ಮಾಜಿ ಸೈನಿಕರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ
ಬೆಂಗಳೂರು, ಸೆ.20: ಆಯ್ಕೆಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ವಾಮಮಾರ್ಗದಲ್ಲಿ ಆದೇಶ ಪಡೆದಿದ್ದ ಪ್ರೌಢಶಾಲಾ ಶಿಕ್ಷಕರ ನೇಮಕ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಖೋಟಾದಡಿಯಲ್ಲಿಯೂ ನಕಲಿ ದಾಖಲೆ ಸೃಷ್ಟಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿಯೂ ಅಕ್ರಮ ನಡೆದಿರುವುದು ಇದೀಗ ಬಹಿರಂಗವಾಗಿದೆ.
೨೦೦೬-೦೭ರಿಂದ ೨೦೦೯-೧೦ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಖೋಟಾದಡಿ ನಕಲಿ ದಾಖಲೆ ಸೃಷ್ಟಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆಸಿರುವುದು ಗಂಭೀರ ಅಪರಾಧ ಮಾತ್ರವಲ್ಲದೇ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದರೂ ಇನ್ನೂ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಂಡಿಲ್ಲ. ಬದಲಿಗೆ ಆರೋಪಿತರ ಎರಡು ವಾರ್ಷಿಕ ವೇತನ ಭಡ್ತಿಗಳನ್ನು ತಡೆಹಿಡಿದು ಇಲಾಖೆಯು ಕೈತೊಳೆದುಕೊಂಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ೨೦೨೨ರ ಜುಲೈ ೩೦ರಂದೇ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಪ್ರಕರಣದ ವಿವರ: ೨೦೦೬-೦೭ರಿಂದ ೨೦೦೯-೧೦ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸೈನಿಕರ/ಅವಲಂಬಿತರ ಖೋಟಾದಡಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಆರೋಪದಡಿಯಲ್ಲಿ ಯಾದಗಿರಿಯ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರೂ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರೂ ಗುರಿಯಾಗಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊಸದುರ್ಗ ಉಪನಿರ್ದೇಶಕರ ಕಚೇರಿಯಲ್ಲಿನ ಹಿಂದಿನ ಪ್ರಥಮ ದರ್ಜೆ ಸಹಾಯಕ ಶ್ರೀಕಾಂತ( ಯಾದಗಿರಿಯಲ್ಲಿ ಪ್ರಸಕ್ತ ಸೇವೆ) ಮತ್ತು ಶಹಾಪುರ ತಾಲೂಕಿನ ದೋರನಹಳ್ಳಿಯ ಸರಕಾರಿ ಪ್ರೌಢಶಾಲೆಯ ಪ್ರಥಮದರ್ಜೆ ಸಹಾಯಕರ ಮುಂದಿನ ಎರಡು ವಾರ್ಷಿಕ ವೇತನ ಭಡ್ತಿಗಳನ್ನು ತಡೆಹಿಡಿದು ದಂಡನೆ ವಿಧಿಸಿರುವುದು ಪತ್ರದಿಂದ ತಿಳಿದು ಬಂದಿದೆ. ಅಲ್ಲದೆ, ಈ ಪ್ರಕರಣದ ಕುರಿತು ಆಪಾದಿತರಿಗೆ ಕಠಿಣ ದಂಡನೆ ವಿಧಿಸಲು ಯಾವುದೇ ಹೊಸ ಅಂಶಗಳನ್ನೂ ಅಧಿಕಾರಿಗಳು ಸರಕಾರಕ್ಕೆ ಮಂಡಿಸಿಲ್ಲ. ವಿಚಾರಣೆ ವರದಿಯಲ್ಲಿನ ಅಂಶಗಳನ್ನು ಹೊರತುಪಡಿಸಿ ದಂಡನೆ ಪರಿಷ್ಕರಣೆ ಮಾಡಲು ಹೊಸ ಅಂಶಗಳನ್ನೂ ಸಲ್ಲಿಸಿಲ್ಲ.
ಆದರೆ, ಈ ಪ್ರಕರಣವನ್ನು ಪುನರ್ ಪರಿಶೀಲಿಸಲು ವಿಚಾರಣೆ ವರದಿಯಲ್ಲಿನ ಅಂಶಗಳನ್ನು ಹೊರತುಪಡಿಸಿ ಕರ್ನಾಟಕ ನಾಗರಿಕ ಸೇವಾ(ಸಿಸಿಎ) ನಿಯಮಗಳು ೧೯೫೭ರ ನಿಯಮ ೨೬ರಲ್ಲಿ ಹೇಳಿರುವಂತೆ ದಂಡನಾ ಆದೇಶವನ್ನು ಪುನರಾವಲೋಕಿಸಲು ಯಾವುದೇ ಸೂಕ್ತ ದಾಖಲೆಗಳು, ಪುರಾವೆಗಳು, ಹೊಸ ಅಂಶಗಳು ಮತ್ತು ಸಾಕಷ್ಟು ಸಕಾರಣಗಳು ಕಂಡುಬರುತ್ತಿಲ್ಲ ಎಂದೂ ಸಚಿವಾಲಯದ ಅಧಿಕಾರಿಗಳು ನಿಲುವು ತಳೆದಿರುವುದು ಪತ್ರದಿಂದ ಗೊತ್ತಾಗಿದೆ.
ಈ ಪ್ರಕರಣದ ಕುರಿತು ಆಪಾದಿತರಿಗೆ ಕಠಿಣ ದಂಡನೆ ವಿಧಿಸಲು ವಿಚಾರಣಾಧಿಕಾರಿಗಳ ವಿಚಾರಣೆ ವರದಿಯಲ್ಲಿನ ಅಂಶಗಳನ್ನು ಹೊರತುಪಡಿಸಿ ಈ ಪ್ರಕರಣವನ್ನು ಪುನರ್ ಪರಿಶೀಲಿಸಲು ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಗಳು ೧೯೫೭ರ ನಿಯಮ ೨೬ರಲ್ಲಿ ತಿಳಿಸಿರುವಂತೆ ತಮ್ಮ ಶಿಫಾರಸಿಗೆ ಪೂರಕವಾದ ಹೊಸ ಅಂಶ, ಪುರಾವೆಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಕಲಬುರಗಿಯ ಹೆಚ್ಚುವರಿ ಆಯುಕ್ತರಿಗೆ ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ತುಮಕೂರು, ಕೋಲಾರ ಜಿಲ್ಲೆಯಲ್ಲಿನ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮವನ್ನು ಹೊರಗೆಳೆದಿದ್ದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಮುಖ್ಯಮಂತ್ರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ, ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದ್ದರು. ಇದೀಗ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸರಕಾರಕ್ಕೆ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದನ್ನು ಸ್ಮರಿಸಬಹುದು. ಈ ದೂರನ್ನಾಧರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಅವರು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿರುವುದು ಗಮನಾರ್ಹವಾಗಿದೆ.
ಕೋಲಾರ ಜಿಲ್ಲೆಯೊಂದರಲ್ಲೇ ೯ ಮಂದಿ ಶಿಕ್ಷಕರು ಅಕ್ರಮವಾಗಿ ನೇಮಕವಾಗಿದ್ದಾರೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸರಕಾರಕ್ಕೆ ಪಟ್ಟಿಯನ್ನು ಒದಗಿಸಿದೆ. ಈ ಶಿಕ್ಷಕರ ಸೇವಾ ಹಿರಿತನಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಈ ಶಿಕ್ಷಕರ ಹೆಸರುಗಳಿರಲಿಲ್ಲ ಎಂದು ವೇದಿಕೆಯು ಸರಕಾರದ ಗಮನಕ್ಕೆ ತಂದಿತ್ತು.