ಆಮಿರ್ ಖಾನ್ ಹೊಸ ಚಿತ್ರ ಲಾಲ್ ಸಿಂಗ್ ಛಡ್ಡಾದಲ್ಲಿ ಶಾರುಖ್ ಖಾನ್ !

Update: 2022-08-09 16:09 GMT
Photo: Twitter/SrkianDas04/ItsAnup_

ಮುಂಬೈ: ಆಮಿರ್‌ ಖಾನ್‌ ಅವರ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಟ ಆಮೀರ್ ಖಾನ್ ಅಂತಿಮವಾಗಿ ಖಚಿತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಆಮೀರ್ ಅವರು ಶಾರುಖ್ ಅವರನ್ನು ಚಿತ್ರದ ಭಾಗವಾಗಲು ಹೇಗೆ ಮನವರಿಕೆ ಮಾಡಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆದರೆ, ಶಾರುಖ್‌ರನ್ನು ಯಾವ ಪಾತ್ರದಲ್ಲಿ ವೀಕ್ಷಕರು ನೋಡಲಿದ್ದಾರೆ ಎಂಬುದನ್ನು ಆಮೀರ್ ಬಹಿರಂಗಪಡಿಸಿಲ್ಲ.

ಲಾಲ್ ಸಿಂಗ್ ಚಡ್ಡಾದಲ್ಲಿ, ಆಮೀರ್  ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರವು ಲಾಲ್ (ಅಮೀರ್) ತನ್ನ ಕನಸುಗಳು ಮತ್ತು ಪ್ರೀತಿಯನ್ನು ಬೆನ್ನಟ್ಟುವ ಪ್ರಯಾಣದ ಕಥಾಹಂದರವನ್ನು ಹೊಂದಿದೆ. ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಮತ್ತು ನಾಗ ಚೈತನ್ಯ ಕೂಡ ನಟಿಸಿದ್ದಾರೆ.

ಕೆನಡಾದ ಚಲನಚಿತ್ರ ಪತ್ರಕರ್ತ ಅಲೆಕ್ಸಾಂಡ್ರಾ ಅವರೊಂದಿಗೆ ಮಾತನಾಡುತ್ತಾ, ಶಾರುಖ್ ಅವರು ಅತಿಥಿ ಪಾತ್ರವನ್ನು ಮಾಡಲು ಹೇಗೆ ಬಂದರು ಎನ್ನುವುದನ್ನು ಆಮಿರ್‌ ವಿವರಿಸಿದ್ದಾರೆ. " ಶಾರುಖ್ ಒಬ್ಬ ಸ್ನೇಹಿತ.ಎಲ್ವಿಸ್ (ಪ್ರೀಸ್ಲಿ) ಅಮೇರಿಕಾವನ್ನು ಪ್ರತಿನಿಧಿಸುವಂತೆ ಪ್ರತಿನಿಧಿಸುವ ಯಾರಾದರೂ ನನಗೆ ಬೇಕು ಎಂದು ನಾನು ಅವರಿಗೆ ಹೇಳಿದೆ. ಭಾರತದ ದೊಡ್ಡ ಐಕಾನಿಕ್ ಸ್ಟಾರ್ ಬೇಕು, ಅದಕ್ಕಾಗಿಯೇ ನಾನು ನಿಮ್ಮ ಬಳಿಗೆ ಬಂದಿದ್ದೇನೆ. ಅವರು ಒಪ್ಪಿಕೊಂಡರು” ಎಂದು ಶಾರುಖ್‌ ಚಿತ್ರದ ಭಾಗವಾದುದನ್ನು ಆಮಿರ್‌ ಬಹಿರಂಗಪಡಿಸಿದ್ದಾರೆ.

ಅದಾಗ್ಯೂ, ಶಾರುಖ್ ಮತ್ತು ಆಮೀರ್ ಸೇರಿದಂತೆ ಲಾಲ್ ಸಿಂಗ್ ಚಡ್ಡಾ ತಂಡವು ಚಿತ್ರದಲ್ಲಿನ ಶಾರುಖ್ ಪಾತ್ರದ ಬಗ್ಗೆ ಇದುವರೆಗೆ ಮಾತನಾಡಿಲ್ಲ‌.

ಲಾಲ್ ಸಿಂಗ್ ಚಡ್ಡಾ ಎಂಬುದು ಟಾಮ್ ಹ್ಯಾಂಕ್ಸ್ ನಟಿಸಿದ 1994 ರ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್‌ನ ಅಧಿಕೃತ ಹಿಂದಿ ರೂಪಾಂತರವಾಗಿದೆ. ವಯಾಕಾಮ್ 18 ಮೋಷನ್ ಪಿಕ್ಚರ್ಸ್ ಮತ್ತು ಆಮೀರ್ ಖಾನ್ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ, ಚಲನಚಿತ್ರವು ಆಗಸ್ಟ್ 11 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

ಇದನ್ನೂ ಓದಿ: ಕೈಮುಗಿದು ಕೇಳುತ್ತೇನೆ, ದಯವಿಟ್ಟು ಚಿತ್ರಗಳನ್ನು ಬಹಿಷ್ಕರಿಸಬೇಡಿ‌, ಇದರಿಂದ ದೇಶಕ್ಕೆ ನಷ್ಟ: ಅಕ್ಷಯ್‌ ಕುಮಾರ್

ಚಿತ್ರದ ಚಿತ್ರಕಥೆಯನ್ನು ನಟ ಅತುಲ್ ಕುಲಕರ್ಣಿ ಬರೆದಿದ್ದಾರೆ. ಇತ್ತೀಚೆಗೆ, ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಅವರು, "ನಾನು ಅಮೀರ್‌ಗಾಗಿ ಸ್ಕ್ರಿಪ್ಟ್ ಅನ್ನು ಬರೆದಿದ್ದೇನೆ. ಇದು ಸುಮಾರು 13-14 ವರ್ಷಗಳ ಹಿಂದೆ ಪ್ರಾರಂಭವಾಯಿತು. ಅದು ಚೆನ್ನಾಗಿ ಮೂಡಿಬಂದಿರುವುದು ನನ್ನ ಅದೃಷ್ಟವಾಗಿದೆ. ಆಮೀರ್ ಅದನ್ನು ಇಷ್ಟಪಟ್ಟರು ಮತ್ತು ಅದನ್ನು ಮಾಡಲು ನಿರ್ಧರಿಸಿದರು. ನಾವು ಇಷ್ಟಪಡುವ ಚಿತ್ರಗಳ ಬಗ್ಗೆ ಮಾತನಾಡುತ್ತಿದ್ದೆವು, ಆಗ ಫಾರೆಸ್ಟ್ ಗಂಪ್ ಚಿತ್ರವು (ಮಾತುಕತೆಯಲ್ಲಿ) ಬಂದಿತು” ಎಂದು ಹೇಳಿದ್ದಾರೆ.

ಝೀರೋ ಚಿತ್ರದ ಬಳಿಕ ಪೂರ್ಣ ಪ್ರಮಾಣದ ಶಾರುಖ್‌ ಖಾನ್‌ ಚಿತ್ರ ತೆರೆ ಕಾಣದೆ ವರ್ಷಗಳು ಕಳೆದಿದ್ದು, ಜವಾನ್‌ ಹಾಗೂ ಪಠಾಣ್‌ ಚಿತ್ರವು ಮುಂದೆ ಬಿಡುಗಡೆಯಾಗಲಿರುವ ಶಾರುಖ್‌ ಚಿತ್ರವಾಗಿದೆ. ಈ ಚಿತ್ರದ ಬಗ್ಗೆ ಶಾರುಖ್‌ ಹಾಗೂ ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆಗಳು ಇವೆ. ಅದಕ್ಕೂ ಮೊದಲೇ ಲಾಲ್‌ ಸಿಂಗ್‌ ಚಡ್ಡಾ ಮೂಲಕ ಶಾರುಖ್‌ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿರುವುದು ಈಗ ಧೃಡವಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News