ಪಿಎಂ ಕಿಸಾನ್ ಸಮ್ಮಾನ್ ಸಹಿತ ಕೇಂದ್ರದ ಹಲವು ಯೋಜನೆಗಳಲ್ಲಿ ಇಲ್ಲ ನಿರೀಕ್ಷಿತ ಪ್ರಗತಿ
ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಯಾಂತ್ರಿಕತೆ ಅಭಿಯಾನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಪೋಷಣ ಅಭಿಯಾನ, ಮಾತೃ ವಂದನಾ ಸೇರಿದಂತೆ ಹಲವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹೆಚ್ಚು ಅನುದಾನ ಬಿಡುಗಡೆಯಾಗದ ಕಾರಣ ಅತ್ಯಂತ ಕಡಿಮೆ ಪ್ರಗತಿಯಾಗಿರುವುದು ಇದೀಗ ಬಹಿರಂಗವಾಗಿದೆ.
ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ 2022ರ ಜು.16ರಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ 2022-23ನೇ ಸಾಲಿನ ಮೊದಲನೇ ತ್ರೈ ಮಾಸಿಕದ ಉತ್ಪಾದನಾ ಅನುದಾನದ ವೆಚ್ಚದ ಕುರಿತು ಚರ್ಚೆಯಾಗಿದೆ. ಮೊದಲನೇ ತ್ರೈಮಾಸಿಕದಲ್ಲಿ ಉತ್ಪಾದನಾ ಅನುದಾನದಲ್ಲಿ ಶೇ.10ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಕೃಷಿ ಇಲಾಖೆಯೂ ಸೇರಿದಂತೆ ಹಲವು ಇಲಾಖೆಗಳ ಪಟ್ಟಿಯೂ ಬಿಡುಗಡೆಯಾಗಿದೆ. ಸಭೆ ನಡವಳಿಗಳ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
2022-23ನೇ ಸಾಲಿನಲ್ಲಿ ಮೊದಲನೇ ತ್ರೈಮಾಸಿಕದಲ್ಲಿ ಉತ್ಪಾದನಾ ಅನುದಾನದಲ್ಲಿ ಶೇ.10ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳ ಪೈಕಿ ಕೃಷಿ ಇಲಾಖೆ ಯಿಂದ ಕೇಂದ್ರ ಸರಕಾರದ ಯೋಜನೆಗಳಲ್ಲಿ ಹೆಚ್ಚು ಅನುದಾನ ಬಿಡುಗಡೆಯಾ
ಗಿಲ್ಲ. ಹೀಗಾಗಿ ಕಡಿಮೆ ಪ್ರಗತಿಯಾಗಿದೆ. ಮಾತೃವಂದನಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಇಲಾಖಾಧಿಕಾರಿಗಳು ವಿವರಿಸಿರುವುದು ನಡವಳಿಯಿಂದ ಗೊತ್ತಾಗಿದೆ.
ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯಲ್ಲಿ ಅನುಷ್ಠಾನಗೊಳಿಸಿರುವ ಬಿಸಿಯೂಟ, ಸಮಗ್ರ ಶಿಕ್ಷಣದಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 959.58 ಕೋಟಿ ರೂ. ಕೇಂದ್ರದ ಪಾಲಿನಲ್ಲಿ ಮೊದಲನೇ ತ್ರೈಮಾಸಿಕದಲ್ಲಿ ಬಿಡಿಗಾಸೂ ಬಂದಿಲ್ಲ.
ಅದೇ ರೀತಿ ಪ್ರಾಥಮಿಕ ಶಾಲೆಗಳ ಮೂಲಭೂತ ಸೌಕರ್ಯಗಳಿಗೆ 331.50 ಕೋಟಿ ರೂ. ಅನುದಾನದಲ್ಲಿಯೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ. ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ 135.00 ಕೋಟಿ ರೂ. ಪೈಕಿ 33.75 ಕೋಟಿ ರೂ. ಬಿಡುಗಡೆಯಾಗಿದೆಯಾದರೂ ಮೊದಲನೇ ತ್ರೈಮಾಸಿಕದಲ್ಲಿ ಶೂನ್ಯ ವೆಚ್ಚವಾಗಿದೆ ಎಂಬುದು ನಡವಳಿಯಿಂದ ಗೊತ್ತಾಗಿದೆ.
ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಡಿ (ಪ್ರವರ್ಗ-ಎ) ಉನ್ನತ ಶಿಕ್ಷಣ ಇಲಾಖೆಯಲ್ಲಿನ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ಕಾರ್ಯಕ್ರಮಕ್ಕೆ ಒದಗಿಸಿರುವ 25.00 ಕೋಟಿ ರೂ., ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೂಲಕ ಮಹಿಳೆಯರಿಗೆ ಬಡ್ಡಿ ಸಹಾಯಧನಕ್ಕೆ ಒದಗಿಸಿರುವ 50.00 ಕೋಟಿ ರೂ., ಭಾಗ್ಯಲಕ್ಷ್ಮೀ ಯೋಜನೆಗೆ ಒದಗಿಸಿರುವ 137.04 ಕೋಟಿ ರೂ., ಸ್ಫೂರ್ತಿ ಯೋಜನೆಗೆ ಒದಗಿಸಿರುವ 12.50 ಕೋಟಿ ರೂ., ಮಹಿಳಾ ಆಯೋಗ ಮತ್ತು ಮಹಿಳಾ ಕಲ್ಯಾಣ ಕಾರ್ಯಕ್ರಮಕ್ಕೆ ಒದಗಿಸಿರುವ 39.45 ಕೋಟಿ ರೂ.ಗಳಿಗೆ ಪ್ರಗತಿ ಶೂನ್ಯವಾಗಿದೆ ಎಂದು ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದ್ದಾರೆ.
ಮಾತೃ ವಂದನಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ. ಪೋಷಣ ಅಭಿಯಾನ (ರಾಷ್ಟ್ರೀಯ ಪೌಷ್ಠಿಕಾಂಶ ಅಭಿಯಾನ)ಕ್ಕೆ 2022-23ರ ಆಯವ್ಯಯದಲ್ಲಿ 51.00 ಕೋಟಿ ರೂ., ದೇವದಾಸಿಯರಿಗೆ ಮಾಸಾಶನಕ್ಕೆ 54.36 ಕೋಟಿ ರೂ., ಅಂಗನವಾಡಿಗಳ ಕಟ್ಟಡಕ್ಕೆ 70.00 ಕೋಟಿ ರೂ. ಅನುದಾನ ಒದಗಿಸಿದ್ದರೂ ಮೊದಲನೇ ತ್ರೈಮಾಸಿಕದಲ್ಲಿ ಈ ಮೂರೂ ಕಾರ್ಯಕ್ರಮಗಳಿಗೆ ಬಿಡಿಗಾಸೂ ಬಂದಿಲ್ಲ ಎಂಬುದು ಪ್ರಗತಿ ಪರಿಶೀಲನಾ ಸಭೆಯ ನಡವಳಿಯಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಆಹಾರ ಸುರಕ್ಷತೆ ಮಿಷನ್, ಇತರ ಬೆಳೆಗಳು ಮತ್ತು ಎಣ್ಣೆಕಾಳುಗಳ ಯೋಜನೆಗೆ 2022-23ರಲ್ಲಿ 167 ಕೋಟಿ ರೂ. ಅನುದಾನ ನಿಗದಿಯಾಗಿದ್ದರೂ ಮೊದಲನೇ ತ್ರೈಮಾಸಿಕದಲ್ಲಿ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಅದೇ ರೀತಿ ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆಗೆ 311.38 ಕೋಟಿ ರೂ., ಕೃಷಿ ಯಾಂತ್ರಿಕತೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ 2,000 ಕೋಟಿ ರೂ., ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 33.33 ಕೋಟಿ ರೂ. ಅನುದಾನದ ಪೈಕಿ ಮೊದಲನೇ ತ್ರೈಮಾಸಿಕದಲ್ಲಿ ಬಿಡಿಗಾಸೂ ಬಂದಿಲ್ಲ ಎಂದು ಕೃಷಿ ಇಲಾಖೆಯು ಮಾಹಿತಿ ಒದಗಿಸಿರುವುದು ಪ್ರಗತಿ ಪರಿಶೀಲನಾ ಸಭೆಯ ನಡವಳಿಯಲ್ಲಿ ಉಲ್ಲೇಖಿಸಲಾಗಿದೆ.