ಅದೃಷ್ಟದ ಪೀಳಿಗೆ ನಮ್ಮದು!

Update: 2022-08-19 05:56 GMT

ಈ ಭೂಮಿಯ ಮೇಲೆ ಅದರಲ್ಲೂ ನಮ್ಮ ದೇಶದಲ್ಲಿ ನಮ್ಮದೇ ಅತ್ಯುತ್ತಮ ಪೀಳಿಗೆ ಎಂದರೆ ನೀವು ನಂಬಲೇಬೇಕು. ಈಗಿನ ಐವತ್ತು-ಎಪ್ಪತ್ತು ವರ್ಷಗಳ ನಡುವಿನ ನಮ್ಮ ಒಂದೆರಡು ಪೀಳಿಗೆಗಳು ಸಾಂಪ್ರದಾಯಿಕ ಕೂಡುಕುಟುಂಬ ಮತ್ತು ಇಂದಿನ ಆಧುನಿಕತೆಯ ಗ್ಯಾಜೆಟ್‌ಗಳ ಜೊತೆಗೆ ಬದುಕಿದವರು, ಬದುಕುತ್ತಿರುವವರು. ಹಳ್ಳಿ-ಪಟ್ಟಣಗಳ ಬದುಕನ್ನು ಸ್ವತಃ ಅನುಭವಿಸಿದವರು. ಕಷ್ಟ-ಸುಖಗಳ ಜೊತೆಗೆ ಪ್ರಕೃತಿಯ ಮಡಿಲಲ್ಲಿ ಬಿಸಿಲು ಗಾಳಿ ಮಳೆ ಚಳಿ, ಹಸಿರು ಗಿಡ ಮರ, ಪಕ್ಷಿ-ಪ್ರಾಣಿಗಳ ಜೊತೆಗೆ ಬದುಕನ್ನು ಹಂಚಿಕೊಂಡವರು.

ಎಷ್ಟು ಸಲ ಫೇಲಾದರು ಒಂದು ಏಟೂ ಹೊಡೆಯದ ಬಯ್ಯದ ಅಪ್ಪ-ಅಮ್ಮಂದಿರಿಂದ ಪ್ರಶಂಸೆ ಪಡೆದವರು ನಾವು. ಮೇಷ್ಟ್ರುಗಳು ಬಿದಿರು ಕೋಲುಗಳಲ್ಲಿ ಬೆರಳುಗಳಿಗೆ ಹೊಡೆದು ರಕ್ತಹೊಸರಿದರೂ ಒಂದು ದಿನವೂ ಶಾಲೆಗೆ ಬಂದು ಮೇಷ್ಟ್ರುಗಳನ್ನು ಪ್ರಶ್ನೆ ಕೇಳದ ಅಪ್ಪ-ಅಮ್ಮಂದಿರು. ಅಷ್ಟೇಕೆ ಯಾವ ವಿಷಯ, ಯಾವ ತರಗತಿ ಓದುತ್ತೀಯ ಎಂದು ಯಾವಾಗಲೂ ಕೇಳದ ಅಪ್ಪ-ಅಮ್ಮಂದಿರು. ಅಂತಹ ಅದ್ಭುತ ಪೋಷಕರು, ನಮ್ಮ ತಂದೆ ತಾಯಂದಿರು. ಹೇಗೋ ಓದಿ ಹೇಗೋ ಪಾಸಾಗಿ ಒಂದು ಪೈಸೆಯೂ ಲಂಚ ಕೊಡದೆ ಸರಕಾರಿ ಕೆಲಸಕ್ಕೆ ಸೇರಿಕೊಂಡವರು ನಾವು. ಹೈಸ್ಕೂಲ್ ದಾಟದೆ ಹೋದ ನಮ್ಮ ಗೆಳೆಯರು, ಪ್ರಪಂಚ ಇಷ್ಟೇ ಅಲ್ಲ ಎಂದು ತಿಳಿದುಕೊಂಡು ತಮ್ಮ ಕೈಯಲ್ಲಾದ ಕೆಲಸ ಮಾಡುತ್ತಾ ಹಗಲೂ ರಾತ್ರಿ ದುಡಿಯುತ್ತ ತಮ್ಮ ಮಕ್ಕಳನ್ನು ಚೆನ್ನಾಗಿ ಪೋಷಿಸಿದವರು ನಮ್ಮ ಪೀಳಿಗೆಯವರು.

ನಾವು ಎಷ್ಟೇ ಕಷ್ಟಪಟ್ಟರೂ ಪರವಾಗಿಲ್ಲ, ನಮ್ಮ ಮಕ್ಕಳು ಕಷ್ಟ ಪಡಬಾರದು ಎಂದು ಅವರಿಗೆ ಗೊತ್ತಿಲ್ಲದೆ ಕಷ್ಟದ ಬದುಕು ನಡೆಸಿ ಅವರನ್ನು ಮುಂದಕ್ಕೆ ಸಾಗಿಸಿ ಹಿಂದೆಯೇ ನಿಂತುಕೊಂಡ ಅಪ್ಪಂದಿರು. ಮನೆ ಹೊರಗೆ, ಮನೆ ಒಳಗೆ ಬಿಡುವಿಲ್ಲದೆ ದುಡಿದು ಮಕ್ಕಳನ್ನು ಪೋಷಿಸಿ ಬೆಳೆಸಿದ ಅಮ್ಮಂದಿರು. ಮಕ್ಕಳನ್ನು ಓದಿಸಿ, ಮದುವೆ ಮಾಡಿ ಅವರಿಂದ ಯಾವ ಫಲಾಪೇಕ್ಷೆಯನ್ನೂ ನಿರೀಕ್ಷಿಸದೆ ದೂರ ಉಳಿದ ನಮ್ಮ ಪೀಳಿಗೆಗಳು ಎಷ್ಟೊಂದು ನಿಶ್ಕಲ್ಮಷ. ಎಂತಹ ಅದ್ಭುತ, ಅದೃಷ್ಟ ಪೀಳಿಗೆಗಳು ನಮ್ಮವು. ಒಂದು ಕಡೆ ಹಳ್ಳಿ, ಒಂದು ಕಡೆ ಪಟ್ಟಣ ಎರಡೂ ಜಗತ್ತುಗಳ ನಡುವೆ ಸೇತುವೆಯಾದ ನಮ್ಮ ಪೀಳಿಗೆಗಳು ನಿಜಕ್ಕೂ ಅದೃಷ್ಟದ ಪೀಳಿಗೆಗಳೇ ಸರಿ.

ಚೆನ್ನಾಗಿ ಓದಿ ಸರಕಾರಿ ಕೆಲಸಕ್ಕೆ ಸೇರಿಕೊಂಡವರು, ವಿದ್ಯೆ ಒಲಿಯದೆ ವ್ಯವಸಾಯ ಇನ್ನಿತರ ಕೆಲಸಗಳಲ್ಲಿ ತೊಡಗಿಕೊಂಡರೂ ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಹೋರಾಟ ನಡೆಸಿ ಸಫಲವಾದ ಪೀಳಿಗೆಗಳು ನಮ್ಮವು. ಒಂದು ಕಡೆ ಸಂಪ್ರದಾಯ, ಇನ್ನೊಂದು ಕಡೆ ಆಧುನಿಕತೆ ಎರಡರಲ್ಲೂ ಹೆಜ್ಜೆಗಳನ್ನಿಟ್ಟು ನಡೆದು ಯಶಸ್ಸು ಪಡೆದವರು ನಾವು. ಅನಕ್ಷರಸ್ತರಾದರೂ ನಿಸರ್ಗದ ಜೊತೆಗೆ ಪ್ರಬುದ್ಧ ಬದುಕು ನಡೆಸಿದ ನಮ್ಮ ಹಿಂದಿನ ತಲೆಮಾರುಗಳು ನಮಗೆ ದಾರಿ ದೀಪವಾಗಿ ಕೆಲಸ ಮಾಡಿದವು. ನಮ್ಮ ಮುಂದಿನ ಪೀಳಿಗೆಗಳು ನಮ್ಮನ್ನು ಆಧುನಿಕತೆಗೆ ತೆರೆದುಕೊಳ್ಳಬೇಕು ಎಂದು ಹೀಯಾಳಿಸುತ್ತಾ ಸಣ್ಣಸಣ್ಣ ವಿಷಯಗಳಿಗೆ ಮನಸ್ಸು ಮನೆಗಳನ್ನು ಮುರಿದು ದೂರ ಸರಿದರು. ಅಪ್ಪಅಮ್ಮಂದಿರು, ಸೋದರ ಸಂಬಂಧಿಗಳು, ನೆಂಟರಿಷ್ಟರನ್ನು ದೂರ ಮಾಡಿಕೊಂಡು ತಾನಾಯಿತು ತನ್ನ ಪತ್ನಿ-ಮಕ್ಕಳಾಯಿತು ಎಂದು ಕೂಡುಕುಟುಂಬಗಳನ್ನು ಮುರಿದು ರೇಷ್ಮೆಹುಳಗಳಂತೆ ಒಂಟಿ ಗೂಡುಗಳನ್ನು ಕಟ್ಟಿಕೊಂಡವರು ನಮ್ಮ ಮಕ್ಕಳು.

ಇನ್ನು ಈಗಿನ ಪೀಳಿಗೆಗಳು ಯಾವ ತರ್ಕವೂ ಇಲ್ಲದೆ, ಯಾವುದನ್ನೂ ಅರ್ಥ ಮಾಡಿಕೊಳ್ಳದೆ ಪರಿಸರ ನಾಶ ಮಾಡುವ, ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವ ಪೀಳಿಗೆಗಳು. ಏನು ಮುಟ್ಟಿದರೆ ಏನೋ? ಯಾವ ವೈರಸ್ ಬಂದುಬಿಡುತ್ತದೋ? ಯಾವ ರೋಗ ಅಮರಿಕೊಳ್ಳುತ್ತದೋ? ಮಣ್ಣು ಮುಟ್ಟದೇ ಬಿಸಿಲು ಕಾಯದೆ ಕೋಣೆಗಳ ಒಳಗೆ ಹವಾನಿಯಂತ್ರಣದಲ್ಲಿ ಕುಳಿತು ಕೈಕಾಲುಗಳನ್ನು ಅಲ್ಲಾಡಿಸದೆ ಉಣ್ಣುವ ಪೀಳಿಗೆಗಳು. ಮನುಷ್ಯತ್ವವನ್ನೇ ಅರಿಯದ, ನಿಸರ್ಗದ ಜೊತೆಗೆ ಹೊಂದಾಣಿಕೆ ಇಲ್ಲದೆ ಬದುಕು ನಡೆಸುವ ಪೀಳಿಗೆಗಳು. ವೃದ್ಧಾಪ್ಯ ಸಮೀಪಿಸುವ ಅಪ್ಪಅಮ್ಮಂದಿರನ್ನು ಮನೆಯಿಂದ ಹೊರಗೆ ಹಾಕುವ, ಇಲ್ಲ ವೃದ್ಧಾಶ್ರಮ ತಲುಪಿಸಿ ಬಿಂದಾಸ್ ಬದುಕು ನಡೆಸುವ ಪೀಳಿಗೆಗಳು. ತಮಗೆ ಎಲ್ಲಾ ಕೊಟ್ಟ ಪೋಷಕರನ್ನೇ ದೂರ ಮಾಡಿ ನಾಯಿ ಬೆಕ್ಕುಗಳು ಜೊತೆಗೆ, ಗ್ಯಾಜೆಟ್‌ಗಳ ಜೊತೆಗೆ ಹೊದ್ದು ಮಲಗುವ ಪೀಳಿಗೆಗಳು. ಫಿಜ್ಜಾ ಬರ್ಗರ್ ತಿಂದು, ಧೂಮಪಾನ ಮದ್ಯಪಾನದಲ್ಲಿ ಮುಳುಗಿ ಏಳುವ ಪೀಳಿಗೆಗಳು. ಮುಕ್ತ ಲೈಂಗಿಕತೆ, ಮುಕ್ತ ಜಗತ್ತು, ಯಾವ ಕೆಲಸವನ್ನೂ ಸರಿಯಾಗಿ ನಿಭಾಯಿಸದ ಅಲೆಮಾರಿ ಮನಸ್ಸಿನ, ಎಲ್ಲಿಯೂ ಸಲ್ಲದ ಅಂತರ್ ಪಿಶಾಚಿಗಳಂತೆ ಬದುಕು ನಡೆಸುವ ಇಂದಿನ ಪೀಳಿಗೆಗಳೆಲ್ಲಿ? ನಮ್ಮ ಪೀಳಿಗೆಗಳೆಲ್ಲಿ? ಆಧುನಿಕ ಗ್ಯಾಜೆಟ್‌ಗಳ ಜೊತೆಗೆ ಎಷ್ಟು ಬೇಕೋ ಅಷ್ಟು ಒಡನಾಟ ಇಟ್ಟುಕೊಂಡವರು, ಆಧುನಿಕ ವೈದ್ಯಕೀಯ ಸೌಲಭ್ಯಗಳಿಂದ ಒಂದಷ್ಟು ಹೆಚ್ಚು ಕಾಲ ಬದುಕು ನಡೆಸಿದವರು ನಾವು. ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಬದುಕು, ಹಸಿಮಣ್ಣು, ಹೊಲಗದ್ದೆ, ಹಸಿರು ಕಾಡುಮೇಡು, ಬೆಟ್ಟಗುಡ್ಡಗಳನ್ನು ಬೆರಗು ಕಣ್ಣುಗಳಿಂದ ನೋಡಿದವರು. ಪ್ರಕೃತಿ ಮಡಿಲಲ್ಲಿ ಎದ್ದುಬಿದ್ದು ಮೈಗೆ ಮಣ್ಣು ಮಾಡಿಕೊಂಡವರು, ಕೆರೆ ಕುಂಟೆ ಬಾವಿಗಳಲ್ಲಿ ಈಜಾಡಿದವರು, ಕುರಿ-ಮೇಕೆ ಹಸು ಎಮ್ಮೆ ಪಕ್ಷಿ-ಪ್ರಾಣಿಗಳ ಜೊತೆಜೊತೆಗೆ ಹೆಜ್ಜೆ ಹಾಕಿದವರು. ಪ್ರಕೃತಿಯ ಜೊತೆಗೆ ಹೆಚ್ಚೆಚ್ಚು ಸಂಪರ್ಕ ಹೊಂದಿದವರು ನಾವು.

ನಮ್ಮ ಹಿಂದಿನ ಪೀಳಿಗೆಗಳು ಆಧುನಿಕತೆ-ಗ್ಯಾಜೆಟ್‌ಗಳನ್ನು ನೋಡಲಿಲ್ಲ. ನಮ್ಮ ಮುಂದಿನ ಪೀಳಿಗೆಗಳು ಸಂಪ್ರದಾಯ-ಮಣ್ಣಿನ ಜೊತೆಗೆ ಬದುಕು ನಡೆಸುವುದಿಲ್ಲ. ಈ ಸಂಪ್ರದಾಯ ಮಣ್ಣಿಗೊಂದು, ಆಧುನಿಕತೆ ಸೃಷ್ಟಿಸಿದ ವಿಜ್ಞಾನಿಗಳಿಗೊಂದು ಧನ್ಯವಾದ. ನಮ್ಮಂತಹ ಅದೃಷ್ಟವಂತರ ಪೀಳಿಗೆ ಹಿಂದೆಯೂ ಇಲ್ಲ ಮುಂದೆಯೂ ಬರುವುದಿಲ್ಲ, ನಮ್ಮದೇ ಅತ್ಯುತ್ತಮ ಪೀಳಿಗೆ ಏನಂತೀರ?

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News