ಒಂದು ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ಏರಿಕೆಗೆ ಇಷ್ಟೊಂದು ಅವಾಂತರಗಳೇ?

Update: 2022-08-30 05:12 GMT

 ಕಳೆದ ಐದಾರು ವರ್ಷಗಳಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳು, ಉತ್ತರ ಮತ್ತು ದಕ್ಷಿಣ ಕರ್ನಾಟಕ ಒಳನಾಡು ಪ್ರದೇಶಗಳಲ್ಲೂ ತಿಂಗಳುಗಟ್ಟಲೆ ಧಾರಾಕಾರ ಮಳೆ ಸುರಿಯುತ್ತಿದೆ. ಇದೇ ರೀತಿಯ ಮಳೆ ಇಡೀ ಪಶ್ಚಿಮ ಘಟ್ಟಗಳು ಮತ್ತು ದೇಶದ ಅನೇಕ ರಾಜ್ಯಗಳಲ್ಲಿ ಸುರಿಯುತ್ತಿದೆ. ನದಿಗಳು ಉಕ್ಕಿ ಹರಿದು ಪದೇಪದೇ ಭೀಕರ ನೆರೆ ಕಾಣಿಸಿಕೊಳ್ಳುತ್ತಿದೆ. ಗುಡ್ಡಗಳ ಕುಸಿತ, ಹಳ್ಳಿಹಳ್ಳಿಗಳೇ ನೆಲಸಮ, ಅಪಾರ ಬೆಳೆ ನಾಶ ಮತ್ತು ಜಾನುವಾರುಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ. ಜಗತ್ತಿನ ಅನೇಕ ದೇಶಗಳು ಇದೇ ರೀತಿಯ ತೊಂದರೆಗೆ ಸಿಲುಕಿಕೊಳ್ಳುತ್ತಿವೆ. ಇಷ್ಟಕ್ಕೂ ಇದಕ್ಕೆಲ್ಲ ಏನು ಕಾರಣ? ಬರೀ ಜಾಗತಿಕ ತಾಪಮಾನವೇ? ಅಥವಾ ಇನ್ನೇನಾದರು ಕಾರಣಗಳಿವೆಯೇ? ಪ್ರತೀವರ್ಷ ಸಮಭಾಜಕ ವೃತ್ತದಲ್ಲಿ ಮೇ ತಿಂಗಳ ಕೊನೆಯಲ್ಲಿ ಕಾಣಿಸಿಕೊಳ್ಳುವ ಮುಂಗಾರು ಮಳೆ ವಿಯೆಟ್ನಾಂ, ಥಾಯ್ಲೆಂಡ್, ಕಾಂಬೋಡಿಯಾ, ಬಾಂಗ್ಲಾದೇಶ, ಲಾವೋಸ್, ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿಗೆ ಮಳೆ ತರುತ್ತದೆ. ಆದರೆ ಈಗ ಬೀಳುತ್ತಿರುವ ಮಳೆಯನ್ನು ನೋಡಿದರೆ ಇದು ಬರೀ ಮುಂಗಾರು ಮಳೆಯೇ ಅಲ್ಲ! ಸಾಗರಗಳ ಮೇಲೆ ನಿರಂತರವಾಗಿ ಜೆಟ್ ಮೋಡಗಳು, ಚಂಡಮಾರುತಗಳು, ಮೇಘಸ್ಫೋಟಗಳು, ಎಲ್‌ನಿನೋ ವೈಪರೀತ್ಯಗಳು ಕಾಣಿಸಿಕೊಳ್ಳುತ್ತಿವೆ. ಭೂಮಿಯ ಒಂದು ಕಡೆಯಲ್ಲಿ ಭೀಕರ ಮಳೆ ಸುರಿದರೆ ಮತ್ತೊಂದು ಕಡೆ ವಿಪರೀತ ತಾಪಮಾನ ಹೆಚ್ಚಿ, ಕಾಡುಗಳು ಹೊತ್ತಿ ಉರಿಯುತ್ತಿವೆ. ಆಫ್ರಿಕಾ ದೇಶಗಳಲ್ಲಿ ಭೀಕರ ಬರದಿಂದ ಬೆಳೆಗಳು ಬೆಳೆಯದ ಪರಿಸ್ಥಿತಿ ಉಂಟಾಗಿದೆ.

 ಗ್ರೀನ್‌ಲ್ಯಾಂಡ್‌ನಲ್ಲಿ 40 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಏರಿ ಧಗೆ ಉಂಟಾಗಿದೆ. ಇದಕ್ಕೆಲ್ಲ ಕಾರಣ ಜಾಗತಿಕ ತಾಪಮಾನದ ಏರಿಕೆ ಎನ್ನುವ ಒಂದು ರೆಡಿಮೇಡ್ ಉತ್ತರವನ್ನು ಕಳೆದ ಕೆಲವು ದಶಕಗಳಿಂದ ನಮ್ಮ ಪರಿಸರ ತಜ್ಞರು, ವಿಜ್ಞಾನಿಗಳು ಹೇಳುತ್ತಾ ಬಂದಿದ್ದಾರೆ. ಪರಿಸರವಾದಿಗಳು ಶಾಖೋತ್ಪನ್ನ ಅನಿಲಗಳ ಬಿಡುಗಡೆ, ಜಲಮಾಲಿನ್ಯ, ವಾಯುಮಾಲಿನ್ಯ, ಮಾನವಜನ್ಯ ಚಟುವಟಿಕೆಗಳೇ ಇದಕ್ಕೆಲ್ಲ ಮುಖ್ಯ ಕಾರಣ ಎನ್ನುತ್ತಾರೆ. ಇನ್ನೊಂದು ಗುಂಪಿನ ಜನರು ಬರೀ ಜಾಗತಿಕ ತಾಪಮಾನ ಇದಕ್ಕೆ ಕಾರಣವಲ್ಲ ಎನ್ನುವ ಮಾತುಗಳನ್ನು ಹೇಳುತ್ತಲೇ ಬರುತ್ತಿದ್ದಾರೆ. ಇಷ್ಟಕ್ಕೂ ಜಾಗತಿಕ ತಾಪಮಾನದಿಂದಲೇ ಇವೆಲ್ಲವೂ ಸಂಭವಿಸುತ್ತಿವೆಯೇ ಅಥವಾ ಇದೊಂದು ಮಿಥ್ ಆಗಿದೆಯೇ? ಇಷ್ಟಕ್ಕೂ ವಿವಾದ ಏನು? ಎನ್ನುವುದು ಗೊಂದಲವಾಗಿ ತೋರುತ್ತಿದೆ. ಭೂಮಿಯ ಹೊರಮೈಯಲ್ಲಿ ಜಾಗತಿಕ ತಾಪಮಾನ ಏರುತ್ತಿದೆ ಎನ್ನುವುದರಲ್ಲಿ ಯಾವ ಅನುಮಾನವು ಇಲ್ಲ. ತಾಪಮಾನದ ಏರಿಕೆಗೆ ಮುಖ್ಯ ಕಾರಣ ಎನ್ನುವ ಇಂಗಾಲ ಡೈಆಕ್ಸೈಡ್ ಅಂಶ ದಶಲಕ್ಷ ಕಣಗಳಲ್ಲಿ ಕೆಲವು ನೂರು ಕಣಗಳು ಮಾತ್ರ ಹೆಚ್ಚಿದೆ. 1830ರ ದಶಕದಲ್ಲಿ 284 ಪಿಪಿಎಮ್ ಇದ್ದು ಅದು 2009ರಲ್ಲಿ 387 ಪಿಪಿಎಮ್‌ಗೆ ಏರಿದೆ. ಇದುವೇ ಎಲ್ಲಾ ನೈಸರ್ಗಿಕ ವಿಪತ್ತುಗಳಿಗೆ ಕಾರಣವೇ, ವಿಶೇಷವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಏನು ಕಾರಣ? ಇತ್ತೀಚಿನ ಕೆಲವು ಶತಮಾನಗಳಲ್ಲಿ ಇಂಗಾಲ ಡೈಆಕ್ಸೈಡ್ ಅಂಶ ವಾತಾವರಣದಲ್ಲಿ ಎಷ್ಟು ಏರಿದೆ? ಅದರಿಂದ ಉಂಟಾಗುತ್ತಿರುವ ಪರಿಣಾಮಗಳೇನು? ಅದನ್ನು ನಿಗ್ರಹಿಸಲು ಏನಾದರೂ ಕ್ರಮಗಳನ್ನು ತೆಗೆದುಕೊಳ್ಳಬಹುದೇ? ಹಾಗಿದ್ದರೆ ಅವು ಯಾವವು? ಎನ್ನುವ ಚರ್ಚೆಗಳು ನಡೆಯುತ್ತಿವೆ. ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿರುವ ಮಾನವಜನ್ಯ ಚಟುವಟಿಕೆಗಳಿಂದ ಶಾಖೋತ್ಪನ್ನ ಅನಿಲಗಳು ಬಿಡುಗಡೆಯಾಗಿ ತಾಪಮಾನ ಏರುತ್ತಿದೆ ಎನ್ನುವುದು ಬಲವಾದ ನಂಬಿಕೆಯಾಗಿದೆ. ರಾಷ್ಟ್ರೀಯ ಅಥವಾ ಅಂತರ್‌ರಾಷ್ಟ್ರೀಯ ಸ್ಥಾನಮಾನದ ಯಾವುದೇ ವೈಜ್ಞಾನಿಕ ಸಂಸ್ಥೆ ಈ ಕಲ್ಪನೆಯನ್ನು ನಿರಾಕರಿಸುವುದಿಲ್ಲ. ಆದರೆ ಹೇರಳ ರಾಸಾಯನಿಕಗಳನ್ನು ಹೊರಚೆಲ್ಲುವ ಕೈಗಾರಿಕೆಗಳ ಕೆಲವು ಸಂಸ್ಥೆಗಳ ಸದಸ್ಯರು ಬದ್ಧತೆಯಿಲ್ಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಇವರು, ಹವಾಮಾನ ಬದಲಾವಣೆ ಜಾಗತಿಕ ತಾಪಮಾನದಿಂದ ಸಂಭವಿಸುತ್ತಿಲ್ಲ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಲು ಯತ್ನಿಸುತ್ತಿದ್ದಾರೆ ಮತ್ತು ಹವಾಮಾನ ಬದಲಾಗುತ್ತಿದೆ ಎಂದರೆ ಅದು ಮಾನವಜನ್ಯ ಚಟುವಟಿಕೆಗಳ ಪ್ರಭಾವದಿಂದಲ್ಲ ಎನ್ನುತ್ತಿದ್ದಾರೆ. ಭೂಮಿ ಸೃಷ್ಟಿಯಾದಾಗಿನಿಂದಲೂ ಭೂಮಿಯಲ್ಲಿ ಏನೆಲ್ಲ ಖನಿಜ ಧಾತುಗಳು-ಅಂಶಗಳು ಇವೆಯೋ ಅವು ಹಾಗೆಯೇ ಇವೆ. ಅವುಗಳ ಅಂಶ ಬದಲಾಗುವುದಿಲ್ಲ. ಆದರೆ ಭೂಮಿಯಲ್ಲಿ ಲಕ್ಷಾಂತರ ವರ್ಷಗಳಲ್ಲಿ ಕ್ರೋಡೀಕರಣಗೊಂಡಿರುವ ರಾಸಾಯನಿಕ ದ್ರವ್ಯ/ವಿಷಧಾತುಗಳನ್ನು ಮಾನವಜನ್ಯ ಚಟುವಟಿಕೆಗಳು ಗರಿಗೆದರಿಸುತ್ತಿವೆ.

 ಈ ವಿವಾದ ಈಗ ವೈಜ್ಞಾನಿಕಕ್ಕಿಂತ ಹೆಚ್ಚಾಗಿ ರಾಜಕೀಯವಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಮತ್ತು ಮಾನವ ಚಟುವಟಿಕೆಗಳಿಂದ ಅದು ಪ್ರಭಾವಿತವಾಗಿದೆ ಎನ್ನುವುದು ವೈಜ್ಞಾನಿಕ ಒಮ್ಮತವಾಗಿದೆ. ಪ್ರಸ್ತುತ ಇದು ವೈಜ್ಞಾನಿಕ ಸಾಹಿತ್ಯಕ್ಕಿಂತ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಅದೂ ಅಮೆರಿಕದಲ್ಲಿ ಈ ವಿವಾದ ಹೆಚ್ಚು ಪ್ರಚಲಿತದಲ್ಲಿದೆ. ಜಾಗತಿಕ ತಾಪಮಾನದ ಅಸ್ತಿತ್ವ ಮತ್ತು ಅದರ ಬಗೆಗಿನ ರಾಜಕೀಯ ಚರ್ಚೆಗಳು ಉಪಕರಣದ ತಾಪಮಾನ ದಾಖಲೆಯಲ್ಲಿ ಕಂಡುಬರುವ ಹೆಚ್ಚಳಕ್ಕೆ ಕಾರಣಗಳನ್ನು ಒದಗಿಸುತ್ತವೆ. ತಾಪಮಾನದ ಪ್ರವೃತ್ತಿಯು ಸಾಮಾನ್ಯ ವ್ಯತ್ಯಾಸಗಳನ್ನು ಮೀರಿದೆಯೇ ಅಥವಾ ಮಾನವ ಚಟುವಟಿಕೆಗಳು ಅದಕ್ಕೆ ಗಮನಾರ್ಹ ಕೊಡುಗೆ ನೀಡಿವೆಯೇ ಎಂಬುದನ್ನು ಕಂಡುಕೊಳ್ಳಬೇಕಿದೆ. ಪ್ರಸ್ತುತ ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವುದು ನಿಜ ಮತ್ತು ಮಾನವಜನ್ಯ ಚಟುವಟಿಕೆಗಳೇ ಅದಕ್ಕೆ ಕಾರಣವಾಗಿದ್ದು ಇದು ಕನಿಷ್ಠ 2,000 ವರ್ಷಗಳ ಇತ್ತೀಚೆಗೆ ಪ್ರಾರಂಭವಾಗಿರುವುದಾಗಿ ಕಂಡುಬರುತ್ತದೆ. ವೈಜ್ಞಾನಿಕ ಚರ್ಚೆಗಳನ್ನು ಪ್ರತಿಬಿಂಬಿಸುವ ಸಾರ್ವಜನಿಕ ವಿವಾದಗಳು ಹವಾಮಾನ ವ್ಯವಸ್ಥೆಯ ಯಾವುದೇ ನಿರ್ದಿಷ್ಟ ಮಟ್ಟದ ಶಾಖೋತ್ಪನ್ನ ಅನಿಲಗಳಿಗೆ ಎಷ್ಟು ಸ್ಪಂದಿಸಬಹುದು, ಸ್ಥಳೀಯ ಮತ್ತು ಪ್ರಾದೇಶಿಕ ಮಾಪಕಗಳಲ್ಲಿ ಹವಾಮಾನವು ಹೇಗೆ ಬದಲಾಗುತ್ತದೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಯಾವುವು ಎಂಬುದರ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ. ವೈಜ್ಞಾನಿಕ ಸಮುದಾಯಗಳಲ್ಲಿ ತೆಗೆದುಕೊಳ್ಳುವ ಅನೇಕ ರೀತಿಯ ನಿರ್ಧಾರಗಳಿಗೆ ರಾಜಕೀಯ ಅಡ್ಡಬರುತ್ತದೆ ಅಥವಾ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಕಡೆಗಣಿಸಲಾಗುತ್ತದೆ. ಈ ಸೈದ್ಧಾಂತಿಕ ವಿದ್ಯಮಾನವನ್ನು ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳು ‘ಹವಾಮಾನ ಬದಲಾವಣೆಯ ನಿರಾಕರಣೆ’ ಎಂದು ಕರೆಯುತ್ತಾರೆ. ವೈಜ್ಞಾನಿಕ ನಿಲುವುಗಳನ್ನು ವಿರೋಧಿಸುವ ಕೆಲವು ಸಂಸ್ಥೆಗಳ ಧನಸಹಾಯದ ಮೂಲಗಳನ್ನು ಪ್ರಶ್ನಿಸಲಾಗಿದೆ. ವಿಜ್ಞಾನಕ್ಕೆ ಅತ್ಯುತ್ತಮ ನೀತಿಯ ಪ್ರಕ್ರಿಯೆಗಳು, ಅವುಗಳ ವೆಚ್ಚ-ಪರಿಣಾಮಕಾರಿತ್ವ ಮತ್ತು ಅವುಗಳ ತುರ್ತುಸ್ಥಿತಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹವಾಮಾನ ವಿಜ್ಞಾನಿಗಳು, ವಿಶೇಷವಾಗಿ ಅಮೆರಿಕದಲ್ಲಿ ತಮ್ಮ ಕೆಲಸವನ್ನು ಸೆನ್ಸಾರ್ ಮಾಡಲು ಅಥವಾ ಹತ್ತಿಕ್ಕಲು, ವೈಜ್ಞಾನಿಕ ದತ್ತಾಂಶವನ್ನು ಮರೆಮಾಚಲು ಸರಕಾರ ಮತ್ತು ಕೆಲವು ಉದ್ಯಮಗಳು ಒತ್ತಡ ಹೇರಿ ಸಾರ್ವಜನಿಕ ಸಂವಹನಗಳಲ್ಲಿ ಚರ್ಚಿಸದಂತೆ ನಿರ್ದೇಶನಗಳನ್ನು ನೀಡುತ್ತಿವೆ ಎನ್ನಲಾಗಿದೆ. ಕಳೆದ ಹಿಮಯುಗ ಅಂದರೆ 24,000 ವರ್ಷಗಳ ಜಾಗತಿಕ ತಾಪಮಾನವನ್ನು ಅವಲೋಕಿಸಿದಾಗ ಭೂಮಿಯ ಹೊರಮೈ ಸರಾಸರಿ ತಾಪಮಾನ -6ರಿಂದ -9 ಡಿಗ್ರಿ ಸೆಂಟಿಗ್ರೇಡ್ ಮಧ್ಯೆ ಇರುವುದು ಕಾಣಿಸುತ್ತದೆ. ಅದೇ ತಾಪಮಾನ 17 ಸಾವಿರ ವರ್ಷಗಳವರೆಗೂ ಮುಂದುವರಿದು ಸುಮಾರು 16,000 ವರ್ಷಗಳ ಹಿಂದೆ ಅದು ನಿಧಾನವಾಗಿ ಏರುತ್ತ 12,000 ವರ್ಷಗಳ ಹಿಂದೆ -4 ಡಿಗ್ರಿ ಸೆಂಟಿಗ್ರೇಡ್ ಮುಟ್ಟಿದೆ. 8,000 ವರ್ಷಗಳ ಹಿಂದೆ -1 ಡಿಗ್ರಿ ಸೆಂಟಿಗ್ರೇಡ್ ತಲುಪಿ ಅದೇ ತಾಪಮಾನ ಸುಮಾರು 250 ವರ್ಷಗಳ ಹಿಂದಿನವರೆಗೂ ಕಾಯ್ದುಕೊಂಡುಬಂದಿದೆ. ಪ್ರಸಕ್ತ ಅದು ಸರಾಸರಿ +1 ಡಿಗ್ರಿ ಸೆಂಟಿಗ್ರೇಡ್ ಮುಟ್ಟಿದೆ. ಅಂದರೆ ಇಂದಿನ ಜಾಗತಿಕ ತಾಪಮಾನ +1 ಡಿಗ್ರಿ ಸೆಂಟಿಗ್ರೇಡ್ ಮುಟ್ಟಿದ್ದು 21ನೇ ಶತಮಾನದ ಅಂತ್ಯಕ್ಕೆ ಅದು +2 ಡಿಗ್ರಿ ಸೆಂಟಿಗ್ರೇಡ್ ಮುಟ್ಟುತ್ತದೆ ಎನ್ನುವ ಲೆಕ್ಕಾಚಾರವಿದೆ. ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಜಾಗತಿಕ ತಾಪಮಾನ ಎಷ್ಟೋ ಪಟ್ಟು ಹೆಚ್ಚಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೇವಲ +1 ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ಏರಿಕೆಯಿಂದ ಇಷ್ಟೊಂದು ಅನಾಹುತಗಳು ಸಂಭವಿಸುತ್ತಿವೆ ಎಂದರೆ ಮುಂದಿನ ದಿನಗಳ ಗತಿ ಏನು ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ? ಇಂದಿನ ಜಾಗತಿಕ ತಾಪಮಾನದ ವಿವಾದವೆಂದರೆ ಕಳೆದ ಐದಾರು ವರ್ಷಗಳಿಂದ ಸಾಗರಗಳ ಮೇಲೆ ಸೃಷ್ಟಿಯಾಗುತ್ತಿರುವ ಹೇರಳ ಚಂಡಮಾರುತಗಳು ಕೇವಲ ಜಾಗತಿಕ ತಾಪಮಾನದಿಂದಲೇ ಉದ್ಭವಿಸುತ್ತಿವೆಯೇ ಅಥವಾ ಇನ್ನೇನಾದರೂ ನೈಸರ್ಗಿಕ ಪ್ರಕ್ರಿಯೆಗಳು ಅದರ ಹಿಂದೆ ಕೆಲಸ ಮಾಡುತ್ತಿವೆಯೇ ಎನ್ನುವುದು ಅಥವಾ ಈ ಅನಾಹುತಗಳಿಗೆ ಶಾಖೋತ್ಪನ್ನ ಅನಿಲಗಳ ಹೊರಸೂಸುವಿಕೆ ಮಾತ್ರ ಕಾರಣವಲ್ಲ ಎನ್ನುವುದರಲ್ಲಿ ಏನಾದರೂ ಹುರುಳಿದೆಯೇ ಎನ್ನುವುದು?

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News