ಡಿಸಿಸಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ: ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ವಸೂಲಿ

Update: 2022-09-12 06:45 GMT

ಬೆಂಗಳೂರು:  ಕಿರಿಯ ಸಹಾಯಕರ ಹುದ್ದೆಗಳು ಸೇರಿದಂತೆ ಇನ್ನಿತರ ಹುದ್ದೆಗಳಿಗಾಗಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿಯೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ (ಡಿಸಿಸಿ) ಆಡಳಿತ ಮಂಡಳಿಗಳು ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿವೆ. ಸಹಕಾರ ಪರೀಕ್ಷೆ ಪ್ರಾಧಿಕಾರ ರಚನೆಯಾಗಿದ್ದರೂ ಅದನ್ನು ಬದಿಗಿರಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಆಡಳಿತ ಮಂಡಳಿಗಳೇ ನೇರವಾಗಿ ಪರೀಕ್ಷೆ ನಡೆಸುವ ಮೂಲಕ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ದಾರಿಮಾಡಿಕೊಡುತ್ತಿರುವುದು ಇದೀಗ ಬಹಿರಂಗವಾಗಿದೆ.

ಕೆಎಎಸ್, ಪಿಎಸ್ಸೈ, ಸಹಾಯಕ ಪ್ರಾಧ್ಯಾಪಕ, ಎಫ್‌ಡಿಎ, ಎಸ್‌ಡಿಎ,  ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿಯೇ ಸಾಲು ಸಾಲು ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಇದೀಗ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿಯೂ ಅಂದಾಜು 9 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಆಪಾದನೆ ಕೇಳಿ ಬಂದಿದೆ. ಈ ಸಂಬಂಧ ನ್ಯಾಯವಾದಿ ಎ.ಕೆ.ಮಲ್ಲೇಶ್‌ನಾಯ್ಕ್ ಎಂಬವರು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ 2022ರ ಜುಲೈ 14ರಂದು ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು 'the-file.in'ಗೆ ಲಭ್ಯವಾಗಿದೆ.

‘ನೇಮಕಾತಿ ಪರೀಕ್ಷೆ ನಡೆಯುವ ಮುನ್ನವೇ ಆಡಳಿತ ಮಂಡಳಿ ಸದಸ್ಯರು, ಸಚಿವರು, ಸ್ಥಳೀಯ ಶಾಸಕರು ಸೇರಿದಂತೆ ಪ್ರಭಾವಿಗಳು ತಮಗೆ ಬೇಕಾದವರನ್ನು ನೇಮಕಾತಿ ಮಾಡಿಕೊಳ್ಳಲು ಒಳಗೊಳಗೇ ವ್ಯವಹಾರ ಕುದುರಿಸಿದ್ದಾರೆ. ನೇಮಕಾತಿ ಪರೀಕ್ಷೆ ಜವಾಬ್ದಾರಿ ವಹಿಸಿಕೊಂಡ ಸಹಕಾರೇತರ ಸಂಸ್ಥೆಗಳ ಜೊತೆ ಮೊದಲೇ ಒಪ್ಪಂದ ಮಾಡಿಕೊಂಡು ವ್ಯವಹಾರ ಕುದುರಿಸಲಾಗುತ್ತಿದೆ. ಅರ್ಜಿ ಹಾಕುವ ಅಭ್ಯರ್ಥಿಗಳು ಕೇವಲ ನೆಪಮಾತ್ರಕ್ಕೆ ಪರೀಕ್ಷೆ ಎದುರಿಸುತ್ತಾರೆ. ಹೆಂಡತಿ, ಮಕ್ಕಳ ಹೆಸರಿನಲ್ಲಿ ಕರೆ ಮಾಡಿ ಅಭ್ಯರ್ಥಿಗಳಿಗೆ ಆಮಿಷವೊಡ್ಡುತ್ತಿದ್ದಾರೆ. ಪರೀಕ್ಷೆಯ ಒಎಂಆರ್ ಶೀಟ್‌ನಲ್ಲಿ ಮೂರನೇ ವ್ಯಕ್ತಿಯಿಂದ ಉತ್ತರ ಭರ್ತಿ ಮಾಡಲು ಸಂಚು ಹೂಡಿದ್ದಾರೆ’ ಎಂದು ಮಲ್ಲೇಶ್ ನಾಯ್ಕ್ ಅವರು ದೂರಿನಲ್ಲಿ ವಿವರಿಸಿದ್ದಾರೆ.

9 ಕೋಟಿ ರೂ. ವ್ಯವಹಾರ?: ಕಿರಿಯ ಸಹಾಯಕರು/ಕಿರಿಯ ಕ್ಷೇತ್ರಾಧಿಕಾರಿಗಳ ಹುದ್ದೆಗೆ (29 ಹುದ್ದೆ) ತಲಾ 25 ಲಕ್ಷ ರೂ., ಕಂಪ್ಯೂಟರ್ ಇಂಜಿನಿಯರ್ (01) 30 ಲಕ್ಷ ರೂ., ಕಂಪ್ಯೂಟರ್ ಆಪರೇಟರ್ (01) 25 ಲಕ್ಷ, ವಾಹನ ಚಾಲಕರು (01) 15 ಲಕ್ಷ, ಕಿರಿಯ ಸೇವಕರು (16) ಹುದ್ದೆಗೆ 10ರಿಂದ 15 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ದರಪಟ್ಟಿಯನ್ನು ನಮೂದಿಸಿರುವುದು ದೂರಿನಿಂದ ಗೊತ್ತಾಗಿದೆ.

ಮೀಸಲಾತಿ ಉಲ್ಲಂಘನೆ: ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹೈದ್ರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿರುವ ಮಲ್ಲೇಶ್ ನಾಯ್ಕ  ಅವರು 48 ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಹೈ-ಕ ಭಾಗದ ಅಭ್ಯರ್ಥಿಗಳಿಗೆ ಶೇ.8ರಷ್ಟು ಹುದ್ದೆಗಳಲ್ಲಿ ಮೀಸಲಿಡದೇ ವಂಚನೆ ಮಾಡಲಾಗಿದೆ’

ಎಂದು ದೂರಿದ್ದಾರೆ.

ಆರ್‌ಬಿಐ ಮಾದರಿಯಲ್ಲಿಯೇ ಪ್ರಾಧಿಕಾರ ರಚಿಸಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು. ಪ್ರಶ್ನೆಪತ್ರಿಕೆ ತಯಾರಿಕೆ, ಮೌಲ್ಯಮಾಪನ ಹಾಗೂ ಫಲಿತಾಂಶವನ್ನು ಪ್ರಾಧಿಕಾರಕ್ಕೆ ವಹಿಸಿದರೆ ಅಕ್ರಮಗಳಿಗೆ ಕಡಿವಾಣ ಹಾಕಿದಂತಾಗುತ್ತದೆ,’ ಎಂದು ಮಲ್ಲೇಶ್ ನಾಯ್ಕ್ ಅವರು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಸಹಕಾರ ಇಲಾಖೆಯ ಅಧೀನ ಸಂಸ್ಥೆಗಳ ನೇಮಕಾತಿಯಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಹಕಾರ ಪರೀಕ್ಷಾ ಪ್ರಾಧಿಕಾರ ರಚನೆಗೆ ಮುಂದಾಗಿದೆ. ಆದರೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ನೇಮಕಾತಿಗಳಲ್ಲಿ ಸ್ವಜನಪಕ್ಷಪಾತ, ಲಂಚ, ನೇಮಕಾತಿ ಅವ್ಯವಹಾರ, ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವ್ಯಾಪ್ತಿಗೆ ಬರುವ ಬ್ಯಾಂಕ್‌ಗಳಲ್ಲಿ ಪರೀಕ್ಷಾ ಪ್ರಾಧಿಕಾರದ ಮೂಲಕವೇ ನೇಮಕಾತಿ ನಡೆಯುತ್ತಿವೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News