ಹಸಿವಿನ ಬಿಕ್ಕಟ್ಟಿಗೆ ಪರಿಹಾರ ಮರೀಚಿಕೆಯೇ?
ಪ್ರತೀ ವರ್ಷ ಜಗತ್ತಿನಲ್ಲಿ ಸುಮಾರು 9 ದಶಲಕ್ಷ ಜನರು ಹಸಿವು ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಅವುಗಳಲ್ಲಿ ಏಡ್ಸ್, ಮಲೇರಿಯಾ ಮತ್ತು ಕ್ಷಯರೋಗಗಳು ಮುಖ್ಯವಾದವು. ಪ್ರತೀ 10 ಸೆಕೆಂಡುಗಳಿಗೆ ಒಂದು ಮಗು ಹಸಿವಿನಿಂದ ಸಾಯುತ್ತಿದೆ. ಪ್ರತೀ ವರ್ಷ 3.1 ದಶಲಕ್ಷ ಮಕ್ಕಳ ಸಾವಿಗೆ ಕುಪೋಷಣೆ ಮತ್ತು ಹಸಿವು ಕಾರಣವಾಗಿದೆ. ಇದು 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಂಭವಿಸುವ ಎಲ್ಲಾ ಸಾವುಗಳಲ್ಲಿ ಸುಮಾರು ಅರ್ಧದಷ್ಟು.
2021ರ ಜಾಗತಿಕ ಹಸಿವು ಸೂಚ್ಯಂಕದ ವರದಿಯಂತೆ ಹವಾಮಾನ ಬಿಕ್ಕಟ್ಟು, ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಹೆಚ್ಚುತ್ತಿರುವ ದೀರ್ಘಕಾಲದ ಸಂಘರ್ಷ/ಯುದ್ಧಗಳ ವಿನಾಶಕಾರಿ ವಿದ್ಯಮಾನಗಳಿಂದ ಹಸಿವಿನ ಪರಿಸ್ಥಿತಿ ಉಲ್ಬಣಿಸುತ್ತಿದೆ. ಇದು ಪ್ರತೀ ವರ್ಷವೂ ತೀವ್ರವಾಗಿ ಹೆಚ್ಚಾಗುತ್ತಲೇ ಇದೆ. 2030ರ ವೇಳೆಗೆ ಜಗತ್ತಿನಾದ್ಯಂತ ‘ಶೂನ್ಯ ಹಸಿವು’ ಸಾಧಿಸುವತ್ತ ನಡೆಸುತ್ತಿರುವ ಪ್ರಗತಿ ಕುಂಟುತ್ತಾ ಸಾಗಿದ್ದು, ಕೆಲವು ದೇಶಗಳಲ್ಲಿ ಅದು ಹಿಮ್ಮುಖವಾಗಿ ಸಾಗುತ್ತಿದೆ.
2006ರಲ್ಲಿ ರಚಿತವಾದ ‘ಗ್ಲೋಬಲ್ ಹಂಗರ್ ಇಂಡೆಕ್ಸ್’ (ಜಿಎಚ್‌ಐ ಅನ್ನು ಆರಂಭದಲ್ಲಿ ಯು.ಎಸ್. ಮೂಲದ ಅಂತರ್‌ರಾಷ್ಟ್ರೀಯ ‘ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್’ (ಐ.ಎಫ್.ಪಿ.ಆರ್.ಐ.) ಮತ್ತು ಜರ್ಮನಿ ಮೂಲದ ‘ವೆಲ್ತ್ ಹಂಗರ್ ಲೈಫ್’ ಪ್ರಕಟಿಸಿತು. 2007ರಲ್ಲಿ ಐರಿಷ್ ಎನ್‌ಜಿಒ ಸಹ ಇದಕ್ಕೆ ಕೈಜೋಡಿಸಿದೆ. 2021ರಲ್ಲಿ ಜಾಗತಿಕ ಹಸಿವು ಸೂಚ್ಯಂಕ ವರದಿ, ಹಸಿವಿನ ಹಲವಾರು ಅಂಶಗಳ ಆಧಾರದ ಮೇಲೆ ಸಂಖ್ಯಾತ್ಮಕ ಅಂಕಗಳನ್ನು ನಿಗದಿಪಡಿಸುವ ಮೂಲಕ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಅಳತೆಯನ್ನು ಪ್ರಸ್ತುತಪಡಿಸತೊಡಗಿತು. ನಂತರ ಇದು ಜಿಎಚ್‌ಐ ಅಂಶಗಳ ಆಧಾರದ ಮೂಲಕ ದೇಶಗಳನ್ನು ಶ್ರೇಯಾಂಕಿಸುತ್ತದೆ.
ರಾಜಕೀಯ, ಮಾನವೀಯ ನೆರವು ಮತ್ತು ಸಮಾಜ ವಿಜ್ಞಾನದಲ್ಲಿ ‘ಹಸಿವು’ ಎಂದರೆ ಒಬ್ಬ ವ್ಯಕ್ತಿಯು ಸುಸ್ಥಿರ ಅವಧಿಗೆ ಸಾಕಷ್ಟು ಪೌಷ್ಟಿಕಾಂಶದ ಆಹಾರವನ್ನು ಪಡೆಯದ ಅಥವಾ ಅದನ್ನು ಕೊಂಡುಕೊಳ್ಳುವ ಆರ್ಥಿಕ ಸಾಮರ್ಥ್ಯವನ್ನು ಹೊಂದಿಲ್ಲದ ಸ್ಥಿತಿ ಎಂದು ವ್ಯಾಖ್ಯಾನಿಸಲಾಗಿದೆ. ಜನರಿಗೆ ಸಾಕಷ್ಟು ಆಹಾರ ದೊರಕದೆ ಹಸಿವು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುವುದನ್ನು ಕ್ಷಾಮ ಎಂದು ಕರೆಯಲಾಗುತ್ತದೆ.
ಇತಿಹಾಸದುದ್ದಕ್ಕೂ ವಿಶ್ವದಲ್ಲಿ ಹೆಚ್ಚು ಜನಸಂಖ್ಯೆ ಇರುವ ಕೆಲವು ಪ್ರದೇಶಗಳು ಆಗಾಗ ಹಸಿವಿನ ಅವಧಿಗಳನ್ನು ಅನುಭವಿಸಿವೆ. ಅದು ಕೆಲವೊಮ್ಮೆ ದಶಕಗಳಷ್ಟು ಕಾಲ ಸುದೀರ್ಘವಾಗಿದ್ದವು. ಅನೇಕ ಸಲ ಯುದ್ಧ, ತೀವ್ರವಾದ ಸೋಂಕು ರೋಗಗಳು ಮತ್ತು ಪ್ರತಿಕೂಲ ಹವಾಮಾನದಿಂದ ಆಹಾರ ಪೂರೈಕೆಗೆ ಅಡಚಣೆಗಳು ಉಂಟಾಗಿ ಹಸಿವು ಕಾಣಿಸಿಕೊಳ್ಳುತ್ತದೆ. ಎರಡನೇ ವಿಶ್ವ ಮಹಾಯುದ್ಧ ಮುಗಿದ ನಂತರದ ದಶಕಗಳಲ್ಲಿ ತಾಂತ್ರಿಕ ಪ್ರಗತಿ ಮತ್ತು ವರ್ಧಿಕ ರಾಜಕೀಯ ಸಹಕಾರವು ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ ಎಂದು ಸೂಚಿಸಿತು.
ಪ್ರಗತಿ ಅಸಮವಾಗಿದ್ದರೂ 2014ರ ಹೊತ್ತಿಗೆ ವಿಶ್ವದ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ತೀವ್ರ ಹಸಿವಿನ ಬೆದರಿಕೆಯು ಕಡಿಮೆಯಾಗಿತ್ತು. ಆದರೆ 2021ರ ‘ದಿ ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಆ್ಯಂಡ್ ನ್ಯೂಟ್ರಿಷನ್ ಇನ್ ದಿ ವರ್ಲ್ಡ್’ ವರದಿಯ ಪ್ರಕಾರ, ದೀರ್ಘಕಾಲದಿಂದ ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆ 2014 ಮತ್ತು 2019ರ ನಡುವೆ ಹೆಚ್ಚಾಗತೊಡಗಿತು. 2020ಕ್ಕೆ ಇದು ಇನ್ನೂ ಹೆಚ್ಚಾಗಿರುವುದು ಕಂಡುಬಂದಿದೆ. ಇದರ ಪರಿಣಾಮ ಜಗತ್ತಿನಾದ್ಯಂತ 768 ದಶಲಕ್ಷ ಜನರು ಅಪೌಷ್ಟಿಕತೆಯಿಂದ ಬಳಲತೊಡಗಿದರು.
ಜಗತ್ತಿನಲ್ಲಿ ನಡೆಯುವ ಸಂಘರ್ಷ/ಯುದ್ಧಗಳು, ಹಸಿವಿನ ನಡುವಿನ ಸಂಬಂಧಗಳ ಮೇಲೆ ಆಧಾರ ಪಟ್ಟಿದೆ. ಶಾಂತಿ ಮತ್ತು ಆಹಾರ ಭದ್ರತೆಯನ್ನು ಗಟ್ಟಿಗೊಳಿಸಲು ಈ ಸಂಪರ್ಕಗಳನ್ನು ಹೇಗೆ ಮುರಿಯಬೇಕು ಎಂಬುದರ ಬಗ್ಗೆ ಕೆಲವು ಶಿಫಾರಸುಗಳನ್ನು ಮಾಡಲಾಗಿದೆ. ಜಾಗತಿಕ ಸೂಚ್ಯಂಕವು 100 ಪಾಯಿಂಟ್ ಪಟ್ಟಿಯನ್ನು ಬಳಸುತ್ತದೆ. ಹೆಚ್ಚಿನ ಸಂಖ್ಯೆಗಳು ಹೆಚ್ಚು ಹಸಿವಿನ ಮಟ್ಟವನ್ನು ಸೂಚಿಸುತ್ತದೆ. ಇದನ್ನು ಕಡಿಮೆ, ಮಧ್ಯಮ, ಗಂಭೀರ, ಆತಂಕಕಾರಿ ಮತ್ತು ಅತ್ಯಂಕ ಆತಂಕಕಾರಿ ಎಂದು ಐದು ಹಂತಗಳಲ್ಲಿ ಗುರುತಿಸಲಾಗಿದೆ.
ಈ ಹಂತಗಳನ್ನು ನಾಲ್ಕು ಘಟಕ ಸೂಚಕಗಳಲ್ಲಿ ಸಂಯೋಜಿಸಲಾಗಿದೆ. 1.ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣ. 2. ಅಪೌಷ್ಟಿಕತೆಯಿಂದ ಬಳಲುತ್ತಿರುವ ಐದು ವರ್ಷದೊಳಗಿನ ಮಕ್ಕಳ ಪ್ರಮಾಣ, ಇದು ತೀವ್ರ ಅಪೌಷ್ಟಿಕತೆಯ ಸಂಕೇತವಾಗಿದೆ. 3.ಕುಂಠಿತ ಬೆಳವಣಿಗೆಯಿಂದ ಬಳಲುತ್ತಿರುವ ಐದು ವರ್ಷದೊಳಗಿನ ಮಕ್ಕಳ ಪ್ರಮಾಣ, ಇದೂ ಕೂಡ ದೀರ್ಘಕಾಲದ ಅಪೌಷ್ಟಿಕತೆಯ ಸಂಕೇತವಾಗಿದೆ. 4.ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ. ಮೌಲ್ಯಮಾಪನ ಮಾಡಲಾದ 135 ದೇಶಗಳ ಪೈಕಿ 19 ದೇಶಗಳಲ್ಲಿ ಲೆಕ್ಕಹಾಕಲು ಸಾಕಷ್ಟು ದತ್ತಾಂಶವನ್ನು ಸಂಗ್ರಹಿಸಲಾಗಿಲ್ಲ. ಉಳಿದಂತೆ ಇತರ ಪ್ರಕಟಿತ ದತ್ತಾಂಶಗಳ ಆಧಾರದ ಮೇಲೆ 12 ದೇಶಗಳಿಗೆ ತಾತ್ಕಾಲಿಕ ಪದನಾಮಗಳನ್ನು ನಿಯೋಜಿಸಲಾಯಿತು. ಏಳು ದೇಶಗಳಲ್ಲಿ ಅಂಕಗಳನ್ನು ಲೆಕ್ಕಹಾಕಲು ಅಥವಾ ತಾತ್ಕಾಲಿಕ ವರ್ಗಗಳನ್ನು ನಿಯೋಜಿಸಲು ದತ್ತಾಂಶ ಸಾಕಾಗಲಿಲ್ಲ.
ಆಫ್ರಿಕಾದಲ್ಲಿನ ಬಡತನ, ಆಫ್ರಿಕಾದ ಕೆಲವು ಜನರ ಮೂಲಭೂತ ಮಾನವ ಅಗತ್ಯಗಳನ್ನು ಪೂರೈಸಲು ಅವಕಾಶದ ಕೊರತೆ ಉಂಟಾಗಿದೆ ಎನ್ನಲಾಗಿದೆ. ಆಫ್ರಿಕಾದಲ್ಲಿರುವ ಹೇರಳ ನೈಸರ್ಗಿಕ ಸಂಪನ್ಮೂಲಗಳ (ವಿಶೇಷವಾಗಿ ಖನಿಜಗಳು) ಹೊರತಾಗಿಯೂ ಆಫ್ರಿಕನ್ ದೇಶಗಳು ಸಾಮಾನ್ಯವಾಗಿ ಸಣ್ಣ ಗಾತ್ರದ ಆರ್ಥಿಕ ಚಟುವಟಿಕೆಗಳನ್ನು ಅಳೆಯುವ ಯಾವುದೇ ಪಟ್ಟಿಯಲ್ಲಿ ಕೆಳಮಟ್ಟದಲ್ಲಿ ಉಳಿದುಕೊಂಡಿವೆ. ಉದಾಹರಣೆಗೆ, ತಲಾದಾಯ ಅಥವಾ ತಲಾದಾಯಕ್ಕೆ ಸಂಬಂಧಿಸಿದ ಜಿಡಿಪಿ.
2009ರಲ್ಲಿ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಡಿಮೆ ಮಾನವ ಅಭಿವೃದ್ಧಿ ಹೊಂದಿರುವ 24 ರಾಷ್ಟ್ರಗಳ ಪೈಕಿ 22 ರಾಷ್ಟ್ರಗಳು ಉಪ-ಸಹಾರಾ ಆಫ್ರಿಕಾದಲ್ಲಿದ್ದವು. 2006ರಲ್ಲಿ ವಿಶ್ವಸಂಸ್ಥೆಯ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿದ್ದ 50 ರಾಷ್ಟ್ರಗಳ ಪೈಕಿ 34 ದೇಶಗಳು ಆಫ್ರಿಕಾದಲ್ಲಿದ್ದವು. ಅನೇಕ ರಾಷ್ಟ್ರಗಳಲ್ಲಿ ತಲಾದಾಯವು ವರ್ಷಕ್ಕೆ 5,200 ಯು.ಎಸ್. ಡಾಲರ್‌ಗಳಿಗಿಂತ ಕಡಿಮೆ ಇದ್ದು, ಬಹುಪಾಲು ಜನರು ತೀರಾ ಕಡಿಮೆ ಆದಾಯದಲ್ಲಿ ಬದುಕು ನಡೆಸುತ್ತಿದ್ದಾರೆ. 2016ರ ಹೊತ್ತಿಗೆ ದ್ವೀಪ ರಾಷ್ಟ್ರವಾದ ಸೇಶೆಲ್ಸ್ ವರ್ಷಕ್ಕೆ ಯು.ಎಸ್. 10,000 ಡಾಲರ್‌ಗಿಂತ ಹೆಚ್ಚಿನ ಜಿಡಿಪಿಯನ್ನು ಹೊಂದಿರುವ ಏಕೈಕ ಆಫ್ರಿಕನ್ ದೇಶವಾಗಿದೆ.
ಆಫ್ರಿಕಾ ದೇಶಗಳ ಆದಾಯದ ಪಾಲು ಕಳೆದ ಶತಮಾನದಿಂದ ನಿರಂತರವಾಗಿ ಕುಸಿಯುತ್ತಿದೆ. 1820ರ ದಶಕದಲ್ಲಿ ಸರಾಸರಿ ಯುರೋಪಿಯನ್ ಕಾರ್ಮಿಕ, ಸರಾಸರಿ ಆಫ್ರಿಕಾ ಕಾರ್ಮಿಕನಿಗಿಂತ ಮೂರು ಪಟ್ಟು ಹೆಚ್ಚು ಸಂಪಾದಿಸುತ್ತಿದ್ದ. ಆದರೆ ಈಗ ಯುರೋಪಿಯನ್, ಸರಾಸರಿ ಆಫ್ರಿಕನ್‌ಗಿಂತ ಇಪ್ಪತ್ತು ಪಟ್ಟು ಹೆಚ್ಚು ಸಂಪಾದಿಸುತ್ತಿದ್ದಾನೆ. ವಿಶ್ವದಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದು ಏಶ್ಯ ದೇಶಗಳಲ್ಲಿ. ಆದರೆ 2015ರಿಂದ ಹಸಿವಿನ ಹಾಹಾಕಾರ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಲ್ಲಿ ಕಾಣಿಸಿಕೊಂಡಿತು. 2017ರ ಒಂದು ವರದಿಯ ಪ್ರಕಾರ ಇತ್ತೀಚಿನ ಹಸಿವಿನ ಹೆಚ್ಚಳಕ್ಕೆ ಮೂರು ಕಾರಣಗಳನ್ನು ಗುರುತಿಸಿದೆ.
ಹೆಚ್ಚುತ್ತಿರುವ ಹವಾಮಾನ ವೈಪರೀತ್ಯಗಳು, ಸಂಘರ್ಷ/ಯುದ್ಧಗಳು ಮತ್ತು ತೀವ್ರವಾದ ಆರ್ಥಿಕ ಕುಸಿತ. ಕೃಷಿ ವ್ಯವಸ್ಥೆಗಳು ತೀವ್ರ ಹವಾಮಾನ ವೈಪರೀತ್ಯ ಮತ್ತು ಹೆಚ್ಚಿದ ದರಗಳಿಗೆ ಒಳಗಾದವು. 2019ರ ಎಸ್.ಒ.ಎಫ್.ಐ. ವರದಿ ಹಸಿವಿನ ಹೆಚ್ಚಳ ಮತ್ತು ಆರ್ಥಿಕ ಹಿಂಜರಿತವನ್ನು ಅನುಭವಿಸಿದ ದೇಶಗಳ ನಡುವೆ ಬಲವಾದ ಸಂಬಂಧವನ್ನು ಗುರುತಿಸಿದೆ.
ದೀರ್ಘ ಕಾಲದಿಂದ ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆ 2030ರ ವೇಳೆಗೆ 150 ದಶಲಕ್ಷಗಳನ್ನು ದಾಟಬಹುದು. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಹಸಿವಿನ ತೀವ್ರ ಏರಿಕೆಯನ್ನು 2021ರ ವರದಿ ದಾಖಲಿಸಿದೆ. ಸ್ಥಳೀಯ, ರಾಷ್ಟ್ರೀಯ, ಪ್ರಾದೇಶಿಕ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಸಂಸ್ಥೆಗಳು ಹಸಿವಿನ ಪರಿಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿವೆ. ಚಂದ್ರನನ್ನು ದಾಟಿಹೋಗುತ್ತಿರುವ ಉಪಗ್ರಹಗಳನ್ನು ತೋರಿಸುತ್ತ ಜಗತ್ತು ಎಷ್ಟೊಂದು ಮುಂದುವರಿದಿದೆ? ಎಂದು ಈಗ ಟಾಂಟಾಂ ಹೊಡೆಯಲಾಗುತ್ತಿದೆ. ಆದರೆ ಜಗತ್ತಿನಾದ್ಯಂತ ಹಸಿದ ಹೊಟ್ಟೆಗಳಲ್ಲಿ ಮಲಗುವ ಲಕ್ಷಲಕ್ಷ ಜನರಿಗೆ ಒಂದು ಹೊತ್ತಿನ ಊಟ ಕೊಡಲು ಈ ನಾಗರಿಕ-ಆಧುನಿಕ ಜಗತ್ತಿಗೆ ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟವೇ.