ಸಚಿವ ಮಾಧುಸ್ವಾಮಿ ಆಪ್ತ ಸಹಾಯಕರಿಂದ ಲಂಚಕ್ಕೆ ಬೇಡಿಕೆ?

Update: 2022-08-19 03:07 GMT

ಬೆಂಗಳೂರು, ಆ.19: ಅಂಗವಿಕಲರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ಮಂಜೂರು ಮಾಡಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಆಪ್ತ ಸಹಾಯಕರು ಲಂಚಕ್ಕೆ  ಬೇಡಿಕೆ ಇಡುತ್ತಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಂಗವಿಕಲರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ನೀಡಲು ತಯಾರಿಸುವ  ಆಯ್ಕೆಪಟ್ಟಿಯಲ್ಲಿ  ಸೇರಿಸಲು ಸಹ  ಜೆ.ಸಿ.ಮಾಧುಸ್ವಾಮಿ ಅವರ ಆಪ್ತ ಕಾರ್ಯದರ್ಶಿ, ಆಪ್ತ ಸಹಾಯಕರಿಗೆ ಫಲಾನುಭವಿಗಳು ಲಂಚ ನೀಡಬೇಕು ಮತ್ತು ಅವರನ್ನು  ಗೋಗರೆಯಬೇಕಾದ ಸ್ಥಿತಿ ಇದೆ ಎಂಬುದನ್ನು ನಿರೂಪಿಸುವ  ಎರಡು ಆಡಿಯೋ ಬಹಿರಂಗವಾಗಿದೆ.

‘ಸರಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡಲಾಗುತ್ತಿದೆ, ತಳ್ಳಿದರೆ ಸಾಕಷ್ಟೆ’ ಎಂದು ಜೆ.ಸಿ.ಮಾಧುಸ್ವಾಮಿ ಅವರು ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿದ್ದ ಸಂಭಾಷಣೆಯು ಬಹಿರಂಗಗೊಂಡ ಬೆನ್ನಲ್ಲೇ ಅಂಗವಿಕಲರಿಗೆ ನೀಡುವ ಯಂತ್ರಚಾಲಿತ ವಾಹನಗಳನ್ನು ಮಂಜೂರು ಮಾಡಿಸಿಕೊಳ್ಳಲು ಜೆ.ಸಿ.ಮಾಧುಸ್ವಾಮಿ ಅವರ ಆಪ್ತ ಸಹಾಯಕರು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಕುರಿತು ಬಹಿರಂಗವಾಗಿರುವ ಎರಡು  ಆಡಿಯೋ ಮಹತ್ವ ಪಡೆದುಕೊಂಡಿದೆ.

ಇಲಾಖೆಯ ತುಮಕೂರು ಜಿಲ್ಲಾ ಮುಖ್ಯಾಧಿಕಾರಿ ಮತ್ತು ಚಿಕ್ಕನಾಯಕನಹಳ್ಳಿಯ ಫಲಾನುಭವಿಯೊಬ್ಬರ ಮಧ್ಯೆ ನಡೆದಿದೆ ಎನ್ನಲಾದ ಮಾತುಕತೆಯು   ತ್ರಿಚಕ್ರ ವಾಹನ ವಿತರಣೆ ಪ್ರಕ್ರಿಯೆಯ ಮತ್ತೊಂದು ಮುಖವನ್ನೂ  ಅನಾವರಣಗೊಳಿಸಿದೆ.  ಈ ಆಡಿಯೋ  ''the-file.in'' ಗೆ ಲಭ್ಯವಾಗಿದೆ.

ಅಲ್ಲದೆ ಜಿಲ್ಲಾ ಮುಖ್ಯಾಧಿಕಾರಿಯೊಬ್ಬರೊಂದಿಗಿನ ಸಂಭಾಷಣೆಯಲ್ಲಿರುವ ಪ್ರಕಾರ ಫಲಾನುಭವಿಗಳಿಗೆ ವಿತರಿಸಲೆಂದು ನೀಡಿರುವ ತ್ರಿಚಕ್ರ ವಾಹನಗಳ ಪೈಕಿ ಐದು ವಾಹನಗಳು ಸಚಿವ ಮಾಧುಸ್ವಾಮಿ ಅವರ ಕೋಟಾದಲ್ಲಿವೆ.  ಅವರು ಯಾರಿಗೆ ಹೇಳುತ್ತಾರೋ ಅವರಿಗೆ ತ್ರಿಚಕ್ರ ವಾಹನಗಳು ವಿತರಣೆಯಾಗಲಿವೆ ಎಂದೂ ಜಿಲ್ಲಾ ಮುಖ್ಯಾಧಿಕಾರಿ ಹೇಳಿದ್ದಾರೆ.

ಸಂಭಾಷಣೆಯಲ್ಲೇನಿದೆ?: ‘ವೆರಿಫಿಕೇಷನ್ ಆದೋರಿಗೆಲ್ಲಾ ಆಗಿಲ್ಲ ಅಣ್ಣಾ. ವೆರಿಫಿಕೇಷನ್ ಆಗಿ ಕಮಿಟಿಯಲ್ಲಿ  ಸೆಲೆಕ್ಟ್ ಆಗಿರೋರಿಗೆ ಆಗಿದೆ. 6 ಗಾಡಿ ಕೊಟ್ಟಿದಾರೆ. ನೀವ್ ಒಂದ್ ಕೆಲ್ಸ ಮಾಡಿ, ಮಾಧುಸ್ವಾಮಿ ಹತ್ರ 5 ಗಾಡಿ ಇದೆ. ಅವರು ಯಾರಿಗೆ ಹೇಳ್ತಾರೋ ಅವ್ರ ತಗೋಬೋದು. ಅವರತ್ರ 5 ಗಾಡಿ ಇದೆ. ದುಡ್ಡು ಕಾಸು ಕೇಳ್ತಾರೋ ಏನೋ, ಅವರ ಪಿ.ಎ.ವಿಶ್ವನಾಥ್  ಹತ್ರ ಕೊಟ್ಟು ಮಾಡಿಸ್ಕೋಳ್ರಿ ಅಣ್ಣ. ಅವರು ಯಾರಿಗೆ ಲೆಟ್ರು ಕೊಡ್ತಾರೋ ಅವರಿಗೆ ಕೊಡ್ತೀವಿ.  ಮಾಧುಸ್ವಾಮಿ ಹತ್ರ ಇಸ್ಕೋಳ್ರಿ, ಅಲ್ಲಿ 5 ಗಾಡಿ ಐತಲ್ರಿ, ನಿಮ್ದು ವೆರಿಫಿಕೇಷನ್ ಆಗೈತಿ ಅಂತ ಹೇಳಿ. ಮಾಧುಸ್ವಾಮಿ ಅವರ ಪಿಎ ಒಪ್ಕೊಂಡ್ರೇ ಯಾರಿಗ್ ಬೇಕಾದ್ರೆ ಕೊಡ್ತಾರೆ. ಇಲ್ಲಿರೋ ಪಟ್ಟಿ ಪ್ರಕಾರ ಅವ್ರ ಕೊಡೋಲ್ಲ. ನೀವ್ ಸುಮ್ನೆ ಹೋಗಿ ವಿಚಾರಿಸ್ರಿ....ಅಲ್ಲೇ ವಿಚಾರ್ಸಿ ಅಣ್ಣಾ...’ಎಂದು ಫಲಾನುಭವಿಯೊಬ್ಬರಿಗೆ ಜಿಲ್ಲಾ ಮುಖ್ಯಾಧಿಕಾರಿ ಸಲಹೆ ನೀಡಿದ್ದಾರೆ.

ಅಂಗವಿಕಲರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ನೀಡಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅರ್ಜಿ ಕರೆಯಲಾಗಿತ್ತು. ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನಾಂಕವಾಗಿದೆ. ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದರೂ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡುತ್ತಿಲ್ಲ. ಹೀಗಾಗಿ ವಾಹನಗಳು ಇಲಾಖೆಯ ಆವರಣದಲ್ಲಿಯೇ ತುಕ್ಕು ಹಿಡಿಯುತ್ತಿವೆ ಎಂದು ತಿಳಿದು ಬಂದಿದೆ.

‘ಸರಕಾರ ನಡೀತಾ ಇಲ್ಲ. ಇಲ್ಲಿ, ಮ್ಯಾನೇಜ್ ಮಾಡ್ತಾ ಇದ್ದೀವಿ ಅಷ್ಟೇ. ತಳ್ಳಿದರೆ ಸಾಕಷ್ಟೆ. ಎಂಟು ತಿಂಗಳಷ್ಟೆ ಅಂತ ತಳ್ತಾ ಇದೀವಿ ಕಣಪ್ಪಾ’ ಎಂದು ಚನ್ನಪಟ್ಟಣದ ವ್ಯಕ್ತಿಯೊಬ್ಬರ ಜತೆ ಮಾತನಾಡುವ ಸಮಯದಲ್ಲಿ ಹೇಳಿರುವ ಆಡಿಯೊ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಈ ಮಾತುಕತೆಯನ್ನು ಸಚಿವ ಮಾಧುಸ್ವಾಮಿ ಅವರು ಒಪ್ಪಿಕೊಂಡಿದ್ದರು.

‘ಎಲ್ಲ ಅಶಕ್ತರು, ಯಾರೂ ಕೆಲಸ ಮಾಡುತ್ತಿಲ್ಲ ಅಂತ ಹೇಳಿಲ್ಲ. ಡಿಸಿಸಿ ಬ್ಯಾಂಕ್‌ನಲ್ಲಿ ಹೆಚ್ಚುವರಿಯಾಗಿ ಬಡ್ಡಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದು ನಿಜ. ಕರೆ ಮಾಡಿದ ವ್ಯಕ್ತಿ ಜತೆ ಮುಂದಕ್ಕೆ ಮಾತನಾಡುವ ಸಮಯದಲ್ಲಿ ಏನೋ ಹೇಳಿರಬಹುದು. ನೀವು ಸರಕಾರ ನಡೆಸುತ್ತಿಲ್ಲ ಅಂಥ ಅವನು ಕೇಳಿರಬಹುದು. ಆಗ ನಾನು ಆ ರೀತಿ ಹೇಳಿರಬಹುದು’ ಎಂದು ಸಮಜಾಯಿಷಿ ನೀಡಿದ್ದನ್ನು ಸ್ಮರಿಸಬಹುದು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್‌ಗಳ ಕುರಿತು ತನಿಖೆ ನಡೆಸಲು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು  ಈಗಾಗಲೇ  ಸಹಾಯಕ ರಿಜಿಸ್ಟ್ರಾರ್‌ಗೆ ಸೂಚಿಸಿದ್ದಾರೆ.

ಇದು ಸರಕಾರ ಅನುಷ್ಠಾನಗೊಳಿಸಿರುವ ಯೋಜನೆ. ಇದೇನು ಮಾಧುಸ್ವಾಮಿ ಅವರ ಸ್ವಂತ ಯೋಜನೆಯಲ್ಲ. ಇಲ್ಲಿ ಯಾರ ಕೋಟಾವೂ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಕ್ಷೇತ್ರದಲ್ಲಿಯೇ ಅಶಕ್ತರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಆಡಿಯೊ ಸಾಕ್ಷಿ. ಸದನದಲ್ಲಿ ತೋಳೇರಿಸಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಕುರಿತು ಮಾತನಾಡುವ ಜೆ.ಸಿ. ಮಾಧುಸ್ವಾಮಿ ಅವರ ಕ್ಷೇತ್ರದಲ್ಲಿ ಅಶಕ್ತರನ್ನೂ ಬಿಡದೇ ಸುಲಿಗೆ ಮಾಡುತ್ತಿದ್ದಾರೆ. ಇದು ತಪ್ಪಬೇಕು ಮತ್ತು ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಬೇಕು. ಇಲ್ಲವಾದಲ್ಲಿ ಈ ಬಗ್ಗೆ ಸಚಿವರ ವಿರುದ್ಧವೇ ಕಾನೂನು ಕ್ರಮ ಜರುಗಿಸಬೇಕಾದೀತು.

-ಮಲ್ಲಿಕಾರ್ಜುನ ಭಟ್ಟರಹಳ್ಳಿ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News