ಮಹಾರಾಷ್ಟ್ರ: ಆಸ್ಪತ್ರೆಗೆ ಸಾಗಿಸಲು ರಸ್ತೆಯೇ ಇಲ್ಲದ ಕಾರಣ ತಾಯಿಯ ಮಡಿಲಲ್ಲೆ ಪ್ರಾಣಬಿಟ್ಟ ನವಜಾತ ಅವಳಿ ಮಕ್ಕಳು
ಮುಂಬೈ: ಆಸ್ಪತ್ರೆಗೆ ಸಾಗಿಸಲು ರಸ್ತೆಯೇ ಇಲ್ಲದ ಕಾರಣ ಅವಧಿಪೂರ್ವ ಜನಿಸಿದ್ದ ನವಜಾತ ಅವಳಿ ಮಕ್ಕಳು ತಮ್ಮ ತಾಯಿಯ ಮಡಿಲಲ್ಲೇ ಸಾವನ್ನಪ್ಪಿರುವ (Newborn Twins Die In Front Of Mother) ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ವರದಿಯಾಗಿದೆ.
ಮಹಿಳೆಯನ್ನು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸುತ್ತಿರುವ ಆಘಾತಕಾರಿ ಚಿತ್ರಗಳು ಬಹಿರಂಗವಾಗಿದೆ.
ಹೆರಿಗೆಯಾದ ನಂತರ ಭಾರೀ ರಕ್ತಸ್ರಾವವಾಗುತ್ತಿದ್ದಂತೆ ಕುಟುಂಬದ ಸದಸ್ಯರು ಮಹಿಳೆಯನ್ನು ಕಲ್ಲಿನ ಭೂಪ್ರದೇಶ ಹಾಗೂ ಜಾರು ಇಳಿಜಾರುಗಳ ಮೂಲಕ ಸುಮಾರು 3 ಕಿ.ಮೀ ವರೆಗೆ ಹೊತ್ತು ಸಾಗಿಸಿದರು,.
ಪಾಲ್ಘರ್ ಜಿಲ್ಲೆಯ ಮೊಖಾಡಾ ತಹಸಿಲ್ ನಿವಾಸಿ ವಂದನಾ ಬುಧರ್ ತನ್ನ ಮನೆಯಲ್ಲಿ ಏಳು ತಿಂಗಳ ಗರ್ಭಾವಸ್ಥೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಅಕಾಲಿಕವಾಗಿ ಜನಿಸಿದ ಅವಳಿ ಮಕ್ಗಳು ದುರ್ಬಲವಾಗಿದ್ದವು ಹಾಗೂ ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ ತಮ್ಮ ತಾಯಿಯ ಮಡಿಲಲ್ಲೇ ಸಾವನ್ನಪ್ಪಿದವು.
ಭಾರೀ ರಕ್ತಸ್ರಾವದಿಂದ ಮಹಿಳೆಯ ಸ್ಥಿತಿ ವೇಗವಾಗಿ ಹದಗೆಡುತ್ತಿದ್ದಂತೆ, ಕುಟುಂಬ ಸದಸ್ಯರು ಹಗ್ಗ, ಬೆಡ್‌ಶೀಟ್ ಹಾಗೂ ಮರದ ತುಂಡನ್ನು ಬಳಸಿ ತಾತ್ಕಾಲಿಕ ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಧಾವಿಸಿದರು.
ತಾಯಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ಹಲವೆಡೆ ರಸ್ತೆಗಳೇ ಇಲ್ಲದ ಕಾರಣ ಇಂತಹ ಹಲವು ಘಟನೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಕುರಿತು ಗಮನ ಹರಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಚಿತ್ರಾ ಕಿಶೋರ್ ಹೇಳಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ ಅವರು ಘಟನೆಯನ್ನು ತುಂಬಾ ದುರದೃಷ್ಟಕರ ಎಂದು ಕರೆದಿದ್ದು, ದೇಶವು 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವಾಗ ಬಡವರು ಇಂತಹ ಕಷ್ಟಗಳನ್ನು ಎದುರಿಸುತ್ತಿರುವುದು ದುಃಖಕರವಾಗಿದೆ ಎಂದು ಹೇಳಿದರು.