ಕೈಮುಗಿದು ಕೇಳುತ್ತೇನೆ, ದಯವಿಟ್ಟು ಚಿತ್ರಗಳನ್ನು ಬಹಿಷ್ಕರಿಸಬೇಡಿ‌, ಇದರಿಂದ ದೇಶಕ್ಕೆ ನಷ್ಟ: ಅಕ್ಷಯ್‌ ಕುಮಾರ್

Update: 2022-08-09 15:09 GMT
Photo: AkshayDevotte/Twitter

ಮುಂಬೈ: ಪ್ರಸ್ತುತ ತಮ್ಮ ಮುಂಬರುವ ಚಿತ್ರ ʼರಕ್ಷಾ ಬಂಧನʼದ ಪ್ರಚಾರದಲ್ಲಿ ನಿರತರಾಗಿರುವ ಅಕ್ಷಯ್ ಕುಮಾರ್, ಸಾಮಾಜಿಕ ಮಾಧ್ಯಮಗಳಲ್ಲಿ 'ಬಹಿಷ್ಕಾರ' ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ರೆಂಡಿಂಗ್ ಆಗುತ್ತಿರುವ ಚಲನಚಿತ್ರಗಳ ವಿಷಯದಲ್ಲಿ ಮಾತನಾಡಿದ್ದಾರೆ. ಚಿತ್ರಗಳ ಬಹಿಷ್ಕಾರಕ್ಕೆ ಪದೇ ಪದೇ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಬಿಕ್ಕಟ್ಟಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅಕ್ಷಯ್‌ ಕುಮಾರ್‌  ಚಲನಚಿತ್ರಗಳನ್ನು ಬಹಿಷ್ಕರಿಸಲು ಕರೆ ನೀಡದಂತೆ ಎಲ್ಲರಿಗೂ ವಿನಂತಿಸಿದ್ದಾರೆ.

ಬಹಿಷ್ಕಾರ ಕರೆಗಳನ್ನು ನೀಡಬೇಡಿ ಎಂದು ಅಕ್ಷಯ್ ಕುಮಾರ್ ಎಲ್ಲರಿಗೂ ಕೇಳಿಕೊಂಡಿದ್ದಾರೆ. ‌ರಕ್ಷಾಬಂಧನ್‌, ಆಮೀರ್‌ ಖಾನ್ ಅಭಿನಯದ ಲಾಲ್‌ ಸಿಂಗ್‌ ಚಡ್ಡಾ ಹಾಗೂ ರಣಬೀರ್‌ ಕಪೂರ್‌ ಅವರ ಬ್ರಹ್ಮಾಸ್ತ್ರ ಸೇರಿದಂತೆ ಹಲವು ಬಾಲಿವುಡ್‌ ಚಿತ್ರಗಳಿಗೆ ಬಲಪಂಥೀಯರು ಬಹಿಷ್ಕಾರ ಅಭಿಯಾನ ನಡೆಸುತ್ತಿದ್ದು, ಇದರಿಂದ ಬಾಲಿವುಡ್‌ ಆತಂಕಗೊಂಡಿದೆ. ಇತ್ತೀಚೆಗೆ ಬಾಲಿವುಡ್‌ನ ಹಲವು ಚಿತ್ರಗಳು ನೆಲಕಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರಿಗೆ ಹೊರೆ ಏರುತ್ತಿದೆ.

ಅಕ್ಷಯ್ ಕುಮಾರ್ ಅವರ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ 2022 ವರ್ಷವು ಇನ್ನೂ ಉತ್ತಮವಾಗಿಲ್ಲ. ಅವರ ಕೊನೆಯ ಎರಡು ಚಿತ್ರಗಳಾದ ಬಚ್ಚನ್ ಪಾಂಡೆ ಮತ್ತು ಸಾಮ್ರಾಟ್ ಪೃಥ್ವಿರಾಜ್ ನಿರೀಕ್ಷಿಸಿದಷ್ಟು ದುಡ್ಡನ್ನು ಗಳಿಸಿಕೊಂಡಿರಲಿಲ್ಲ. ಆಗಸ್ಟ್ 11 ರಂದು ಬಿಡುಗಡೆಯಾಗುವ ರಕ್ಷಾ ಬಂಧನದಲ್ಲಿ ಅಕ್ಷಯ್‌ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 

ರಕ್ಷಾ ಬಂಧನ್‌ ಚಿತ್ರದ ಪ್ರಚಾರಾರ್ಥವಾಗಿ IndiaToday.in ಜೊತೆಗೆ ಮಾಡಿದ ಸಂದರ್ಶನದಲ್ಲಿ  ಬಹಿಷ್ಕಾರ ಸಂಸ್ಕೃತಿಯ ಬಗ್ಗೆ ಮಾತನಾಡಿದ ಅವರು "ನಮ್ಮ ದೇಶದ ಆರ್ಥಿಕತೆಯನ್ನು ತಡೆಯುವುದು ಸರಿಯಲ್ಲ, ದಯವಿಟ್ಟು ಅದನ್ನು ಬಿಟ್ಟುಬಿಡಿ, ನಮ್ಮ ದೇಶವು ಮೇಲೆ ಬರುವುದು ಮುಖ್ಯ. ನೀವು ಹರಡುತ್ತಿರುವುದು ತಪ್ಪು, ಆದ್ದರಿಂದ ನಾನು ಸುಮ್ಮನೆ ನನ್ನ ಕೈಗಳನ್ನು ಜೋಡಿಸಿ ಕೇಳುತ್ತಿದ್ದೇನೆ, ಈ ಎಲ್ಲ ಕೆಲಸಗಳನ್ನು ಮಾಡಬೇಡಿ, ಇದು ಒಳ್ಳೆಯ ಸಂಕೇತವಲ್ಲ” ಎಂದು ಬಹಿಷ್ಕಾರ ಅಭಿಯಾನದಲ್ಲಿ ತೊಡಗಿರುವವರಿಗೆ ಅಕ್ಷಯ್‌ ಮನವಿ ಮಾಡಿದ್ದಾರೆ.  

ಇದನ್ನೂ ಓದಿ: 'ಲಾಲ್ ಸಿಂಗ್ ಛಡ್ಡಾ ಬಹಿಷ್ಕರಿಸಿ' ಎಂಬ ಹ್ಯಾಶ್‍ಟ್ಯಾಗ್‍ಗೆ ಆಮಿರ್‌ ಖಾನ್‌ ಪ್ರತಿಕ್ರಿಯೆ ಏನು ಗೊತ್ತೇ?

  "ಎಲ್ಲರಿಗೂ ಅವರು ಏನು ಬರೆಯಲು ಬಯಸುತ್ತಾರೆ ಎಂಬುದನ್ನು ಬರೆಯುವ ಹಕ್ಕಿದೆ, ಅವರಿಗೆ ಎಲ್ಲಾ ವಾಕ್ ಸ್ವಾತಂತ್ರ್ಯವಿದೆ, ಆದ್ದರಿಂದ ಅವರು ಏನು ಬೇಕಾದರೂ ಬರೆಯಬಹುದು. ಆದರೆ ಮತ್ತೆ, ಇದು ಕೇವಲ ವಿನಂತಿ, ಈ ಎಲ್ಲಾ ವಿಷಯಗಳನ್ನು ಹರಡಬೇಡಿ. , ಇದು ಒಳ್ಳೆಯದಲ್ಲ." ಎಂದು ಅಕ್ಷಯ್‌ ಕುಮಾರ್‌ ಹೇಳಿದ್ದಾರೆ.

 ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ಸಿನೆಮಾಗಳನ್ನು ಬಹಿಷ್ಕರಿಸುವ ಅಭಿಯಾನ ತೀವ್ರವಾಗಿದ್ದು, ಹಿಂದೂಗಳ ನಂಬಿಕೆಗಳಿಗೆ ಘಾಸಿ ಎಂಬ ಪ್ರತಿಪಾದನೆಯ ಮೇಲೆ ಬ್ರಹ್ಮಾಸ್ತ್ರ, ಲಾಲ್‌ ಸಿಂಗ್‌ ಚಡ್ಡಾ ಮೊದಲಾದ ಸಿನೆಮಾಗಳನ್ನು ಬಹಿಷ್ಕರಿಸಲು ಅಭಿಯಾನ ನಡೆಸಲಾಗುತ್ತಿದೆ. ಪ್ಯಾನ್‌ ಇಂಡಿಯಾ ಸಿನೆಮಾ ಮೂಲಕ ದಕ್ಷಿಣದ ಚಿತ್ರಗಳು ನೂರಾರು ಕೋಟಿ ಗಳಿಸುತ್ತಿರುವಾಗ ಬಾಲಿವುಡ್‌ ಚಿತ್ರಗಳು ಸತತವಾಗಿ ತೋಪೆದ್ದು ಹೋಗುತ್ತಿರುವುದರಿಂದ ಬಾಲಿವುಡ್‌ ಮಂದಿ ಆತಂಕಿತರಾಗಿದ್ದಾರೆ ಎಂಬ ಚರ್ಚೆಗಳೂ ನಡೆಯುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News