ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಕ್ಕೆ ಹೆಮ್ಮೆ, ಉದ್ಯೋಗ ಸೃಷ್ಟಿಯಲ್ಲಿ ನಿರಾಶೆ
ಉಡುಪಿ, ಆ.25: ಅವಿಭಜಿತ ದ.ಕ. ಜಿಲ್ಲೆಯಿಂದ ಬೇರ್ಪಟ್ಟು ಉಡುಪಿ, ಸ್ವತಂತ್ರ ಜಿಲ್ಲೆಯಾಗಿ ರೂಪ ತಳೆದು ಇಂದಿಗೆ 25 ವರ್ಷಗಳು ಪೂರ್ಣಗೊಂಡವು. ಈ ಮೂಲಕ ಜಿಲ್ಲೆ ಇಂದು ಸ್ಥಾಪನೆಯ ರಜತ ಮಹೋತ್ಸವನ್ನು ಆಚರಿಸಿಕೊಳ್ಳುತ್ತಿದೆ. ಜೆ.ಎಚ್.ಪಟೇಲ್ ನೇತೃತ್ವದ ಜನತಾ ದಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರ ಸತತ ಪ್ರಯತ್ನದಿಂದ 1997ರ ಆಗಸ್ಟ್ 25ರಂದು ಸ್ವತಃ ಮುಖ್ಯಮಂತ್ರಿಯವರೇ ಉಡುಪಿ ಜಿಲ್ಲೆಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು.
ಆಡಳಿತಾತ್ಮಕ ಕಾರಣಗಳಿಗಾಗಿ ಉಡುಪಿ ಜಿಲ್ಲೆ, ಭೌತಿಕವಾಗಿ ದ.ಕ. ಜಿಲ್ಲೆಯಿಂದ ಬೇರ್ಪಟ್ಟಿದ್ದರೂ, ಕರುಳಬಳ್ಳಿಯ ಸಂಬಂಧ ಇಂದೂ ಗಟ್ಟಿಯಾಗಿಯೇ ಉಳಿಸಿಕೊಂಡಿದೆ. ಎರಡು ಜಿಲ್ಲೆಗಳ ನಡುವೆ ಎಲ್ಲಾ ಕ್ಷೇತ್ರಗಳಲ್ಲೂ ಆರೋಗ್ಯಕರ ಸ್ಪರ್ಧೆ- ಉದಾಹರಣೆಗೆ ಆರೋಗ್ಯ ಮತ್ತು ಶಿಕ್ಷಣ- ಈಗಲೂ ಮುಂದು ವರಿದಿದೆ. ಅವಿಭಜಿತ ದ.ಕ. ಜಿಲ್ಲೆ ಎಂಬ ಪದ ಬಳಕೆ ಈಗಲೂ ಸಾಮಾನ್ಯವೆಂಬಂತೆ ಬಳಕೆಯಾಗುತ್ತಿದೆ.
ಉಡುಪಿ ಜಿಲ್ಲೆಯ ಬೇಡಿಕೆ ಬಹುಕಾಲದಿಂದ ಇದ್ದರೂ, ಅದಕ್ಕೊಂದು ಮೂರ್ತ ರೂಪ ನೀಡಿ ಪ್ರತ್ಯೇಕ ಜಿಲ್ಲೆಯ ಕನಸನ್ನು ಸಾಧ್ಯವಾಗಿಸಿದವರು ಆಗಿನ ಮೀನುಗಾರಿಕಾ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ. ಮಲ್ಪೆಯ ಎರಡನೇ ಹಂತದ ಮೀನು ಗಾರಿಕೆ ಬಂದರಿನ ಉದ್ಘಾಟನೆಗಾಗಿ ಬಂದ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ರನ್ನು ಕೆಲವೇ ದಿನಗಳ ಅಂತರದಲ್ಲಿ ಮತ್ತೊಮ್ಮೆ ಉಡುಪಿಗೆ ಕರೆಸಿ, ಜಿಲ್ಲೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಕೇವಲ ಮೂರು ತಾಲೂಕುಗಳೊಂದಿಗೆ (ಉಡುಪಿ, ಕಾರ್ಕಳ, ಕುಂದಾಪುರ) ಸಣ್ಣ ಜಿಲ್ಲೆಯಾಗಿ ರೂಪು ತಳೆದ ಉಡುಪಿ ಜಿಲ್ಲೆ ಇಂದು ಏಳು ತಾಲೂಕುಗಳನ್ನು ಹೊಂದಿದೆ. ಹೊಸದಾಗಿ ಕಾಪು, ಬ್ರಹ್ಮಾವರ, ಬೈಂದೂರು ಹಾಗೂ ಹೆಬ್ರಿ ತಾಲೂಕುಗಳು ಅಸ್ತಿತ್ವಕ್ಕೆ ಬಂದಿವೆ. ಪ್ರಾರಂಭದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತಾ ಸಾಗಿದರೂ, ಇಂದು ಅಭಿವೃದ್ಧಿಯಲ್ಲಿ ರಾಜ್ಯದ ಮುಂಚೂಣಿಯ ಜಿಲ್ಲೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತಿದೆ. ಇಂದು 158 ಗ್ರಾಪಂಗಳು, ಒಂದು ನಗರಸಭೆ, ಮೂರು ಪುರಸಭೆ, ಒಂದು ಪಪಂಗಳನ್ನು ಹೊಂದಿರುವ ಉಡುಪಿ ಜಿಲ್ಲೆಯ ಜನಸಂಖ್ಯೆ ಸುಮಾರು 12 ಲಕ್ಷ. ಜಿಲ್ಲೆಯಲ್ಲಿ ಶೇ.51ರಷ್ಟು ಮಹಿಳೆ ಯರಿದ್ದರೆ, ಪುರುಷರ ಪ್ರಮಾಣ ಶೇ.49. ಮೊಗವೀರ, ಬಿಲ್ಲವ, ಬಂಟ, ಮುಸ್ಲಿಮರು, ದಲಿತರು, ಒಬಿಸಿ, ಕ್ರೈಸ್ತರು, ಬ್ರಾಹ್ಮಣರು, ಜಿಎಸ್‌ಬಿ ಇಲ್ಲಿನ ಪ್ರಮುಖ ಸಮುದಾಯಗಳಾದರೆ, ಕೊರಗ, ಕುಡುಬಿ, ಮಲೆಕುಡಿಯ, ಹಾಲಕ್ಕಿ ಜಿಲ್ಲೆಯಲ್ಲಿರುವ ಇತರ ಸಣ್ಣ ಪುಟ್ಟ ಸಮುದಾಯಗಳು. ಇಲ್ಲಿನ ಬಹುಪಾಲು ಜನರು ವಾಸಿಸುವುದು ಗ್ರಾಮೀಣ ಭಾಗಗಳಲ್ಲಿ.
ಉಡುಪಿ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿಯಾಗಿ ನೇಮಕ ಗೊಂಡವರು ಡಾ.ಕಲ್ಪನಾ ಗೋಪಾಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದವರು ಸವಿತಾ ಹಂದೆ. ಹೊಸ ಜಿಲ್ಲೆಯೊಂದರ ನಿರ್ಮಾಣಕ್ಕೆ ಬೇಕಾದ ಭದ್ರ ಬುನಾದಿ ಹಾಕುವಲ್ಲಿ ಈ ಇಬ್ಬರು ಮಹಿಳಾ ಅಧಿಕಾರಿಗಳು ಸಫಲರಾಗಿದ್ದರಲ್ಲದೆ ಅವರ ಪರಿಶ್ರಮದ ಫಲವಾಗಿಯೇ ಜಿಲ್ಲೆ ಇಂದು ರಾಜ್ಯದಲ್ಲಿ ಅಗ್ರ ಐದು ಜಿಲ್ಲೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತಿದೆ.
ಬ್ಲೂಪ್ರಿಂಟ್ ಇರಲಿಲ್ಲ:
ನಮಗೆ ದೂರದ ಬೈಂದೂರು, ಶಿರೂರಿನ ಜನರು ಮಂಗಳೂರಿಗೆ ತೆರಳಿ ತಮ್ಮ ಕೆಲಸ ಮಾಡಿಸಿ ಕೊಳ್ಳಲು ಪಡುತಿದ್ದ ಕಷ್ಟವನ್ನು ನಿವಾರಿಸಲು ಉಡುಪಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವುದು ನಮ್ಮ ಗುರಿಯಾಗಿತ್ತು. ಹೀಗಾಗಿ ಜಿಲ್ಲೆ ಹೇಗಿರಬೇಕೆಂಬ ಯಾವುದೇ ಬ್ಲೂಪ್ರಿಂಟ್ ನಮ್ಮಲ್ಲಿರಲಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳುತ್ತಾರೆ. ಹೀಗಾಗಿ ನಾವು ಜನಪ್ರತಿನಿಧಿಗಳು, ಅಧಿಕಾರಿಗಳು, ತಜ್ಞರೊಂದಿಗೆ ಚರ್ಚಿಸಿ ಹಂತ ಹಂತವಾಗಿ ಯೋಜನೆಗಳನ್ನು ರೂಪಿಸಿದೆವು ಎಂದು ಅವರು ಸಂವಾದ ಕಾರ್ಯಕ್ರಮವೊಂದರಲ್ಲಿ ವಿವರಿಸಿದರು.
ಸರ್ವತೋಮುಖ ಅಭಿವೃದ್ಧಿಯಾಗಿಲ್ಲ: ಕರಾವಳಿ ಜಿಲ್ಲೆ ಗಳು ಯಾವತ್ತೂ ಮುಂಚೂಣಿಯಲ್ಲಿರುವ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಈಗಲೂ ಉಡುಪಿ ಜಿಲ್ಲೆ ದೇಶದ ಅಗ್ರಗಣ್ಯ ಜಿಲ್ಲೆಗಳಲ್ಲಿ ಒಂದಾಗಿ ಪರಿಗಣಿಸ್ಪಡುತ್ತಿದೆ. ಆದರೆ ಉಳಿದ ಪ್ರಮುಖ ಕ್ಷೇತ್ರಗಳಲ್ಲಿ ಜಿಲ್ಲೆಯ ನಿರ್ವಹಣೆ ನಿರೀಕ್ಷೆಯ ಮಟ್ಟದಲ್ಲಿಲ್ಲ ಎಂಬುದನ್ನು ತಜ್ಞರು ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ ಜಿಲ್ಲೆಯ ಬಹುಪಾಲು ವಿದ್ಯಾವಂತ ಯುವಜನತೆಗೆ ಇಲ್ಲಿ ಉದ್ಯೋಗಾವಕಾಶ ಗಳೇ ಲಭ್ಯವಿಲ್ಲ. ಉದ್ಯೋಗವನ್ನು ಅರಸಿ ಅವರು ಈಗಲೂ ಬೆಂಗಳೂರು, ಮುಂಬೈ ಸೇರಿದಂತೆ ಹೊರರಾಜ್ಯ ಹಾಗೂ ಹೊರದೇಶಗಳಿಗೆ ವಲಸೆ ಹೋಗಬೇಕಾಗಿದೆ. ಪೂರ್ವದಲ್ಲಿ ಪಶ್ಚಿಮ ಘಟ್ಟ ಹಾಗೂ ಪಶ್ಚಿಮದಲ್ಲಿ ಅರಬಿ ಸಮುದ್ರವನ್ನು ಹೊಂದಿರುವ ಉಡುಪಿ ಜಿಲ್ಲೆ ಪರಿಸರ ಸೂಕ್ಷ ಜಿಲ್ಲೆಗಳಲ್ಲಿ ಒಂದಾಗಿದೆ. ಹೀಗಾಗಿ ಇಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಹಾಗೂ ಮಾಲಿನ್ಯಕಾರಕ ಉದ್ದಿಮೆಗಳನ್ನು ಸ್ಥಾಪಿಸುವ ಬದಲು ಪರಿಸರ ಸಹ್ಯ ಹಾಗೂ ಸಾಫ್ಟ್‌ವೇರ್ ಉದ್ದಿಮೆಗಳನ್ನು ಪ್ರಾರಂಭಿಸಲು ಒತ್ತು ನೀಡಬೇಕಾಗಿದೆ. ಈ ವಿಷಯದಲ್ಲಿ ನಾವು ಹೆಚ್ಚಿನ ಪ್ರಗತಿ ತೋರಿಸಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ನುಡಿದರು.
ಕುಂಠಿತಗೊಂಡ ಪ್ರವಾಸೋದ್ಯಮ: ಇನ್ನು ಉಡುಪಿ ಜಿಲ್ಲೆ ಪ್ರವಾಸೋದ್ಯಮದಲ್ಲಿ ಪಕ್ಕದ ಕೇರಳ ಹಾಗೂ ಗೋವಾ ರಾಜ್ಯದಷ್ಟೇ ಅವಕಾಶಗಳನ್ನು ಹೊಂದಿದ್ದರೂ, ದೀರ್ಘಕಾಲಿಕ ಯೋಜನೆಗಳನ್ನು ಜಾರಿಗೊಳಿಸದೆ ಅಭಿವೃದ್ಧಿಯಲ್ಲಿ ಹಿನ್ನಡೆ ಯಾಗಿದೆ. ಜಿಲ್ಲೆಯಲ್ಲಿ ಕೇವಲ ಟೆಂಪಲ್ ಟೂರಿಸಂ ಸ್ಪಲ್ಪಮಟ್ಟಿನ ಬೆಳವಣಿಗೆ ಕಂಡಿದ್ದು, ಬಿಟ್ಟರೆ ಉಳಿದಂತೆ ಪ್ರವಾಸೋದ್ಯಮದ ಸಾಧ್ಯತೆಯನ್ನು ನಾವು ಅರ್ಧದಷ್ಟು ಬಳಸಿಕೊಂಡಿಲ್ಲ. ಇಲ್ಲಿ ಖಾಸಗಿಯವರ ಸಹಭಾಗಿತ್ವದ ಮಾತನಾಡುತ್ತಿದ್ದರೂ, ಅಲ್ಲೂ ಪ್ರವಾಸಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸದೆ, ಖಾಸಗಿಯವರಿಗೆ ರಿಸಾರ್ಟ್, ಹೋಂಸ್ಟೇಗಳನ್ನು ಮಾಡಲು ಅನುಮತಿಯನ್ನಷ್ಟೇ ನೀಡಿದ್ದೇವೆ. ಖಾಸಗಿಯವರನ್ನು ಯೋಜನೆಯಲ್ಲಿ ಪಾಲುದಾರರನ್ನಾಗಿಸಲು ವಿಫಲರಾಗಿದ್ದೇವೆ.
ಹೀಗಾಗಿ ವಿದೇಶಿ ಪ್ರವಾಸಿಗರನ್ನು ಬಿಡಿ, ದೇಶದೊಳಗಿನ ಪ್ರವಾಸಿಗರನ್ನು ಜಿಲ್ಲೆಗೆ ಸೆಳೆಯಲು ವಿಫಲರಾಗುತ್ತಿದ್ದೇವೆ. ಬರುವ ಪ್ರವಾಸಿಗರು, ನಾಲ್ಕು ದೇವಸ್ಥಾನ, ಕೆಲವು ಬೀಚ್, ಜಲಪಾತ ಗಳನ್ನು ತಮ್ಮಷ್ಟಕ್ಕೆ ನೋಡಿಕೊಂಡು ತೆರಳುವ ಸ್ಥಿತಿ ಇದೆ. ಹೀಗಾಗಿ ಪ್ರವಾಸೋದ್ಯಮ ವಿಪುಲ ಅವಕಾಶಗಳ ಹೊರತಾಗಿಯೂ ಇನ್ನೂ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ನಿರೀಕ್ಷಿತ ಮಟ್ಟದ ಕೊಡುಗೆಯನ್ನು ನೀಡಲು ವಿಫಲವಾಗಿದೆ.
ಜಿಲ್ಲೆ ಬೃಹತ್ ಕೈಗಾರಿಕೆಗಳಿಗೆ ಆರ್ಥಿಕವಾಗಿ ಅಷ್ಟೇನೂ ಸೂಕ್ತವಾದ ಪ್ರದೇಶವಲ್ಲ. ಜಿಲ್ಲೆಯಲ್ಲಿ ಉದ್ಯೋಗಾವಕಾಶ ಸಾಕಷ್ಟಿರುವ ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಗೆ ಅದರಲ್ಲೂ ಕೃಷಿ ಹಾಗೂ ಆಹಾರ ಆಧಾರಿತ ಘಟಕಗಳಿಗೆ ಹೆಚ್ಚು ಪ್ರಶಸ್ತವಾಗಿದೆ ಎಂದು ಆರ್ಥಿಕ ತಜ್ಞ ಡಾ.ಎನ್.ಕೆ.ತಿಂಗಳಾಯ ಕೆಲವು ವರ್ಷಗಳ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಅಂಥ ಸಾಧ್ಯತೆಗಳ ಬಗ್ಗೆ ಯಾರೂ ಸಾಮೂಹಿಕವಾಗಿ ಯೋಚಿಸಿ ಕಾರ್ಯ ಗತಗೊಳಿ ಸಲು ಮುಂದಾಗಿಲ್ಲ ಎಂಬುದು ಬೇಸರದ ಸಂಗತಿ.
ಕೈತಪ್ಪಿದ ಬ್ಯಾಂಕ್‌ಗಳು: ಕರಾವಳಿಯು ಬ್ಯಾಂಕಿಂಗ್‌ನ ತೊಟ್ಟಿಲು ಎಂದು ಕರೆಸಿಕೊಂಡಿತ್ತು. ಆದರೆ ಇದೀಗ ಜಿಲ್ಲೆಯಲ್ಲಿ ಹುಟ್ಟಿ, ದೇಶ ವಿದೇಶಗಳಲ್ಲಿ ಹೆಸರುವಾಸಿಗಿದ್ದ ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್‌ಗಳು ಇಂದು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಹೊರ ರಾಜ್ಯಗಳ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡಿವೆ. ಕೇವಲ ಕೆನರಾ ಬ್ಯಾಂಕ್ ಮಾತ್ರ ಈಗ ಕರಾವಳಿಯ ಹೆಸರು ಉಳಿಸಲು ಉಳಿದು ಕೊಂಡಿರುವ ಬ್ಯಾಂಕ್ ಎನಿಸಿದೆ.
ಜಿಲ್ಲೆಯಲ್ಲಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಈಗಾಗಲೇ ಮುಚ್ಚಿದ್ದು, ಪುನರಾರಂಭಗೊಳ್ಳುವ ಸಾಧ್ಯತೆ ಕ್ಷೀಣಿಸಿದೆ. ಈಗಿನ ಸ್ಥಿತಿಯಲ್ಲಿ ಅದನ್ನು ಮತ್ತೆ ತೆರೆಯುವುದು ಲಾಭದಾಯಕವಲ್ಲ ಎಂದು ನಾಲ್ಕೈದು ವರ್ಷಗಳ ಕಾಲ ಸಕ್ಕರೆ ಕಾರ್ಖನೆಯ ಅಧ್ಯಕ್ಷ ರಾಗಿದ್ದ ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಡುತ್ತಾರೆ.
ಉಡುಪಿ ಜಿಲ್ಲೆ ಕಳೆದ 25 ವರ್ಷಗಳಲ್ಲಿ ಎಲ್ಲರ ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗಿದೆ. ಆದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಅವಕಾಶಗಳಿವೆ. ಇದಕ್ಕಾಗಿ ಜಿಲ್ಲೆಗೊಂದು ವಿಮಾನ ನಿಲ್ದಾಣದ ಅಗತ್ಯವಿದೆ. ಅದೇ ರೀತಿ ಸುವ್ಯವಸ್ಥಿತ ರಾಷ್ಟ್ರೀಯ ಹೆದ್ದಾರಿ ಹಾಗೂ ಹೊಂಡ-ಗುಂಡಿಗಳಿಲ್ಲದ ರಸ್ತೆಗಳಿರಬೇಕು. ಜಿಲ್ಲೆಯಲ್ಲಿ ಯುವಜನತೆಗೆ ಉದ್ಯೋಗಾವಕಾಶ ಸೃಷ್ಟಿಯಾಗಬೇಕು. ಇದಕ್ಕಾಗಿ ಪರಿಸರ ಸಹ್ಯ ಹಾಗೂ ಸಾಫ್ಟ್‌ವೇರ್ ಉದ್ದಿಮೆಗಳು ಜಿಲ್ಲೆಗೆ ಬರಬೇಕು. ಮೀನುಗಾರಿಕೆಯಲ್ಲೂ ಇನ್ನಷ್ಟು ಪ್ರಗತಿ ಕಾಣಬೇಕಾಗಿದೆ.
|ಜಯಪ್ರಕಾಶ್ ಹೆಗ್ಡೆ,ಅಧ್ಯಕ್ಷ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಹೊಸ ಜಿಲ್ಲೆಯಲ್ಲಿ ಮೂಲ ಸೌಕರ್ಯ, ಹಣಕಾಸು ಹಾಗೂ ಸಿಬ್ಬಂದಿಯ ಕೊರತೆ ಇತ್ತು. ಇವುಗಳ ಹೊರತಾಗಿಯೂ ನಾವು ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ಗಳನ್ನು ರೂಪಿಸಿ ಕಾರ್ಯಗತಗೊಳಿಸಿದೆವು. 25 ವರ್ಷಗಳ ಬಳಿಕ ನೋಡಿದರೆ, ನಮ್ಮ ಪರಿಶ್ರಮ ಸಕಾರಾತ್ಮಕ ಫಲ ನೀಡಿದ್ದು, ಜಿಲ್ಲೆ ತುಂಬಾ ಅಭಿವೃದ್ಧಿ ಹೊಂದಿರುವುದು ಕಾಣಿಸುತ್ತಿದೆೆ.
|ಡಾ.ಕಲ್ಪನಾ ಗೋಪಾಲನ್ ಉಡುಪಿ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿ