ಜಿಐಎಸ್ ಪರವಾನಿಗೆ ವಿವರಕ್ಕಾಗಿ ದೂರ ಸಂವೇದಿ ಅನ್ವಯಿಕ ಕೇಂದ್ರವನ್ನು ಬದಿಗಿಟ್ಟು ಖಾಸಗಿ ಕಂಪೆನಿಗೆ 95 ಕೋಟಿ ರೂ. ಪಾವತಿ
ವಿವಿಧ ಇಲಾಖೆಗಳ ಜಿಐಎಸ್ ಪರವಾನಿಗೆ ವಿವರಕ್ಕಾಗಿ ದೂರ ಸಂವೇದಿ ಅನ್ವಯಿಕ ಕೇಂದ್ರವನ್ನು ಬದಿಗಿಟ್ಟು ಖಾಸಗಿ ಕಂಪೆನಿಗೆ 95 ಕೋಟಿ ರೂ. ಪಾವತಿ
ಬೆಂಗಳೂರು: ಕಳೆದ ಮೂವತ್ತೊಂದು ವರ್ಷಗಳಿಂದಲೂ ರಾಜ್ಯದಲ್ಲಿ ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರವು ಕಾರ್ಯಾಚರಿಸುತ್ತಿದ್ದರೂ ರಾಜ್ಯದ ಅರಣ್ಯ, ಶಿಕ್ಷಣ, ಕಂದಾಯ ಇಲಾಖೆಯೂ ಸೇರಿದಂತೆ 26 ವಿವಿಧ ಇಲಾಖೆಗಳು, ಸಂಸ್ಥೆಗಳು ಜಿಐಎಸ್ ಪರವಾನಿಗೆ ವಿವರಗಳನ್ನು ಖಾಸಗಿ ಕಂಪೆನಿಗೆ ವಹಿಸಿ 95 ಕೋಟಿ ರೂ.ಯನ್ನು ಪಾವತಿಸಿರುವುದು ಇದೀಗ ಬಹಿರಂಗವಾಗಿದೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಮೂಲಕ ಜಿಐಎಸ್ ಚಟುವಟಿಕೆ ಸೇವೆ ಮತ್ತು ಸಾಫ್ಟ್ ವೇರ್ ಪರವಾನಿಗೆಗಳನ್ನು 30 ಕೋಟಿ ರೂ. ವೆಚ್ಚದಲ್ಲಿ ಪಡೆದಿದ್ದರೆ ರಾಜ್ಯದ ಬೊಕ್ಕಸಕ್ಕೆ 65.00 ಕೋಟಿ ರೂ. ಉಳಿತಾಯವಾಗುತ್ತಿತ್ತು. ಆದರೆ ಖಾಸಗಿ ಕಂಪೆನಿಯಿಂದ ಪ್ರತ್ಯೇಕವಾಗಿ ಪರವಾನಿಗೆ ಪಡೆಯುವ ಮೂಲಕ 95.38 ಕೋಟಿ ರೂ. ವೆಚ್ಚ ಮಾಡಿರುವುದು ಗೊತ್ತಾಗಿದೆ.
ಜಿಐಎಸ್ ಚಟುವಟಿಕೆ ಸುಗಮಗೊಳಿಸುವ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸರಕಾರದ ಪ್ರಧಾನ ಕಾರ್ಯದರ್ಶಿ 2022ರ ಜೂನ್ 7ರಂದು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ನಿರ್ದೇಶಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಈ ವಿವರಗಳಿವೆ. ಈ ಪತ್ರದ ಪ್ರತಿಯು "the-file.in' ಗೆ ಲಭ್ಯವಾಗಿದೆ.
ಐದು ವರ್ಷಗಳಲ್ಲಿ 26 ವಿವಿಧ ಇಲಾಖೆ/ಸಂಸ್ಥೆಗಳಿಂದ ಇಎಸ್‌ಆರ್‌ಐ ಇಂಡಿಯಾ ಟೆಕ್ನಾಲಾಜೀಸ್ ಲಿಮಿಟೆಡ್ ಅವರಿಂದ ಸಂಗ್ರಹಣೆ ಮಾಡಲಾದ ವಿವಿಧ ಜಿಐಎಸ್ ಸಾಫ್ಟ್‌ವೇರ್ ಲೈಸೆನ್ಸ್ ಮತ್ತು ಅದರ ವಿಸ್ತರಣೆ ವಿವರಗಳು, ಪ್ರತ್ಯೇಕವಾಗಿ ಪರವಾನಿಗೆಗಳನ್ನು ಪಡೆಯಲು 95.38 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
1986ರಲ್ಲಿಯೇ ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರವು ಕಾರ್ಯಾಚರಿಸುತ್ತಿದೆಯಾದರೂ ಹಿಂದಿನ ಸರಕಾರಗಳು ಇದರ ಸದುಪಯೋಗ ಪಡೆದುಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ಚಟುವಟಿಕೆಗಳನ್ನು ಸುಗಮಗೊಳಿಸಲು ಹಾಗೂ ಎಲ್ಲಾ ಇಲಾಖೆಗಳು, ಏಜೆನ್ಸಿಗಳಿಂದ ಉಪಗ್ರಹ ಚಿತ್ರಗಳು, ಜಿಐಎಸ್ ಸಾಫ್ಟ್‌ವೇರ್ ಪರವಾನಿಗೆಗಳ ಸಂಗ್ರಹಣೆಗಾಗಿ ಏಕಗವಾಕ್ಷಿ ವ್ಯವಸ್ಥೆಯನ್ನಾಗಿ 2021ರ ಸೆ.30ರಂದು ಕಡ್ಡಾಯಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಇಎಸ್‌ಆರ್‌ಐ ಇಂಡಿಯಾ ಟೆಕ್ನಾಲಾಜೀಸ್ ಲಿಮಿಟೆಡ್ ಬದಲಿಗೆ ಎಲ್ಲಾ ಪರವಾನಿಗೆಗಳು ಮತ್ತು ಸಂಪನ್ಮೂಲಗಳನ್ನು ಏಕೈಕವಾಗಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಮೂಲಕ ಒಗ್ಗೂಡಿಸಿದಲ್ಲಿ ಅಗತ್ಯವಿರುವ ಜಿಐಎಸ್ ದತ್ತಾಂಶ ಮತ್ತು ಸಾಫ್ಟ್‌ವೇರ್ ಸಂಗ್ರಹಣೆಗೆ ಮತ್ತು ವಿಶ್ಲೇಷಣೆಗೆ ತಜ್ಞರ ಖರ್ಚು ಸೇರಿ 30.00 ಕೋಟಿ ರೂ. ವೆಚ್ಚವಾಗಿ ರಾಜ್ಯದ ಬೊಕ್ಕಸಕ್ಕೆ 65.00 ಕೋಟಿ ರೂ. ಉಳಿತಾಯವಾಗುತ್ತದೆ ಎಂಬ ಮಾಹಿತಿ ಪತ್ರದಲ್ಲಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಅಗತ್ಯವಿರುವ ಸಾಫ್ಟ್ ವೇರ್ ಪಟ್ಟಿಯನ್ನು ಮೌಲ್ಯೀಕರಿಸಲು ಮತ್ತು ಮುಂದಿನ 2-3 ವರ್ಷಗಳಲ್ಲಿ ಅವಶ್ಯಕವಿರುವ ಪರವಾನಿಗೆಗಳ ವಿವರಗಳನ್ನು ಸರಳವಾದ ಪ್ರಶ್ನಾವಳಿ, ನಮೂನೆಯಲ್ಲಿ ದಾಖಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ರಾಜ್ಯ ಯೋಜನೆ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.
ದೂರಸಂವೇದಿ ಅನ್ವಯಿಕ ಕೇಂದ್ರವು ರಾಜ್ಯದಲ್ಲಿ 1986ರಲ್ಲಿ ಸ್ಥಾಪಿಸಲಾಗಿತ್ತಲ್ಲದೆ ಜಿಐಎಸ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯಾಗಿ 2002ರ ಆಗಸ್ಟ್ 6ರಂದೇ ಘೋಷಿಸಲಾಗಿತ್ತು. ಅಲ್ಲದೆ ಈ ನೋಡಲ್ ಏಜೆನ್ಸಿಯು ಯಾವುದೇ ಸರಕಾರಿ ಇಲಾಖೆ, ಶಾಸನ ಬದ್ಧ ಮಂಡಳಿ ಅಥವಾ ಸರಕಾರಿ ಸ್ವಾಮ್ಯದ ಉದ್ಯಮಗಳು ದೂರ ಸಂವೇದನೆ ಮತ್ತು ಜಿಐಎಸ್ ಮೂಲಕ ಸಂಗ್ರಹಿಸಿದ ಮಾಹಿತಿ/ದತ್ತಾಂಶ/ನಕ್ಷೆಗಳ ಸಂಗ್ರಹಣಾ ಭಂಡಾರವಾಗಿರುತ್ತದೆ ಎಂದೂ ಸೂಚಿಸಲಾಗಿತ್ತು.
ಈ ನೋಡಲ್ ಏಜೆನ್ಸಿಯು ಜಿಐಎಸ್ ಮೂಲ ನಕ್ಷೆಗಳನ್ನು ಮತ್ತು ಸಾಮಾನ್ಯ ವೈಶಿಷ್ಯಗಳನ್ನು ರಚಿಸಿ ಎಲ್ಲಾ ಇಲಾಖೆಗಳಿಗೆ ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಗೆ ಸಂಬಂಧಿಸಿದ ಪೂರ್ಣ ಸೇವೆಯನ್ನು ಒದಗಿಸುತ್ತದೆ. ಜಿಪಿಎಸ್ ದತ್ತಾಂಶವನ್ನು ನವೀಕರಿಸುವ ಮತ್ತು ಜಿಐಎಸ್ ಅನ್ವಯಿಕೆಗಳ ಗ್ರಾಹಕೀಕರಣವನ್ನು ಕೈಗೊಳ್ಳುವ ಮುನ್ನ ಇಲಾಖೆಗಳು ಈ ಕೇಂದ್ರದೊಡನೆ ಸಮಾಲೋಚಿಸಬೇಕು. ದತ್ತಾಂಶವನ್ನು ಆಗಿಂದಾಗ್ಗೆ ನವೀಕರಿಸುವ ಕೆಲಸವನ್ನು ಕೈಗೊಂಡ ನಂತರ ಅದನ್ನು ನೋಡಲ್ ಏಜೆನ್ಸಿಯ ಸುಪರ್ದಿಗೆ ವರ್ಗಾಯಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿತ್ತು.
ಇಲಾಖೆಗಳ ನಡುವೆ ಪರಸ್ಪರ ಸಮನ್ವಯ ಮತ್ತು ಹೊಂದಾಣಿಕೆ ತರಲು ನೋಡಲ್ ಏಜೆನ್ಸಿಯು ಯೋಜನೆ/ದೂರ ಸಂವೇದನೆಯ ವಾಸ್ತು ಶಿಲ್ಪ ಹಾಗೂ ಜಿಐಎಸ್ ಅನುಷ್ಠಾನ/ ಹೊಸ ಪ್ರಸ್ತಾವಗಳು/
ಸಾಂಕೇತಿಕರಣ / ಪ್ರಮಾಣೀಕರಣ /ತರಬೇತಿ ಮತ್ತು ನಿಯಮಿತವಾಗಿ ಕಾರ್ಯಗಾರಗಳ ಆಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಇದರೊಂದಿಗೆ ಕೇಂದ್ರವು ಇಲಾಖೆಗಳಿಗೆ ಅಗತ್ಯವಿರುವ ಜಿಐಎಸ್ ಮಾಹಿತಿ/ ನಕ್ಷೆಗಳನ್ನು ಒದಗಿಸುವ ಮತ್ತು ತರಬೇತಿ ನೀಡುವ ಮೂಲಕವೂ ಸಹಕರಿಸುತ್ತಿದೆ ಎಂಬುದು ಅನ್ವಯಿಕ ಕೇಂದ್ರದ ವೆಬ್‌ಸೈಟ್‌ನಿಂದ ಗೊತ್ತಾಗಿದೆ.