ಇಂಗ್ಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

Update: 2022-09-25 01:57 GMT
ಜೂಲನ್ ಗೋಸ್ವಾಮಿ

ಲಾರ್ಡ್ಸ್: ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿರುವ ಭಾರತದ ಖ್ಯಾತ ಬೌಲರ್ ಜೂಲನ್ ಗೋಸ್ವಾಮಿಯವರ ವಿದಾಯ ಸರಣಿಯನ್ನು ಭಾರತ ಮಹಿಳಾ ಕ್ರಿಕೆಟ್ ತಂಡ ಸ್ಮರಣೀಯವಾಗಿಸಿದೆ.‌

ಅತಿಥೇಯ ಇಂಗ್ಲೆಂಡ್ ವಿರುದ್ಧ ಶನಿವಾರ ಲಾರ್ಡ್ಸ್ ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 16 ರನ್‍ಗಳ ಜಯ ಸಾಧಿಸುವ ಮೂಲಕ ಭಾರತ ವನಿತೆಯರು ಸರಣಿಯಲ್ಲಿ ಕ್ಲೀನ್‍ಸ್ವೀಪ್ ಸಾಧಿಸಿದರು.

170 ರನ್‍ಗಳ ಗೆಲುವಿನ ಗುರಿ ಹೊಂದಿದ್ದ ಇಂಗ್ಲೆಂಡ್ ಒಂದು ಹಂತದಲ್ಲಿ 103 ರನ್‍ಗಳಿಗೆ ಎಂಟು ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು. ಆದಾಗ್ಯೂ ನಾಯಕಿ ಅಮೆ ಜೋನ್ಸ್ ಹಾಗೂ ಚಾರ್ಲಿ ಡೀನ್, ಭಾರತದ ಬೌಲರ್‍ಗಳನ್ನು ಬಹಳ ಹೊತ್ತು ಕಾಡಿದರು. ಕೊನೆಗೆ ಜೋನ್ಸ್ (28) ಅವರ ವಿಕೆಟ್ ಕಬಳಿಸಿ ಭಾರತ ಪಾಳಯದಲ್ಲಿ ಸಂತಸಕ್ಕೆ ಕಾರಣರಾದರು. ಡೀನ್ ಈ ಹಂತದಲ್ಲೂ ಭಾರತದ ಕೈಯಿಂದ ಗೆಲುವು ಕಸಿಯುವ ಏಕಾಂಗಿ ಪ್ರಯತ್ನ ನಡೆಸಿದರು. ಆದರೆ 47 ರನ್ ಗಳಿಸಿದ ಡೀನ್, ದೀಪ್ತಿ ಶರ್ಮಾ ಅವರಿಗೆ ಬಲಿಯಾದರು. ಇದರೊಂದಿಗೆ 153 ರನ್‍ಗಳಿಗೆ ಆಲೌಟ್ ಆದ ಇಂಗ್ಲೆಂಡ್ ತಂಡ 16 ರನ್ ಅಂತರದಲ್ಲಿ ಕೊನೆಯ ಪಂದ್ಯವನ್ನೂ ಸೋತಿತು.

ಇಂಗ್ಲೆಂಡ್ ತಂಡ ಟಾಸ್ ಗೆದ್ದು ಎದುರಾಳಿಗಳನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಸ್ಮೃತಿ ಮಂದಾನ (50) ಮತ್ತು ದೀಪ್ತಿ (ನಾಟೌಟ್ 68)ಯವರ ಅರ್ಧ ಶತಕಗಳ ಹೊರತಾಗಿಯೂ, ಇಂಗ್ಲೆಂಡ್ ತಂಡ ಭಾರತವನ್ನು 169 ರನ್‍ಗಳಿಗೆ ಕಟ್ಟಿ ಹಾಕಿತ್ತು. ಅಂತಿಮ ಅಂತರರಾಷ್ಟ್ರೀಯ ಪಂದ್ಯ ಆಡಿದ ಗೋಸ್ವಾಮಿ ಮೊದಲ ಬಾಲ್‍ನಲ್ಲೇ ಔಟ್ ಆಗಿ ನಿರಾಸೆ ಹೊಂದಿದರು.

ಇಂಗ್ಲೆಂಡ್ ಪರ ಕೇಟ್ ಕ್ರಾಸ್ 26 ರನ್‍ಗಳಿಗೆ ನಾಲ್ಕು ವಿಕೆಟ್ ಕಬಳಿಸಿದರೆ, ಭಾರತದ ಪರ ರೇಣುಕಾ (29ಕ್ಕೆ 4) ಯಶಸ್ವಿ ಬೌಲರ್ ಎನಿಸಿದರು. ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‍ಗಳ ಜಯ ಸಾಧಿಸಿದ್ದರೆ, ಎರಡನೇ ಪಂದ್ಯವನ್ನು 88 ರನ್ ಅಂತರದಿಂದ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News