ರಜಿನಿ ಮುಂದಿನ ಚಿತ್ರಕ್ಕೆ ನಾಲ್ವರು ನಾಯಕಿಯರು; ಶಿವರಾಜ್‌ ಕುಮಾರ್‌ ವಿಲನ್?

Update: 2022-08-14 16:01 GMT
Photo: Twitter/FilmibeatTa

ಚೆನ್ನೈ: ತಮಿಳು ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಸಿನಿ ಪಯಣಕ್ಕೆ 47 ವರ್ಷಗಳು ಸಂದಿವೆ. ಕರ್ನಾಟಕದಲ್ಲಿ ಸಾಧಾರಣ ಬಸ್‌ ಕಂಡೆಕ್ಟರ್‌ ಆಗಿದ್ದ ರಜಿನಿಕಾಂತ್‌ ಸೂಪರ್‌ ಸ್ಟಾರ್‌ ಆಗಿ ಬೆಳೆದು ಬಂದ ಹಾದಿಯೇ ರೋಚಕವಾದದ್ದು. ಸದ್ಯ, ರಜಿನಿಕಾಂತರ 47 ವರ್ಷದ ಸಿನಿಪಯಣವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ನಡುವೆ, ರಜಿನಿ ಅವರ ಮುಂದಿನ ಚಿತ್ರದಲ್ಲಿ ನಾಲ್ವರು ನಾಯಕಿಯರು ಇರಲಿದ್ದಾರೆ ಎಂಬ ಸುದ್ದಿಗಳು ಈಗ ಕೇಳಿಬಂದಿವೆ.

ಯುವ ನಿರ್ದೇಶಕ ನೆಲ್ಸನ್ ನಿರ್ದೇಶನದ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ಒಟ್ಟು 4 ಜನ ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಣ್ಣಾತ್ತೆ ಚಿತ್ರದ ವೈಫಲ್ಯದ ನಂತರ ರಜಿನಿಕಾಂತ್ ಅವರು ಜೈಲರ್ ಸಿನಿಮಾದ ಮೂಲಕ ತೆರೆಯ ಮೇಲೆ ಕಾಣಿಸಲು ತಯಾರಾಗಿದ್ದಾರೆ. ಕುತೂಹಲಕಾರಿ ಎಂಬಂತೆ, ಕೋಲಮಾವು ಕೋಕಿಲ, ಡಾಕ್ಟರ್ ಚಿತ್ರಗಳ ಮೂಲಕ ಭರವಸೆ ಹುಟ್ಟಿಸಿದ್ದ ನೆಲ್ಸನ್‌, ವಿಜಯ್‌ ರನ್ನು ನಾಯಕರನ್ನಾಗಿಸಿ ತಂದ ಬೀಸ್ಟ್ ಚಿತ್ರ ನಿರೀಕ್ಷೆಯ ಮಟ್ಟಕ್ಕೆ ತಲುಪಿರಲಿಲ್ಲ. ಒಂದೆಡೆ, ರಜಿನಿ ಅವರ ಕೊನೆಯ ಚಿತ್ರ ಅಣ್ಣಾತೆಯು ಸೋಲಾಗಿದ್ದು, ಇನ್ನೊಂದೆಡೆ ನೆಲ್ಸನ್‌ ಅವರ ಕೊನೆಯ ಚಿತ್ರವೂ ಸೋಲನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ಜೈಲರ್‌ ಚಿತ್ರ ಗೆಲ್ಲಿಸಲೇಬೇಕಾದ ಅನಿವಾರ್ಯತೆ ನೆಲ್ಸನ್‌ ಮೇಲಿದೆ.

ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಮಾಸ್ಟರ್ ಅನಿರುದ್ಧ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಜೈಲರ್ ಘೋಷಣೆ ಮಾಡಲಾಗಿತ್ತಾದರೂ ಈಗಷ್ಟೇ ಚಿತ್ರದ ಶೂಟಿಂಗ್ ಶುರುವಾಗಿದೆ. ಆಗಸ್ಟ್ 10 ರಂದು ಶೂಟಿಂಗ್ ಶುರುವಾಗಿದ್ದು, ಆಗಸ್ಟ್ 22 ರಂದು ರಜಿನಿ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಯವರೆಗೆ ಇತರ ನಟ-ನಟಿಯರೊಂದಿಗಿನ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ ಎಂದು ವರದಿಯಾಗಿದೆ.

ಜೈಲರ್ ಚಿತ್ರದಲ್ಲಿ ರಜಿನಿಕಾಂತ್ ಎದುರು ನಟಿಸಲು ರಮ್ಯಾ ಕೃಷ್ಣನ್ ಸಹಿ ಹಾಕಿದ್ದಾರೆ. ಇದಲ್ಲದೇ ಕನ್ನಡದ ಖ್ಯಾತ ನಟ ಶಿವರಾಜಕುಮಾರ್ ವಿಲನ್ ಪಾತ್ರ ಮಾಡಿದ್ದಾರೆ. ನಟಿಯರಾದ ಪ್ರಿಯಾಂಕಾ ಮೋಹನ್ ಮತ್ತು ಐಶ್ವರ್ಯ ರೈ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಜೈಲರ್ ಸಿನಿಮಾದಲ್ಲಿ 3 ಜನ ನಾಯಕಿಯರು ನಟಿಸಲಿದ್ದು, ಈಗ ಮತ್ತೊಬ್ಬ ನಾಯಕಿಯಾಗಿ ತಮನ್ನಾ ಈ ಸಿನಿಮಾಗೆ ಸೇರ್ಪಡೆಯಾಗಿದ್ದಾರೆ.

ತಮನ್ನಾ ಈಗಾಗಲೇ ವಿಜಯ್ ಮತ್ತು ಅಜಿತ್ ಅವರಂತಹ ಖ್ಯಾತ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ, ಈಗ ಮೊದಲ ಬಾರಿಗೆ ರಜಿನಿ ಜೊತೆ ನಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News