ವೈದ್ಯರು ಟೆಕ್ನಾಲಜಿಗಿಂತ ಹೆಚ್ಚು ರೋಗಿಗಳ ಸಮಸ್ಯೆ ಆಲಿಸಬೇಕು: ಡಾ. ಸುಶೀಲ್ ಜತ್ತನ್ನ

Update: 2022-08-23 10:47 GMT

ಡಾ. ಸುಶೀಲ್ ಜತ್ತನ್ನ ಅಂತರ್ ರಾಷ್ಟ್ರೀಯ ವೈದ್ಯಕೀಯ ರಂಗದಲ್ಲಿ ಮಿಂಚಿದ ಹೆಮ್ಮೆಯ ಕನ್ನಡಿಗ. ದಿವಂಗತ ಬಿಷಪ್ ಸಿ.ಡಿ. ಜತ್ತನ್ನ ಹಾಗೂ ದಿವಂಗತ ಸರೋಜಿನಿ ಜತ್ತನ್ನ ಅವರ ಪುತ್ರ. ಬೆಂಗಳೂರಲ್ಲಿ ಹುಟ್ಟಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಶಾಲೆ, ಕಾಲೇಜು ಶಿಕ್ಷಣ ಪಡೆದು  ಕೆಎಂಸಿಯಲ್ಲಿ ಎಂಬಿಬಿಎಸ್ ಪದವಿ ಪಡೆದವರು. ಆ ಬಳಿಕ ೧೯೮೨ರಲ್ಲಿ ಉನ್ನತ ಅಧ್ಯಯನಕ್ಕಾಗಿ ಯುನೈಟೆಡ್ ಕಿಂಗ್ಡಮ್‌ಗೆ ತೆರಳಿದ  ಡಾ. ಸುಶೀಲ್ ಜತ್ತನ್ನ ತಮ್ಮ ಸ್ನಾತಕೋತ್ತರ ವೈದ್ಯ ಪದವಿ ಜೊತೆ MSc, MRCP, MFPHM, FFPHM, DGM, DMS ಈ ಎಲ್ಲ ಉನ್ನತ ಪದವಿಗಳನ್ನು ಪಡೆದರು. ಬಳಿಕ ಇಂಗ್ಲೆಂಡ್‌ನಲ್ಲೇ ಫಿಸಿಶಿಯನ್ ಆಗಿ ತಮ್ಮ ವೈದ್ಯಕೀಯ ವೃತ್ತಿ ಆರಂಭಿಸಿ ಇಂಗ್ಲೆಂಡ್ ಸರಕಾರದ ಆರೋಗ್ಯ ವಿಭಾಗದ  ಹಲವಾರು ಉನ್ನತ ಹುದ್ದೆಗಳನ್ನು ನಿರ್ವಹಿಸಿದರು. ಕೋಲ್ ಚೆಸ್ಟರ್‌ನ ಪಬ್ಲಿಕ್ ಹೆಲ್ತ್ ವಿಭಾಗದ ನಿರ್ದೇಶಕರಾಗಿ, ೧.೨ ಬಿಲಿಯನ್ ಪೌಂಡ್ ಬಜೆಟ್ ಇದ್ದ ಕೇಂಬ್ರಿಜ್ ಶೈರ್‌ನ ನ್ಯಾಶನಲ್ ಹೆಲ್ತ್ ಸರ್ವಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಡಾ. ಸುಶೀಲ್ ಜತ್ತನ್ನ ಅವರು Care UK PLC ಇದರ ಹೆಲ್ತ್ ಕೇರ್ ವಿಭಾಗದ ಪ್ರಪ್ರಥಮ ಭಾರತೀಯ ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬ್ರಿಟನ್ ಅರೋಗ್ಯ ಕ್ಷೇತ್ರದಲ್ಲಿನ ಇವರ ಕೊಡುಗೆಗಾಗಿ ಬ್ರಿಟನ್ ರಾಣಿ ಕ್ವೀನ್ ಎಲಿಝಬೆತ್ ಹಾಗೂ ಪ್ರಿನ್ಸ್ ಫಿಲಿಪ್ ಅವರು ಬಕಿಂಗ್ ಹ್ಯಾಮ್ ಅರಮನೆಗೆ ಕರೆದು ಗೌರವಿಸಿದ್ದಾರೆ. ಅಂದಿನ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಕೂಡ ತಮ್ಮ ಅಧಿಕೃತ ನಿವಾಸಕ್ಕೆ ಆಹ್ವಾನ ನೀಡಿ ಡಾ ಸುಶೀಲ್ ಜತ್ತನ್ನರನ್ನು ಗೌರವಿಸಿದ್ದಾರೆ. ಇವರ ಪತ್ನಿ ಡಾ. ಬೀಟ್ ಜತ್ತನ್ನ. ಇವರ ಪುತ್ರರಾಗಿರುವ ಡಾ. ನಿಕೇಶ್ ಜತ್ತನ್ನ ಮತ್ತು ಅವಿತ್ ಜತ್ತನ್ನ ಅವರೂ ಲಂಡನ್‌ನ ಯುನಿವರ್ಸಿಟಿ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಮೂರು ದಶಕಗಳಿಗೂ ಅಧಿಕ ಕಾಲ ಇಂಗ್ಲೆಂಡ್‌ನಲ್ಲಿ ಸೇವೆ ಸಲ್ಲಿಸಿರುವ ಡಾ. ಸುಶೀಲ್ ಅವರು ಭಾರತಕ್ಕೆ ಮರಳಿ ತಮ್ಮ ತವರು ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಪೈಕಿ ಅತ್ಯಂತ ಪ್ರಮುಖವಾದುದು ಮಿಷನ್ ಆಸ್ಪತ್ರೆ ಎಂದೇ ಖ್ಯಾತಿ ಪಡೆದಿರುವ ಉಡುಪಿಯ ಐತಿಹಾಸಿಕ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕರಾಗಿ ಈ ಆಸ್ಪತ್ರೆಗೆ ಹೊಸ ರೂಪು ನೀಡುವಲ್ಲಿ ಶ್ರಮಿಸುತ್ತಿದ್ದಾರೆ.  ಇದರ ಜೊತೆ ಮಂಗಳೂರಿನ ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾಗಿ, ವೆಲ್ಲೂರಿನ ಖ್ಯಾತ ಸಿಎಂಸಿ ಆಸ್ಪತ್ರೆಯ ಆಡಳಿತ ಸಮಿತಿ ಸದಸ್ಯರಾಗಿ, ರೆಡ್ ಕ್ರಾಸ್ ಇತ್ಯಾದಿ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿಯೂ ಸುಶೀಲ್ ಜತ್ತನ್ನ ಸೇವೆ ಸಲ್ಲಿಸುತ್ತಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಭಾರತ ಮಾತ್ರವಲ್ಲದೆ, ಇಡೀ ಜಗತ್ತು ಎದುರಿಸಿದ ಸಂಕಷ್ಟಗಳು ವೈದ್ಯಕೀಯ ಕ್ಷೇತ್ರಕ್ಕೆ ಸರಕಾರಗಳು ನೀಡುವ ಪ್ರಾಮುಖ್ಯತೆಯ ಬಗ್ಗೆ ಕಣ್ಣು ತೆರೆಸಿದೆ. ನಮ್ಮ ದೇಶದಲ್ಲಿ ಜಿಡಿಪಿಯ ಶೇ. 1ರಿಂದ 2ರಷ್ಟು ಮಾತ್ರವೇ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗುತ್ತದೆ. ಅಮೆರಿಕದಲ್ಲಿ ಜಿಡಿಪಿಯ ಶೇ. 15ರಷ್ಟು ಆರೋಗ್ಯ ಕ್ಷೇತ್ರದ್ದಾಗಿದೆ. ಇಂಗ್ಲೆಂಡ್‌ನಲ್ಲಿ ಶೇ. 18ರಷ್ಟು. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ಅಭಿವೃದ್ಧಿ ಕಾಣಬೇಕಾದರೆ, ಈ ಕ್ಷೇತ್ರಕ್ಕೆ ದೇಶದ ಜಿಡಿಪಿಯ ಭಾಗವನ್ನು ಹೆಚ್ಚಿಸಬೇಕಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಬೇಕಾಗಿದೆ ಎನ್ನುತ್ತಾರೆ  ಇಂಗ್ಲೆಂಡ್‌ನ ಕೇಂಬ್ರಿಜ್ ಶೈರ್‌ನ ನ್ಯಾಶನಲ್ ಹೆಲ್ತ್ ಸರ್ವಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಡಾ.ಸುಶೀಲ್ ಜತ್ತನ್ನ.

ಕೋಲ್ ಚೆಸ್ಟರ್‌ನ ಪಬ್ಲಿಕ್ ಹೆಲ್ತ್ ವಿಭಾಗದ ನಿರ್ದೇಶಕರಾಗಿ, Care UK PLC ಇದರ ಹೆಲ್ತ್ ಕೇರ್ ವಿಭಾಗದ ಪ್ರಪ್ರಥಮ ಭಾರತೀಯ ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುವ ಡಾ.ಸುಶೀಲ್ ಜತ್ತನ್ನ, ಇದೀಗ ಮಿಷನ್ ಆಸ್ಪತ್ರೆ ಎಂದೇ ಖ್ಯಾತಿ ಪಡೆದಿರುವ  ಉಡುಪಿಯ ಐತಿಹಾಸಿಕ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೇಶದಲ್ಲಿನ ವೈದ್ಯಕೀಯ ವ್ಯವಸ್ಥೆ ಕುರಿತಂತೆ, ‘ವಾರ್ತಾಭಾರತಿ’ ಡಿಜಿಟಲ್ ಚಾನೆಲ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಡಾ. ಸುಶೀಲ್ ಜತ್ತನ್ನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮ ವೈದ್ಯಕೀಯ ಕ್ಷೇತ್ರದ ಅನುಭವದ ಆಧಾರದಲ್ಲಿ ಇಂಗ್ಲೆಂಡ್ ಹಾಗೂ ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ನೀವು ಕಂಡ ಪ್ರಮುಖ ವ್ಯತ್ಯಾಸಗಳೇನು?

► ಡಾ. ಸುಶೀಲ್ ಜತ್ತನ್ನ: ಇಂಗ್ಲೆಂಡ್‌ನಲ್ಲಿ ೩೫ ವರ್ಷಗಳ ಕಾಲ ನಾನು ವೈದ್ಯಕೀಯ ಸೇವೆ ಸಲ್ಲಿಸಿದ್ದೇನೆ. ಖಾಸಗಿ ಹಾಗೂ ಸರಕಾರಿ ಕ್ಷೇತ್ರದಲ್ಲೂ ನಾನು ಕೆಲಸ ಮಾಡಿದ್ದೇನೆ. ಅಲ್ಲಿ ನ್ಯಾಷನಲ್ ಹೆಲ್ತ್ ಸರ್ವಿಸ್ (ಎನ್‌ಎಚ್‌ಎಸ್) ವ್ಯವಸ್ಥೆಯೇ ವಿಭಿನ್ನ. ವಿಶೇಷವೆಂದರೆ ಎಲ್ಲಾ ಚಿಕಿತ್ಸೆಗಳು ಎನ್‌ಎಚ್‌ಎಸ್‌ನಡಿ ಉಚಿತವಾಗಿರುತ್ತದೆ. ಆಸ್ಪತ್ರೆಗೆ ಹೋದಾಗ ನಮಗೆ ಎಷ್ಟೊಂದು ಖರ್ಚು ಎಂಬ ಭಯ ಇರುವುದಿಲ್ಲ. ೧೯೪೭ರಲ್ಲಿ ಆರಂಭವಾಗಿದ್ದು, ಈಗಲೂ ಬಹಳ ಒಳ್ಳೆಯ ವ್ಯವಸ್ಥೆಯಾಗಿ ಅದು ಮುಂದುವರಿದಿದೆ. ಭಾರತದಲ್ಲಿ ಇನ್ನೂ ಅಂತಹ ವ್ಯವಸ್ಥೆ ಇಲ್ಲ. ಈಗಿನ ಸರಕಾರ ಅದನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಸದ್ಯ ಭಾರತದಲ್ಲಿ ಸರಕಾರಿ ಆಸ್ಪತ್ರೆಗಳು, ಇನ್ಸೂರೆನ್ಸ್ ವ್ಯವಸ್ಥೆ ಹಾಗೂ ನಮ್ಮದೇ ಜೇಬಿನಿಂದ ಖರ್ಚು ಮಾಡಿ ಪಡೆಯುವ ಚಿಕಿತ್ಸೆ ಈ ಮೂರು ರೀತಿಯ ವ್ಯವಸ್ಥೆ ಇದೆ. ಶೇ. ೬೦ರಷ್ಟು ನಮ್ಮ ವೈದ್ಯಕೀಯ ವ್ಯವಸ್ಥೆ ನಾವು ಜೇಬಿನಿಂದ ಹಣ ಖರ್ಚು ಮಾಡಿ ಪಡೆಯುವಂತಹದ್ದು. ಇನ್ಸೂರೆನ್ಸ್ ವ್ಯವಸ್ಥೆ ವ್ಯಾಪಕವಾಗುತ್ತಿದೆ. ಭಾರತ ಸರಕಾರವೂ ಆಯುಷ್ಮಾನ್ ಹೆಸರಿನಲ್ಲಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೊಳಿಸಿದೆ. ಇಂಗ್ಲೆಂಡ್‌ನಲ್ಲಿ ಎಲ್ಲವೂ ಉಚಿತವಾಗಿರುವುದರಿಂದ ಇಂದೇ ಚಿಕಿತ್ಸೆ  ಪಡೆಯಬೇಕೆಂದಿದ್ದರೆ ಅದು ಅಸಾಧ್ಯ. ಅದಕ್ಕಾಗಿ ವೇಯ್ಟಿಂಗ್ ಲಿಸ್ಟ್‌ನಲ್ಲಿ ಇರಬೇಕಾಗುತ್ತದೆ. ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿ ಹಿಪ್, ನೀ ಅಥವಾ ಇನ್ಯಾವುದೋ ಆಪರೇಶನ್‌ಗಳಿಗಾಗಿ ಕಾಯಬೇಕಾಗುವ ವ್ಯವಸ್ಥೆ ಅಲ್ಲಿನದು. ಮತ್ತೊಂದೆಂದರೆ ಎನ್‌ಎಚ್‌ಎಸ್‌ನಲ್ಲಿ ಚಿಕಿತ್ಸೆಯ ಸಂದರ್ಭ ಲಭ್ಯವಿರುವ ವೈದ್ಯರೇ ಚಿಕಿತ್ಸೆ ನೀಡುತ್ತಾರೆ. ನಮ್ಮ ಆಯ್ಕೆಯ ವೈದ್ಯರನ್ನು ಚಿಕಿತ್ಸೆಗಾಗಿ ನಿಗದಿಪಡಿಸುವುದು ಕಷ್ಟಸಾಧ್ಯ. ಹಾಗಾಗಿ ಇಂಗ್ಲೆಂಡ್ ಮತ್ತು ಭಾರತದ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಹೋಲಿಕೆ ಮಾಡುವುದು ಸ್ವಲ್ಪ ಕಷ್ಟ.

ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಈ ಹಿಂದಿಗಿಂತ ಸಾಕಷ್ಟು ಅಭಿವೃದ್ಧಿ ಆಗಿದೆ. ಆದರೂ ಇನ್ನೂ ಎಲ್ಲ ಜನರಿಗೆ ಆರೋಗ್ಯ ಸೇವೆ ತಲುಪಿಸುವುದು ನಮಗೆ ಸಾಧ್ಯವಾಗಿಲ್ಲ. ನಿಮ್ಮ ಪ್ರಕಾರ ಇಲ್ಲಿ ಇನ್ನು ಏನೇನು ಬದಲಾವಣೆ ತರುವ ಮೂಲಕ ಇದನ್ನು ಸಾಧಿಸಬಹುದು?

► ಡಾ. ಸುಶೀಲ್ ಜತ್ತನ್ನ: ಭಾರತದ ಪಟ್ಟಣ, ನಗರ ಪ್ರದೇಶಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಆಧುನಿಕ ವ್ಯವಸ್ಥೆಗಳಿವೆ, ಆಸ್ಪತ್ರೆಗಳಿವೆ. ಆದರೆ ಹಳ್ಳಿಗಳು, ಗ್ರಾಮಗಳಲ್ಲಿ ಈ ಅವಕಾಶ ಸಿಗುತ್ತಿಲ್ಲ. ಎಂಬಿಬಿಎಸ್ ವೈದ್ಯರು ಕೆಲವರು ಹಳ್ಳಿ ಕಡೆ ಹೋಗಲು ಹಿಂಜರಿಯುತ್ತಾರೆ. ಆಯುರ್ವೇದ ವೈದ್ಯರು ಹಳ್ಳಿಯತ್ತ ಗಮನ ಹರಿಸುತ್ತಾರೆ. ವೈದ್ಯಕೀಯ ಸೇವೆಯನ್ನು ಪಟ್ಟಣಗಳಿಂದ ಹಳ್ಳಿಗಳಿಗೆ ಹರಡಬೇಕಾಗುತ್ತದೆ. ಖಾಸಗಿ ಆಸ್ಪತ್ರೆಗಳ ಜತೆ ಪಬ್ಲಿಕ್- ಪ್ರೈವೇಟ್ ಪಾಲುದಾರಿಕೆ ಮಾಡಿಕೊಂಡಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲು ಸಾಧ್ಯವಾಗಲಿದೆ.

ಆರೋಗ್ಯ ಸೇವೆ ಸಂಪೂರ್ಣವಾಗಿ ಸರಕಾರದ ಅಧೀನದಲ್ಲಿರಬೇಕು. ಖಾಸಗಿಯವರು ಜನರನ್ನು ಸುಲಿಯುತ್ತಾರೆ ಎಂಬ ವಾದವಿದೆ. ಹಲವು ಬಾರಿ ಇದು ಸತ್ಯ ಎಂದೂ ಕಂಡು ಬಂದಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?

► ಡಾ. ಸುಶೀಲ್ ಜತ್ತನ್ನ: ಆ ಅನಿಸಿಕೆ ಒಂದು ರೀತಿಯಲ್ಲಿ ಸರಿ ಎಂದೂ ಹೇಳಬಹುದು. ಕೆಲವೊಂದು ಆಸ್ಪತ್ರೆಗಳ ಚಿಕಿತ್ಸಾ ದರ ಸಾಮಾನ್ಯ ವ್ಯಕ್ತಿಗಳಿಂದ ಭರಿಸಲು ಅಸಾಧ್ಯವಾಗುವಂತಹ ಪರಿಸ್ಥಿತಿ ಇದೆ. ಜನರಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಉತ್ತಮವಾಗಿಲ್ಲ, ರೋಗಿಗಳ ಬಗ್ಗೆ ಆಸಕ್ತಿ ಕಡಿಮೆ ಎಂಬ ಭಾವನೆ ಇದೆ. ಹಾಗಾಗಿ ಬಡ ರೋಗಿ ಕುಟುಂಬ ಕೂಡಾ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಪ್ರಮೇಯ ಎದುರಾಗುತ್ತದೆ. ನಮ್ಮ ಪ್ರಾಥಮಿಕ ಆರೋಗ್ಯರಕ್ಷಣಾ ವ್ಯವಸ್ಥೆ ಸಮರ್ಪಕವಾಗಿದ್ದರೆ ಈ ಜನಸಾಮಾನ್ಯರ ಆತಂಕವನ್ನು ಸಾಕಷ್ಟು ಮಟ್ಟಿಗೆ ನಿವಾರಿಸಲು ಸಾಧ್ಯವಾಗಲಿದೆ.

ಕೋವಿಡ್ ಸಂದರ್ಭದಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯ ಲೋಪದೋಷಗಳೆಲ್ಲ ಬಹಿರಂಗವಾದವು. ಅದರಿಂದ ನಾವು ಕಲಿಯಬೇಕಾದ ಪಾಠ ಏನು?

► ಡಾ. ಸುಶೀಲ್ ಜತ್ತನ್ನ: ಕೋವಿಡ್ ಸಾಂಕ್ರಾಮಿಕ ಜಗತ್ತಿನ ಆರೋಗ್ಯ ವ್ಯವಸ್ಥೆಗೆ ಬಹಳಷ್ಟು ಪಾಠ ಕಲಿಸಿದೆ. ಅಮೆರಿಕದಲ್ಲಿ ಅಷ್ಟೊಂದು ಉತ್ತಮ ವೈದ್ಯಕೀಯ ವ್ಯವಸ್ಥೆಯ ಹೊರತಾಗಿಯೂ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಅದು ಅಸಾಮಾನ್ಯ ಪರಿಸ್ಥಿತಿಯಾಗಿತ್ತು. ಯಾರೂ ಊಹೆ ಮಾಡದಂತಹ ಸಂದಿಗ್ಧ ಪರಿಸ್ಥಿತಿ. ನಮ್ಮ ಸರಕಾರ ಆರೋಗ್ಯ ಕ್ಷೇತ್ರಕ್ಕೆ ನೀಡುವ ಆದ್ಯತೆಯ ಬಗ್ಗೆ ಇದು ಕಣ್ಣು ತೆರೆಸಿದೆ. ನಾವು ಜಿಡಿಪಿಯಲ್ಲಿ ಆರೋಗ್ಯ ಕ್ಷೇತ್ರದ ಭಾಗವನ್ನು ಹೆಚ್ಚಿಸಬೇಕಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೆಚ್ಚಿಸುವ ಜತೆಗೆ ಅಲ್ಲಿ ವೈದ್ಯರು, ಸಿಬ್ಬಂದಿ ಜತೆಗೆ ಅಗತ್ಯ ಔಷಧ ಲಭ್ಯವಿರುವಂತೆ ಮಾಡಬೇಕು. ನಮ್ಮ ದೇಶದಲ್ಲಿ ಬಹಳಷ್ಟು ವೈದ್ಯಕೀಯ ಕಾಲೇಜುಗಳಿವೆ ಎಂಬ ಹೆಮ್ಮೆ ನಮಗಿದೆ. ಆದರೆ ನಮ್ಮ ವೈದ್ಯರು ಮತ್ತು ದಾದಿಯರ ತರಬೇತಿ ಹೆಚ್ಚಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಪ್ರಕಾರ ದೇಶದಲ್ಲಿ ವೈದ್ಯರು ಮತ್ತು ದಾದಿಯರ ಸಂಖ್ಯೆ ಕಡಿಮೆ ಇದೆ. ನಮ್ಮಲ್ಲಿ ತರಬೇತಿ ಪಡೆದ ನುರಿತ ವೈದ್ಯರು, ದಾದಿಯರು ಹೊರ ದೇಶಗಳಿಗೆ ಹೋಗುತ್ತಾರೆ. ಉದಾಹರಣೆ ನೀಡುವುದಾದರೆ ಕಳೆದ ಎರಡು ತಿಂಗಳಲ್ಲಿ ನಮ್ಮದೇ ಆಸ್ಪತ್ರೆಯ ೧೧ ಮಂದಿ ದಾದಿಯರು ಹೊರದೇಶಗಳಿಗೆ ಹೋಗಿದ್ದಾರೆ. ನಮ್ಮಲ್ಲಿ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳ ಸೀಟ್‌ಗಳನ್ನು ಹೆಚ್ಚಿಸಬೇಕಾಗಿದೆ.

ನೀವು ಹಲವು ದಶಕಗಳ ಕಾಲ ವೈದ್ಯರಾಗಿ, ಆರೋಗ್ಯ ವಿಭಾಗದ ಆಡಳಿತದಲ್ಲೂ ಕೆಲಸ ಮಾಡಿದ್ದೀರಿ. ಈಗ ವೈದ್ಯರು ಬಹಳ ಕಮರ್ಷಿಯಲ್ ಆಗಿದ್ದಾರೆ. ಸೇವಾ ಮನೋಭಾವ ಕಡಿಮೆಯಾಗಿದೆ ಎಂಬ ದೂರು ಬಹಳ ಕೇಳಿ ಬರುತ್ತಿದೆ. ಇದಕ್ಕೆ ಏನು ಹೇಳುತ್ತೀರಿ ?

► ಡಾ.ಸುಶೀಲ್ ಜತ್ತನ್ನ: ಪ್ರಸಕ್ತ ಸನ್ನಿವೇಶಗಳಲ್ಲಿ ಸಮಾಜದಲ್ಲಿ ಮೌಲ್ಯಗಳಲ್ಲಿ ಬದಲಾವಣೆಯಾಗುತ್ತಿದೆ. ವೈದ್ಯಕೀಯ ಶಿಕ್ಷಣ ಕಷ್ಟದ ಹಾಗೂ ದೀರ್ಘಕಾಲಿನ ಪ್ರಕ್ರಿಯೆ. ಜತೆಗೆ ವಾರ ಪೂರ್ತಿ ಕೆಲಸ. ಅವರ ಮೇಲೆ ಒತ್ತಡ ಸಹಜವಾಗಿಯೇ ಇರುತ್ತದೆ. ಅದೇ ರೀತಿ ರೋಗಿಗಳ ನಿರೀಕ್ಷೆಯೂ ಹೆಚ್ಚುತ್ತಾ ಹೋಗಿದೆ.  ಜನಸಾಮಾನ್ಯರು ಹೇಳುವ ಪ್ರಕಾರ ಕೆಲವೊಂದು ವೈದ್ಯರು ಕಮರ್ಷಿಯಲ್ ಆಗಿರಬಹುದು. ಆದರೆ ಇಂದಿಗೂ ಸೇವಾ ಮನೋಭಾವನೆಯನ್ನು ಉಳಿಸಿಕೊಂಡ ವೈದ್ಯರು ನಮ್ಮ ಜತೆಗಿದ್ದಾರೆ. ಏನಾದರೂ ತಪ್ಪಾದಾಗ ವೈದ್ಯರು, ಸಿಬ್ಬಂದಿ ಮೇಲೆ ದಾಳಿ, ಹಲ್ಲೆ ಮಾಡುವ ಪ್ರಕ್ರಿಯೆ ಹೆಚ್ಚುತ್ತಿದೆ. ಇದು ಒಳ್ಳೆಯದಲ್ಲ. ರೋಗಿಗಳು ವೈದ್ಯರು ಹಾಗೂ ದಾದಿಯರ ಸಮಸ್ಯೆ ಅರ್ಥ ಮಾಡಿಕೊಳ್ಳುವಂತೆಯೇ, ವೈದ್ಯರೂ ಕೂಡಾ ರೋಗಿಗಳ ಮಾನಸಿಕ ತಳಮಳವನ್ನು ಅರ್ಥಮಾಡಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ.

ಒಳ್ಳೆಯ ಚಿಕಿತ್ಸೆ ಅಂದ್ರೆ ದುಬಾರಿ ಚಿಕಿತ್ಸೆ ಎಂಬ ಭಾವನೆ ಈಗ ಎಲ್ಲರಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ನಿಜ ಕೂಡ. ಹಾಗಾಗಿ ಈ ಸಮಸ್ಯೆಗೆ ನಿಮ್ಮ ಪ್ರಕಾರ ಏನು ಪರಿಹಾರ?

► ಡಾ. ಸುಶೀಲ್ ಜತ್ತನ್ನ: ಸರಕಾರ ಆರೋಗ್ಯ ಸುರಕ್ಷೆಯನ್ನು ಪ್ರಥಮ ಆದ್ಯತೆಯಾಗಿರಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಆಸ್ಪತ್ರೆಗಳ ಪಾಲಿಗೂ ಖರ್ಚಿನ ಹಾದಿ. ಹಾಗಾಗಿ ಸರಕಾರಿ ಆಸ್ಪತ್ರೆಗಳ ಸೇವೆ ಉತ್ತಮವಾಗಿದ್ದಾಗ ರೋಗಿಗಳು ಸಹಜವಾಗಿಯೇ ಖಾಸಗಿ ಆಸ್ಪತ್ರೆಗಳಿಂದ ದೂರ ಉಳಿಯುತ್ತಾರೆ. ಆಗ ಚಿಕಿತ್ಸೆ ದುಬಾರಿ ಎಂಬ ಮನೋಭಾವ ಸಹಜವಾಗಿಯೇ ದೂರವಾಗುತ್ತದೆ. ಜನರಿಗೆ ನೀಡುವ ಇನ್ಸೂರೆನ್ಸ್ ಯೋಜನೆಗಳು ಹೆಚ್ಚಾಗಬೇಕು. ಸರಕಾರ ಖಾಸಗಿ ಆಸ್ಪತ್ರೆಗಳಿಗೆ ನೀಡುವ ರಿಯಾಯಿತಿ ಪ್ಯಾಕೇಜ್ ದರವೂ ಹೆಚ್ಚಾಗಬೇಕು.

ನೀವು ಮಿಷನ್ ಆಸ್ಪತ್ರೆಯಲ್ಲಿ ತಂದಿರುವ ಬದಲಾವಣೆಗಳೇನು? ಇನ್ನೂ ಏನೇನು ಸೌಲಭ್ಯ ಅಲ್ಲಿಗೆ ಬರಲಿದೆ?

► ಡಾ. ಸುಶೀಲ್ ಜತ್ತನ್ನ: ಮಿಷನ್ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸ ಚಿಕಿತ್ಸಾ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಆದಷ್ಟು ಸಮಾಜ ಸೇವೆಯಲ್ಲಿ ಭಾಗಿಯಾಗುವ ಯೋಜನೆ ಹಾಕಿಕೊಂಡಿದ್ದೇವೆ. ‘ಸಹಜೀವನ’ ಎಂಬ ಹಿರಿಯ ನಾಗರಿಕರ ಕೇಂದ್ರವನ್ನು ಆರಂಭಿಸಲಾಗಿದೆ. ಹಾಸಿಗೆ ಹಿಡಿದ ರೋಗಿಗಳಿಗಾಗಿ ‘ಕರುಣಾಲಯ’ ಎಂಬ ನರ್ಸಿಂಗ್‌ಕೇರ್ ವ್ಯವಸ್ಥೆಯನ್ನು ಆರಂಭಿಸಿದ್ದೇವೆ. ಶತಮಾನೋತ್ಸವದ ಕಾರ್ಯಕ್ರಮವಾಗಿ ಕ್ಯಾನ್ಸರ್ ಪೀಡಿತರಿಗಾಗಿ ಪ್ಯಾಲಿಯೇಟಿವ್ ಕೇರ್ ಸೆಂಟರ್ ಆರಂಭಿಸಲು ಮುಂದಾಗಿದ್ದೇವೆ. ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ. ಜಮೀಯತುಲ್ ಫಲಾಹ್ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಳಪುವಿನಲ್ಲಿ ನಾವು ಎರಡು ವಾರಗಳಿಂದೀಚೆಗೆ ಕ್ಲಿನಿಕ್ ಆರಂಭಿಸಿದ್ದೇವೆ.

ಯುವ ವೈದ್ಯರಿಗೆ ನೀವು ಕೊಡುವ ಸಲಹೆ ಏನು?

► ಡಾ.ಸುಶೀಲ್ ಜತ್ತನ್ನ: ವೈದ್ಯಕೀಯ ಕ್ಷೇತ್ರವೆಂಬುದು ಸೇವೆ. ವೈದ್ಯರಾಗಲಿ, ದಾದಿಯರಾಗಲಿ ಸೇವಾ ಮನೋಭಾವ ಹೊಂದಿರಬೇಕು. ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು, ಆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ಈ ಕ್ಷೇತ್ರ ಬಿಜಿನೆಸ್ ಆಗಿ ಪರಿವರ್ತನೆಯಾಗಬಾರದು. ನಮ್ಮ ಸೇವೆಯನ್ನು ಹಳ್ಳಿಗಳಿಗೂ ವಿಸ್ತರಿಸಬೇಕಾಗಿದೆ.

(ಇದರ ವೀಡಿಯೋವನ್ನು ವಾರ್ತಾಭಾರತಿ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.)

Full View

Writer - ಬರಹ ರೂಪ: ಸತ್ಯಾ ಕೆ.

contributor

Editor - ಬರಹ ರೂಪ: ಸತ್ಯಾ ಕೆ.

contributor

Similar News