ಅಬ್ದುಲ್ ಗಫ್ಫಾರ್ ಎಂಬ ಬಾವುಟದಜ್ಜ
ಯಾರೂ ಯಾರ ಮುಂದೆಯೂ ತಮ್ಮ ದೇಶಪ್ರೇಮವನ್ನು ಸಾಬೀತುಪಡಿಸಬೇಕಾದ ಅಗತ್ಯವಿಲ್ಲ. ಆದರೆ, ಇಂದಿನ ದಿನಗಳಲ್ಲಿ ಮುಸ್ಲಿಮರು, ಕ್ರೈಸ್ತರು ಮುಂತಾಗಿ ಅಲ್ಪಸಂಖ್ಯಾತರು ತಮ್ಮದೇ ದೇಶದಲ್ಲಿ ತಮ್ಮ ದೇಶಪ್ರೇಮವನ್ನು ಬೇಗಡೆ ದೇಶಪ್ರೇಮಿಗಳ ಎದುರು ಮತ್ತೆಮತ್ತೆ ತೋರಿಸಬೇಕಾಗಿಬಂದಿದೆ. ಅವರಿಗಾಗಿ ಅಲ್ಲವಾದರೂ ನಿಜವಾದ ದೇಶಪ್ರೇಮಿಗಳಿಗಾಗಿ ಕಳೆದ 60 ವರ್ಷಗಳಿಂದ ರಾಷ್ಟ್ರ ಧ್ವಜ ತಯಾರಿಕೆಯನ್ನೇ ತನ್ನ ಉದ್ಯೋಗ ಮಾಡಿಕೊಂಡಿರುವ ದಿಲ್ಲಿಯ ಅಬ್ದುಲ್ ಗಫ್ಫಾರ್ ಅವರ ಕಿರು ಪರಿಚಯ ಇಲ್ಲಿದೆ.
ತನ್ನದೊಂದು ಸಣ್ಣ ಕಾರ್ಯಾಗಾರದಲ್ಲಿ ಒಂದೇ ದಿನದಲ್ಲಿ 1.5 ಲಕ್ಷ ಧ್ವಜಗಳನ್ನು ತಯಾರಿಸಿ ತನ್ನದೇ ದಾಖಲೆ ಮುರಿದಿರುವ ದಿಲ್ಲಿಯ ಅಬ್ದುಲ್ ಗಫ್ಫಾರ್ ಅವರು ಸುದ್ದಿಯಲ್ಲಿದ್ದಾರೆ. ಆದರೆ, ಧ್ವಜ ತಯಾರಿಕೆ ಕೇವಲ ಅವರ ಉದ್ಯೋಗ ಮಾತ್ರವಲ್ಲ; ಕಳೆದ 60 ವರ್ಷಗಳಿಂದ ಅದು ಅವರ ಜೀವನವೇ ಆಗಿ ಹೋಗಿದೆ.
ದಿಲ್ಲಿಯ ಸದರ್ ಬಝಾರ್‌ನ 71 ವರ್ಷ ಪ್ರಾಯದ ಅಬ್ದುಲ್ ಗಫ್ಫಾರ್, ತನ್ನ 11ನೇ ವಯಸ್ಸಿನಿಂದಲೇ ರಾಷ್ಟ್ರಧ್ವಜ ಹೊಲಿದು ಮಾರುವ ವೃತ್ತಿಯಲ್ಲಿ ತೊಡಗಿದ್ದರು. ಈಗ ಅಲ್ಲಿ ಅಂಗಡಿಯೊಂದರಲ್ಲಿ ತನ್ನ ಕಾರ್ಯಾಗಾರ ಮಾಡಿಕೊಂಡು ಹೊಲಿಗೆ ಯಂತ್ರಗಳು ಮತ್ತು ಕೆಲಸಗಾರರನ್ನು ಇಟ್ಟುಕೊಂಡು ತನ್ನ ವೃತ್ತಿಯನ್ನು ಮುಂದುವರಿಸಿದ್ದಾರೆ. ಅವರ ಸಂಸ್ಥೆಯ ಹೆಸರೇ ಭಾರತ್ ಹ್ಯಾಂಡ್‌ಲೂಮ್ಸ್.
ಸ್ಥಳೀಯವಾಗಿ ಝಂಡೇವಾಲ ಭಾಯಿ, ಮಾಮ, ಕಾಕಾ, ದಾದಾ, ನಾನಾ (ಬಾವುಟದ ಅಣ್ಣ, ಮಾವ, ಅಜ್ಜ) ಎಂದೇ ಪರಿಚಿತರಾಗಿರುವ ಅಬ್ದುಲ್ ಗಫ್ಫಾರ್, ತನ್ನ ಬಾವುಟಗಳು ತುರ್ತುಪರಿಸ್ಥಿತಿಯಿಂದ ಹಿಡಿದು ಅಣ್ಣಾ ಹಝಾರೆಯ ಆಂದೋಲನದ ತನಕ ಹಲವು ಹೋರಾಟಗಳನ್ನೂ ಕಂಡಿವೆ ಎಂದು ಹೆಮ್ಮೆಪಡುತ್ತಾರೆ. ಸದ್ಯಕ್ಕೆ ಅವರ ಕಾರ್ಯಾಗಾರದಲ್ಲಿರುವ ಎಲ್ಲಾ ನಾಲ್ಕು ಕೋಣೆಗಳು ನೆಲದಿಂದ ಅಟ್ಟದ ವರೆಗೆ ಬೇರೆಬೇರೆ ಗಾತ್ರದ ರಾಷ್ಟ್ರಧ್ವಜಗಳಿಂದ ತುಂಬಿದ್ದು, ಸ್ವಾತಂತ್ರ್ಯ ದಿನಾಚರಣೆಗಾಗಿ ಕಾಯುತ್ತಿವೆ.
ಹೀಗಿದ್ದರೂ, ಗಫ್ಫಾರ್ ಅವರು ಒಂದು ವಲಯದಲ್ಲಿ ಮಾತ್ರ ಪರಿಚಿತರಾಗಿದ್ದರೇ ಹೊರತು ಮಾಧ್ಯಮಗಳಲ್ಲಿ ಸುದ್ದಿಯಾಗಿರಲಿಲ್ಲ. ಇದೀಗ ನರೇಂದ್ರ ಮೋದಿ ಸರಕಾರವು 'ಹರ್ ಘರ್ ತಿರಂಗ' ಎಂಬ ಹೆಸರಿನಲ್ಲಿ ದೇಶದ 20 ಕೋಟಿ ಮನೆಗಳಲ್ಲಿ ಆಗಸ್ಟ್ 13ರಿಂದ 15ರ ತನಕ ರಾಷ್ಟ್ರ ಧ್ವಜ ಹಾರಿಸಬೇಕು ಎಂಬ ಅಭಿಯಾನವನ್ನು ಜನಾಂದೋಲನದ ಹೆಸರಿನಲ್ಲಿ ಆರಂಭಿಸಿರುವುದರಿಂದಾಗಿ ಮಾಧ್ಯಮಗಳೂ ಬಾವುಟಗಳ ಹಿಂದೆ ಬಿದ್ದಿದ್ದು, ಅವರ ಕಣ್ಣಿಗೆ ಗಫ್ಫಾರ್ ಬಿದ್ದಿದ್ದಾರೆ.
1975ರಲ್ಲಿ ಮತ್ತು ಹತ್ತು ವರ್ಷಗಳ ನಂತರ ಬಾವುಟಕ್ಕೆ ಭಾರೀ ಬೇಡಿಕೆ ಬಂದಿತ್ತು. ಆದರೆ, ಈ ಸಲದಷ್ಟು ಬೇಡಿಕೆ ಯಾವತ್ತೂ ಬಂದಿರಲಿಲ್ಲ ಎಂದವರು ಹೇಳಿದ್ದಾರೆ.
ಸಾಮಾನ್ಯವಾಗಿ ನಾವು ಆಗಸ್ಟ್ 15 ಹತ್ತಿರ ಬರುತ್ತಿರುವಂತೆ ಪ್ರತೀ ದಿನ 4,000ದಿಂದ 5,000 ಧ್ವಜಗಳನ್ನು ತಯಾರಿಸುತ್ತಿದ್ದೆವು. ಆದರೆ, ಈ ಬಾರಿ ಮಾತ್ರ ಪ್ರತೀ ದಿನ ಒಂದು ಲಕ್ಷಕ್ಕೂ ಹೆಚ್ಚು ಬಾವುಟಗಳನ್ನು ತಯಾರಿಸುತ್ತಿದ್ದೇವೆ. ಈ ಬಾರಿ ಬೇಡಿಕೆ ಎಷ್ಟಿದೆ ಎಂದರೆ, ಅಂಗಡಿಗಳು ಮತ್ತು ಕಾರ್ಖಾನೆಗಳು ದಿನದ ಇಪ್ಪತ್ತನಾಲ್ಕು ಗಂಟೆಗಳೂ ತೆರೆದಿದ್ದು ಕಾರ್ಮಿಕರು ನಾಲ್ಕು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗಫ್ಫಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರತೀದಿನ ಈಗ 500 ಕರೆಗಳು ಬರುತ್ತಿವೆ ಎಂದು ಗಫ್ಫಾರ್ ಅವರ ಕಿರಿಯ ಸಹೋದರ ಅಬ್ದುಲ್ ಮಲಿಕ್ ಸದರ್ ಹೇಳುತ್ತಾರೆ. ಎಲ್ಲಾ ಆರು ಸಹೋದರರು ಹಿರಿಯರಿಂದಲೇ ಬಂದ ಈ ಕೌಟುಂಬಿಕ ವೃತ್ತಿಗೆ ಅಂಟಿಕೊಂಡಿದ್ದಾರೆ.
ಮುಂದೆ ದಿನವೊಂದರ ಬಾವುಟ ಉತ್ಪಾದನೆ ಎರಡು ಲಕ್ಷ ದಾಟಬಹುದು. ಬಹುಶಃ ಅದು ಈ ತನಕದ ಎಲ್ಲಾ ದಾಖಲೆಗಳನ್ನು ಮುರಿಯಬಹುದು. ನಮ್ಮದು ರಾಷ್ಟ್ರಧ್ವಜ ತಯಾರಿಸುವ ಮೊದಲ, ಅತ್ಯಂತ ಹಳೆಯ ಅಂಗಡಿ. ಅಂದಿನಿಂದ ಈಗ ಮಾತ್ರವೇ ಎಡೆಬಿಡದೇ ಕೆಲಸ ಪಡೆಯುತ್ತಿರುವುದು. ವ್ಯಾಪಾರ ಮತ್ತು ಲಾಭವನ್ನು ಬದಿಗಿಟ್ಟು ಹೇಳುವುದಾದರೂ, ಇದು ನಮಗೆಲ್ಲರಿಗೂ ಒಳ್ಳೆಯ ಕಾಲ. ಬಹಳಷ್ಟು ಮಂದಿಗೆ ಉದ್ಯೋಗ ಮತ್ತು ಒಳ್ಳೆಯ ಸಂಬಳ ನೀಡಲು ಸಾಧ್ಯವಾಗಿದೆ ಎನ್ನುತ್ತಾರೆ ಗಫ್ಫಾರ್.
ಅವರ ಅಂಗಡಿಗಾಗಿ ಸುಮಾರು 500ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು. ಹಿಂದೆಲ್ಲಾ ಅವರು ದಿನಕ್ಕೆ 200-250 ರೂ. ದುಡಿಯುತ್ತಿದ್ದರು. ಈಗ 800-1,000ರೂ. ದುಡಿಯುತ್ತಿದ್ದಾರೆ.
ತಾನು ವೈಯಕ್ತಿಕವಾಗಿ ದಿನಕ್ಕೆ 500-700 ಬಾವುಟ ಹೊಲಿಯುತ್ತಿರುವುದಾಗಿ ಗಫ್ಫಾರ್ ಬಳಿ ಕೆಲಸ ಮಾಡುವ ಝಹೂರ್ ಅಹ್ಮದ್ ಹೇಳುತ್ತಾರೆ. ಅವರೂ ಮೂವತ್ತು ವರ್ಷಗಳಿಂದ ಇದೇ ಕೆಲಸದಲ್ಲಿ ತೊಡಗಿದ್ದಾರೆ.
ಹಿಂದೆ ಚೀನಾದಿಂದಲೇ ಹೆಚ್ಚಿನ ಧ್ವಜಗಳು ಬರುತ್ತಿದ್ದವು. ಈ ಬಾರಿ ಭಾರತೀಯರೇ ಧ್ವಜ ತಯಾರಿಸುತ್ತಿರುವುದು ವಿಶೇಷ ಎಂದು ಹತ್ತಿರದ ಮಸೀದಿಯ ಇಮಾಮ್ ಮುಹಮ್ಮದ್ ರಹಮತುಲ್ಲಾ ಹೇಳುತ್ತಾರೆ. ಆದರೆ, ಈ ಮಾತು ನಿಜವಲ್ಲ. ಈ ಬಾರಿಯೂ ಬೇಡಿಕೆಯಷ್ಟು ಬಾವುಟಗಳು ಇಲ್ಲಿ ಸಿದ್ಧವಾಗದೇ ಇರುವುದರಿಂದ ಈ ಬಾರಿಯೂ ಭಾರೀ ಪ್ರಮಾಣದಲ್ಲಿ ಚೀನೀ ಬಾವುಟ ಆಮದಾಗಿದೆ.
ತನ್ನೆಲ್ಲಾ ವ್ಯವಹಾರಗಳ ನಡುವೆಯೂ ಅಬ್ದುಲ್ ಗಫ್ಫಾರ್ ವೈಯಕ್ತಿಕವಾಗಿ ಈಗಲೂ ಬಾವುಟ ಹೊಲಿಯುತ್ತಾರಂತೆ. ''ಮೈ ಯೇ ದೇಶ್ ಕೇ ಲಿಯೇ ಕರ್‌ತಾ ಹೂಂ'' (ನಾನಿದನ್ನು ದೇಶಕ್ಕಾಗಿ ಮಾಡುತ್ತಿದ್ದೇನೆ) ಎಂದು ಅವರು ಹೇಳುತ್ತಾರೆ.
ಆದರೆ, ಸ್ವಲ್ಪರೊಮ್ಯಾಂಟಿಕ್ ಅನಿಸುವ ಈ ವಿಷಯದ ನಡುವೆ ನಿರಾಶಾದಾಯಕ ವಿಚಾರಗಳನ್ನು ಹೇಳಬೇಕು. ಇವರ ಈ ಸಂತಸ ಮುಂದಿನ ವರ್ಷ ಉಳಿಯುವ ಸಾಧ್ಯತೆ ಕಡಿಮೆ. ಈ ಬರಹದ ಮೂಲ ಉದ್ದೇಶವೇ ಈ ಕಹಿ ಸತ್ಯವನ್ನು ಹೇಳುವುದು.
ಸರಕಾರವು ಇತ್ತೀಚೆಗೆ ಭಾರತ ಧ್ವಜ ಸಂಹಿತೆ 2002ಕ್ಕೆ ಸದ್ದಿಲ್ಲದೇ ಬದಲಾವಣೆ ತಂದು, ಯಂತ್ರಗಳಿಂದ ಮಾಡಿದ ಪಾಲಿಸ್ಟರ್ ತ್ರಿವರ್ಣ ಧ್ವಜಕ್ಕೆ (ವಾಸ್ತವದಲ್ಲಿ ನಾಲ್ಕು ಬಣ್ಣಗಳು) ಅವಕಾಶ ನೀಡಿದೆ. ಅದು ರಾಷ್ಟ್ರಧ್ವಜದೊಂದಿಗೆ ಮಹಾತ್ಮಾ ಗಾಂಧಿಯವರಿಗೆ ಇದ್ದ ಕೊನೆಯ ಕೊಂಡಿಯನ್ನು ಕಡಿದುಹಾಕಿದೆ.
ಇದರ ಬಿಸಿ ಕರ್ನಾಟಕ ರಾಜ್ಯಕ್ಕೆ ಬಹಳವಾಗಿ ತಟ್ಟಲಿದೆ. ಭಾರತದಾದ್ಯಂತದ ಸರಕಾರ ಮತ್ತು ಇತರ ಅಧಿಕೃತ ಸಂಸ್ಥೆಗಳು ರಾಷ್ಟ್ರಧ್ವಜವನ್ನು ತಯಾರಿಸಿ ಪೂರೈಸಲು ಮಾನ್ಯತೆ ಪಡೆದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಿಂದ ಪಡೆದ ಧ್ವಜಗಳನ್ನೇ ಉಪಯೋಗಿಸುವುದು ಅನಿವಾರ್ಯವಾಗಿತ್ತು. ಇದಲ್ಲದೆ, ಸಾಂಕೇತಿಕ ಮತ್ತು ಭಾವನಾತ್ಮಕ ಮೌಲ್ಯದ ಜೊತೆಗೆಯೇ, ಇದು ಸಾವಿರಾರು ಕುಟುಂಬಗಳಿಗೆ ಜೀವನಾಧಾರವಾಗಿತ್ತು. ಮುಂದೆ ಯಂತ್ರದಿಂದ ತಯಾರಿಸಿದ ಪಾಲಿಸ್ಟರ್ ಬಾವುಟಗಳು ಬರುತ್ತಿರುವುದರಿಂದ ಅವರೆಲ್ಲರೂ ಕೆಲಸ ಕಳೆದುಕೊಳ್ಳುವುದು ಖಂಡಿತ. ಆದರೂ ರಾಜ್ಯ ಸರಕಾರ ಒಂದು ಶಬ್ದವನ್ನೂ ಆಡಿಲ್ಲ. ನಕಲಿ ದೇಶಪ್ರೇಮದ ಹೆಸರಿನಲ್ಲಿ ಈ ಅಸಲಿ ಬಡವರ ಹೊಟ್ಟೆಗೆ ಹೊಡೆಯಲಾಗುತ್ತಿರುವುದು ಮೋದಿ ಸರಕಾರದ ನೂರಾರು ವಿಪರ್ಯಾಸಗಳಲ್ಲಿ ಒಂದು!