ಮಂಗಳೂರು: ಗಣೇಶ ಚತುರ್ಥಿಯ ತೆನೆ ಹಬ್ಬಕ್ಕೆ ದೇವಸ್ಥಾನಗಳಿಗೆ ಉಚಿತವಾಗಿ ತೆನೆ ಪೂರೈಸುತ್ತಿರುವ ಹರ್ಬರ್ಟ್ ಡಿಸೋಜಾ

Update: 2022-08-31 03:41 GMT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷತೆಯೇ ವೈವಿಧ್ಯ, ವಿವಿಧತೆಯಲ್ಲಿ ಏಕತೆ, ಸಾಮರಸ್ಯ. ಇದು ತಲೆತಲಾಂತರಗಳಿಂದ ನಡೆದುಬಂದ, ಸೌಹಾರ್ದದವನ್ನು ಉಳಿಸಿ ಸಂರಕ್ಷಿಸುವ ನಮ್ಮ ಮಣ್ಣಿನ ಪರಂಪರೆ. ಅಂತಹ ಹಲವು ಸಾಮರಸ್ಯದ ನಿದರ್ಶನಗಳನ್ನು ನಮ್ಮ ಸುತ್ತಮುತ್ತ ನಾವು ಕಾಣುತಿರುತ್ತೇವೆ. ಅದಕ್ಕೊಂದು ನಿದರ್ಶನ ಹರ್ಬರ್ಟ್ ಡಿಸೋಜಾ.

ಸಾಮರಸ್ಯದ ಹಬ್ಬವೆಂದೇ ಪರಿಗಣಿಸಲಾಗಿರುವ ಗಣೇಶ ಚತುರ್ಥಿಯ ವಿಶೇಷಗಳಲ್ಲಿ ಒಂದು ತೆನೆ. ಕರಾವಳಿಯ ಹಿಂದೂಗಳು ಬಹುತೇಕವಾಗಿ ಗಣೇಶ ಚತುರ್ಥಿ ಹಬ್ಬದಂದು ಮನೆ ತುಂಬಿಸುವ ಅಥವಾ ಹೊಸ ಅಕ್ಕಿ ಊಟ ಮಾಡುವ ಸಂಪ್ರದಾಯ ಹೊಂದಿದ್ದಾರೆ. ಕ್ರೈಸ್ತರು ಪ್ರತಿ ವರ್ಷ ಸೆಪ್ಟೆಂಬರ್ 8ರಂದು ಅಂದರೆ ಗಣೇಶ ಚತುರ್ಥಿ ಆಸುಪಾಸಿನಲ್ಲೇ ತೆನೆ ಹಬ್ಬ ಅಥವಾ ಕುರಲ್ ಹಬ್ಬ ಆಚರಿಸುತ್ತಾರೆ. 

ವಿಶೇಷವೆಂದರೆ ಮಂಗಳೂರಿನ ಹಲವಾರು ದೇವಸ್ಥಾನಗಳಿಗೆ ಈ ಸಂದರ್ಭದಲ್ಲಿ ಪವಿತ್ರವಾಗಿ ಪರಿಗಣಿಸಲಾಗುವ ಭತ್ತದ ತೆನೆ ಹಂಚಲು ತೆನೆಯನ್ನು ಪೂರೈಸುತ್ತಿರುವವರು ಜಪ್ಪಿನಮೊಗರು ನಿವಾಸಿ ಹರ್ಬಟ್ ಡಿಸೋಜಾ. ನಗರವಿಂದು ಸ್ಮಾರ್ಟ್ ನಗರವಾಗಿ ಪರಿವರ್ತನೆ ಆಗುತ್ತಿರುವ ಹೊತ್ತಿನಲ್ಲಿ ಗದ್ದೆಗಳು ಮಾಯವಾಗಿವೆ. ಆದರೆ ಮಂಗಳೂರು ಮಹಾನಗರ ವ್ಯಾಪ್ತಿಗೆ ಒಳಪಡುವ ಜಪ್ಪಿನಮೊಗರಿನಲ್ಲಿ ಹರ್ಬಟ್ ಡಿಸೋಜಾ ಇದಕ್ಕಾಗಿ ತನ್ನ 20 ಸೆಂಟ್ಸ್ ಜಾಗವನ್ನು ಮಿಸಲಿಟ್ಟಿದ್ದಾರೆ. ಕಳೆದ  ಸುಮಾರು 15 ವರ್ಷಗಳಿಂದ ತನ್ನ ಗದ್ದೆಯ ಸುತ್ತ ಯಾವುದೇ ಪ್ರಾಣಿ ಪಕ್ಷಿಗಳು ಬರದಂತೆ ಬೇಲಿಯನ್ನು ನಿರ್ಮಿಸಿ  ಪೈರನ್ನು ಬೆಳೆಸಿ ಕರಾವಳಿಯ 25ಕ್ಕೂ ಅಧಿಕ ದೇವಸ್ಥಾನಗಳು, ಚರ್ಚ್ಗಳು ಮತ್ತು ಹಲವಾರು ಮನೆಗಳಿಗೆ ಉಚಿತವಾಗಿ ತೆನೆಯನ್ನು ನೀಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಜಪ್ಪಿನಮೊಗರು ಗಣೇಶ ಉತ್ಸವದ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಗಣೇಶ ಮೂರ್ತಿಯ ಜಲಸ್ಥಭನಕ್ಕಾಗಿ ಕಳೆದ 14ವರ್ಷಗಳಿಂದ ತಮ್ಮದೇ ದೋಣಿಯನ್ನು ನೀಡುತ್ತಿದ್ದಾರೆ.

ಕೋಮು ಸೂಕ್ಷ್ಮ ಪ್ರದೇಶವೆಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರ್ಬರ್ಟ್ ರಂತಹ ನಿಸ್ವಾರ್ಥ ಮನಸ್ಸುಗಳಿಂದ ಕೋಮು ಸಾಮರಸ್ಯ ಎಂದಿಗೂ ಜೀವಂತವಾಗಿರುತ್ತದೆ. ಧರ್ಮಗಳ ನಡುವೆ ವಿಷ ಕಾರುವವರ ನಡುವೆ ಹರ್ಬರ್ಟ್ ರಂತಹವರು ಸಮಾಜಕ್ಕೆ ಮಾದರಿಯಾಗಿದ್ದಾರೆ.

"ನಾವು ಕೃಷಿಕರು. ತರಕಾರಿ, ಭತ್ತ ಬೆಳೆಯುತ್ತೇವೆ. ಹಿಂದೆಯೂ ನಾವು ಬೆಳೆದ ಭತ್ತದ ತೆನೆ ಚರ್ಚ್ ಗೆ ನೀಡುತ್ತಿದ್ದೆವು. ಅದು ಸ್ವಲ್ಪ ಪ್ರಮಾಣದಲ್ಲಿ. ನಾನು  15 ವರ್ಷಗಳಿಂದ ಈ ಸಂದರ್ಭಕ್ಕಾಗಿಯೆ ನನ್ನ ಗದ್ದೆಯಲ್ಲಿ ಜಾಸ್ತಿ ಪ್ರಮಾಣದಲ್ಲಿ ಬೆಳೆದು ದೇವಸ್ಥಾನ, ಚರ್ಚ್ ಗಳಿಗೆ ನೀಡುತ್ತಿದ್ದೇನೆ. ಕಾವು ಪಂಚಲಿಂಗೇಶ್ವರ, ಮಂಗಳಾದೇವಿ, ಮಾರಿಯಮ್ಮ ಸೇರಿದಂತೆ ಸುತ್ತಮುತ್ತಲಿನ ಸುಮಾರು ದೇವಸ್ಥಾನಗಳು, ಬಜಾಲ್ ಚರ್ಚ್ ಸೇರಿದಂತೆ ಕೆಲ ಚರ್ಚುಗಳಿಗೆ ತೆನೆಯನ್ನು ಕೊಂಡು ಹೋಗುತ್ತಾರೆ. ಗಣೇಶ ಚತುರ್ಥಿ ಹಾಗೂ ಮೊಂತಿ ಹಬ್ಬ (ಕೂರಲ್ ಪರ್ಬ) ಬಹುತೇಕವಾಗಿ ಜೊತೆ ಜೊತೆಯಾಗಿ ಕೆಲವು ದಿನಗಳ ಅಂತರದಲ್ಲಿ ಬರುತ್ತದೆ. ಆದರೆ ಈ ಅವಧಿ ಮಳೆಗಾಲವಾಗಿರುವುದರಿಂದ ಭತ್ತ ನಾಟಿ ಕಷ್ಟದ ಕೆಲಸ. ಅದರಲ್ಲೂ ಜನ ಸಿಗುವುದಿಲ್ಲ ಕೆಲಸಕ್ಕೆ. ಇದೆಲ್ಲವನ್ನೂ ನಿರ್ವಹಣೆ ಮಾಡಿಕೊಂಡು ಸುಮಾರು ಮೂರು ಅಥವಾ ನಾಲ್ಕು (ಬೀಜದ ಇಳುವರಿ ನೋಡಿಕೊಂಡು) ತಿಂಗಳ ಮುಂಚಿತವಾಗಿ ಭತ್ತ ನಾಟಿ ಮಾಡುತ್ತೇನೆ. ನವಿಲು, ಜಾನುವಾರುಗಳಿಂದ ರಕ್ಷಿಸಲು ಬಲೆ ಹಾಕಿ ಬೆಳೆಯನ್ನು ರಕ್ಷಿಸಿ ಹಬ್ಬಕ್ಕೆ ಕಟಾವು ಮಾಡಲಾಗುತ್ತದೆ. ನನ್ನ ಮನೆಯವರು, ಸ್ನೇಹಿತರು ಸಹಕರಿಸುತ್ತಾರೆ. ನಮ್ಮ ಮಣ್ಣಿನಲ್ಲಿ ಬೆಳೆದ ತೆನೆ ಇಸ್ರೇಲ್, ದುಬೈ, ಕುವೈತ್ ನಂತಹ ಹೊರ ರಾಷ್ಟ್ರಗಳಿಗೂ ಹೋಗುವುದು ಸಂತಸದ ವಿಚಾರ."
-ಹರ್ಬರ್ಟ್ ಡಿಸೋಜಾ

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News