ಕ್ಯಾಚ್ ಕೈಚೆಲ್ಲಿ ಟ್ರೋಲ್‌ಗೊಳಗಾದ ಬೌಲರ್‌ ಅರ್ಶದೀಪ್ ಗೆ ಪಂಜಾಬ್ ನಾಯಕರ ಬೆಂಬಲ

Update: 2022-09-05 15:08 GMT
ಅರ್ಶದೀಪ್ ಸಿಂಗ್ (Photo:twitter)

ಚಂಡಿಗಡ, ಸೆ.5: ದುಬೈನಲ್ಲಿ ಪಾಕಿಸ್ತಾನ ವಿರುದ್ಧದ ಏಶ್ಯಕಪ್‌ನ ಸೂಪರ್-4 (Asia cup super-4 match) ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿದ್ದ ಅರ್ಶದೀಪ್ ಸಿಂಗ್ (Arshdeep Singh)ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ರಾಜ್ಯಸಭಾ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಹಿತ ಪಂಜಾಬ್‌ನ ರಾಜಕೀಯ ನಾಯಕರು ವೇಗದ ಬೌಲರ್‌ನ ಬೆಂಬಲಕ್ಕೆ ನಿಂತಿದ್ದಾರೆ.

ರವಿವಾರ ನಡೆದ ಸೂಪರ್-4 ಪಂದ್ಯವನ್ನು 5 ವಿಕೆಟ್‌ನಿಂದ ಗೆದ್ದುಕೊಂಡಿದ್ದ ಪಾಕ್ ಗ್ರೂಪ್ ಹಂತದ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ಆಪ್ ಸಂಸದ ರಾಘವ್ ಚಡ್ಡಾ, ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಂಜಾಬ್ ಕ್ರೀಡಾ ಸಚಿವ ಗುರ್‌ಮೀತ್ ಮೀಟ್ ಹಾಗೂ ಬಿಜೆಪಿ ನಾಯಕ ಮಣಿಂದರ್ ಸಿರ್ಸಾ ಕೂಡ 23ರ ಹರೆಯದ ವೇಗದ ಬೌಲರ್ ಸಿಂಗ್‌ರನ್ನು ಬೆಂಬಲಿಸಿದ್ದಾರೆ.

‘‘ಯುವ ಆಟಗಾರನನ್ನು ಟೀಕಿಸುವುದನ್ನು ನಿಲ್ಲಿಸಿ. ಯಾರೂ ಕೂಡ ಉದ್ದೇಶಪೂರ್ವಕವಾಗಿ ಕ್ಯಾಚ್ ಕೈಬಿಡುವುದಿಲ್ಲ. ನಮ್ಮ ಹುಡುಗರ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮ ಆಟಗಾರರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದ್ದಾಗಿ ಮಾತನಾಡುವ ಜನರಿಗೆ ನಾಚಿಕೆಯಾಗಬೇಕು. ಅರ್ಷ್ ಚಿನ್ನವಿದ್ದಂತೆ’’ ಎಂದು ಹರ್ಭಜನ್ ಟ್ವೀಟಿಸಿದ್ದಾರೆ.

‘‘ಅರ್ಶದೀಪ್ ಅದ್ಭುತ ಬೌಲರ್. ಮುಂದಿನ ವರ್ಷಗಳಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ಮುನ್ನಡೆಸಬಲ್ಲರು. ದ್ವೇಷದ ಮಾತು ಅವರನ್ನು ಕುಗ್ಗಿಸುವುದಿಲ್ಲ’’ಎಂದು ರಾಘವ ಚಡ್ಡಾ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News