ಕಾಮನ್ ವೆಲ್ತ್ ಗೇಮ್ಸ್: ಭಾರತ ಮಹಿಳಾ ಟ್ವೆಂಟಿ-20 ತಂಡಕ್ಕೆ ಬೆಳ್ಳಿ
ಬರ್ಮಿಂಗ್ ಹ್ಯಾಮ್: ಭಾರತ ಮಹಿಳಾ ಕ್ರಿಕೆಟ್ ತಂಡ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಟ್ವೆಂಟಿ-20 ಕ್ರಿಕೆಟ್ ಫೈನಲ್ ನಲ್ಲಿ ಆಸ್ಟ್ರೇಲಿಯ ವಿರುದ್ಧ 9 ರನ್ ಗಳ ಅಂತರದಿಂದ ಸೋಲನುಭವಿಸಿದೆ. ಈ ಮೂಲಕ ಬೆಳ್ಳಿ ಪದಕ ಜಯಿಸಿದೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಗೆಲ್ಲಲು 162 ರನ್ ಗುರಿ ಪಡೆದಿದ್ದ ಭಾರತವು 19.3 ಓವರ್ ಗಳಲ್ಲಿ 152 ರನ್ ಗೆ ಆಲೌಟಾಯಿತು. ನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗಸ್ 96 ರನ್ ಜೊತೆಯಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಭಾರತವು ಕೇವಲ 34 ರನ್ ಗೆ 8 ವಿಕೆಟ್ ಗಳನ್ನು ಕಳೆದುಕೊಂಡು ಮಧ್ಯಮ ಸರದಿಯ ಕುಸಿತಕ್ಕೆ ಒಳಗಾಯಿತು. ಭಾರತಕ್ಕೆ ಕೊನೆಯ ಓವರ್ ನಲ್ಲಿ ಗೆಲುವಿಗೆ 11 ರನ್ ಅಗತ್ಯವಿತ್ತು. ಮೇಘನಾ ಸಿಂಗ್ ರನೌಟಾದರು. ಅಂತಿಮವಾಗಿ 9 ರನ್ ನಿಂದ ಸೋಲನುಭವಿಸಿತು.
ವಿಶ್ವ ಚಾಂಪಿಯನ್ ಆಸ್ಟ್ರೇಲಿಯವು ಮೊದಲ ಬಾರಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದೆ. ಆಸ್ಟ್ರೇಲಿಯವು ಇದೀಗ ಟ್ವೆಂಟಿ-20 ವಿಶ್ವಕಪ್(2020), ಏಕದಿನ ವಿಶ್ವಕಪ್(2022) ಹಾಗೂ ಕಾಮನ್ ವೆಲ್ತ್ ಗೇಮ್ಸ್(2022) ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.