ಟ್ಞ ಛಿಛ್ಝಿ’ ಎನ್ನುವ ಜಾಥಾವನ್ನು ಪ್ರಾರಂಭಿಸಿದರು. ಈ ಜಾಥಾದಲ್ಲಿ ಅಂಬೇಡ್ಕರ್ ಅವರ ಜೀವನ, ಚಿಂತನೆಗಳು, ಲೇಖನಗಳನ್ನು ದೃಶ್ಯರೂಪದಲ್ಲಿ, ಭಾಷಣಗಳ ರೂಪದಲ್ಲಿ ನಿರಂತರವಾಗಿ ಚರ್ಚಿಸುತ್ತಿದ್ದರು. ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳ ಪರವಾಗಿ ಹೇಗೆ ಹೋರಾಡುತ್ತಿದ್ದರು, ಪ.ಜಾತಿ, ಪ.ಪಂಗಡಗಳು ತಮ್ಮಿಂದಿಗೆ ಕೈ ಜೋಡಿಸಿದರೆ ಮುಂದೊಂದು ದಿನ ಅವರನ್ನು ಆಳುವವರಾಗಿ ರೂಪಿಸುತ್ತೇನೆ ಎಂದು ಉತ್ಸಾಹ ತುಂಬುತ್ತಿದ್ದರು.

1993ರ ಚುನಾವಣೆಯ ವೇಳೆಗೆ ಉತ್ತರ ಪ್ರದೇಶದಲ್ಲಿ ‘‘ಬ್ರಾಹ್ಮಿನ್, ಬನಿಯಾ, ಠಾಕೂರ್ ಚೋರ್, ಬಾಕಿ ಸಬ್ ಈಖ -4’’, ‘‘ತಿಲಕ್, ತರಾಜು, ತಲ್ವಾರ್ ಮಾರೋ ಉನ್ಕೋ ಜೂತೆ ಚಾರ್’’ ಎನ್ನುವ ಘೋಷಣೆಗಳು ಜನಪ್ರಿಯವಾಗಿದ್ದವು. 1989-1991ರ ಚುನಾವಣೆಗಳಲ್ಲಿ ಬಹುಜನ ಸಮಾಜದ ಮತಗಳಿಕೆಯ ಸರಾಸರಿ ಶೇ. 9.4ರಷ್ಟಿತ್ತು. ಆದರೆ 1989ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ 425 ಸೀಟುಗಳ ಪೈಕಿ 14 ಸೀಟುಗಳಲ್ಲಿ ಜಯ ಗಳಿಸಿತು. 1991ರಲ್ಲಿ 11 ಸೀಟುಗಳನ್ನು ಗಳಿಸುವಲ್ಲಿ ತೃಪ್ತಿ ಹೊಂದಬೇಕಾಯಿತು. ಅಂದರೆ ಮತಗಳಿಕೆಯ ಸರಾಸರಿ ಪ್ರಮಾಣ ಅಧಿಕವಾಗಿದ್ದರೂ ಅದಕ್ಕೆ ಪೂರಕವಾಗಿ ಕ್ಷೇತ್ರಗಳನ್ನು ಗೆಲ್ಲಲು ಬಿಎಸ್ಪಿವಿಫಲವಾಯಿತು. ಅತ್ಯುತ್ತಮ ಮಟ್ಟದ ಸಂಘಟನೆಯನ್ನು ಕಟ್ಟಿದ್ದರೂ ದಲಿತರ ಸಂಪೂರ್ಣ ಮತಗಳನ್ನು ಕೂಡಿ ಹಾಕಲು ಸಾಧ್ಯವಾಗಲಿಲ್ಲ. ಪಶ್ಚಿಮ ಉತ್ತರ ಪ್ರದೇಶದ ಬಹುಪಾಲು ಚಮ್ಮಾರ್ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿದ್ದರು. 1992ರ ಬಾಬರಿ ಮಸೀದಿಯ ಧ್ವಂಸದಿಂದ ಉಂಟಾದ ರಾಜಕೀಯ ಅನಿಶ್ಚಿತತೆಯ ಸಂದರ್ಭದಲ್ಲಿ ಬಿಎಸ್ಪಿಪಕ್ಷವು ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿತು. ಈ ಚುನಾವಣೆಯಲ್ಲಿ ಶೇ.11ರಷ್ಟು ಪ್ರಮಾಣದಲ್ಲಿ ಮತಗಳಿಸಿದ ಬಿಎಸ್ಪಿ67 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಶೇ.25.83ರಷ್ಟು ಪ್ರಮಾಣದಲ್ಲಿ ಮತ ಗಳಿಸಿದ ಸಮಾಜವಾದಿ ಪಕ್ಷವು 109 ಸೀಟುಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ 177 ಸೀಟುಗಳಲ್ಲಿ (ಶೇ.33.3 ಪ್ರಮಾಣ) ಗೆಲುವನ್ನು ಪಡೆದುಕೊಂಡಿತ್ತು. ಬಾಬರಿ ಮಸೀದಿಯ ಧ್ವಂಸದ ಅಪಖ್ಯಾತಿಯನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿತ್ತು. ನಂತರ ಮಾಯಾವತಿಯವರು ಮೂರು ಬಾರಿ ಅಲ್ಪಾವಧಿಗೆ ಮುಖ್ಯಮಂತ್ರಿಯಾಗಿದ್ದರು.

13, ಮೇ 2007ರಂದು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾಯಾವತಿಯವರು ಈ ಬಾರಿ ಪೂರ್ಣಾವಧಿಯಾಗಿ ಐದು ವರ್ಷ ಪೂರೈಸಿದರು. ಈ ಅವಧಿಯಲ್ಲಿ ದಕ್ಷ ಆಡಳಿತ ನೀಡಿದ ಮಾಯಾವತಿ ಹದಗೆಟ್ಟ ಕಾನೂನು ವ್ಯವಸ್ಥೆಯನ್ನು ತಹಬದಿಗೆ ತಂದರು. ದಲಿತ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದರು. ಖಾಸಗಿ ಕ್ಷೇತ್ರದಲ್ಲಿ 30ರಷ್ಟು ಮೀಸಲಾತಿ ಘೋಷಿಸಿದರು. ಭೀಮರಾವ್ ಅಂಬೇಡ್ಕರ್ ಸಮಗ್ರ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದರು. ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವನ್ನಾಗಿ ಮಾಡುತ್ತೇನೆ ಎಂದು ಭರವಸೆ ಮೂಡಿಸಿದರು. ಆದರೆ ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ಎಡವಿದರು. ಭ್ರಷ್ಟಾಚಾರದ ಆರೋಪಗಳು ತೇಲಿಬಂದವು. ಬೆಹನ್‌ಜಿ ಸಾಮಾನ್ಯ ಕಾರ್ಯಕರ್ತರಿಗೆ ದರ್ಶನ ಕೊಡುವುದಿಲ್ಲ ಎನ್ನುವ ದೂರುಗಳು ದಟ್ಟವಾಗಿ ಕೇಳಿ ಬಂದಿತು. ದುರ್ಬಲ ನಾಯಕತ್ವದ ಕಾರಣವೂ ಸೇರಿಕೊಂಡು 2012ರ ಚುನಾವಣೆಯಲ್ಲಿ ಬಿಎಸ್ಪಿಸೋಲಬೇಕಾಯಿತು. ಅಪೂರ್ಣವಾಗಿ ಉಳಿದುಕೊಂಡ ಪರಿವರ್ತನೆ

2017ರ ಉ.ಪ್ರ. ಚುನಾವಣೆಯ ಸಂದರ್ಭದಲ್ಲಿ ದಲಿತ-ಮುಸ್ಲಿಮ್ ಐಕ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ತುಳಿದಿದ್ದ ಮಾಯಾವತಿಯವರು 100ಕ್ಕೂ ಹೆಚ್ಚು ಮುಸ್ಲಿಮ್ ಸಮುದಾಯದವರಿಗೆ, 87 ದಲಿತ ಸಮುದಾಯದವರಿಗೆ ಸೀಟು ನೀಡಿದ್ದರು. ಕಡೆಗೂ ಬಿಎಸ್ಪಿಗಳಿಸಿದ್ದು ಕೇವಲ 19 ಸೀಟುಗಳನ್ನು.

ಅಖಿಲೇಶ್ ಯಾದವ್ ಅವರ ಎಸ್‌ಪಿ ಪಕ್ಷ ಗಳಿಸಿದ್ದು 47 ಸೀಟುಗಳನ್ನು. ಈ ಎಸ್‌ಪಿ ಮತ್ತು ಬಿಎಸ್ಪಿಎನ್ನುವ ಎರಡೂ ಪ್ರಮುಖ ಪ್ರಾದೇಶಿಕ ಪಕ್ಷಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟ ಅತಿ ಹಿಂದುಳಿದ ಸಮುದಾಯಗಳಾದ ಗೌರ, ಲುಹಾರ್, ಕುಮಹಾರ್, ಬಿಂದ್, ಮಲ್ಲಾ, ಪಾಲ್, ರಾಜಬರ್, ಚೌಹಾಣ್, ಕುರ್ಮಿಗಳನ್ನು ಮತ್ತು ಪಾಸಿ, ಖಾತಿಕ್, ಧೋಬಿ ಮುಂತಾದ ನಿರ್ಲಕ್ಷಿತ ದಲಿತ ಸಮುದಾಯಗಳ ನಿರಾಸೆ ಮತ್ತು ಅಸಹನೆಯನ್ನು ಅಮಿತ್ ಶಾ-ಮೋದಿ ಜೋಡಿಯ ಕಾಸ್ಟ್-ಕೆಮಿಸ್ಟ್ರಿಯು ಅತ್ಯಂತ ಯಶಸ್ವಿಯಾಗಿ ತನ್ನ ಚುನಾವಣಾ ರಾಜಕಾರಣಕ್ಕೆ ಬಳಸಿಕೊಂಡಿದ್ದು ಇಂದು ಇತಿಹಾಸ. ಈ ಎಲ್ಲ ಅತಿ ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳು ಸಂಪೂರ್ಣವಾಗಿ ಮತೀಯವಾದಿ ಬಿಜೆಪಿ ಪಕ್ಷದ ಬೆನ್ನಿಗೆ ನಿಂತಿದ್ದು ಎಸ್‌ಪಿ ಮತ್ತು ಬಿಎಸ್ಪಿಗಳಿಗೆ ಆತ್ಮಾವಲೋಕನಕ್ಕೆ ದಾರಿಯಾಗಬೇಕಿತ್ತು. ಪಾಠವಾಗಬೇಕಿತ್ತು. ಉಳಿದ ಪಕ್ಷಗಳ ಗೋಜಿಗೆ ಹೋಗದೆ ಅಪಾರ ಭರವಸೆಯನ್ನು ಮೂಡಿಸಿದ್ದ ಬಿಎಸ್ಪಿಮತ್ತು ಮಾಯಾವತಿಯವರ ವರ್ತನೆಗಳು ಮತ್ತು ಉದ್ದೇಶ ನಿರಾಶಾದಾಯಕವಾಗಿತ್ತು.

ರಾಧಿಕಾ ರಾಮಸೇಶನ್ ಅವರು ‘‘ಕಾನ್ಶೀರಾಂ ಅವರು ಮಾಯಾವತಿಯವರಿಗೆ ಸ್ವತಂತ್ರವಾಗಿ ಶಕ್ತಿ ಕೇಂದ್ರಿತ ರಾಜಕಾರಣ ಮಾಡಲು ಮುಕ್ತ ಅವಕಾಶ ನೀಡಿದ್ದರು. ಜಾಟವ್ ಮತ್ತು ಪಾಸಿ ದಲಿತ ಸಮುದಾಯಗಳ ಪ್ರಾತಿನಿಧ್ಯದಲ್ಲಿ ಸಮಸೂತ್ರತೆಯನ್ನು ಸಾಧಿಸಿಕೊಳ್ಳುತ್ತಾ ಹೊಸ ವ್ಯವಸ್ಥೆಯ ಮೂಲಕ ಹಳೆಯ ಕಟ್ಟುಪಾಡುಗಳನ್ನು ಬದಲಾಯಿಸುತ್ತಾ ಈ ಕೇಂದ್ರ ಸೂತ್ರಕ್ಕೆ ಹಿಂದುಳಿದ ವರ್ಗ ಕುರ್ಮಿ ಸಮುದಾಯದ ನಾಯಕರಾದಂತಹ ಜಂಗ ಬಹಾದ್ದೂರ್ ಪಟೇಲ್, ಬರ್ಕೂ ರಾಮ್ ವರ್ಮ, ರಾಮ ಲಖನ ವರ್ಮ, ಸೋನೇಲಾಲ್‌ರಂತಹ ಪಡೆಯನ್ನು ಒಳಗೊಳ್ಳುವುದರ ಮೂಲಕ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕೆಂದು ಕಾನ್ಶೀರಾಂ ಆಶಿಸಿದ್ದರು. ಆ ಕಾಲದಲ್ಲಿ ಈ ಹಿಂದುಳಿದ ಕುರ್ಮಿ ಸಮುದಾಯಕ್ಕೆ ಬಿಎಸ್ಪಿ ಪಕ್ಷದಲ್ಲಿ ನೆಲೆ ಕಂಡುಕೊಳ್ಳುವುದು ಒಂದು ಹಿತಕರವಾದ ಅನುಭವವಾಗಿತ್ತು. ಆದರೆ ಮಾಯಾವತಿಯವರ ಆಡಳಿತದ ಸಂದರ್ಭದಲ್ಲಿ ಕುರ್ಮಿ ಸಮುದಾಯದ ನಾಯಕರು ಬಿಎಸ್ಪಿ ಪಕ್ಷದಲ್ಲಿ ಬಹುಕಾಲ ಉಳಿಯಲಿಲ್ಲ. ಅವರು ಎಸ್‌ಪಿ ಪಕ್ಷಕ್ಕೆ ಸೇರಿಕೊಂಡರು. ಇವರ ಸ್ಥಾನದಲ್ಲಿ ಮೌರ್ಯ, ಚೌಹಾಣ್‌ರಂತಹ ಹಿಂದುಳಿದ ಜಾತಿಗಳನ್ನು ಮತ್ತು ಬ್ರಾಹ್ಮಣ, ಬನಿಯಾದಂತಹ ಮೇಲ್ಜಾತಿಗಳಿಗೆ ಪಕ್ಷದೊಳಗೆ ಪ್ರಮುಖ ಸ್ಥಾನ ನೀಡಿದರು’’ ಎಂದು ಹೇಳುತ್ತಾರೆ. ಆದರೆ 2009ರಲ್ಲಿ ಫಲ ನೀಡಿದ ಈ ಕಾಮನಬಿಲ್ಲು ಒಕ್ಕೂಟ 2017ರ ಚುನಾವಣೆಯ ಸಂದರ್ಭದಲ್ಲಿ ಸಂಪೂರ್ಣ ಛಿದ್ರಗೊಂಡು ಅದು ಬಿಜೆಪಿಗೆ ಪಕ್ಷಾಂತರ ಮಾಡಿದ್ದೂ ಆಯ್ತು. ಮಾಯಾವತಿ ಮುಗ್ಗರಿಸಿದ್ದೂ ಆಯ್ತು. ಇದರ ಜವಾಬ್ದಾರಿಯನ್ನೂ ಸ್ವತಃ ಮಾಯಾವತಿಯವರೇ ಹೊರಬೇಕಾದ ಅನಿವಾರ್ಯತೆ ಉಂಟಾಯಿತು.

ಮುಂದುವರಿದು ರಾಧಿಕಾ ರಾಮಸೇಶನ್ ಅವರು ‘‘ಕಳೆದ ವರ್ಷಗಳಲ್ಲಿ ಮಾಯಾವತಿಯವರ ಏಕಾಧಿಪತ್ಯದ ಬಿಎಸ್ಪಿಯರಾಜಕೀಯ ಅಜೆಂಡಾದಲ್ಲಿ ದಲಿತರು ಮುಖ್ಯಭೂಮಿಕೆಯಲ್ಲಿ ಕಂಡುಬರಲೇ ಇಲ್ಲ. ದಲಿತ ಸಮುದಾಯವು ಕವಲು ಹಾದಿಯಲ್ಲಿತ್ತು. ಯಾದವ ಮತ್ತು ದಲಿತರ ನಡುವಿನ ಹಳೆಯದಾದ ಹಗೆತನದಿಂದಾಗಿ ಎಸ್‌ಪಿ ಪಕ್ಷವು ಯಾವ ಕಾಲಕ್ಕೂ ದಲಿತ ಸ್ನೇಹಿ ಆಗಿರಲೇ ಇಲ್ಲ. ‘ಹಿಂದೂವಾದಿ’ಗಳಾದ ದಲಿತ ಉಪಪಂಗಡಗಳು ಬಿಜೆಪಿಯೊಳಗೆ ಜೀರ್ಣಗೊಂಡವು ಮತ್ತು ಮುಂದಿನ ದಿನಗಳಲ್ಲಿಯೂ ಈ ಉಪಪಂಗಡಗಳು ಆತುರದಲ್ಲಿ ಸಂಘ ಪರಿವಾರವನ್ನು ತೊರೆಯುವುದೂ ಇಲ್ಲ. ದಶಕಗಳ ಕಾಲ ದಲಿತ ಸಮುದಾಯವನ್ನು ಅವರ ನಂಬಿಕೆಯನ್ನು ತಮ್ಮಿಂದಿಗೆ ಬೆಸೆದುಕೊಂಡಿದ್ದ ಕಾಂಗ್ರೆಸ್ ಇಂದು ಬಿಜೆಪಿ ದಾಳಿಯಲ್ಲಿ ನುಜ್ಜುಗುಜ್ಜಾಗಿದೆ, ಘಾಸಿಗೊಂಡಿದೆ, ಮುಂದೆ ಯಾವ ಬಗೆಯ ಸಾಮಾಜಿಕ ಮೈತ್ರಿಯನ್ನು ಮಾಡಿಕೊಳ್ಳಬೇಕು ಎನ್ನುವುದೂ ಗೊತ್ತಾಗದೆ ಸಂಪೂರ್ಣ ಸೋತು ಹೋಗಿದೆ. ಇಂತಹ ಸಂದರ್ಭದಲ್ಲಿ ಹದಿಹರೆಯದ ಯುವ ದಲಿತರು ‘ಭೀಮ್ ಆರ್ಮಿ’ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಸಹ್ರಾನ್‌ಪುರ ಅಡ್ವೋಕೇಟ್ ಚಂದ್ರಶೇಖರ ಆಝಾದ್ ಅವರ ನೇತೃತ್ವದಲ್ಲಿ ಭೀಮ್ ಆರ್ಮಿ ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿದೆ. ಆದರೆ ಇಂದಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಭೀಮ್ ಆರ್ಮಿ ತುಂಬಾ ದೂರ ಕ್ರಮಿಸಬೇಕಾಗಿದೆ’’ ಎಂದು ಬರೆಯುತ್ತಾರೆ. ಆದರೆ ಐದು ವರ್ಷಗಳ ನಂತರ ಈಗ ಚಂದ್ರಶೇಖರ ಆಝಾದ್ ಅವರ ಭೀಮ್ ಆರ್ಮಿ ಅಂತಹ ಸದ್ದು ಮಾಡುತ್ತಿಲ್ಲ. ಕಾರಣ ಏನೆಂದು ಗೊತ್ತಾಗುತ್ತಿಲ್ಲ.

ಆದರೆ ಒಂದು ಸ್ಪಷ್ಟವಾದ, ಗೊಂದಲಗಳಿಲ್ಲದ ಮಾನವೀಯ ರಾಜಕಾರಣದ ಅವಶ್ಯಕತೆ ಇರುವ ಇಂದಿನ ಸಂದರ್ಭದಲ್ಲಿ ಮಾಯಾವತಿ ಮತ್ತು ಬಿಎಸ್ಪಿಸಂಪೂರ್ಣ ಹಾದಿ ತಪ್ಪಿದಂತೆ ವರ್ತಿಸುತ್ತಿರುವುದು ಅಚ್ಚರಿ ಮತ್ತು ನಿರಾಶೆ ಮೂಡಿಸುತ್ತಿದೆ. ‘‘ದಲಿತ ಸಮುದಾಯದ ನಿರೀಕ್ಷೆಗಳನ್ನು, ಆಶೋತ್ತರಗಳನ್ನು ಗ್ರಹಿಸುವಲ್ಲಿ ಮಾಯಾವತಿ, ಪ್ರಕಾಶ್ ಅಂಬೇಡ್ಕರ್‌ರಂತಹ ನಾಯಕರು ವಿಫಲರಾದರು’’ ಎಂದು ಚಿಂತಕ ಬದರಿನಾರಾಯಣ್ ಬರೆಯುತ್ತಾರೆ. 1991ರ ಜಾಗತೀಕರಣದ ನಂತರ ಬದಲಾಗುತ್ತಿರುವ ಆರ್ಥಿಕ ಜಗತ್ತಿನ ಪರಿಣಾಮಗಳು ದಲಿತ ಸಮುದಾಯಕ್ಕೂ ತಟ್ಟಿದೆ. ನವ ಉದಾರೀಕರಣವು ಅಲ್ಪಸಂಖ್ಯೆಯ ದಲಿತ ಮಧ್ಯಮವರ್ಗವನ್ನು ಸೃಷ್ಟಿಸಿದೆ. ಇವರ ಆದ್ಯತೆಗಳೇ ಬೇರೆ. ಅದೇ ಸಂದರ್ಭದಲ್ಲಿ ಬಹುಸಂಖ್ಯೆಯ ದಲಿತ ವರ್ಗವು ಈ ಆರ್ಥಿಕ ಬದಲಾವಣೆಯಿಂದ ಹೊರಗುಳಿದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News