ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಸಮೀಕ್ಷೆ: ಅನುಮತಿಯ ಉತ್ಪಾದನೆಯೇ ಶಿಕ್ಷಣ ಸಚಿವರೇ?

Update: 2022-08-28 04:27 GMT

28, ಎಪ್ರಿಲ್ 2022ರಂದು ಕೇಂದ್ರ ಶಿಕ್ಷಣ ಇಲಾಖೆಯು 'ಎನ್‌ಸಿಎಫ್‌ನ ರಚನೆಗಾಗಿ ಮಾರ್ಗಸೂಚಿಗಳು' ಎನ್ನುವ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ವಸಾಹತೀಕರಣದಿಂದ ಮುಕ್ತಗೊಳಿಸುವುದು ಇದರ ಉದ್ದೇಶ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಇದರ ಶಿಫಾರಸಿನ ಪ್ರಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯ ಹಿನ್ನಲೆಯುಳ್ಳ ಜ್ಞಾನವನ್ನು, ಭಾರತೀಯ ಜ್ಞಾನ ವ್ಯವಸ್ಥೆಯನ್ನು, ಪರಂಪರೆ ಮತ್ತು ಆಚರಣೆಯನ್ನು ಅಳವಡಿಸಿಕೊಳ್ಳುವುದು, ಆ ಮೂಲಕ ಭಾರತದ ಹೆಮ್ಮೆಯನ್ನು ಬೆಳೆಸುವುದು. ಸ್ಥಳೀಯ ಸಮುದಾಯಗಳು, ರಾಜ್ಯಗಳು ಮತ್ತು ದೇಶ ಎದುರಿಸುತ್ತಿರುವ ಗಂಭೀರ ವಿಚಾರಗಳನ್ನು ಒಳಗೊಳ್ಳುವುದು, ಶಿಕ್ಷಕರನ್ನು ಕೇಂದ್ರವಾಗಿಸಿಕೊಳ್ಳುವುದು. 5ನೇ ತರಗತಿವರೆಗೆ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಕೊಡುವುದು. ಎನ್‌ಸಿಎಫ್ 2005ರಲ್ಲಿ ಕಲಿಕಾ ಕೇಂದ್ರಿತ, ವೈವಿಧ್ಯತೆಯ ಪಠ್ಯಕ್ರಮಕ್ಕೆ ಆದ್ಯತೆ ಕೊಟ್ಟಿದ್ದರೆ ಈ ಹೊಸ ಎನ್‌ಸಿಎಫ್‌ನಲ್ಲಿ ಮರಳಿ ಶಿಕ್ಷಕರು ಕೇಂದ್ರಿತವಾಗಿರುತ್ತದೆ ಎಂದು ಹೇಳಿದ್ದಾರೆ.


ನೂತನ ಎನ್‌ಸಿಎಫ್ ಮತ್ತದರ ಗೊತ್ತು ಗುರಿ
27 ಉಪಸಮಿತಿಗಳ ಸತತ ಪರಿಶ್ರಮ, ಶಿಕ್ಷಣ ತಜ್ಞರು, ಚಿಂತಕರು, ಶಿಕ್ಷಕರು ಅರ್ಥಪೂರ್ಣ ವ್ಯಾಸಂಗಕ್ರಮ (ಪೆಡಗಾಜಿ) ಕುರಿತು ಚರ್ಚಿಸಿದ್ದರ ಫಲವಾಗಿ 2005ರಲ್ಲಿ ರೂಪುಗೊಂಡ 'ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು' (ಎನ್‌ಸಿಎಫ್) ಹೊಸ ಆರಂಭವನ್ನು ಕಂಡುಕೊಂಡಿತು. ಮಕ್ಕಳ, ವಿದ್ಯಾರ್ಥಿಗಳ ಕುತೂಹಲ ತಣಿಸುವುದಷ್ಟೇ ಮಾತ್ರವಲ್ಲ ಪಾಲೋ ಫ್ರೈರಿ ಹೇಳಿದಂತೆ 'ಪ್ರಶ್ನೆಗಳನ್ನು ಹುಟ್ಟು ಹಾಕುವ ಶಿಕ್ಷಣ' ಆದ್ಯತೆಯಾಗಿತ್ತು. ಎನ್‌ಸಿಎಫ್‌ನ ಕಾರ್ಯಚಟುವಟಿಕೆಗಳು ಇನ್ನೂ ಆರಂಭದ ಹಂತದಲ್ಲಿರುವಾಗಲೇ ಮೋದಿ ಸರಕಾರವು ಈಗಿರುವ ಸಮಿತಿಯನ್ನು ವಿಸರ್ಜಿಸಿ 13 ಸದಸ್ಯರ ಹೊಸ ಎನ್‌ಸಿಎಫ್ ಚಾಲನಾ ಸಮಿತಿಯನ್ನು ರಚಿಸಿದೆ.

 
ಶಾಲಾ ಶಿಕ್ಷಣ, ಶಿಕ್ಷಕರ ಶಿಕ್ಷಣ, ಆರಂಭಿಕ ಬಾಲ್ಯ, ಆರೈಕೆ ಮತ್ತು ಶಿಕ್ಷಣ ಮತ್ತು ವಯಸ್ಕ ಶಿಕ್ಷಣಗಳಿಗೆ ನಾಲ್ಕು ಎನ್‌ಸಿಎಫ್ ರೂಪಿಸುವುದು ಈ ಸಮಿತಿಯ ಜವಾಬ್ದಾರಿಯಾಗಿದೆ. ಇದರ ಸದಸ್ಯರ ಮಾಹಿತಿ
ಕಸ್ತೂರಿ ರಂಗನ್: ವಿಜ್ಞಾನಿಗಳು. ಶಿಕ್ಷಣ ತಜ್ಞರಲ್ಲ
ಸದಸ್ಯರು
ಎಂ.ಕೆ. ಶ್ರೀಧರ: ಆರೆಸ್ಸೆಸ್ ಸಿದ್ಧ್ಧಾಂತಗಳ ಪರ ಒಲವುಳ್ಳವರು, ನಿವೃತ್ತ ಪ್ರಾಧ್ಯಾಪಕರು. ಶಿಕ್ಷಣ ತಜ್ಞರಲ್ಲ.
ತೇಜಸ್ವಿ ಕಟ್ಟೀಮನಿ: 
ಕೇಂದ್ರ ಬುಡಕಟ್ಟು ವಿಶ್ವವಿದ್ಯಾನಿಲಯದ ಉಪಕುಲಪತಿ. ಎನ್‌ಇಪಿ-2020 ಬೆಂಬಲಿಗರು. ನಜ್ಮಾ ಅಖ್ತರ್: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಉಪಕುಲಪತಿ,
ಜಗಬೀರ್ ಸಿಂಗ್: ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪಕುಲಪತಿ.
ಮಹೇಶ್‌ಚಂದ್ರ ಪಂಥ್:  
ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಆಡಳಿತ (ಎನ್‌ಐಇಪಿಎ) ಕುಲಪತಿ. ಗೋವಿಂದ ಪ್ರಸಾದ ಶರ್ಮ: ನ್ಯಾಷನಲ್ ಬುಕ್ ಟ್ರಸ್ಟ್
ಮೈಖೆಲ್ ಡಾನಿನೋ: 
ಮಾಹಿತಿ ಇಲ್ಲ. ಮಿಲಿಂದ ಕಾಂಬ್ಳೆ: ದಲಿತ ಛೇಂಬರ್ಸ್‌ ಆಫ್ ಕಾಮರ್ಸ್‌ನ ಸ್ಥಾಪಕ, ಉದ್ಯಮಿ.
ಮಂಜುಲ್ ಭಾರ್ಗವ: 
ಅಮೆರಿಕ ಸಂಜಾತ ಗಣಿತ ತಜ್ಞ, ಧೀರ್ ಜಿಂಗ್ರಾನ್: 
ಅಸ್ಸಾಂ ಶಿಕ್ಷಣ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ನಿವೃತ್ತ ನಿರ್ದೇಶಕ. ಶಂಕರ್ ಮಾರುವಾಡ: ಉದ್ಯಮಿ.

ಇವರಲ್ಲಿ 8 ಸದಸ್ಯರು ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇಬ್ಬರು ಸದಸ್ಯರು ಉದ್ಯಮಿಗಳು. ಮೂವರು ಸದಸ್ಯರು ವಿಜ್ಞಾನ, ಗಣಿತ, ಭಾರತೀಯ ಸಾಹಿತ್ಯದ ಪರಿಣಿತರು.

ಈ ವಿದ್ವಾಂಸರಿಗೆ ಅವರ ಕ್ಷೇತ್ರಗಳಲ್ಲಿನ ಪ್ರತಿಭೆಯನ್ನು, ಸಾಧನೆಗಳನ್ನು ಗೌರವಿಸುತ್ತಲೇ ಹೇಳಲೇಬೇಕಾದ ಸಂಗತಿಯೆಂದರೆ ಈ 13 ಗೌರವಾನ್ವಿತ ಸದಸ್ಯರಿಗೆ ಶಾಲಾ ಶಿಕ್ಷಣದ ಆಳ, ಅಗಲದ ಕುರಿತು ಪ್ರಾಥಮಿಕ ತಿಳುವಳಿಕೆ ಇದ್ದಂತಿಲ್ಲ. ಮಕ್ಕಳ ಶಿಕ್ಷಣ ಮತ್ತು ವ್ಯಾಸಂಗ ಕ್ರಮ (ಪೆಡಗಾಜಿ)ವನ್ನು ರೂಪಿಸಲು ಭಾರತದ ಸಮಾಜೋ-ಸಾಂಸ್ಕೃತಿಕ-ಆರ್ಥಿಕ ವ್ಯವಸ್ಥೆಯ ಕುರಿತು ಆಳವಾದ ಒಳನೋಟ, ಸಮಗ್ರವಾದ ಅರಿವು, ಗ್ರಹಿಕೆ ಇರಬೇಕು. ಆದರೆ ಈ ಗೌರವಾನ್ವಿತ ವಿದ್ವಾಂಸರಲ್ಲಿ ಈ ಕುರಿತು ಕೊರತೆ ಕಂಡುಬರುತ್ತದೆ. ಜ್ಞಾನವೆಂದರೇನು? 3-5ನೇ ವಯಸ್ಸಿನ, 6-10ನೇ ವಯಸ್ಸಿನ, 11-13ನೇ ವಯಸ್ಸಿನ ವಿವಿಧ ಹಂತಗಳ ವಯೋಮಾನದ ಮಕ್ಕಳಿಗೆ ಶಾಲೆಯಲ್ಲಿ ಏನು ಕಲಿಸಬೇಕು? ಎನ್ನುವ ವಿಚಾರಗಳಲ್ಲಿ ಈ 13 ಸದಸ್ಯರ ಪರಿಣಿತಿ ಏನು ಎಂಬುದು ಸ್ಪಷ್ಟವಾಗಿಲ್ಲ. ಭಾರತದಂತಹ ಜಾತಿ, ವರ್ಗ ಅಸಮಾನತೆಯ, ಬಹುಸಂಸ್ಕೃತಿಯ ಸಮಾಜದ ಮಕ್ಕಳ ವ್ಯಾಸಂಗಕ್ರಮ ರೂಪಿಸುವಾಗ ಕಲಿಕೆಯಲ್ಲಿ ಒಂದು ಮಗುವಿನಿಂದ ಮತ್ತೊಂದು ಮಗುವಿಗೂ ಸಾಮಾನ್ಯ ಕಲಿಕೆ ಸಾಧ್ಯವಿಲ್ಲ.

ಇಲ್ಲಿನ ವಾತಾವರಣದಲ್ಲಿ ಪಠ್ಯಕ್ರಮ ರೂಪಿಸುವಾಗ ಈ ಸದಸ್ಯರು ತಾವು ನಂಬಿದ ಪೂರ್ವಾಗ್ರಹಪೀಡಿತ ಸಿದ್ಧಾಂತಗಳನ್ನು ಮೀರಬೇಕಾಗುತ್ತದೆ. ಆದರೆ ಇವರ ಬಳಿ ಆ ಕ್ಷಮತೆ ಇದೆಯೇ ಎನ್ನುವುದು ಅನುಮಾನ. ಒಂದು ಸಮುದಾಯ ಮತ್ತೊಂದು ಸಮುದಾಯವನ್ನು ಪ್ರೀತಿಸಬೇಕು, ಗೌರವಿಸಬೇಕು, ವಿವಿಧ ಬಗೆಯ ಭಿನ್ನ ಸಂಸ್ಕೃತಿಯ ಜನರು ಸಾಮುದಾಯಿಕ ನೆಲೆಯಲ್ಲಿ ತಮ್ಮ ಅಸ್ಮಿತೆ ಉಳಿಸಿಕೊಂಡೇ ಒಂದುಗೂಡಬೇಕು ಮತ್ತು ಮುಖ್ಯವಾಗಿ ಸಮಾನತೆ, ಸಮತೆ ಕುರಿತು ಪ್ರಾಥಮಿಕ ತಿಳುವಳಿಕೆ ರೂಪಿಸಬೇಕು. ಆದರೆ ಈ ಆಶಯಗಳು ಆರೆಸ್ಸೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿವೆ. ಆರೆಸ್ಸೆಸ್ ಪ್ರಾಬಲ್ಯವಿರುವ ಇಂದಿನ ದಿನಗಳಲ್ಲಿ ಇಂತಹ ವೈರುಧ್ಯವನ್ನು ಈ 13 ಜನ ಸದಸ್ಯರು ಹೇಗೆ ನಿಭಾಯಿಸುತ್ತಾರೆ? ಶಾಲಾ ಶಿಕ್ಷಣವೆಂದರೆ ಪರೀಕ್ಷೆಗಾಗಿ ಕಂಠಪಾಠ ಮಾಡುವುದಲ್ಲ, ಬರೆಯುವುದಲ್ಲ. ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಪರೀಕ್ಷಿಸುವುದಕ್ಕೂ ಮತ್ತು ಪರೀಕ್ಷೆ ನಡೆಸುವುದಕ್ಕೂ ಅಗಾಧ ವ್ಯತ್ಯಾಸವಿದೆ. ಪರೀಕ್ಷೆಯೆಂದರೆ ಮಕ್ಕಳಿಗೆ ಹಣೆಪಟ್ಟಿ ಅಂಟಿಸುವುದು. ಮೇಲಿನ ಸದಸ್ಯರು ಈ ಕುರಿತು ಯಾವ ಮಟ್ಟದ ವಿಚಾರಗಳನ್ನು ಹೊಂದಿದ್ದಾರೆ? ಯಾರಿಗೂ ಗೊತ್ತಿಲ್ಲ.

ಸಮೀಕ್ಷೆ ಮತ್ತು ಅನುಮತಿ ಉತ್ಪಾದನೆ
28, ಎಪ್ರಿಲ್ 2022ರಂದು ಕೇಂದ್ರ ಶಿಕ್ಷಣ ಇಲಾಖೆಯು 'ಎನ್‌ಸಿಎಫ್‌ನ ರಚನೆಗಾಗಿ ಮಾರ್ಗಸೂಚಿಗಳು' ಎನ್ನುವ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ವಸಾಹತೀಕರಣದಿಂದ ಮುಕ್ತಗೊಳಿಸುವುದು ಇದರ ಉದ್ದೇಶ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಇದರ ಶಿಫಾರಸಿನ ಪ್ರಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯ ಹಿನ್ನೆಲೆಯುಳ್ಳ ಜ್ಞಾನವನ್ನು, ಭಾರತೀಯ ಜ್ಞಾನ ವ್ಯವಸ್ಥೆಯನ್ನು, ಪರಂಪರೆ ಮತ್ತು ಆಚರಣೆಯನ್ನು ಅಳವಡಿಸಿಕೊಳ್ಳುವುದು, ಆ ಮೂಲಕ ಭಾರತದ ಹೆಮ್ಮೆಯನ್ನು ಬೆಳೆಸುವುದು. ಸ್ಥಳೀಯ ಸಮುದಾಯಗಳು, ರಾಜ್ಯಗಳು ಮತ್ತು ದೇಶ ಎದುರಿಸುತ್ತಿರುವ ಗಂಭೀರ ವಿಚಾರಗಳನ್ನು ಒಳಗೊಳ್ಳುವುದು, ಶಿಕ್ಷಕರನ್ನು ಕೇಂದ್ರವಾಗಿಸಿಕೊಳ್ಳುವುದು,5ನೇ ತರಗತಿವರೆಗೆ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಕೊಡುವುದು. ಎನ್‌ಸಿಎಫ್ 2005ರಲ್ಲಿ ಕಲಿಕಾ ಕೇಂದ್ರಿತ, ವೈವಿಧ್ಯತೆಯ ಪಠ್ಯಕ್ರಮಕ್ಕೆ ಆದ್ಯತೆ ಕೊಟ್ಟಿದ್ದರೆ ಈ ಹೊಸ ಎನ್‌ಸಿಎಫ್‌ನಲ್ಲಿ ಮರಳಿ ಶಿಕ್ಷಕರು ಕೇಂದ್ರಿತವಾಗಿರುತ್ತದೆ ಎಂದು ಹೇಳಿದ್ದಾರೆ. ಹೊಸ ಎನ್‌ಸಿಎಫ್‌ಗಾಗಿ ಡಿಜಿಟಲ್ ಸಮೀಕ್ಷೆ ನಡೆಸುತ್ತಿದ್ದಾರೆ. ಅದರ ಲಿಂಕ್ https://ncfsurvey.ncert.gov.in ಪ್ರತಿಯೊಬ್ಬ ಶಿಕ್ಷಕರು, ಶಿಕ್ಷಣಾಸಕ್ತರು, ಎಸ್‌ಡಿಎಂಸಿಯವರು ಮೇಲಿನ ಲಿಂಕ್ ಬಳಸಿ ಪಠ್ಯಕ್ರಮ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದು ಪ್ರತೀ ಜಿಲ್ಲೆಯ ಡಿಸರ್ಟ್ (ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ) ಪ್ರಾಚಾರ್ಯರು ಸುತ್ತೋಲೆ ಹೊರಡಿಸಿದ್ದಾರೆ.

ಆದರೆ ಸಮೀಕ್ಷೆಗಾಗಿ ಈ ಲಿಂಕ್‌ನಲ್ಲಿರುವ ಪ್ರಶ್ನೆಗಳು ಪಠ್ಯಕ್ರಮ ರಚನೆಯ ಉದ್ದೇಶವನ್ನು ಪ್ರಚುರಪಡಿಸುವುದಿಲ್ಲ. ಶಾಲಾ ಶಿಕ್ಷಣದ ಮೂಲ ಉದ್ದೇಶವಾದ ಪೌಷ್ಟಿಕಾಂಶ, ದೈಹಿಕ ಶಿಕ್ಷಣ, ಪರಿಸರ, ಪ್ರಾಥಮಿಕ ಶಿಕ್ಷಣಕ್ಕೆ ಅಗತ್ಯವಾದ ಎಲ್ಲಾ ಜ್ಞಾನಶಾಖೆಗಳ ಕಲಿಕೆ ಕುರಿತು ಯಾವುದೇ ಪ್ರಶ್ನೆಗಳಿಲ್ಲ. ವೃತ್ತಿ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಕುರಿತಾದ ಪ್ರಶ್ನೆಗಳು ಪುನರಾವರ್ತನೆಯಾಗಿವೆ. ಭಾರತದ ಪರಂಪರೆ ಕುರಿತೂ ಪ್ರಶ್ನೆಗಳಿವೆ. ಹತ್ತು ಪ್ರಶ್ನೆಗಳಲ್ಲಿ ಕೆಲವಂತೂ ತುಂಬಾ ಟೊಳ್ಳಾಗಿವೆ. ಐದು ಮತ್ತು ಆರನೇ ಪ್ರಶ್ನೆಗಳಲ್ಲಿ 6-8ನೇ ತರಗತಿ ಮತ್ತು ಬುನಾದಿ ಶಿಕ್ಷಣದಲ್ಲಿ ಯಾವ ವಿಷಯಗಳಿರಬೇಕು ಎಂದು ಕೇಳಿದ್ದಾರೆ. ಇದು ಗಂಭೀರವಾದ ಮತ್ತು ಶೋಷಿತರ ವ್ಯಾಸಂಗಕ್ರಮ ಹಿನ್ನೆಲೆಯ ಪಠ್ಯಕ್ರಮ ರಚನೆಗೆ ಹೇಗೆ ಪೂರಕವಾಗುತ್ತದೆ? ಉದಾಹರಣೆಗೆ ಸಮೀಕ್ಷೆಯಲ್ಲಿನ ಪ್ರಶ್ನೆ ''ಮಕ್ಕಳು ಶಾಲಾ ಶಿಕ್ಷಣದಿಂದ ಏನನ್ನು ಮೈಗೂಡಿಸಿಕೊಳ್ಳಬೇಕು?'' ಒಂದನೇ ಉತ್ತರ ಸಾಂವಿಧಾನಿಕ ಮೌಲ್ಯಗಳಾದ ದೇಶ ಮತ್ತು ರಾಜ್ಯಗಳ ಪರವಾಗಿರುವ ಮೂಲಭೂತ ಕರ್ತವ್ಯಗಳು, ಕಾನೂನು ಪಾಲನೆ, ಶಾಂತಿಯುತವಾಗಿ ಬದುಕುವುದು ಇತ್ಯಾದಿ. ಆದರೆ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವ ಕುರಿತು ಇಲ್ಲಿ ಪ್ರಸ್ತಾಪವಿಲ್ಲ. (ಬಂಧುತ್ವವನ್ನು ಪ್ರತ್ಯೇಕವಾಗಿ ಸೇರಿಸಿದ್ದಾರೆ).

ಎರಡನೇ ಉತ್ತರ ಮನುಷ್ಯ ಮೌಲ್ಯಗಳಾದ ಅನುಕಂಪ, ಪ್ರಾಮಾಣಿಕತೆ, ಒಡನಾಡಿತನ, ಪರಸ್ಪರ ಗೌರವ ಇತ್ಯಾದಿ. ಆದರೆ ಇದೆಲ್ಲವೂ ಹುಟ್ಟಿನಿಂದಲೂ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕಾದ ಮೂಲಭೂತ ಗುಣಗಳು. ಮನೆಯಲ್ಲಿ ಮತ್ತು ಶಾಲೆಯಲ್ಲಿ ಕಲಿಕೆಯ ಭಾಗವಾಗಿಯೇ ರೂಪುಗೊಂಡಿರುತ್ತದೆ. ಈ ಸಹಜ ಗುಣಗಳಿಗೂ ಪಠ್ಯಕ್ರಮ ಚೌಕಟ್ಟು ರಚನೆಗೂ ಸಂಬಂಧ ಕಲ್ಪಿಸುವುದು ಯಾವ ತರ್ಕ? ಶಿಕ್ಷಣ ತಜ್ಞೆ ಅನಿತಾ ರಾಮ್‌ಪಾಲ್ ಹೇಳಿದಂತೆಯೇ ಎನ್‌ಇಪಿ 2020ರಲ್ಲಿ ಮನುಷ್ಯ ಮೌಲ್ಯಗಳೆಂದರೆ ಸ್ವಚ್ಛತೆ, ತ್ಯಾಗ, ಸಾರ್ವಜನಿಕ ಆಸ್ತಿಯನ್ನು ಗೌರವಿಸುವುದು ಇತ್ಯಾದಿ. ಮಕ್ಕಳು ಪ್ರಾಥಮಿಕವಾಗಿ ಮೈಗೂಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ಪಠ್ಯಕ್ರಮವೆಂದು ಬಿಂಬಿಸಿ ನಿಜವಾದ ಸಾಂವಿಧಾನಿಕ ಮೌಲ್ಯಗಳನ್ನು ಕೈ ಬಿಡುವುದು ಇವರ ಉದ್ದೇಶ. ಹತ್ತು ಪ್ರಶ್ನೆಗಳಲ್ಲಿ ಯಾವ ವಿಷಯವನ್ನು ಕಲಿಸಬೇಕು ಎನ್ನುವ ಪ್ರಶ್ನೆಗೆ ಮೂರು ಬಾರಿ 'ಭಾರತದ ಜ್ಞಾನ'ವನ್ನು ಬಹು ಆಯ್ಕೆಯ ಉತ್ತರವಾಗಿ ಸೇರಿಸಿದ್ದಾರೆ. ಬಹುತೇಕರು ಒಂದು ಬಗೆಯ ಮುಗ್ಧತೆಯಲ್ಲಿ ಇದನ್ನು ಅನುಮೋದಿಸುತ್ತಾರೆ. ಆದರೆ ಈ ಎನ್‌ಸಿಎಫ್‌ನ ಸೂತ್ರಧಾರಿಗಳ ಪ್ರಕಾರ ಆರೆಸ್ಸೆಸ್ ಸಿದ್ಧಾಂತದ 'ಪ್ರಾಚೀನ ಭಾರತದ ಗುರುಕುಲ ಪದ್ಧತಿ, ಮನುಸ್ಮತಿ, ವರ್ಣಾಶ್ರಮ ಮುಂತಾದವುಗಳು' ಭಾರತೀಯ ಜ್ಞಾನವಾಗಿ ಪಠ್ಯಗಳಾಗುತ್ತದೆ. ಈ ವಂಚನೆಯನ್ನು ಆಕ್ಷೇಪಿಸಿದರೆ ಈ ಸಮೀಕ್ಷೆಯಲ್ಲಿ ವ್ಯಕ್ತವಾದ ಬಹುಮತವನ್ನು ಸಮರ್ಥನೆಗೆ ಬಳಸಿಕೊಳ್ಳುತ್ತಾರೆ.

ಅನಿತಾ ರಾಮ್‌ಪಾಲ್ ಅವರು ''ಆರೋಗ್ಯ, ಯೋಗ, ಕ್ರೀಡೆ, ಕರಕುಶಲತೆಗಳನ್ನು ಸಮಾಜ ಶಾಸ್ತ್ರ, ವಿಜ್ಞಾನ ರೀತಿಯ ವಿಷಯಗಳೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಇವರ ವಿಧಾನ ಗೊಂದಲಗೊಳಿಸುತ್ತದೆ. ಇಂತಹ ದುರ್ಬಲ ಆಯ್ಕೆಗಳನ್ನು ಕೊಟ್ಟು ಅದನ್ನು ಜನಮತವೆನ್ನುವುದು ಅನುಮತಿಯ ಉತ್ಪಾದನೆ'' ಎಂದು ಹೇಳುತ್ತಾರೆ. ಒಟ್ಟಾರೆಯಾಗಿ ಈ ಪ್ರಶ್ನೆಗಳಲ್ಲಿ ಪ್ರಜಾಪ್ರಭುತ್ವದ ಕಾಣ್ಕೆಗಳು ಕಾಣೆಯಾಗಿವೆ. ಚಂದಮಾಮ ಮಾದರಿಯ ನೀತಿಪಾಠದ ಪ್ರಶ್ನೆಗಳಿವೆ. ಪ್ರಾಥಮಿಕ ಶಿಕ್ಷಣಕ್ಕೆ ಅಗತ್ಯವಾದ ವಿಮರ್ಶಾತ್ಮಕ ಒಳನೋಟಗಳು ಕಂಡುಬರುವುದಿಲ್ಲ. ಕೇವಲ ತೇಪೆ ಹಾಕಿದಂತಿವೆ. ಇದನ್ನು ಆಧರಿಸಿ ಹೊಸ ಪಠ್ಯಕ್ರಮ ಚೌಕಟ್ಟು ರೂಪಿಸುತ್ತಾರೆ ಎಂಬುದೇ ಕಳವಳಕಾರಿಯಾಗಿದೆ. ಬೇರೆ ಯಾವುದೇ ಸಂದರ್ಭದಲ್ಲಿ ಈ ಹೊಸ ಎನ್‌ಸಿಎಫ್ ಮಾರ್ಗಸೂಚಿಗಳು ಮತ್ತು ಪ್ರಶ್ನೆಗಳನ್ನು ಮುಗ್ಧತೆಯ ಗುಣಗಳೆಂದು ಅರ್ಥ ಮಾಡಿಕೊಳ್ಳಬಹುದಾಗಿತ್ತು. ಆದರೆ ಆರೆಸ್ಸೆಸ್ ಪ್ರಭಾವಶಾಲಿಯಾಗಿರುವ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ, ಎನ್‌ಸಿಆರ್‌ಟಿನಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವ ಈ ದಿನಗಳಲ್ಲಿ ಒಟ್ಟೂ ಪ್ರಕ್ರಿಯೆ ವಿಶ್ವಾಸಾರ್ಹತೆ ಕಳೆದುಕೊಂಡಿದೆ.

ಅನಿತಾ ರಾಮ್‌ಪಾಲ್ ಅವರು ''ಎನ್‌ಸಿಎಫ್ 2005 ಸಂದರ್ಭದಲ್ಲಿ ಎನ್‌ಸಿಇಆರ್‌ಟಿಯು ಪೊಸಿಶನ್ ಪೇಪರ್ಸ್‌ ಬರೆಯಲು ರಾಷ್ಟ್ರಾದ್ಯಂತ ಶಿಕ್ಷಣ ತಜ್ಞರು, ವಿಷಯ ತಜ್ಞರು, ರಾಷ್ಟ್ರಾದ್ಯಂತ ಸದಸ್ಯರನ್ನೊಳಗೊಂಡ 21 ರಾಷ್ಟ್ರೀಯ ಫೋಕಸ್ ಗುಂಪುಗಳನ್ನು ರಚಿಸಲಾಗಿತ್ತು. ಪಠ್ಯಕ್ರಮ ಸಮಿತಿಗಳು, ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಗಳನ್ನು ಒಳಗೊಂಡ ಈ ಫೋಕಸ್ ಗುಂಪುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಪನ್ಮೂಲಭರಿತ ಪರಿಣಿತರಿದ್ದರು'' ಎಂದು ಬರೆಯುತ್ತಾರೆ. ತನ್ನ ಪಾತ್ರದ ಕುರಿತು ವಿವರಣೆ ಕೊಡುತ್ತ ಎನ್‌ಸಿಎಫ್ 2005 ''ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಎಂದರೆ ಏಕರೂಪತೆಯ ಲಿಖಿತ ಕರಡು ಎಂದು ತಪ್ಪಾಗಿ ಪ್ರಚಾರ ಮಾಡಲಾಗಿದೆಯೆಂದು ಅನೇಕರು ಭಾವಿಸಿದ್ದಾರೆ.. ಆದರೆ ಎನ್‌ಪಿಇ86ರ ಉದ್ದೇಶವೇ ಅದಕ್ಕೆ ವಿರುದ್ಧವಾಗಿತ್ತು'' ಎಂದು ಸ್ಪಷ್ಟೀಕರಣ ಕೊಟ್ಟಿದೆ. ಮುಖ್ಯವಾಗಿ ಎನ್‌ಸಿಎಫ್ 2005 ಇನ್ನೂ ಸಂಪೂರ್ಣವಾಗಿ ಜಾರಿಗೊಂಡಿರಲಿಲ್ಲ. ಆದರೆ ತಮ್ಮ ಸಿದ್ಧಾಂತಗಳ ಜಾರಿಗಾಗಿ ಬಿಜೆಪಿ ಚಾಲ್ತಿಯಲ್ಲಿರುವುದನ್ನು ವಿಸರ್ಜಿಸಿ ಹೊಸ ಎನ್‌ಸಿಎಫ್ ರಚನೆಗೆ ಮುಂದಾಗಿದೆ. 17 ವರ್ಷಗಳ ನಂತರ ಹೊಸ 'ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು' ಎನ್ನುವ ಛದ್ಮವೇಷದಲ್ಲಿ ಆರೆಸ್ಸೆಸ್ ಸಿದ್ಧಾಂತದ ಅನುಷ್ಠಾನಕ್ಕೆ ಎಲ್ಲಾ ಬಗೆಯ ಅಧಿಕೃತ ಸಿದ್ಧತೆಗಳಾಗುತ್ತಿದೆ. ನೂತನ ಎನ್‌ಸಿಎಫ್‌ಗಾಗಿ ಸಮೀಕ್ಷೆ ಹೆಸರಿನ 'ಅನುಮತಿ ಉತ್ಪಾದನೆ' ಜಾರಿಯಲ್ಲಿದೆ.

ತಮಾಷೆ ಮತ್ತು ದುರಂತವೆಂದರೆ ಕರ್ನಾಟಕದ ಬಿಜೆಪಿ ಸರಕಾರವು ಮೇಲೆ ಪ್ರಸ್ತಾಪಗೊಂಡ, ಗೊತ್ತು ಗುರಿಯಿಲ್ಲದ ಡಿಜಿಟಲ್ ಸಮೀಕ್ಷೆ ಮತ್ತು ಕೇಂದ್ರ ಶಿಕ್ಷಣ ಇಲಾಖೆ ಹಾಗೂ ಎನ್‌ಸಿಇಆರ್‌ಟಿ ನಿರ್ದೇಶನದ ಮೇರೆಗೆ ತಯಾರಾದ 25 ಪೊಸಿಶನ್ ಪೇಪರ್ಸ್‌ ಆಧರಿಸಿ ತರಾತುರಿಯಲ್ಲಿ ರಾಜ್ಯ ಪಠ್ಯಕ್ರಮ ಚೌಕಟ್ಟು ರಚಿಸುತ್ತಿದೆ.

ಎನ್‌ಸಿಎಫ್ ರಚನೆಗೆ ಎಲ್ಲಾ ರಾಜ್ಯಗಳು ರಾಜ್ಯ ಪಠ್ಯಕ್ರಮ ಚೌಕಟ್ಟಿನ ಭಾಗವಾಗಿ 'ನಿಲುವು ದಾಖಲೆ ಪತ್ರಗಳು' (ಪೊಸಿಶನ್ ಪೇಪರ್ಸ್‌) ಬಿಡುಗಡೆ ಮಾಡಬೇಕು. ಇವುಗಳನ್ನು ಡಿಜಿಟಲ್ ಸಮೀಕ್ಷೆ, ಶಿಕ್ಷಣದ ಭಾಗೀದಾರರು, ವಿಷಯ ತಜ್ಞರು, ಶಿಕ್ಷಣ ತಜ್ಞರ ಸಲಹೆ, ತಿದ್ದುಪಡಿ ಮೇರೆಗೆ ಅಂತಿಮಗೊಳಿಸಿ ಈ ಪಠ್ಯಕ್ರಮ ಚೌಕಟ್ಟು ಕರಡನ್ನು ಎನ್‌ಸಿಇಆರ್‌ಟಿಗೆ ಕಳುಹಿಸಲಾಗುತ್ತದೆ. ಅಲ್ಲಿ ಈ ಕರಡನ್ನು ಸ್ವೀಕರಿಸಲಾಗುತ್ತದೆ. ಅಗತ್ಯವಿದ್ದರೆ ಸೂಕ್ತ ತಿದ್ದುಪಡಿ ಮಾಡಲಾಗುತ್ತದೆ. ಅದನ್ನು ಆಧರಿಸಿ ಹೊಸ ಎನ್‌ಸಿಎಫ್ ರಚನೆಯಾಗುತ್ತದೆ. ಇದು ಪ್ರಜಾತಾಂತ್ರಿಕ ಪ್ರಕ್ರಿಯೆ. 'ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಭಿವೃದ್ಧಿ ಮಾರ್ಗಸೂಚಿ' ದಸ್ತಾವೇಜಿನಲ್ಲಿ ''ಎನ್‌ಇಪಿ 2020ರ ಅನುಸಾರ ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡುವುದು ನೂತನ ಎನ್‌ಸಿಎಫ್‌ನ ಉದ್ದೇಶ'' ಎಂದು ಹೇಳಿದ್ದಾರೆ. ಆದರೆ ಇಂದಿನ ಸಂದರ್ಭದಲ್ಲಿ ಮೇಲಿನ ನೀತಿಯನ್ನು ಗಾಳಿಗೆ ತೂರಿ ಆರೆಸ್ಸೆಸ್ ಸಿದ್ಧಾಂತವನ್ನು ತುರುಕುವ ಸಾಧ್ಯತೆಗಳೇ ಹೆಚ್ಚು. ಪಠ್ಯಪುಸ್ತಕಗಳ ಪರಿಶೀಲನೆ ನೆಪದಲ್ಲಿ ಸಂಪೂರ್ಣ ಬ್ರಾಹ್ಮಣೀಕರಣಕ್ಕೆ ಮುಂದಾದ ಕರ್ನಾಟಕ ಬಿಜೆಪಿ ಸರಕಾರದ ಇತ್ತೀಚಿನ ನಿರ್ಧಾರ ಇದಕ್ಕೆ ಪುರಾವೆಯಾಗಿದೆ.

ಇದುವರೆಗೆ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ, ಪಾಂಡಿಚೇರಿ, ಮಣಿಪುರ, ನಾಗಾಲ್ಯಾಂಡ್, ಗೋವಾ ರಾಜ್ಯಗಳು ಇನ್ನೂ ನಿಲುವು ದಾಖಲೆ ಪತ್ರಗಳಿಗೆ ಸಮಿತಿಯನ್ನೇ ರಚನೆ ಮಾಡಲಿಲ್ಲ. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ತಮ್ಮ ಪಾಲಿನ ಶೇ.50ರಷ್ಟು ಕೆಲಸ ಮುಗಿಸಿವೆ. ಎಲ್ಲಾ ರಾಜ್ಯಗಳು ತಮ್ಮ ಪಠ್ಯಕ್ರಮ ಸಲ್ಲಿಸುವವರೆಗೂ ಹೊಸ ಎನ್‌ಸಿಎಫ್ ಪ್ರಕಟಗೊಳ್ಳುವಂತಿಲ್ಲ. ಆದರೆ ಮೋದಿ ಆಡಳಿತದಲ್ಲಿ ಎಲ್ಲವೂ ಸಾಧ್ಯ ಎನ್ನುವ ಮಾತಿಗೆ ಸಾಕ್ಷಿಯಾಗಿ ಎಲ್ಲಾ ರಾಜ್ಯಗಳ ಪಠ್ಯಕ್ರಮ ಚೌಕಟ್ಟನ್ನು ಒಳಗೊಳ್ಳದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಅಪೂರ್ಣ ಎನ್‌ಸಿಎಫ್ ಪ್ರಕಟಗೊಂಡರೂ ಅಚ್ಚರಿ ಪಡಬೇಕಾಗಿಲ್ಲ. ಮೇ 2022ರಲ್ಲಿ ಕರ್ನಾಟಕ ಸರಕಾರವು 'ಭಾರತದ ಜ್ಞಾನ', 'ವಿಜ್ಞಾನ ಶಿಕ್ಷಣ', 'ಆರೋಗ್ಯ ಮತ್ತು ಯೋಗ ಕ್ಷೇಮ', 'ಲಿಂಗತ್ವ ಶಿಕ್ಷಣ', 'ಮೌಲ್ಯಯುತ ಶಿಕ್ಷಣ', 'ಶಿಕ್ಷಣದ ತತ್ವಶಾಸ್ತ್ರ', 'ಪಠ್ಯಕ್ರಮ ಮತ್ತು ವ್ಯಾಸಂಗಕ್ರಮ', 'ಸಮಾಜ ವಿಜ್ಞಾನದಲ್ಲಿ ಶಿಕ್ಷಣ', 'ವೃತ್ತಿಪರ ಶಿಕ್ಷಣ', 'ಶಿಕ್ಷಕರ ಶಿಕ್ಷಣ', 'ಪರಿಸರ ಶಿಕ್ಷಣ', 'ಭಾಷಾ ಶಿಕ್ಷಣ'ಗಳನ್ನು ಒಳಗೊಂಡ 25 'ನಿಲುವು ದಾಖಲೆ ಪತ್ರಗಳನ್ನು' ಬಿಡುಗಡೆ ಮಾಡಿದೆ. ಆದರೆ ತಮ್ಮ ಅವಾಂತರಕಾರಿ ಮತ್ತು ಅನಾಹುತಕಾರಿ ನಿಲುವುಗಳ ಕಾರಣದಿಂದ ಈ ದಾಖಲೆ ಪತ್ರಗಳು ಬಹು ಚರ್ಚಿತವಾಗುತ್ತಿವೆ. ಮನುವಾದವನ್ನು ಸಮರ್ಥಿಸುವ, ಚಾತುರ್ವರ್ಣವನ್ನು ಮರಳಿ ಜಾರಿಗೊಳಿಸುವ ಮತ್ತು ಮತೀಯವಾದಗೊಳಿಸುವ ಉದ್ದೇಶವನ್ನು ಹೊಂದಿವೆಯೆಂದು ವಿಷಯ ತಜ್ಞರು, ಶಿಕ್ಞಣ ತಜ್ಞರು ವಿಮರ್ಶಿಸುತ್ತಿದ್ದಾರೆ.

ಉಪಸಂಹಾರ  
ಮುಖ್ಯವಾಗಿ ಕಸ್ತೂರಿ ರಂಗನ್ ಸಮಿತಿ ಶಿಫಾರಸುಗಳನ್ನು ಆಧರಿಸಿರುವ ಎನ್‌ಇಪಿ 2020ಯನ್ನು ಸಂಸತ್ತಿನಲ್ಲಿ ಚರ್ಚಿಸದೆ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಂವಿಧಾನದ 7ನೆ ಶೆಡ್ಯೂಲ್‌ನ ಅಡಿ ಸಮವರ್ತಿ ಪಟ್ಟಿಯಲ್ಲಿ ಬರುವ ರಾಜ್ಯಗಳೊಂದಿಗೂ ಚರ್ಚಿಸದೆ, ಶಿಕ್ಷಣದ ಭಾಗೀದಾರರೊಂದಿಗೂ ಚರ್ಚಿಸದೆ ಸರ್ವಾಧಿಕಾರಿ ಧೋರಣೆಯಲ್ಲಿ ಏಕಪಕ್ಷೀಯವಾಗಿ ಜಾರಿಗೊಳಿಸಲು ಮುಂದಾಗಿರುವುದೇ ಸಂವಿಧಾನವಿರೋಧಿ ನಡೆಯಾಗಿದೆ. ಈ ಎನ್‌ಇಪಿ 2020 ಶಿಫಾರಸುಗಳನ್ನು ಆಧರಿಸಿ ರಚಿಸಲಾಗಿರುವ 'ನೂತನ ಎನ್‌ಸಿಎಫ್ 2022' ಸಹ ಸಹಜವಾಗಿಯೇ ಸಂವಿಧಾನ ವಿರೋಧಿಯಾಗಿದೆ. ಈ ಮೇಲಿನ ಕಾರಣಗಳಿಗಾಗಿ ನೂತನ ಎನ್‌ಸಿಎಫ್ ರಚನೆಯ ಎಲ್ಲಾ ಪ್ರಕ್ರಿಯೆಗಳನ್ನು ಈ ಕೂಡಲೇ ಸ್ಥಗಿತಗೊಳಿಸಬೇಕೆಂದು ಶಿಕ್ಷಣದ ಭಾಗೀದಾರರು, ಸಾಮಾಜಿಕ ಸಂಘಟನೆಗಳು ಜನಾಂದೋಲನ ರೂಪಿಸಬೇಕು. ಇದು ತುರ್ತು ಅಗತ್ಯವಾಗಿದೆ

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News