ಅಣ್ಣಾಭಾವು ಸಾಠೆ ಎಂಬ ಬಾಬಾಸಾಹೇಬರ ಸಹ ಯಾತ್ರಿ

Update: 2022-09-19 06:00 GMT

ಅಣ್ಣಾಭಾವು ಸಾಠೆ ಮರಾಠಿಯ ಬಹುದೊಡ್ಡ ಲೇಖಕರಾಗಿದ್ದಂತೆ ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಸದಸ್ಯರೂ ಆಗಿದ್ದರು (ಅನೇಕ ಕಮ್ಯುನಿಸ್ಟ ಕಾರ್ಯಕರ್ತರಿಗೆ ಇದು ಗೊತ್ತಿಲ್ಲ). ಇಂಥ ಕಮ್ಯುನಿಸ್ಟ್ ಕವಿಯೊಬ್ಬನ ಪ್ರತಿಮೆಯನ್ನು ಬಿಜೆಪಿಯ ಉಪ ಮುಖ್ಯಮಂತ್ರಿಯೊಬ್ಬರು ಅನಾವರಣ ಮಾಡುತ್ತಾರೆ, ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಮತ್ತು ಬಿಜೆಪಿಯ ನಾಯಕ ವಿನಯ ಸಹಸ್ರಬುದ್ಧೆ ಅವರು ಪಾಲ್ಗೊಳ್ಳುತ್ತಾರೆ ಎಂದರೆ ಅನೇಕರು ಅಚ್ಚರಿ ಪಡಬಹುದು.ಆದರೆ ಅಚ್ಚರಿ ಪಡಬಹುದಾದುದೇನೂ ಇಲ್ಲಿಲ್ಲ.ಅಣ್ಣಾಭಾವು ಸಾಠೆ ಅಂಥವರು ಬಾಬಾಸಾಹೇಬ ಅಂಬೇಡ್ಕರ್ ಅವರಂತೆ ಪಕ್ಷ,ಸಂಘಟನೆ,ಸಿದ್ಧಾಂತಗಳಾಚೆ ಬೆಳೆದು ನಿಂತವರು. ಪಕ್ಷ ಭೇದ ಬದಿಗೊತ್ತಿ ಜನತೆಯ ಆದರಾಭಿಮಾನಕ್ಕೆ ಪಾತ್ರರಾದವರು.ಅಂತಲೇ ಮಾಸ್ಕೋದಲ್ಲಿ ಸಾಠೆ ಪ್ರತಿಮೆಯ ಅನಾವರಣಕ್ಕೆ ಸ್ವತಃ ಫಡ್ನವೀಸ್ ಅಲ್ಲಿಗೆ ಹೋಗಿದ್ದರು.

ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಗೊತ್ತಿರುವ ಅನೇಕರಿಗೆ ಅಣ್ಣಾಭಾವು ಸಾಠೆ ಹೆಸರು ಗೊತ್ತಿಲ್ಲ.ಮಹಾರಾಷ್ಟ್ರದ ಮಣ್ಣಿನಲ್ಲೇ ಅದೇ ಅಸ್ಪಶ್ಯ ಸಮುದಾಯದಲ್ಲಿ ಜನಿಸಿದ ಅಣ್ಣಾಭಾವು ಸಾಠೆ ಬಾಬಾಸಾಹೇಬರ ಸಮಕಾಲೀನರು. ಮರಾಠಿ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರು ಮಾಡಿದವರು. ಭಾರತದ ಅನೇಕರಿಗೆ ಇವರ ಬಗ್ಗೆ ಗೊತ್ತಿರಲಿಕ್ಕಿಲ್ಲ.ಆದರೆ ರಶ್ಯದಲ್ಲಿ ಸಾಂಸ್ಕೃತಿಕ ಲೋಕದ ಎಲ್ಲರಿಗೂ ಇವರ ಬಗ್ಗೆ ಗೊತ್ತು. ಕಳೆದ ವಾರ ಮಾಸ್ಕೋದಲ್ಲಿ ಸಾಠೆ ಅವರ ಪ್ರತಿಮೆಯನ್ನು ಮಹಾರಾಷ್ಟ್ರದ ಉಪ ಮುಖ್ಯ ಮಂತ್ರಿ ದೇವೇಂದ್ರ ಫಡ್ನವೀಸ್ ಅನಾವರಣ ಗೊಳಿಸಿದರು.

ಮಹಾರಾಷ್ಟ್ರದಲ್ಲಿ ಮತ್ತು ರಶ್ಯದಲ್ಲಿ ಅಣ್ಣಾಭಾವು ಸಾಠೆ ಹೆಸರು ಸಾಂಸ್ಕೃತಿಕ ಲೋಕದ ಎಲ್ಲರಿಗೂ ಗೊತ್ತು.ಆದರೆ ಭಾರತದ ಇತರ ರಾಜ್ಯಗಳಲ್ಲಿ ಅಷ್ಟಾಗಿ ಗೊತ್ತಿಲ್ಲ.ಅವರು ನಡೆದು ಬಂದ ದಾರಿ ಬಾಬಾಸಾಹೇಬರಷ್ಟೇ ಸಂಘರ್ಷಮ ಯವಾದ ದಾರಿಯಾಗಿದೆ.

18 ಮತ್ತು 19ನೇ ಶತಮಾನಗಳಲ್ಲಿ ಮಹಾರಾಷ್ಟ್ರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಹೊಸ ಅರಿವು ಮೂಡತೊಡಗಿತು.ಛತ್ರಪತಿ ಶಿವಾಜಿ ನಂತರ ರಾಜ್ಯಾಧಿಕಾರ ವಶಪಡಿಸಿಕೊಂಡ ಪೇಶ್ವೆಗಳು ದಲಿತ ಮತ್ತು ಹಿಂದುಳಿದ ಸಮುದಾಯಗಳನ್ನು ಪಶುಪಕ್ಷಿಗಳಿಗಿಂತ ಕೀಳು ಸ್ಥಾನದಲ್ಲಿ ಇಟ್ಟಿದ್ದರು. ಮಹಿಳೆಯರು ಅಕ್ಷರ ಕಲಿಯಲೇಬಾರದು ಎಂಬ ಕಟ್ಟುಪಾಡು ವಿಧಿಸಿದ್ದರು. ಅಸ್ಪಶ್ಯರು ತಮ್ಮ ಓಣಿಯಿಂದ ಊರಿನಲ್ಲಿ ಬರಬೇಕಾದರೆ, ಅವರ ಹೆಜ್ಜೆ ಮೂಡಬಾರದೆಂದು ಕಾಲಿಗೆ ಕಸಬರಿಗೆ ಕಟ್ಟಿಕೊಂಡು ಬರಬೇಕಾಗುತ್ತಿತ್ತು. ಅವರ ಉಗುಳು ನೆಲದ ಮೇಲೆ ಬೀಳಬಾರದೆಂದು ಕೊರಳಿಗೆ ಗಡಿಗೆ ಕಟ್ಟಿಕೊಂಡು ಬರಬೇಕಿತ್ತು. ಮನುಸ್ಮತಿಯನ್ನೇ ಸಂವಿಧಾನ ಮಾಡಿಕೊಂಡ ಈ ಪೇಶ್ವೆಗಳಿಂದ ಮಹಾರಾಷ್ಟ್ರದ ದಲಿತ ಸಮುದಾಯ ನಲುಗಿ ಹೋಗಿತ್ತು. ಇದರಿಂದ ತಮಗೆ ಬಿಡುಗಡೆ ಇಲ್ಲವೆಂದು ಭಾವಿಸಿ ಈ ಜನ ಗುಲಾಮರಂತೆ ಇದ್ದರು.

ಭೀಕರ ಜಾತಿ ವ್ಯವಸ್ಥೆಯ ಈ ಕತ್ತಲು ಆವರಿಸಿದಾಗ ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ ಬೆಳಕಿನ ದೀವಟಿಗೆಯಾಗಿ ಬಂದರು. ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸಲು, ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸಲು ನಾನಾ ಚಿತ್ರಹಿಂಸೆ ಅನುಭವಿಸಿದರು. ಇದೇ ಪರಂಪರೆಯಲ್ಲಿ ಬಂದ ಕೊಲ್ಲಾಪುರದ ಶಾಹು ಮಹಾರಾಜರು, ಆಗರಕರ್ ಮತ್ತು ಅಂಬೇಡ್ಕರ್ ಈ ಬೆಳಕಿನ ಜ್ಯೋತಿಯನ್ನು ಕೈಯಲ್ಲಿ ಹಿಡಿದು ಮುನ್ನಡೆಸಿದರು. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಮತ್ತೆ ದೇಶದ ಮೇಲೆ ಹೇರಲು ಹಿಂದುತ್ವದ ಹೆಸರಿನಲ್ಲಿ ಹುನ್ನಾರ ನಡೆದಿರುವ ಈ ದಿನಗಳಲ್ಲಿ ಈ ಮಹಾನ್ ಚೇತನಗಳು ಇಂದಿಗೂ ಸಮಾನತೆಗಾಗಿ ನಡೆದ ಹೋರಾಟದ ಅಂತರ್ಜಲವಾಗಿ ಮುನ್ನಡೆಸಿವೆ.

ಆದರೆ ಎಲೆಮರೆಕಾಯಿಯಂತೆ ಉಳಿದು ನೊಂದವರ ಹೋರಾಟಕ್ಕೆ ತಮ್ಮ ಕೊಡುಗೆಯನ್ನು ನೀಡಿದ ಇನ್ನೂ ಅನೇಕ ಚೇತನಗಳ ಹೆಸರು ಮಹಾರಾಷ್ಟ್ರದ ಆಚೆಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇಂತಹ ತೆರೆಮರೆಯ ಚೇತನಗಳಲ್ಲಿ ಅಣ್ಣಾಭಾವು ಸಾಠೆ ಕೂಡ ಒಬ್ಬರು. ಬದುಕಿದ್ದಾಗ, ಮಹಾರಾಷ್ಟ್ರದಲ್ಲಿ ಮನೆಮಾತಾಗಿದ್ದ ಲೋಕಶಾಹಿರ (ಜನಕವಿ) ಅಣ್ಣಾಭಾವು ಸಾಠೆ ಅವರನ್ನು ಮನುವಾದಿಗಳು ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಿದೆ. 1920ರ ಆಗಸ್ಟ್ 1ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಾಟೆಗಾಂವ್ ಎಂಬ ಹಳ್ಳಿಯಲ್ಲಿ ಅಣ್ಣಾಭಾವು ಜನ್ಮತಾಳಿದರು. ಹಿಂದುಳಿದ ದಲಿತ ಮಾತಂಗ ಸಮುದಾಯದಲ್ಲಿ ಜನಿಸಿದ ಸಾಠೆ ಅವರು ಬೆಳೆದು ನಿಂತ ಎತ್ತರವನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅವರು ಜನಿಸಿದ ಸಮುದಾಯವನ್ನು ಕರ್ನಾಟಕದಲ್ಲಿ ಆದಿ ಕರ್ನಾಟಕ, ಮಾದಿಗ ಸಮುದಾಯವೆಂದು ಗುರುತಿಸಲಾಗುತ್ತದೆ.

ಕಡುಬಡತನದಿಂದ ಕೂಡಿದ ಅಸ್ಪಶ್ಯ ಸಮುದಾಯದಲ್ಲಿ ಜನಿಸಿದ ಅಣ್ಣಾಭಾವು ಸಾಠೆ ಅವರಿಗೆ ಔಪಚಾರಿಕ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಹೊಟ್ಟೆಪಾಡಿಗಾಗಿ ತಮ್ಮ ಊರಿನಿಂದ ಮುಂಬೈಗೆ ಬಂದು ಜವಳಿ ಗಿರಣಿಗಳಲ್ಲಿ ಅವರು ಕೆಲಸಕ್ಕೆ ಸೇರಿಕೊಂಡರು. ಆಗ ಅಲ್ಲಿ ನಡೆಯುತ್ತಿದ್ದ ಕಾರ್ಮಿಕ ಹೋರಾಟ ಅವರ ಮೇಲೆ ಅಪಾರ ಪ್ರಭಾವ ಬೀರಿತು. ಅಣ್ಣಾಭಾವು ಸಾಠೆ ಅವರ ಬದುಕು ಒಂದು ರೀತಿಯಲ್ಲಿ ರಶ್ಯದ ಮಾಕ್ಸಿಂ ಗಾರ್ಕಿ ಅವರಂತೆ ಇದೆ. ಗಾರ್ಕಿ ಕೂಡ ಕಡುಬಡತನದಲ್ಲಿ ಬೆಳೆದು ಲೆನಿನ್ ನಾಯಕತ್ವದಲ್ಲಿ ನಡೆದ ಸೋವಿಯತ್ ಸಮಾಜವಾದಿ ಕ್ರಾಂತಿಯ ಜನಕವಿಯಾಗಿ ಹೊರ ಹೊಮ್ಮಿದರು. ಲೆನಿನ್ ಮತ್ತು ಸ್ಟಾಲಿನ್‌ಗೆ ಅವರು ಆತ್ಮೀಯ ಸ್ನೇಹಿತರಾಗಿದ್ದರು. ಕ್ರಾಂತಿಕಾರಿ ಹೋರಾಟಗಳೇ ನನ್ನ ವಿಶ್ವವಿದ್ಯಾನಿಲಯಗಳು ಎಂದು ಗಾರ್ಕಿ ಹೇಳು ತ್ತಿದ್ದರು. ಅದೇ ರೀತಿ ಅಣ್ಣಾಭಾವು ಸಾಠೆ ಮುಂಬೈಯ ಕಾರ್ಮಿಕ ಚಳವಳಿಗಳನ್ನೇ ವಿಶ್ವವಿದ್ಯಾನಿಲಯಗಳನ್ನಾಗಿ ಮಾಡಿಕೊಂಡು ವಾಸ್ತವ ಬದುಕಿನ ಜ್ವಲಂತ ಅನುಭವಗಳನ್ನು ಎರಕ ಹೊಯ್ದು ಸಾಹಿತ್ಯ ರಚನೆ ಮಾಡಿದರು. ಆ ಕಾಲದ ಕಮ್ಯುನಿಸ್ಟ್ ನಾಯಕರಾಗಿದ್ದ ಎಸ್.ಎ.ಡಾಂಗೆ, ಬಿ.ಟಿ.ರಣದಿವೆ ಮತ್ತು ನಾನಾ ಪಾಟೀಲರ ಒಡನಾಟ ಹೊಂದಿದ್ದ ಅಣ್ಣಾಭಾವು ಸಾಠೆ ಕಾರ್ಮಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಹೋರಾಟದ ಕುರಿತು ಅಸಮಾನತೆ ವಿರುದ್ಧ ಅವರು ರಚಿಸುತ್ತಿದ್ದ ಮರಾಠಿ ಲಾವಣಿಗಳು ಅತ್ಯಂತ ಜನಪ್ರಿಯವಾಗಿದ್ದವು. ಮುಷ್ಕರದ ಸಂದರ್ಭಗಳಲ್ಲಿ ನಡೆಯುವ ಸಭೆಗಳಲ್ಲಿ ಕ್ರಾಂತಿಕಾರಿ ಗಾಯಕ ಅಮರ ಶೇಖ್ ಅವರು ಅಣ್ಣಾಭಾವು ಸಾಠೆ ಅವರ ಲಾವಣಿಗಳನ್ನು ಹಾಡುತ್ತಿದ್ದರು. ಈಗ ಗದ್ದರ್ ಹಾಡುಗಳನ್ನು ಕೇಳಲು ಆಂಧ್ರದಲ್ಲಿ ಜನ ಸೇರುವಂತೆ ಹಾಗೂ ಮಹಾರಾಷ್ಟ್ರದಲ್ಲಿ ಕಬೀರ್ ಕಲಾ ಮಂಚ್ ಕಟ್ಟಿಕೊಂಡು ಈಗಲೂ ಹೋರಾಟದ ಹಾಡುಗಳನ್ನು ಹಾಡುತ್ತಿರುವ ಸಚಿನ್ ಮಾಲಿ ಮತ್ತು ಶೀತಲ್ ಸಾಠೆ ಅವರ ಹಾಡುಗಳಂತೆ, ಕಳೆದ ಶತಮಾನದಲ್ಲಿ ಅಣ್ಣಾಭಾವು ಸಾಠೆ ಅವರ ಹಾಡುಗಳು ಮನೆಮಾತಾಗಿದ್ದವು.

ಹಳ್ಳಿಗಾಡಿನ ಅಸ್ಪಶ್ಯ ಸಮಾಜದಿಂದ ಬಂದು ಮುಂಬೈಯ ದುಡಿಯುವ ವರ್ಗದ ಹೋರಾಟದ ಸಮುದ್ರಕ್ಕೆ ಧುಮ್ಮಿಕ್ಕಿದ ಕಾಮ್ರೇಡ್ ಅಣ್ಣಾಭಾವು ಸಾಠೆ ಜನತೆಯ ನೋವು,ಸಂಕಟಗಳಿಗೆ ಕಲಾತ್ಮಕ ರೂಪ ನೀಡಿದರು. ಆ ದಿನಗಳಲ್ಲಿ ನಡೆಯುತ್ತಿದ್ದ ಬಹಿರಂಗ ಸಭೆಗಳಲ್ಲಿ ಡಾಂಗೆ ಅವರ ಭಾಷಣಕ್ಕೆ ಮುಂಚೆ ಅಣ್ಣಾಭಾವು ಸಾಠೆ ಅವರ ಲಾವಣಿ ಹಾಡುಗಳು ಕಡ್ಡಾಯವಾಗಿ ಇರುತ್ತಿದ್ದವು. ಈ ಹಾಡುಗಳು ಎಷ್ಟು ಪರಿಣಾಮಕಾರಿ ಆಗಿದ್ದವೆಂದರೆ, ಮಹಾರಾಷ್ಟ್ರದ ಅಂದಿನ ಮೊರಾರ್ಜಿ ದೇಸಾಯಿ ಸರಕಾರ ಇವರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿತು. ಆಗ ಮಹಾರಾಷ್ಟ್ರದ ಜನಪ್ರಿಯ ಜಾನಪದ ಪ್ರಕಾರವಾಗಿದ್ದ ತಮಾಷಾ ಬಳಸಿಕೊಂಡ ಅಣ್ಣಾಭಾವು ಸಾಠೆ ಮುಂಚೆ ಉಳ್ಳವರ ಮನರಂಜನೆಗೆ ಮಾತ್ರ ಸೀಮಿತವಾಗಿದ್ದ ಈ ಕಲಾ ಪ್ರಕಾರವನ್ನು ಜನಪರವಾದ ಹೋರಾಟದ ದನಿಯಾಗಿ ಬದಲಿಸಿದರು. ಅಣ್ಣಾಭಾವು ಸಾಠೆ ಕಂಚಿನ ಕಂಠದಿಂದ ಹಾಡುತ್ತಾರೆಂದರೆ, ಹಾಡನ್ನು ಕೇಳಲು ಜನರು ಎತ್ತಿನ ಬಂಡಿ ಕಟ್ಟಿಕೊಂಡು ಬರುತ್ತಿದ್ದರು.

ಭಾರತದ ಅವನತಿಗೆ ಕಾರಣವಾಗಿರುವ ಬ್ರಾಹ್ಮಣವಾದ ಮತ್ತು ಬಂಡವಾಳವಾದ ಎಂಬ ಎರಡು ಶತ್ರುಗಳನ್ನು ಅಣ್ಣಾಭಾವು ಸಾಠೆ ಗುರುತಿಸಿದರು. ಇವೆರಡು ನಾಶವಾಗದೇ ಈ ದೇಶ ಮುನ್ನಡೆಯುವುದಿಲ್ಲ ಎಂಬುದು ಅವರ ಸ್ಪಷ್ಟ ನಂಬಿಕೆಯಾಗಿತ್ತು. ಮಹಾರಾಷ್ಟ್ರದ ರೈತ ಮತ್ತು ಕಾರ್ಮಿಕ ವರ್ಗದ ಹೃದಯದಲ್ಲಿ ಸ್ಥಾನ ಪಡೆದಿದ್ದ ಸಾಠೆ ಜನ ಚಳವಳಿ ಮತ್ತು ಚಿಂತನೆಗಳಿಗೆ ಸೇತುವೆಯಾಗಿ ನಿಂತರು. ಶಾಲೆ, ಕಾಲೇಜು ಮೆಟ್ಟಿಲು ಹತ್ತದಿದ್ದರೂ 35ಕ್ಕೂ ಹೆಚ್ಚು ಕಾದಂಬರಿ, 15 ಕಥಾ ಸಂಕಲನ ಮತ್ತು ನೂರಾರು ಲಾವಣಿಗಳನ್ನು ಸಾಠೆ ರಚಿಸಿದರು. ಅವರ ಸಾಹಿತ್ಯ ಕೃತಿಗಳು ಭಾರತೀಯ ಭಾಷೆಗಳಿಗೆ ಮಾತ್ರವಲ್ಲ ರಶ್ಯನ್, ಇಟಲಿ, ಫ್ರೆಂಚ್ ಮುಂತಾದ 27 ಭಾಷೆಗಳಿಗೆ ಅನುವಾದಗೊಂಡಿವೆ. ಸಾಠೆ ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲ. ಕಥೆ, ಕಾದಂಬರಿ ಮಾತ್ರವಲ್ಲ ಒಂದು ನಾಟಕ, 12 ಚಿತ್ರಕತೆಗಳನ್ನು ರಚಿಸಿದರು. ಇವೆಲ್ಲದಕ್ಕೂ ಮಿಗಿಲಾಗಿ, ಮರಾಠಿಯ ಪೋವಡಾ ಶೈಲಿಯಲ್ಲಿ ರಚಿಸಿದ ಲಾವಣಿಗಳು ಇಂದಿಗೂ ಜನಪ್ರಿಯವಾಗಿವೆ.

ಆ ಶತಮಾನದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದ ಎಲ್ಲಾ ಲೇಖಕರ ಮೇಲೆ ಸಾಮ್ಯವಾದಿ ಸಿದ್ಧಾಂತ ಪ್ರಭಾವ ಬೀರಿತ್ತು. 1917ರ ಸೋವಿಯತ್ ಕ್ರಾಂತಿ ಇಡೀ ಜಗತ್ತಿಗೆ ಹೊಸ ದಾರಿಯನ್ನು ತೋರಿಸಿತು. ಅಣ್ಣಾಭಾವು ಸಾಠೆ ಅವರು ಕೂಡ ಆ ಪ್ರಭಾವದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಅವರು ಕೂಡ ಕಾರ್ಮಿಕ ಹೋರಾಟದ ಬಗ್ಗೆ ಹಲವಾರು ಕೃತಿಗಳನ್ನು ರಚಿಸಿದರು. ಸಮತೆಯ ಹೋರಾಟಕ್ಕೆ ಇವರ ಕೊಡುಗೆ ಗಮನಿಸಿದ ಅಂದಿನ ಸೋವಿಯತ್ ಸರಕಾರ ತಮ್ಮ ದೇಶಕ್ಕೆ ಭೇಟಿ ನೀಡಲು ಆಹ್ವಾನಿಸಿತು. ಸಾಠೆ ರಶ್ಯಕ್ಕೂ ಹೋಗಿ ಬಂದರು. ಅಲ್ಲಿಂದ ಬಂದ ನಂತರ ರಶ್ಯನ್ ಪ್ರವಾಸ ಕಥನ ರಚಿಸಿದರು.

ಹೀಗೆ ಕಮ್ಯುನಿಸ್ಟ್ ಸಿದ್ಧಾಂತದಿಂದ ಪ್ರಭಾವಿತರಾಗಿ ಕೆಂಬಾವುಟ ಹಿಡಿದು ಹೊರಟಿದ್ದ ಅಣ್ಣಾಭಾವು ಸಾಠೆ ಅವರಿಗೆ ಆ ಕಾಲಘಟ್ಟದಲ್ಲಿ ಈ ಜಗತ್ತು ಕಂಡ ಶ್ರೇಷ್ಠ ವಿದ್ವಾಂಸ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಮುಖಾಮುಖಿಯಾದರು. ಕಾರ್ಮಿಕ ವರ್ಗ ಹೋರಾಟದಿಂದ ಮಾತ್ರ ಶೋಷಣೆ ರಹಿತ ಸಮಾಜ ಸಾಧ್ಯವೆಂದು ನಂಬಿದ್ದ ಅಣ್ಣಾಭಾವು ಸಾಠೆ ಅಂಬೇಡ್ಕರ್ ಅವರ ಬರಹ ಮತ್ತು ಹೋರಾಟಗಳು ಕಣ್ಣಿಗೆ ಬಿದ್ದಾಗ, ಅವುಗಳಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಈ ದೇಶದಲ್ಲಿ ದುಡಿಯುವ ವರ್ಗದ ಏಕತೆಗೆ ಶ್ರೇಣೀಕೃತ ಜಾತಿ ವ್ಯವಸ್ಥೆ ಪ್ರಧಾನ ಅಡ್ಡಿಯಾಗಿದೆ. ಈ ಜಾತಿ ವ್ಯವಸ್ಥೆ ತೊಲಗಿಸುವವರೆಗೆ ಬದಲಾವಣೆ ಸಾಧ್ಯವಿಲ್ಲ ಎಂಬ ಅಂಬೇಡ್ಕರ್ ಮಾತು ಸಾಠೆ ಅವರಿಗೆ ಹಿಡಿಸಿತು. ಆಗಿನಿಂದ ಅವರು ಮಾರ್ಕ್ಸ್‌ವಾದದ ಜೊತೆಗೆ ಅಂಬೇಡ್ಕರ್‌ವಾದದ ಬಾವುಟ ಹಿಡಿದು ಮುನ್ನಡೆದರು.

ಸಾವಿರಾರು ವರ್ಷಗಳಿಂದ ಮೇಲ್ಜಾತಿ, ಮೇಲ್ವರ್ಗಗಳ ಸ್ವತ್ತು ಆಗಿದ್ದ ಸಾಹಿತ್ಯವನ್ನು ಅಣ್ಣಾಭಾವು ಸಾಠೆ ಅಸ್ಪಶ್ಯ ದಲಿತರ ಓಣಿಗೆ ಎಳೆದು ತಂದರು. ದಲಿತರು ಮತ್ತು ಕಾರ್ಮಿಕರು ಒಂದಾದರೆ ಮಾತ್ರ ಈ ದೇಶದ ಶೋಷಕ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವೆಂದು ಮನಗಂಡು ಮುಂದೆ ಅಂತಹ ಕತೆ, ಕಾದಂಬರಿಗಳನ್ನು ರಚಿಸಿದರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡಮಿ 1961ರಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಇಂತಹ ನೂರಾರು ಪ್ರಶಸ್ತಿಗಳನ್ನು ಪಡೆದರೂ ಕೂಡ ಅಣ್ಣಾಭಾವು ಸಾಠೆ ಹೋರಾಟದಿಂದ ವಿಮುಖರಾಗಲಿಲ್ಲ.

ಅಣ್ಣಾಭಾವು ಸಾಠೆ ಅವರ ಸಾಹಿತ್ಯ ಮಹಾರಾಷ್ಟ್ರದಲ್ಲಿ ಹೊಸ ಸಂಚಲನ ಉಂಟು ಮಾಡಿತು. ದಲಿತ ಸಾಹಿತ್ಯ ಪ್ರಕಾರ ಎಂಬ ಹೊಸ ಟ್ರೆಂಡ್ ಅಲ್ಲಿ ಹುಟ್ಟಿಕೊಂಡಿತು. ಮುಂದೆ ಈ ಪ್ರಕಾರದಲ್ಲಿ ನೂರಾರು ಲೇಖಕರು ತಮ್ಮ ಆತ್ಮಕತೆಗಳನ್ನು, ದಲಿತ ಬದುಕಿನ ಸಂಕಟಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದರು. ನಾಮದೇವ ಡಸಾಳ, ದಯಾ ಪವಾರ, ಶರಣಕುಮಾರ ಲಿಂಬಾಳೆ, ಲಕ್ಷ್ಮಣ ಗಾಯಕವಾಡ, ಸಂಭಾಜಿ ಭಗತ್ ಮುಂತಾದವರ ಮೇಲೂ ಅಣ್ಣಾ ಭಾವು ಸಾಠೆಯವರ ಪ್ರಭಾವ ದಟ್ಟವಾಗಿದೆ. ಇಂದಿಗೂ ಮಹಾರಾಷ್ಟ್ರದಲ್ಲಿ ಮನೆಮಾತಾಗಿರುವ ಕಬೀರ ಕಲಾ ಮಂಚ್‌ಗೆ ಅಣ್ಣಾಭಾವು ಸಾಠೆಯವರ ಸಾಹಿತ್ಯವೇ ಸ್ಫೂರ್ತಿಯ ಸೆಲೆಯಾಗಿದೆ.

1958ರಲ್ಲಿ ಮುಂಬೈಯಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅಣ್ಣಾ ಭಾವು ಸಾಠೆ, ವೈದಿಕರ ಗೊಡ್ಡು ಪುರಾಣ ಹೇಳುವಂತೆ ಈ ಭೂಮಿ ಆದಿಶೇಷನ ಮೇಲೆ ನಿಂತಿಲ್ಲ. ಬದಲಾಗಿ ಅದು ದಲಿತ, ದಮನಿತರ ಹೆಗಲ ಮೇಲೆ ನಿಂತಿದೆ ಎಂದು ಘೋಷಿಸಿದರು. ಅವರ ಈ ಮಾತಿನ ಹಿಂದೆ ಬುದ್ಧ್ದ, ಬಸವ, ಅಂಬೇಡ್ಕರ್, ಮಾರ್ಕ್ಸ್, ಎಂಗೆಲ್ಸ್, ಲೆನಿನ್ ಮತ್ತು ಫುಲೆ, ಪೆರಿಯಾರ್‌ರ ಪರಂಪರೆಯ ಸ್ಫೂರ್ತಿ ಇದೆ.

1920ರಲ್ಲಿ ಜನಿಸಿ 1969ರ ಜುಲೈ 18ರವರೆಗೆ ಕೇವಲ 49 ವರ್ಷ ಮಾತ್ರ ಬದುಕಿದ್ದ ಅಣ್ಣಾಭಾವು ಸಾಠೆ ರಚಿಸಿದ ತತ್ವ, 1959ರಲ್ಲಿ ಅವರು ಬರೆದ ಫಕೀರಾ ಕಾದಂಬರಿಗೆ ಮಹಾರಾಷ್ಟ್ರ ಸರಕಾರದ ಪುರಸ್ಕಾರ ಪ್ರಾಪ್ತಿ ಆಯಿತು. ಮಹಾರಾಷ್ಟ್ರದಲ್ಲಿ ಇವರ ಸಾಹಿತ್ಯ ಕುರಿತಂತೆ ಏಳು ಸಮ್ಮೇಳನಗಳು ಈಗಾಗಲೇ ನಡೆದಿವೆ. ಈಗ ಆ ಗಡಿಯನ್ನು ದಾಟಿ ಕರ್ನಾಟಕಕ್ಕೂ ಅವರ ಸಾಹಿತ್ಯಧಾರೆ ಹರಿದು ಬಂದಿದೆ.

ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬುಡಮೇಲು ಮಾಡಿ, ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶ ಮಾಡಿ ದೇಶವನ್ನು ಮತ್ತೆ ಮನುವಾದದ ಕರಾಳ ಲೋಕಕ್ಕೆ ಕೊಂಡೊಯ್ಯಲು, ಜನತಾಂತ್ರಿಕ ಭಾರತವನ್ನು ಫ್ಯಾಶಿಸ್ಟ್ ಹಿಂದೂರಾಷ್ಟ್ರವನ್ನಾಗಿ ಮಾಡಿಕೊಳ್ಳಲು ಸಂಘ ಪರಿವಾರ ಷಡ್ಯಂತ್ರ ರೂಪಿಸುವ ಈ ದಿನಗಳಲ್ಲಿ ಬುದ್ಧ, ಬಸವ, ಅಂಬೇಡ್ಕರರಂತೆ ಅಣ್ಣಾಭಾವು ಸಾಠೆ ಅವರು ಕೂಡ ಬೆಳಕಿನ ದೀಪವಾಗಿ ಈ ದೇಶದ ದಲಿತ, ದಮನಿತ ವರ್ಗಗಳನ್ನು, ಪ್ರಗತಿಶೀಲ ಚಿಂತಕ ಸಮುದಾಯವನ್ನು ಮುನ್ನಡೆಸುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ