ಕೋಮುವಾದಿ ಹಾಗೂ ಭಾಷಿಕ ವಸಾಹತುಶಾಹಿ ಹುನ್ನಾರ

Update: 2022-09-15 06:09 GMT

ಭಾಗ-2

ಶೆಡ್ಯೂಲ್-8- ಹಿಂದಿ ವಸಾಹತುಶಾಹಿಯ ಅಸ್ತ್ರ? ಹಿಂದಿಯನ್ನು ಏಕೈಕ ರಾಷ್ಟ್ರಭಾಷೆಯನ್ನಾಗಿ ಹೇರಲು ಅಮಿತ್ ಶಾ ಹಾಗೂ ಇತರ ಆರೆಸ್ಸೆಸಿಗರೆಲ್ಲರೂ ಬಳಸುವ ಮತ್ತೊಂದು ವಾದವೆಂದರೆ ಹಿಂದಿಯನ್ನು ಭಾರತದಲ್ಲಿ ಅತಿ ಹೆಚ್ಚು ಜನ ಬಳಸುತ್ತಾರೆ ಎಂಬುದು. 2011ರ ಭಾಷಿಕ ಸೆನ್ಸಸ್‌ನಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇ.43 ಎಂದು ತೋರಿಸಲಾಗಿರುವುದನ್ನೂ ಅವರು ಅದಕ್ಕೆ ಪುರಾವೆಯಾಗಿ ನೀಡುತ್ತಾರೆ. ಆದರೆ, ಈ ಭಾಷಾ ಸೆನ್ಸಸ್ ಮಾಡುವಾಗ ಜನರನ್ನು ಹಿಂದಿ ತಿಳಿದಿದೆಯೇ ಎಂದು ಕೇಳಲಾಗಿದೆಯೇ ವಿನಾ ಹಿಂದಿ ಮಾತೃಭಾಷೆಯೇ ಅಥವಾ ಮಾತನಾಡಬಲ್ಲರೇ ಎಂದಲ್ಲ. ಎರಡನೆಯದಾಗಿ 1950ರಲ್ಲಿ ಶೇ.20ರಷ್ಟು ಮಾತ್ರ ಹಿಂದಿ ಭಾಷಿಕರರಿದ್ದುದು 2011ರ ವೇಳೆಗೆ ಅದರ ಪ್ರಮಾಣ ಶೇ.43 ಆಗಿದ್ದರ ಹಿಂದೆ ದೊಡ್ಡ ಭಾಷಿಕ ವಸಾಹತು ರಾಜಕಾರಣವಿದೆ. ಉದಾಹರಣೆಗೆ, ಉತ್ತರ ಭಾರತದಲ್ಲಿ ಎಲ್ಲಾ ಕಡೆ ಹಿಂದಿಯೇ ಮಾತೃ ಭಾಷೆ ಎಂಬ ಅಭಿಪ್ರಾಯವನ್ನು ಹರಿಬಿಡಲಾಗಿದೆ. ಆದರೆ 2011ರ ಬಿಹಾರದ ಭಾಷಿಕ ಸೆನ್ಸಸ್‌ನ ವರದಿಯನ್ನೇ ಗಮನಿಸಿದರೆ ಸಾಕು. ಅದು ಎಂತಹ ರಾಜಕೀಯ ಮಿಥ್ಯೆ ಎಂಬುದು ಅರ್ಥವಾಗುತ್ತದೆ. ಬಿಹಾರದಲ್ಲಿ ಶೇ.31 ಭಾಗ ಭೋಜ್‌ಪುರಿಯನ್ನೂ, ಶೇ.25 ಭಾಗ ಮಗಹಿಯನ್ನೂ ಮಾತನಾಡುತ್ತಾರೆ. ಆದರೆ ಶೇ.21 ಭಾಗ ಮಾತ್ರ ಹಿಂದಿ ಮಾತನಾಡುತ್ತಾರೆ.

ಆದರೆ ಭೋಜ್‌ಪುರಿ ಮತ್ತು ಮಗಹಿ ಭಾಷೆಗಳು ಶೆಡ್ಯೂಲ್ 8ರಲ್ಲಿ ಇಲ್ಲ. ಆದರೆ ಭಾಷಿಕ ಸೆನ್ಸಸ್ ನಡೆಸುವಾಗ ತಮ್ಮ ತಮ್ಮ ಮಾತೃಭಾಷೆಯನ್ನು ನೋಂದಾಯಿಸುವಾಗ ಶೆಡ್ಯೂಲ್ 8ರಲ್ಲಿರುವ ಭಾಷೆಯನ್ನು ಮಾತ್ರ ದಾಖಲಿಸಲಾಗುತ್ತದೆ!. ಹೀಗಾಗಿ ಭಾಷಿಕ ಸೆನ್ಸಸ್‌ನಲ್ಲಿ ಇವರೆಲ್ಲರ ಮಾತೃಭಾಷೆಗಳೂ ಹಿಂದಿಯೆಂದೇ ನೋಂದಾಯಿತವಾಗುತ್ತದೆ. ಶೆಡ್ಯೂಲ್ 8ರಲ್ಲಿ ಕೇವಲ 25,000 ಜನರು ಮಾತ್ರ ತಮ್ಮ ಮಾತೃಭಾಷೆಯೆಂದು ನೋಂದಾಯಿಸಿಕೊಂಡಿರುವ ಸಂಸ್ಕೃತಕ್ಕೂ ಸ್ಥಾನವಿದೆ. ಆದರೆ ತಲಾ 2 ಕೋಟಿ ಭಾಷಿಕರಿರುವ ಭೋಜ್‌ಪುರಿ ಮತ್ತು ಮಗಹಿಗಳಿಗೆ ಶೆಡ್ಯೂಲ್ 8ರಲ್ಲಿ ಸ್ಥಾನ ನೀಡಲಾಗಿಲ್ಲ. ಇತ್ತೀಚೆಗೆ ಭೋಜ್‌ಪುರಿಗೆ ಶೆಡ್ಯೂಲ್ 8ರಲ್ಲಿ ಸ್ಥಾನಮಾನ ಸಿಗಬೇಕೆಂದು ನಡೆಸಿದ ಹೋರಾಟವನ್ನು ಬಿಜೆಪಿ ವಿರೋಧಿಸಿದೆ. ಕಾರಣ ಹಿಂದಿ ಭಾಷಿಕರ ಅಧಿಕೃತ ಸಂಖ್ಯೆ ಕಡಿಮೆಯಾಗುತ್ತದೆಂದು! ಈ ಕಾರಣದಿಂದಲೇ ಬಿಹಾರ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಕೋಟ್ಯಂತರ ಜನ ಮಾತನಾಡುತ್ತಿದ್ದ ಅವಧಿ ಭಾಷೆಯೂ ಸೆನ್ಸಸ್‌ನಿಂದ ಕಣ್ಮರೆಯಾಗಿದೆ. ಅದೇ ರೀತಿ ಬುಂದೇಲ್‌ಖಂಡಿ, ಛತ್ತೀಸ್‌ಘರಿ, ರಾಜಸ್ಥಾನಿ, ಹರಿಯಾಣ್ವಿ ಭಾಷೆಗಳು ಉತ್ತರ ಭಾರತದ ಕೋಟ್ಯಂತರ ಜನರ ಮಾತೃಭಾಷೆಯಾದರೂ ಅವುಗಳು ಶೆಡ್ಯೂಲ್ 8ರಲ್ಲಿ ಇಲ್ಲವಾದ್ದರಿಂದ ಅವೆಲ್ಲವೂ ಹಿಂದಿ ಎಂದೇ ನೋಂದಾಯಿತವಾಗುತ್ತವೆ. ಶೆಡ್ಯೂಲ್ 8ರಲ್ಲಿರುವ ಭಾಷೆಗಳಿಗೆ ಮಾತ್ರ ಸರಕಾರದ ಮನ್ನಣೆ ಮತ್ತು ಉತ್ತೇಜನ ಸಿಗುವುದರಿಂದ ಅವು ಸೆನ್ಸಸ್‌ನಿಂದ ಮಾತ್ರವಲ್ಲದೆ ನಿಧಾನಕ್ಕೆ ಒಂದೆರಡು ಪೀಳಿಗೆಯ ನಂತರದಲ್ಲಿ ಇತಿಹಾಸದಿಂದಲೇ ಮರೆಯಾಗುತ್ತವೆ. ಪ್ರಖ್ಯಾತ ಭಾಷಾ ಶಾಸ್ತ್ರಜ್ಞರಾದ ಗಣೇಶ್ ದೇವಿಯವರ ಪ್ರಕಾರ ಭಾರತದಲ್ಲಿ 750 ಭಾಷೆಗಳಿದ್ದು ಇಂತಹ ವಸಾಹತುಶಾಹಿ ಪ್ರಕ್ರಿಯೆಗಳಿಂದಾಗಿ ಈಗಾಗಲೇ 120 ಭಾಷೆಗಳು ಮೃತವಾಗಿವೆ. ಇದಲ್ಲದೆ ಉತ್ತರಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ದಕ್ಷಿಣ ಭಾರತಕ್ಕೆ ಹೋಲಿಸಿ ನೋಡಿದಲ್ಲಿ ಹೆಚ್ಚು. ಹೀಗಾಗಿಯೂ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ಭಾಷಿಕರ ಸಂಖ್ಯೆ ಕಡಿಮೆಯಾಗಿ ‘ಹಿಂದಿ ಭಾಷಿಕರ’ ಸಂಖ್ಯೆ ಹೆಚ್ಚಾಗಿ ನಮೂದಾಗಿಬಿಡುತ್ತದೆ. ಆದ್ದರಿಂದಲೇ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವುದರ ಹಿಂದೆ ಹಾಗೂ ಹಿಂದಿಯನ್ನು ಅತಿ ಹೆಚ್ಚು ಜನರು ಮಾತನಾಡುತ್ತಾರೆ ಎನ್ನುವ ಹಿಂದೆ ಕೋಮುವಾದಿ ಹಾಗೂ ಭಾಷಿಕ ವಸಾಹತುಶಾಹಿ ಹುನ್ನಾರಗಳಿವೆ.

ಹಿಂದಿ ಎರಡನೇ ಭಾಷೆಯೂ ಆಗಲಾರದು 
ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಏರತೊಡಗಿದೊಡನೆ ಅಮಿತ್ ಶಾ ಅವರು ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕೆಂಬ ಹೊಸ ಪ್ರತಿಪಾದನೆ ಪ್ರಾರಂಭಿಸಿದ್ದಾರೆ. ಆದರೆ ಮಕ್ಕಳು ಮಾತೃಭಾಷೆಯನ್ನು ‘‘ಪಡೆದುಕೊಳ್ಳುತ್ತಾರೆ’’ (First Language Acquisition). ಆದರೆ ಎರಡನೇ ಭಾಷೆಯನ್ನು ‘‘ಕಲಿಯಬೇಕಾಗುತ್ತದೆ’’ (Second Language Learning). ಎರಡನೇ ಭಾಷಾ ಕಲಿಕೆಯೆಂಬುದು ರಾಜಕೀಯ ಪ್ರೇರಿತವಾದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿಯುತ್ತದೆ. ‘ಎರಡನೇ ಭಾಷಾ ಕಲಿಕೆ’ಯು ಸಹಜ ಆಸಕ್ತಿ, ಪೂರಕ ವಾತಾವರಣ ಮತ್ತು ಬದುಕಿನ ಅಗತ್ಯವನ್ನು ಆಧರಿಸಿದ್ದರೆ ಮಾತ್ರ ಯಶಸ್ವಿಯಾಗುತ್ತದೆಂದು ಜಗತ್ತಿನಾದ್ಯಂತ ಸಾಬೀತಾಗಿದೆ. ಅಲ್ಲದೆ ಮೊದಲ ಅಥವಾ ಮಾತೃಭಾಷೆಯ ಬಲವಾದ ಬುನಾದಿಯಿಲ್ಲದೆ ಎರಡನೇ ಭಾಷಾ ಕಲಿಕೆಯೂ ಹೊರೆಯೇ ಆಗುತ್ತದೆಂಬುದು ಸಹ ಈಗಾಗಲೇ ಭಾರತದಲ್ಲೂ ರುಜುವಾತಾಗಿದೆ. ಭಾರತದ ವಸಾಹತುಶಾಹಿ ಹಿನ್ನೆಲೆ ಮತ್ತು ಇಂದಿನ ಜಾಗತೀಕರಣಗಳ ಹಿನ್ನೆಲೆಯಿಂದಾಗಿ ಇಂಗ್ಲಿಷ್‌ಎರಡನೇ ಭಾಷೆಯ ಶೈಕ್ಷಣಿಕ ಪೂರ್ವಾಗತ್ಯಗಳನ್ನು ಪೂರೈಸುತ್ತಿದೆ. ಆ ಜಾಗದಲ್ಲಿ ಹಿಂದಿಯನ್ನು ಪರಿಚಯಿಸುವುದು ಕೃತಕ ಮಾತ್ರವಲ್ಲ ಹಿಂದಿಯೇತರ ರಾಜ್ಯದ ವಕ್ಕಳಿಗೆ ಮತ್ತು ಜನರಿಗೆ ಮಾಡುವ ತಾರತಮ್ಯ ಹಾಗೂ ಅನ್ಯಾಯವೂ ಆಗುತ್ತದೆ. ಹೀಗಾಗಿ ಹಿಂದಿಯು ಎರಡನೇ ಭಾಷೆಯಾಗಿ ಸಲ್ಲ. ಭಾರತಕ್ಕೆ ವಿಶ್ವಮಾನ್ಯತೆ ಹೆಚ್ಚಲು ಬೇಕಿರುವುದು

ಹಿಂದಿಯೋ? ಹೆಚ್ಚು ಪ್ರಜಾತಂತ್ರವೋ:
 ಭಾರತಕ್ಕೆ ವಿಶ್ವಮಾನ್ಯತೆ ಹೆಚ್ಚಬೇಕೆಂದರೂ ಒಂದೇ ಭಾಷೆಯ ಅಗತ್ಯವಿದೆಯೆಂದು ಆರೆಸ್ಸೆಸ್ ಪ್ರಚಾರ ಮಾಡುತ್ತಿದೆ. ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಭಾರತವು ವಿಶ್ವಗುರುವಾಗುವುದಿರಲಿ ವಿಫಲ ಪ್ರಜಾತಂತ್ರವಾಗುತ್ತಿದೆಯೆಂದು ವಿಶ್ವಸಮುದಾಯ ಒಕ್ಕೊರಲಿಂದ ಹೇಳುತ್ತಿದೆ. ಅದಕ್ಕೆ ಭಾರತ ಸರಕಾರವೂ ಸದಸ್ಯ ರಾಷ್ಟ್ರವಾಗಿರುವ ಜಾಗತಿಕ ಪ್ರಜಾತಂತ್ರ ಅಧ್ಯಯನ ಸಂಸ್ಥೆಯು ಇತ್ತೀಚೆಗೆ ಹೊರತಂದಿರುವ ವಾರ್ಷಿಕ ವರದಿಯೇ ಸಾಕ್ಷಿ.
ಅದಕ್ಕೆ ಕಾರಣ ಭಾರತದ ಜನರ ಬದುಕಿನ ಪರಿಸ್ಥಿತಿ, ನಾಗರಿಕ ಸ್ವಾತಂತ್ರ್ಯಗಳ ಮಾನದಂಡಗಳಲ್ಲಿ ಭಾರತವು ತನ್ನ ನೆರೆಹೊರೆಯ ರಾಷ್ಟ್ರಗಳಿಗಿಂತ ಮಾತ್ರವಲ್ಲ ಆಫ್ರಿಕಾದ ರಾಷ್ಟ್ರಗಳಿಗಿಂತ ಕಳೆದ ಆರೂವರೆ ವರ್ಷಗಳಲ್ಲಿ ಪಾತಾಳಕ್ಕೆ ಇಳಿದಿದೆ

ಅನಗತ್ಯವಾಗಿ ಹಿಜಾಬ್, ಅಝಾನ್, ಮುಸ್ಲಿಮರ ಮೇಲೆ ಆರ್ಥಿಕ ದಿಗ್ಬಂಧನೆ, ಮತಾಂತರ-ಗೋಹತ್ಯೆ ನಿಷೇಧ, ಕಾಶ್ಮೀರ ವಿಭಜನೆ, ಸಿಎಎ- ಎನ್‌ಪಿಅರ್ ಜಾರಿಗೆ ತರಾತುರಿ, ಯೋಜಿತ ದಿಲ್ಲಿ ಗಲಭೆ, ಅದಕ್ಕೆ ಕಾರಣರಾದವರನ್ನು ರಕ್ಷಿಸುತ್ತಾ, ಸಂತ್ರಸ್ತರಾದವರನ್ನೇ ದೋಷಿಗಳನ್ನಾಗಿಸುವ ಪಿತೂರಿ, ಕ್ರೂರ, ಅಪ್ರಜಾತಾಂತ್ರಿಕ ಹಾಗೂ ಅವೈಜ್ಞಾನಿಕವಾದ ಕೋವಿಡ್ ನಿಭಾವಣೆ, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ರಾಜಕೀಯ ಭಿನ್ನಮತೀಯರ ಬಂಧನ, ಹತ್ಯೆಗಳು, ಪ್ರಜಾತಾಂತ್ರಿಕ ವಿಧಿ-ರಿವಾಜುಗಳನ್ನೆಲ್ಲಾ ಗಾಳಿಗೆ ತೂರಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ್ದು ಇತ್ಯಾದಿ ಕಾರಣಗಳಿಗಾಗಿ ನರೇಂದ್ರ ಮೋದಿಯವರ ಭಾರತವು ಪುಟಿನ್‌ರ ರಶ್ಯದಂತೆ, ಎರ್ದೋಗಾನ್‌ರ ಟರ್ಕಿಯಂತೆ, ಒರ್ಬಾನ್‌ರ ಹಂಗೇರಿಯಂತೆ, ಡ್ಯುಟಿರಾಟೆಯ ಫಿಲಿಪ್ಪೀನ್‌ನಂತೆ, ಬೊಲ್ಸನಾರೋರ ಬ್ರೆಝಿಲ್‌ನಂತೆ ಸರ್ವಾಧಿಕಾರಿಯಾಗುತ್ತಿದೆಯೆಂದು ಎಲ್ಲಾ ಸ್ವತಂತ್ರ ಜಾಗತಿಕ ವರದಿಗಳು ಸ್ಪಷ್ಟವಾಗಿ ಹೇಳುತ್ತಿವೆ. ಇವೆಲ್ಲಕ್ಕೂ ಕಾರಣ ಬಿಜೆಪಿಯ ಹಿಂದುತ್ವವಾದಿ, ಕಾರ್ಪೊರೇಟ್ ಬಂಡವಾಳಶಾಹಿ ಪರ ನೀತಿಗಳೇ ಹೊರತು ಭಾರತಕ್ಕೆ ಒಂದು ರಾಷ್ಟ್ರ ಭಾಷೆ ಇರದಿರುವುದಲ್ಲ ಅಥವಾ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಿಬಿಟ್ಟರೆ ಇವೆಲ್ಲವೂ ಬದಲಾಗುವುದಿಲ್ಲ.

ಹಿಂದಿ-ಹಿಂದುತ್ವ-ಹಿಂದೂರಾಷ್ಟ್ರದ ಹುನ್ನಾರ 

ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಬೇಕು ಎಂದು ಸಲಹೆ ಸ್ವರೂಪದ ಅಜೆಂಡಾವನ್ನು ದೇಶದ ಮುಂದಿಟ್ಟ ಎರಡೇ ದಿನಗಳಲ್ಲಿ ಅಮಿತ್ ಶಾ ಅವರು ಭಾರತಕ್ಕೆ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಏಕೆ ಬೇಕು ಎಂಬ ಪ್ರಶ್ನೆಯನ್ನು ಸಹ ದೇಶದ ಮುಂದಿಟ್ಟಿದ್ದರು. ಎರಡನೇ ಬಾರಿ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರಕಾರ ತನ್ನ ಹಿಂದಿ-ಹಿಂದುತ್ವ-ಹಿಂದೂರಾಷ್ಟ್ರದ ಅಜೆಂಡಾವನ್ನು ವೇಗಗತಿಯಲ್ಲಿ ಜಾರಿ ಮಾಡಲು ಹೊರಟಿರುವುದು ಸುಸ್ಪಷ್ಟವಾಗಿದೆ. ಒಂದು ದೇಶ-ಒಂದೇ ಮಾರುಕಟ್ಟೆ- ಅರ್ಥಾತ್ ಅಂಬಾನಿ-ಅದಾನಿ ಅಥವಾ ಮೋದಾನಿ ಮಾರುಕಟ್ಟೆ

ಒಂದು ದೇಶ-ಒಂದು ತೆರಿಗೆ ಅರ್ಥಾತ್ ಬಡವರಿಗೆ ಹೆಚ್ಚುವರಿ ತೆರಿಗೆ. ಒಂದು ದೇಶ-ಒಂದು ಧರ್ಮ ಅರ್ಥಾತ್ ಬ್ರಾಹ್ಮಣವಾದಿ ಧರ್ಮ-ಮರ್ಮ

ಒಂದು ದೇಶ-ಒಂದು ಭಾಷೆ ಅರ್ಥಾತ್ ದೇವನಾಗರಿ ಲಿಪಿಯ ಹಾಗೂ ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿ ಭಾಷೆ. ಒಂದು ದೇಶ-ಒಂದು ಪಕ್ಷ ಅರ್ಥಾತ್ ಬಿಜೆಪಿ ಪಕ್ಷ. ಒಂದು ದೇಶ-ಒಬ್ಬ ನಾಯಕ ಅರ್ಥಾತ್ ಮೋದಿ(ಅಥವಾ ಶಾ!)

ಇದು ಈ ಅಜೆಂಡಾದ ತಾತ್ಪರ್ಯ. ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದದ್ದೂ ಇದೇ ಸರ್ವಾಧಿಕಾರಿ ಪ್ರಣಾಳಿಕೆಯ ಮೇಲೆ. ಆದ್ದರಿಂದಲೇ ಹಿಂದಿ ಹೇರಿಕೆಯಿಂದ ಕನ್ನಡವನ್ನು ಉಳಿಸುವ ಭಾಷಾ ಚಳವಳಿ ಈ ದೇಶವನ್ನು ಹಿಂದುತ್ವ ಹಿಟ್ಲರ್‌ಶಾಹಿಯಿಂದ ಉಳಿಸುವ ಪ್ರಜಾತಾಂತ್ರಿಕ ಸಮರದ ಭಾಗವೇ ಆಗಿದೆ. ಆಗಬೇಕಾಗಿದೆ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News