ಶ್ರೀಲಂಕಾದಲ್ಲಿ ನಿಲುಗಡೆಯಾಗಿರುವ ತನ್ನ ಹಡಗಿನಿಂದ ಯಾವುದೇ ದೇಶದ ಭದ್ರತೆಗೆ ಅಪಾಯವಿಲ್ಲ ಎಂದ ಚೀನಾ

Update: 2022-08-17 07:06 GMT

ಬೀಜಿಂಗ್: ತನ್ನ ಹಡಗು ಶ್ರೀಲಂಕಾದ(Srilanka) ಬಂದರಿನಲ್ಲಿ ಲಂಗರು ಹಾಕಿರುವುದು ಯಾವುದೇ  ದೇಶದ ಭದ್ರತೆಯನ್ನು ಬಾಧಿಸುವುದಿಲ್ಲ ಹಾಗೂ ಈ ಹಡಗಿಗೆ ಯಾವುದೇ ಮೂರನೇ ಪಕ್ಷ ಅಡ್ಡಿಯುಂಟು ಮಾಡಬಾರದು ಎಂದು ಚೀನಾ(china) ಹೇಳಿದೆ.

ಚೀನಾದ ಗೂಢಚಾರಿಕೆ ಹಡಗು ಎಂದು ತಿಳಿಯಲಾಗಿರುವ `ಯುವಾನ್ ವಾಂಗ್ 5'(yuwan wang) ಮಂಗಳವಾರ ಶ್ರೀಲಂಕಾದ ಹಂಬನ್‍ಟೋಟಾ ಬಂದರನ್ನು ಪ್ರವೇಶಿಸಿದೆ. ಈ ಹಡಗಿನ ಮೂಲಕ ಚೀನಾವು ಭಾರತದ ದಕ್ಷಿಣ ಭಾಗಗಳಲ್ಲಿರುವ ಪ್ರಮುಖ ಸ್ಥಳಗಳ ಮೇಲೆ ಗೂಢಚಾರಿಕೆ ನಡೆಸಬಹುದೆಂಬ ಕಳವಳವನ್ನು ಭಾರತ ವ್ಯಕ್ತಪಡಿಸಿದ ಹೊರತಾಗಿಯೂ ತನ್ನ ಬಂದರು ಪ್ರವೇಶಿಸಲು ಶ್ರೀಲಂಕಾ ಈ ಹಡಗಿಗೆ ಅನುಮತಿಸಿದೆ.

ತಮ್ಮ ದೇಶದ ಹಡಗಿನಿಂದ ಭದ್ರತೆಯ ಅಪಾಯವಿದೆಯೆಂಬ ಆರೋಪಗಳನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‍ಬಿನ್ ಮಂಗಳವಾರ ಅಲ್ಲಗಳೆದಿದ್ದಾರೆ.

``ಹಡಗಿನ ವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳು ಅಂತಾರಾಷ್ಟ್ರೀಯ  ಕಾನೂನು ಮತ್ತು ಪದ್ಧತಿಗಳಿಗೆ ಅನುಸಾರವಾಗಿದೆ ಹಾಗೂ ಹಡಗು ಶ್ರೀಲಂಕಾ  ಸರಕಾರದ ಸಹಕಾರದೊಂದಿಗೆ ಅಲ್ಲಿನ ಬಂದರಿನಲ್ಲಿ ನಿಲುಗಡೆಯಾಗಿದೆ,'' ಎಂದು ಅವರು ಹೇಳಿದ್ದಾರೆ.

ಈ ಹಡಗು ಶ್ರೀಲಂಕಾದಲ್ಲಿ ನಿಲುಗಡೆಯಾಗಿರುವ ಕುರಿತು ಭಾರತದ ಕಳವಳದ ಬಗ್ಗೆ ಶ್ರೀಲಂಕಾದಲ್ಲಿರುವ ಚೀನಾ ರಾಯಭಾರಿ ಖ್ವಿ ಝೆನ್‍ಹೊಂಗ್ ಅವರನ್ನು ಕೇಳಿದಾಗ "ನನಗೆ ತಿಳಿದಿಲ್ಲ, ನೀವು ಭಾರತೀಯ ಸ್ನೇಹಿತರನ್ನು ಕೇಳಬೇಕು... ಪ್ರಾಯಶಃ ಇದುವೇ ಜೀವನ" ಎಂದು ಹೇಳಿದ್ದರು.

ಆಗಸ್ಟ್ 8ರಂದು ಭಾರತದ ಹೆಸರನ್ನು ಉಲ್ಲೇಖಿಸದೇ ಪ್ರತಿಕ್ರಿಯಿಸಿದ್ದ ಚೀನಾ ಇತರ ದೇಶಗಳು ಶ್ರೀಲಂಕಾದ ಮೇಲೆ ಒತ್ತಡ ಹೇರಿ ಅದರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದು ಸಂಪೂರ್ಣವಾಗಿ ಅಸಮರ್ಥನೀಯ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಈ ಆರೋಪ ತಿರಸ್ಕರಿಸಿದ್ದ ಭಾರತ, ಆ ಹಡಗಿಗೆ ಅನುಮತಿ ನೀಡದಂತೆ ಶ್ರೀಲಂಕಾದ ಮೇಲೆ ಒತ್ತಡ ಹೇರುವುದಿಲ್ಲ ಎಂದು ತಿಳಿಸಿತ್ತು.

ಶ್ರೀಲಂಕಾದ ಜಲ ಪ್ರದೇಶದಲ್ಲಿ ಯಾವುದೇ ಸಂಶೋಧನಾ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂಬ ಷರತ್ತಿನೊಂದಿಗೆ ಹಡಗಿಗೆ ಶ್ರೀಲಂಕಾದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಹಂಬನ್‍ತೋಟ ಬಂದರು ಅಧಿಕಾರಿಗಳು ಹೇಳಿದ್ದಾರೆ.

ಭಾರತ ಅಧಿಕೃತವಾಗಿ ಈ ಹಡಗಿಗೆ ಆಕ್ಷೇಪ ಸೂಚಿಸಿಲ್ಲವಾದರೂ ಭಾರತದ ಭದ್ರತೆ ಮತ್ತು ಆರ್ಥಿಕ ಆಸಕ್ತಿಗಳ ಮೇಲೆ ಪರಿಣಾಮ ಬೀರುವ ಯಾವುದೇ ಬೆಳವಣಿಗೆಯ ಮೇಲೆ ನಿಗಾ ಇಡುತ್ತಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News